ಭ್ರಷ್ಟಾಚಾರ: ಸಿಬಿಐ, ಈ.ಡಿ.ಗೆ ಕಾಣದ 7 ರಾಜಕಾರಣಿಗಳು

Update: 2019-08-22 15:29 GMT

ಐಎನ್ ಎಕ್ಸ್ ಮೀಡಿಯಾ ಹಗರಣದಲ್ಲಿ ಮಾಜಿ ಕೇಂದ್ರ ಗೃಹ ಸಚಿವ ಹಾಗು ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರನ್ನು ಸಿಬಿಐ ಬುಧವಾರ ರಾತ್ರಿ ಬಂಧಿಸಿದೆ. ಅಲ್ಲಿಗೆ ಒಂದು ವೃತ್ತ ಪೂರ್ಣಗೊಂಡಂತಾಗಿದೆ. ಈ ಹಿಂದೆ ಇದೇ ಚಿದಂಬರಂ ಅವರು ಕೇಂದ್ರ ಗೃಹ ಸಚಿವರಾಗಿದ್ದಾಗ ಗುಜರಾತ್ ನಲ್ಲಿ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಅಮಿತ್ ಶಾ ಅವರನ್ನು ಬಂಧಿಸಲಾಗಿತ್ತು. ಈಗ ಅದೇ ತಿರುವು ಮುರುವಾಗಿದೆ! 

ವಿಷಯ ಅದಲ್ಲ. 2014 ರಲ್ಲಿ ಮೋದಿ ಸರಕಾರ ಬಂದ ಮೇಲೆ ಮತ್ತು 2019 ರಲ್ಲಿ ಎರಡನೇ ಅವಧಿಗೆ ಅಧಿಕಾರಕ್ಕೇರಿದ ಮೇಲೆ ವಿಪಕ್ಷ ನಾಯಕರ ವಿರುದ್ಧ ಇರುವ ಭ್ರಷ್ಟಾಚಾರ ಆರೋಪಗಳನ್ನು ಹುಡುಕಿ ಹುಡುಕಿ ತೆಗೆದು ವಿಚಾರಣೆ ನಡೆಸಲಾಗುತ್ತಿದೆ. ಇದು ಭ್ರಷ್ಟಾಚಾರದ ವಿರುದ್ಧ ಮೋದಿ ಸರಕಾರದ ಶೂನ್ಯ ಸಹನೆ ನಿಲುವು ಎಂದುಕೊಂಡರೆ ತಪ್ಪಾಗುತ್ತದೆ. ಇದೇ ಮೋದಿ ಸರಕಾರ ಗಂಭೀರ ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿರುವ ತಮ್ಮದೇ ಪಕ್ಷದ ಮತ್ತು ವಿಪಕ್ಷಗಳಿಂದ ತಮ್ಮ ಪಕ್ಷಕ್ಕೆ ಬಂದಿರುವ ನಾಯಕರ ಪ್ರಕರಣಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ!

ಅಂದರೆ ಇದು ಭ್ರಷ್ಟಾಚಾರ ವಿರೋಧಿ ನಡೆ ಅಲ್ಲ, ವಿಪಕ್ಷ ವಿರೋಧಿ ಕಾರ್ಯಾಚರಣೆ ಎಂದಾಯಿತು! 

ಮೋದಿ ಸರಕಾರ ತಮ್ಮ ಪಕ್ಷದ ನಾಯಕರು ಶಾಮೀಲಾಗಿರುವ ಪ್ರಕರಣಗಳ ವಿಚಾರಣೆ ಬಗ್ಗೆ ಯಾವುದೇ ಆಸಕ್ತಿ ತೋರಿಸುತ್ತಿಲ್ಲ ಎಂಬುದಕ್ಕೆ ಇಲ್ಲಿದೆ ಕೆಲವು ಉದಾಹರಣೆಗಳು:

ಬಿ.ಎಸ್. ಯಡಿಯೂರಪ್ಪ:

ಭೂ ಹಾಗು ಗಣಿ ಹಗರಣಗಳಲ್ಲಿ ಆರೋಪ ಎದುರಿಸುತ್ತಿರುವ ಯಡಿಯೂರಪ್ಪ ಮತ್ತೊಮ್ಮೆ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾರೆ. ಚೆಕ್ ಮೂಲಕ ಲಂಚ ಸ್ವೀಕರಿಸಿದ ವಿಶಿಷ್ಟ ಆರೋಪವೂ ಇವರ ಮೇಲಿತ್ತು . ಅವರ ಬಳಿಯಿದ್ದ ಡೈರಿಯೊಂದರಲ್ಲಿ ಹಿರಿಯ ಬಿಜೆಪಿ ನಾಯಕರಿಗೆ, ನ್ಯಾಯಾಧೀಶರಿಗೆ ನೀಡಿದ್ದಾರೆನ್ನಲಾದ ಭಾರೀ ಮೊತ್ತದ ಲಂಚದ ವಿವರಗಳಿದ್ದವು ಎಂದು ವರದಿಯಾಗಿತ್ತು. ಆದರೆ ಮೋದಿ ಸರಕಾರ ಅಧಿಕಾರಕ್ಕೆ ಬಂದಿದ್ದೇ ತಡ, ಸಿಬಿಐಗೆ ಇವರ ವಿರುದ್ಧ ಸಾಕ್ಷ್ಯಗಳೇ ಸಿಗಲಿಲ್ಲ. ಹಾಗಾಗಿ ಹೆಚ್ಚು ಕಡಿಮೆ ಎಲ್ಲ ಪ್ರಕರಣಗಳಲ್ಲಿ ದೋಷಮುಕ್ತರಾಗಿದ್ದಾರೆ. ಭೂ ಹಗರಣವೊಂದರಲ್ಲಿ ಸುಪ್ರೀಂ ಕೋರ್ಟ್ ಇವರ ವಿರುದ್ಧ ತನಿಖೆಗೆ ಆದೇಶಿಸುವ ಸಾಧ್ಯತೆಯೂ ಇದೆ. 

