ದಲಿತ ವ್ಯಕ್ತಿಯ ಮೃತದೇಹವನ್ನು ಸೇತುವೆಯಿಂದ ಹಗ್ಗದ ಮೂಲಕ ಕೆಳಗಿಳಿಸಿದ ಸಂಬಂಧಿಕರು

Update: 2019-08-22 08:42 GMT
Photo: thenewsminute.com

ವೆಲ್ಲೂರ್: ಅಪಘಾತದಲ್ಲಿ ಮೃತಪಟ್ಟ ದಲಿತ ವ್ಯಕ್ತಿಯೊಬ್ಬರ ಮೃತದೇಹವನ್ನು ಹಗ್ಗದಲ್ಲಿ ಬಿಗಿದು ಸೇತುವೆಯ ಮೇಲಿನಿಂದ ಕೆಳಕ್ಕೆ ಇಳಿಸುತ್ತಿರುವ ಮನಕಲಕುವ ವೀಡಿಯೋ ವೈರಲ್ ಆಗಿದೆ. ಈ ಘಟನೆ ತಮಿಳುನಾಡಿನ ವೆಲ್ಲೂರ್ ಜಿಲ್ಲೆಯ ವಣಿಯಂಬಾಡಿ ತಾಲೂಕಿನ ನಾರಾಯಣಪುರಂ ಗ್ರಾಮದಿಂದ ವರದಿಯಾಗಿದೆ.  ಹಾರ ತುರಾಯಿಗಳನ್ನು ಹಾಕಲಾಗಿದ್ದ ಮೃತದೇಹವನ್ನು ಸುಮಾರು ಒಂದು ಡಜನ್ ಗ್ರಾಮಸ್ಥರು 20 ಅಡಿ ಎತ್ತರದ ಸೇತುವೆಯಿಂದ ಕಷ್ಟದಿಂದ ಕೆಳಗಿಳಿಸಿದ ನಂತರ ಕೆಳಗೆ ನಿಂತಿದ್ದ ಕೆಲ ಮಂದಿ ಅದನ್ನು ಹಗ್ಗದಿಂದ ಸಡಿಲಿಸಿ ಅಲ್ಲಿಂದ ಅನತಿ ದೂರದಲ್ಲಿದ್ದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಿದ್ದಾರೆ.

ಗ್ರಾಮದಲ್ಲಿನ ಮೇಲ್ಜಾತಿಯವರು ಅಲ್ಲಿನ ಸಾರ್ವಜನಿಕ ರಸ್ತೆ ಹಾಗೂ ಅವರು ಬಳಸುವ ರುದ್ರಭೂಮಿಯನ್ನು ಬಳಸಲು ದಲಿತರಿಗೆ ಅನುಮತಿ ನಿರಾಕರಿಸಿದ್ದೇ ಅವರ ಇಂತಹ ಒಂದು ಕ್ರಮಕ್ಕೆ ಕಾರಣವಾಗಿದೆ.

ಪ್ರಮುಖವಾಗಿ ವೆಲ್ಲಾಲ ಗೌಂಡರ್ ಹಾಗು ವಣ್ಣಿಯಾರ್ ಜಾತಿಯ ಮಂದಿ ಈ ರೀತಿ ದಲಿತರಿಗೆ ಕಿರುಕುಳ ನೀಡುತ್ತಿದ್ದಾರೆಂದು ಗ್ರಾಮಸ್ಥರು ಆರೋಪಿಸುತ್ತಾರೆ. ಕುಪ್ಪನ್ ಎಂಬ ವ್ಯಕ್ತಿ ಆಗಸ್ಟ್ 16, ಶುಕ್ರವಾರ ಅಪಘಾತದಲ್ಲಿ ಮೃತಪಟ್ಟಿದ್ದು, ಅವರ ಅಂತ್ಯಕ್ರಿಯೆ ಮರುದಿನ ನಡೆಯಲಿದೆ ಎನ್ನುವಾಗ ಮೇಲ್ಜಾತಿಯವರು ತಡೆದಿದ್ದರು. ರುದ್ರಭೂಮಿಗೆ ಸಾಗುವ ಹಾದಿಯ ಅಕ್ಕಪಕ್ಕದ ಜಮೀನುಗಳನ್ನು ಮೇಲ್ಜಾತಿಯವರು ಖರೀದಿಸಿದ್ದರಿಂದ ಆ ಹಾದಿಯಾಗಿ ದಲಿತರ ಶವವನ್ನು ಸಾಗಿಸಲು ಅವರು ಅನುಮತಿಸುತ್ತಿರಲಿಲ್ಲವೆನ್ನಲಾಗಿದೆ. ಇದರಿಂದ ದಲಿತರು ಅನಿವಾರ್ಯವಾಗಿ ಸೇತುವೆಯ ಮೇಲಿನಿಂದ ಮೃತದೇಹಗಳನ್ನು ಕೆಳಕ್ಕಿಳಿಸಿ ನಂತರ ಬೇರೊಂದು ರುದ್ರಭೂಮಿಗೆ ಒಯ್ಯುತ್ತಾರೆ.

ಈ ಸಮಸ್ಯೆಯ ಕುರಿತಂತೆ ಅಧಿಕಾರಿಗಳ ಬಳಿ ಬಹಳ ಸಮಯದಿಂದ ದೂರುತ್ತಿದ್ದರೂ ಪ್ರಯೋಜನವಾಗಿಲ್ಲ ಎಂದೂ ಗ್ರಾಮಸ್ಥರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News