ವಯನಾಡ್ ನಲ್ಲಿ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸಿದ್ದ ಎನ್ ಡಿಎ ಅಭ್ಯರ್ಥಿ ತುಷಾರ್ ವೆಲ್ಲಪಳ್ಳಿ ಬಂಧನ

Update: 2019-08-22 11:33 GMT

 ದುಬೈ,ಆ.22: ವಯನಾಡ್ ನಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ಕಣಕ್ಕಿಳಿದಿದ್ದ  ಎನ್ ಡಿಎ ಅಭ್ಯರ್ಥಿಯಾಗಿ  ಭಾರತ ಧರ್ಮ ಸೇನಾ (ಬಿಡಿಜೆಎಸ್) ಅಧ್ಯಕ್ಷ ತುಷಾರ್ ವಲ್ಲಪಳ್ಳಿ ಅವರನ್ನು ಚೆಕ್ ಬೌನ್ಸ್ ಪ್ರಕರಣದಲ್ಲಿ ಯುನೈಟೆಡ್ ಅರಬ್ ಎಮಿರೆಟ್ಸ್ ನ ಅಜ್ಮಾನ್ ನಲ್ಲಿ ಬಂಧಿಸಲಾಗಿದೆ.

ತುಷಾರ್ ಕಟ್ಟಡ ನಿರ್ಮಾಣ ಸಂಸ್ಥೆಯಲ್ಲಿ ತನ್ನ ಜೊತೆ ಪಾಲುದಾರರಾಗಿರುವ ನಾಸ್ಸೀಲ್ ಅಬ್ದುಲ್ಲ ಎಂಬವರಿಗೆ ತುಷಾರ್ ನೀಡಿದ್ದ 19 ಕೋಟಿ ರೂ. ಮೊತ್ತದ ಚೆಕ್  ಬೌನ್ಸ್ ಆಗಿತ್ತು. ಈ  ಸಂಬಂಧ ಅಬ್ದುಲ್ಲ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಪ್ರಕರಣದ ದಾಖಲಿಸಿಕೊಂಡು ತುಷಾರ್ ವೆಲ್ಲಪಳ್ಳಿಯನ್ನು ಬಂಧಿಸಿದ್ದಾರೆ. ಅವರು ಇದೀಗ ಅಜ್ಮಾನ್ ನ ಸೆಂಟ್ರಲ್ ಜೈಲ್ ನಲ್ಲಿದ್ದಾರೆ. 

ಕೇರಳ ಮೂಲದ ನಾಸ್ಸೀಲ್ ಅಬ್ದುಲ್ಲ ಅಜ್ಮಾನ್ ನಲ್ಲಿ ಉದ್ಯಮಿಯಾಗಿದ್ದಾರೆ. 10 ವರ್ಷಗಳ ಹಿಂದೆ ಅಬ್ದುಲ್ಲರಿಗೆ ಬರಬೇಕಾದ 19 ಕೋಟಿ ರೂ. ಬಾಕಿಗೆ ಸಂಬಂಧಿಸಿ ತುಷಾರ್ ಅವರು ಚೆಕ್ ನೀಡಿದ್ದರು. ಆದರೆ ಖಾತೆಯಲ್ಲಿ ಹಣವಿಲ್ಲದ ಕಾರಣದಿಂದಾಗಿ ಚೆಕ್ ಬೌನ್ಸ್ ಆಗಿತ್ತು. ಈ ಸಂಬಂಧ ಅಬ್ದುಲ್ಲ ಮಾತುಕತೆಗೆ ತುಷಾರ್ ನ್ನು ಉಪಾಯದಿಂದ ಅಜ್ಮಾನ್ ಗೆ ಕರೆಸಿಕೊಂಡಿದ್ದರು. ಅಜ್ಮಾನ್ ಗೆ ಆಗಮಿಸಿದ್ದ ತುಷಾರ್ ಹೊಟೇಲ್ ನಲ್ಲಿ ತಂಗಿದ್ದರು. ಆಗ ಅಬ್ದುಲ್ಲ ನೀಡಿದ ದೂರಿನಂತೆ ದಾಳಿ ನಡೆಸಿದ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. 

ವಲ್ಲಪಳ್ಳಿ ನಟೇಶನ್ ಪುತ್ರ ತುಷಾರ್ ಕಳೆದ ಲೋಕಸಭಾ ಚುನಾವಣೆಯಲ್ಲಿ ವಯನಾಡ್ ಕ್ಷೇತ್ರದಲ್ಲಿ ಎನ್ ಡಿಎ ಅಭ್ಯರ್ಥಿಯಾಗಿ ಯುಎಡಿಎಫ್ ನ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸಿ ಹೀನಾಯ ಸೋಲು ಅನುಭವಿಸಿದ್ದರು. ಕೇರಳದ ಎನ್ ಡಿಎ ಸಂಚಾಲಕರಾಗಿರುವ ತುಷಾರ್ ಅವರು ಕೇರಳದ ಈಝಾವದಲ್ಲಿ ಶ್ರೀ ನಾರಾಯಣ ಧರ್ಮಪಾಲನಾ ಯೋಗಮ್ ನ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಅವರು 15 ವರ್ಷಗಳ ಹಿಂದೆ ಕಟ್ಟಡ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದ್ದರು. ಆದರೆ  ಕಟ್ಟಡದ ಗುತ್ತಿಗೆದಾರರಿಗೆ ಭಾರೀ ಮೊತ್ತದ ಹಣವನ್ನು ಪಾವತಿಸುವಲ್ಲಿ ವಿಫಲರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News