ಬಳ್ಳಾರಿಯ ರೆಡ್ಡಿ ಸೋದರರು: 

ಇವರ ವಿರುದ್ಧ ಇದ್ದ 16,500 ಕೋಟಿ ರೂಪಾಯಿಯ ಗಣಿ ಹಗರಣದ ಬಗ್ಗೆ 2018 ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನವೇ ತರಾತುರಿಯಲ್ಲಿ ತನಿಖೆ ಮುಗಿಸಿಬಿಟ್ಟಿತು ಸಿಬಿಐ. ಬಳ್ಳಾರಿಯಲ್ಲಿ ಬಿಜೆಪಿ ಪಾಲಿಗೆ ಅನಿವಾರ್ಯವಾಗಿರುವ ರೆಡ್ಡಿ ಸೋದರರು ಈಗ ಹೊರಗೆ ಹಾಯಾಗಿದ್ದಾರೆ. ಈ ಪ್ರಕರಣವನ್ನು ಬಯಲಿಗೆ ತಂದ ಐಎಫ್ ಎಸ್ ಅಧಿಕಾರಿ ಕಲೊಳ್ ಬಿಸ್ವಾಸ್ ಅವರನ್ನು ಕೇಂದ್ರ ಸರಕಾರ ಇದೇ ತಿಂಗಳು ಸೇವೆಯಿಂದ ವಜಾ ಮಾಡಿದೆ. 

ಹಿಮಂತ ಬಿಸ್ವ ಶರ್ಮ:

ಈಗ ಈಶಾನ್ಯ ಭಾರತದ ಅಮಿತ್ ಶಾ ಎಂದೇ ಬಿಜೆಪಿ ವಲಯದಲ್ಲಿ ಖ್ಯಾತಿ ಗಳಿಸಿರುವ ಅಸ್ಸಾಂ ಸಚಿವ ಹಿಮಂತ್ ಬಿಸ್ವ ಶರ್ಮ ಅವರು ಮೊದಲು ಕಾಂಗ್ರೆಸ್ ನಲ್ಲಿದ್ದವರು. ಆಗ ಭಾರೀ ಭ್ರಷ್ಟಾಚಾರದ ಆರೋಪ ಎದುರಿಸಿದವರು. ಗುವಾಹಟಿಯ ನೀರು ಹಗರಣದಲ್ಲಿ ಇದೇ ಹಿಮಂತ್ ಪ್ರಧಾನ ಸೂತ್ರಧಾರಿ ಎಂದು ಆಗ ಬಿಜೆಪಿ ಇವರ ವಿರುದ್ಧ ಪುಸ್ತಕವನ್ನೇ ಪ್ರಕಟಿಸಿತ್ತು. ಅಮೆರಿಕನ್ ನಿರ್ಮಾಣ ಕಂಪೆನಿಯೊಂದು ಶಾಮೀಲಾಗಿರುವ ಪ್ರಕರಣದಲ್ಲಿ ಅಮೆರಿಕದಲ್ಲೂ ಪ್ರಕರಣ ದಾಖಲಾಗಿದೆ. ಹಿಮಂತ್ ಬಿಜೆಪಿ ಸೇರಿದ ಬೆನ್ನಿಗೇ ಅವರ ವಿರುದ್ಧದ ಭ್ರಷ್ಟಾಚಾರ ಆರೋಪ ಮೂಲೆ ಸೇರಿದೆ. 

ಶಿವರಾಜ್ ಸಿಂಗ್ ಚೌಹಾಣ್: 

ಭಾರೀ ಚರ್ಚೆಗೆ ಕಾರಣವಾಗಿದ್ದ ವ್ಯಾಪಂ ಹಗರಣದಲ್ಲಿ ಸಿಬಿಐ ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಕ್ಲೀನ್ ಚಿಟ್ ನೀಡಿದೆ. ಈ ಬೃಹತ್ ಪ್ರವೇಶ ಪರೀಕ್ಷೆ ಹಗರಣದಲ್ಲಿ ಸಾಕ್ಷಿಗಳು ಸೇರಿ 40 ಕ್ಕೂ ಹೆಚ್ಚು ಮಂದಿ ನಿಗೂಢವಾಗಿ ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಶಿವರಾಜ್ ಸಿಂಗ್ ಕಾಂಗ್ರೆಸ್ ನಾಯಕರಾಗಿದ್ದರೆ ಏನಾಗುತ್ತಿತ್ತು? 

