ಮ್ಯಾನ್ಮಾರ್‌ಗೆ ಮರಳಲು ಮುಂದೆ ಬಾರದ ರೊಹಿಂಗ್ಯಾ ನಿರಾಶ್ರಿತರು

Update: 2019-08-22 15:29 GMT

ಟೆಕ್ನಾಫ್ (ಬಾಂಗ್ಲಾದೇಶ), ಆ. 22: ರೊಹಿಂಗ್ಯಾ ನಿರಾಶ್ರಿತರನ್ನು ಮ್ಯಾನ್ಮಾರ್‌ಗೆ ವಾಪಸ್ ಕಳುಹಿಸುವ ಹೊಸ ಪ್ರಯತ್ನವೊಂದು ಗುರುವಾರ ವಿಫಲವಾಗಿದೆ. ನಿರಾಶ್ರಿತರನ್ನು ಕರೆದುಕೊಂಡು ಹೋಗಲು ಬಾಂಗ್ಲಾದೇಶ ಕಳುಹಿಸಿದ 5 ಬಸ್‌ಗಳು ಮತ್ತು 10 ಟ್ರಕ್‌ಗಳನ್ನು ಹತ್ತಲು ಯಾರೂ ಬರಲಿಲ್ಲ.

‘‘ಮ್ಯಾನ್ಮಾರ್‌ಗೆ ತೆರಳಲು ಸ್ವಂತ ಇಚ್ಛೆಯಿಂದ ಬರುವವರಿಗಾಗಿ ನಾವು ಬೆಳಗ್ಗೆ 9 ಗಂಟೆಯಿಂದಲೂ ಕಾಯುತ್ತಿದ್ದೇವೆ’’ ಎಂದು ಟೆಕ್ನಾಫ್ ನಿರಾಶ್ರಿತ ಶಿಬಿರದ ಉಸ್ತುವಾರಿ ಹೊತ್ತಿರುವ ಬಾಂಗ್ಲಾದೇಶದ ಅಧಿಕಾರಿ ಖಾಲಿದ್ ಹುಸೈನ್ ಒಂದು ಗಂಟೆಗೂ ಹೆಚ್ಚು ಹೊತ್ತು ಕಾದ ಬಳಿಕ ಎಎಫ್‌ಪಿ ಸುದ್ದಿ ಸಂಸ್ಥೆಗೆ ಹೇಳಿದರು.

‘‘ಇನ್ನೂ ಯಾರೂ ಬಂದಿಲ್ಲ’’ ಎಂದು ಅವರು ಹೇಳಿದರು.

ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ 2017ರ ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳಲ್ಲಿ ಸೇನೆ ನಡೆಸಿದ ದಮನ ಕಾರ್ಯಾಚರಣೆಗೆ ಬೆದರಿ ಸುಮಾರು 7.40 ಲಕ್ಷ ರೊಹಿಂಗ್ಯಾ ಮುಸ್ಲಿಮ್ ಅಲ್ಪಸಂಖ್ಯಾತರು ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ. ಈ ದಮನ ಕಾರ್ಯಾಚರಣೆಯನ್ನು ವಿಶ್ವಸಂಸ್ಥೆಯು ‘ಜನಾಂಗೀಯ ಹತ್ಯೆ’ ಎಂದು ಕರೆದಿದೆ.

ಮ್ಯಾನ್ಮಾರ್‌ನ ವಿದೇಶ ಕಾರ್ಯದರ್ಶಿ ಮ್ಯಿಂಟ್ ತೂ ನೇತೃತ್ವದಲ್ಲಿ ಆ ದೇಶದ ಉನ್ನತ ದರ್ಜೆಯ ಅಧಿಕಾರಿಗಳ ನಿಯೋಗವೊಂದು ಕಳೆದ ತಿಂಗಳು ರೊಹಿಂಗ್ಯಾ ನಿರಾಶ್ರಿತರ ಶಿಬಿರಗಳಿಗೆ ಭೇಟಿ ನೀಡಿದ ಬಳಿಕ, ಈ ಹೊಸ ವಾಪಸಾತಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿತ್ತು. ಇದಕ್ಕೂ ಮುನ್ನ ಕಳೆದ ವರ್ಷದ ನವೆಂಬರ್‌ನಲ್ಲಿ ಮಾಡಲಾಗಿದ್ದ ಇನ್ನೊಂದು ಪ್ರಯತ್ನವೂ ವಿಫಲವಾಗಿತ್ತು.

ಮ್ಯಾನ್ಮಾರ್‌ನಲ್ಲಿ ಪರಿಸ್ಥಿತಿ ಇನ್ನೂ ಅಪಾಯಕಾರಿಯಾಗಿದೆ ಹಾಗೂ ಅಲ್ಲಿ ತಮ್ಮ ಪ್ರಾಣಕ್ಕೆ ಬೆದರಿಕೆಯಿದೆ ಎಂದು ರೊಹಿಂಗ್ಯಾ ನಿರಾಶ್ರಿತರು ಭಾವಿಸಿದ್ದಾರೆ.

ಮ್ಯಾನ್ಮಾರ್‌ನಲ್ಲಿ ಸುರಕ್ಷತೆಗೆ ಹೆದರುತ್ತಿರುವ ನಿರಾಶ್ರಿತರು:

ಬಾಂಗ್ಲಾದೇಶದ ವಿದೇಶ ಸಚಿವಾಲಯವು ಪರಿಶೀಲನೆಗಾಗಿ ಮ್ಯಾನ್ಮಾರ್‌ಗೆ 22,000ಕ್ಕೂ ಅಧಿಕ ನಿರಾಶ್ರಿತರ ಹೆಸರುಗಳನ್ನೊಳಗೊಂಡ ಪಟ್ಟಿಯನ್ನು ಕಳುಹಿಸಿತ್ತು ಹಾಗೂ ಮ್ಯಾನ್ಮಾರ್ ವಾಪಸಾತಿಗಾಗಿ 3,450 ಮಂದಿಗೆ ಅನುಮತಿ ನೀಡಿತ್ತು.

ಆದರೆ, ಬುಧವಾರ, ವಾಪಸಾತಿ ಪಟ್ಟಿಯಲ್ಲಿದ್ದ ಕೆಲವರು ಎಎಫ್‌ಪಿ ಜೊತೆ ಮಾತನಾಡಿ, ತಮ್ಮ ಸುರಕ್ಷತೆಯನ್ನು ಖಾತರಿಪಡಿಸದಿದ್ದರೆ ಹಾಗೂ ತಮಗೆ ಪೌರತ್ವ ನೀಡದಿದ್ದರೆ ಮ್ಯಾನ್ಮಾರ್‌ಗೆ ವಾಪಸಾಗಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.

ರೊಹಿಂಗ್ಯಾ ನಿರಾಶ್ರಿತರು ವಾಪಸಾಗಲು ಬಯಸಿದ್ದಾರೆಯೇ ಎನ್ನುವುದನ್ನು ತಿಳಿಯಲು ವಿಶ್ವಸಂಸ್ಥೆ ಮತ್ತು ಬಾಂಗ್ಲಾದೇಶ ನಿರಾಶ್ರಿತ ಆಯೋಗ ಅಧಿಕಾರಿಗಳೂ ಅವರನ್ನು ಸಂದರ್ಶಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News