"ನಿಮಗೆ ಕೆಲಸ ಹೋಗುವ ಭಯವಿಲ್ಲವೇ ?" ಎಂಬ 'ಭಕ್ತ ಬ್ಯಾನರ್ಜಿ' ಪ್ರಶ್ನೆಗೆ ರವೀಶ್ ಉತ್ತರವೇನು ಗೊತ್ತೇ ?

Update: 2019-08-22 12:13 GMT

ಖ್ಯಾತ ವಿಶ್ಲೇಷಕ ಹಾಗು ವಿಡಂಬನಕಾರ ಆಕಾಶ್ ಬ್ಯಾನರ್ಜಿ ಅವರು ತಮ್ಮ "ಭಕ್ತ ಬ್ಯಾನರ್ಜಿ" ಅವತಾರದಲ್ಲಿ ಹಿರಿಯ ಪತ್ರಕರ್ತ ಹಾಗು ಇತ್ತೀಚಿಗೆ ರಮೋನ್ ಮ್ಯಾಗ್ಸೇಸೆ ಪ್ರಶಸ್ತಿ ಪುರಸ್ಕೃತ ರವೀಶ್ ಕುಮಾರ್ ಅವರ ಜೊತೆ ನಡೆಸಿದ ಸಂದರ್ಶನ ವ್ಯಾಪಕ ಚರ್ಚೆಗೆ ಒಳಗಾಗಿದೆ. 

ತನ್ನ ಯೂಟ್ಯೂಬ್ ಚಾನಲ್ ಗಾಗಿ ಈ ಸಂದರ್ಶನ ನಡೆಸಿರುವ ಬ್ಯಾನರ್ಜಿ ಅವರು ಸನ್ ಗ್ಲಾಸ್ ಹಾಕಿಕೊಂಡು ಕೇಸರಿ ಉಡುಪಿನಲ್ಲಿ ಮೋದಿ ಹಾಗು ಬಿಜೆಪಿ ಪರಮ ಅಭಿಮಾನಿಗಳಂತೆ (ಸಾಮಾಜಿಕ ಜಾಲತಾಣಗಳಲ್ಲಿ ಭಕ್ತರು ಎಂದೇ ಕುಖ್ಯಾತಿ ಪಡೆದವರು) ಕಾಣಿಸಿಕೊಂಡು ಸಾಮಾನ್ಯವಾಗಿ ಈ ಮೋದಿ ಅಭಿಮಾನಿಗಳು ಕೇಳುವ ಪ್ರಶ್ನೆಗಳನ್ನೇ ಅವರದ್ದೇ ಧಾಟಿಯಲ್ಲಿ ಕೇಳಿದ್ದು ವಿಶೇಷವಾಗಿತ್ತು. 

ತನ್ನನ್ನು 'ಮೋದಿ ವಿರೋಧಿ ' ಎನ್ನುವ ' ಭಕ್ತರ ' ಪ್ರಶ್ನೆಗೆ ಉತ್ತರಿಸಿರುವ ರವೀಶ್ ಕುಮಾರ್ "ನಾನು ಮೋದಿ ವಿರೋಧಿಯಲ್ಲ, ನಾನು ಪತ್ರಿಕೋದ್ಯಮ ಪರ ಅಷ್ಟೇ. ಜನರ ಬದುಕಿಗೆ ಸಂಬಂಧಿಸಿದ ಗಂಭೀರ ಪ್ರಶ್ನೆಗಳನ್ನು ಕೇಳುವುದು ನನ್ನ ಕರ್ತವ್ಯ. ಅದನ್ನು ನಾನು ಮಾಡುತ್ತಿದ್ದೇನೆ. ಉದ್ಯೋಗ, ಬೆಲೆಯೇರಿಕೆ, ಪರಿಸರ ಇತ್ಯಾದಿಗಳ ಕುರಿತು ಗಂಭೀರ ಪ್ರಶ್ನೆಗಳನ್ನು ನಾನು ಕೇಳಲೇಬೇಕು. ಅದನ್ನು ಕೇಳುತ್ತಿದ್ದೇನೆ. ಅದಕ್ಕೆ ನನ್ನ ಕಾರ್ಯಕ್ರಮಕ್ಕೆ ಬಿಜೆಪಿಯವರು ಬರುತ್ತಿಲ್ಲ. ನನ್ನ ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ. ದೂರ ಕೂತು ನನ್ನನ್ನು ಮೋದಿ ವಿರೋಧಿ ಎಂದು ಬ್ರಾಂಡ್ ಮಾಡುತ್ತಿದ್ದಾರೆ " ಎಂದು ಹೇಳಿದ್ದಾರೆ. 

"ನಿಮಗೆ ಕೆಲಸ ಹೋಗುವ ಭಯವಿಲ್ಲವೇ?" ಎಂದು ಕೇಳಿದ್ದಕ್ಕೆ "ಇಲ್ಲಿ ಕೆಲಸವೂ ಹೋಗಬಹುದು, ಜೀವವೂ ಹೋಗಬಹುದು. ಅದಕ್ಕೇನೂ ಮಾಡಲಾಗದು. ಈ ಲೋಕಕ್ಕೆ ಬಂದ ಮೇಲೆ ಎಲ್ಲವನ್ನೂ ಎದುರಿಸಬೇಕು. " ಎಂದು ರವೀಶ್ ಹೇಳಿದ್ದಾರೆ. 

ಬಿಜೆಪಿ ಹಾಗು ಮೋದಿ ಅವರ ಪರವಾಗಿಯೇ ಸುದ್ದಿ ಪ್ರಸಾರ ಮಾಡುವ ಟಿವಿ ಚಾನಲ್ ಗಳು ಹಾಗು ನಿರೂಪಕರನ್ನು ತರಾಟೆಗೆ ತೆಗೆದುಕೊಂಡಿರುವ ರವೀಶ್, " ಅವರು ಮಾಡಿದಂತಹ ಪತ್ರಿಕೋದ್ಯಮ ನನಗೆ ಸಾಧ್ಯವಿಲ್ಲ. ನನ್ನ ಚಾನಲ್ ಗೆ ಟಿಆರ್ಪಿ ಇಲ್ಲ ಎಂದು ಹೇಳುವವರು ನನ್ನ ಬಗ್ಗೆ ಇಷ್ಟೊಂದು ತಲೆಕೆಡಿಸಿಕೊಂಡಿದ್ದು ಏಕೆ? ನಿಜವಾದ ಪ್ರಶ್ನೆಗಳನ್ನು ಅವರು ಕೇಳುತ್ತಿಲ್ಲ" ಎಂದು ಹೇಳಿದ್ದಾರೆ. 

ಗಂಭೀರ ವಿಷಯಗಳನ್ನು ತಮಾಷೆಯಾಗಿಯೇ ವಿವರಿಸುವ ಈ ವಿಡಿಯೋವನ್ನು ನೀವು ನೋಡಲೇಬೇಕು. ಇಲ್ಲಿದೆ ವಿಡಿಯೋ : 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News