ಮುಕುಲ್ ರಾಯ್: 

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯಿಂದ ಅತ್ಯಂತ ಹೆಚ್ಚು ಟೀಕೆ ಎದುರಿಸುತ್ತಿದ್ದ ತೃಣಮೂಲ ಕಾಂಗ್ರೆಸ್ ಪ್ರಮುಖ ನಾಯಕ ಮುಕುಲ್ ರಾಯ್ ಈಗ ಅಲ್ಲಿ ಬಿಜೆಪಿಯ ಹಿರಿಯ ನಾಯಕ! ಶಾರದಾ ಚಿಟ್ ಫಂಡ್ ಹಗರಣ ಹಾಗು ನಾರದ ಕುಟುಕು ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದು ಜಾರಿ ನಿರ್ದೇಶನಾಲಯದಿಂದ ಬುಲಾವ್ ಬಂದ ಬೆನ್ನಿಗೇ ಮುಕುಲ್ ರಾಯ್ ಬಿಜೆಪಿ ಸೇರಿದರು. ಅಲ್ಲಿಗೆ ಅವರ ವಿರುದ್ಧದ ಆರೋಪ, ತನಿಖೆ ಎರಡೂ ತಣ್ಣಗಾಗಿವೆ. ಕೇಳಿದರೆ ಕಾನೂನು ಅದರ ಪ್ರಕ್ರಿಯೆಯಂತೆ ನಡೆಯಲಿದೆ ಎಂದು ಮುಕುಲ್ ಹೇಳುತ್ತಾರೆ. ಆದರೆ ಬಿಜೆಪಿ ಸೇರಿದ ಮೇಲೆ ಕಾನೂನು ಬಹಳ ನಿಧಾನವಾಗಿ ಅದರ ಪ್ರಕ್ರಿಯೆಯನ್ನು ನಡೆಸುತ್ತಿರುವುದು ಗಮನಾರ್ಹವಾಗಿದೆ. 

ರಮೇಶ್ ಪೋಖ್ರಿಯಾಲ್ ನಿಶಾಂಕ್: 

ಈಗ ಕೇಂದ್ರ ಮಾನವ ಸಂಪನ್ಮೂಲ ಸಚಿವರಾಗಿರುವ ರಮೇಶ್ ಅವರು ಉತ್ತರಾಖಂಡ್ ಸಿಎಂ ಆಗಿದ್ದಾಗ ಎರಡು ದೊಡ್ಡ ಹಗರಣಗಳಲ್ಲಿ ಆರೋಪ ಎದುರಿಸಿದ್ದಾರೆ. ಒಂದು ಭೂ ಹಗರಣ ,ಇನ್ನೊಂದು ಜಲವಿದ್ಯುತ್ ಯೋಜನೆಗಳ ಸಂಬಂಧಿತ ಹಗರಣ. ಇವರು ಮುಖ್ಯಮಂತ್ರಿಯಾಗಿದ್ದಾಗ ಹಗರಣಗಳ ಮೇಲೆ ಹಗರಣಗಳು ಸುದ್ದಿಯಾಗಿ ಕೊನೆಗೆ ಬಿಜೆಪಿ ಇವರನ್ನು ಕೆಳಗಿಳಿಸಿತು. ಆದರೆ ಇವರ ವಿರುದ್ಧದ ಆರೋಪಗಳ ವಿರುದ್ಧ ತನಿಖೆಗೆ ಸಿಬಿಐ ಯಾವುದೇ ತುರ್ತು ತೋರಿಸುತ್ತಿಲ್ಲ. ಸಾಲದ್ದಕ್ಕೆ ಈಗವರು ಕೇಂದ್ರದ ಪ್ರಭಾವಿ  ಸಚಿವ.

ನಾರಾಯಣ್ ರಾಣೆ: 

ಭೂ ಹಗರಣ ಹಾಗು ಕಪ್ಪು ಹಣ ಸಂಬಂಧಿತ ಹಗರಣಗಳಲ್ಲಿ ಆರೋಪ ಎದುರಿಸುತ್ತಿರುವ ಮಾಜಿ ಕಾಂಗ್ರೆಸ್ ನಾಯಕ ನಾರಾಯಣ ರಾಣೆ ಅವರು ಈಗ ಬಿಜೆಪಿ ರಾಜ್ಯಸಭಾ ಸದಸ್ಯ.  ಕೇಸರಿ ಪಕ್ಷ ಸೇರಿದ ಮೇಲೆ ರಾಣೆ ಅವರ ಮೇಲೆ ಯಾವುದೇ ಸಿಬಿಐ , ಜಾರಿ ನಿರ್ದೇಶನಾಲಯ ದಾಳಿ ಆಗಲೇ ಇಲ್ಲ ! 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News