ಹಾಕಿ ದಂತಕತೆ ಬಲ್ಬೀರ್ ಸಿಂಗ್‌ಗೆ ‘ಭಾರತ ರತ್ನ’ ನೀಡಲು ಪ್ರಧಾನಿಗೆ ಪಂಜಾಬ್ ಸಿಎಂ ಪತ್ರ

Update: 2019-08-22 18:32 GMT

ಚಂಡಿಗಡ, ಆ.22: ಹಾಕಿ ದಂತಕತೆ ಬಲ್ಬೀರ್ ಸಿಂಗ್ ಸೀನಿಯರ್‌ಗೆ ದೇಶದ ಅತ್ಯುನ್ನತ ನಾಗರಿಕ ಗೌರವ-ಭಾರತ ರತ್ನ- ಪ್ರಶಸ್ತಿಯನ್ನು ನೀಡಬೇಕೆಂದು ಒತ್ತಾಯಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಪತ್ರ ಬರೆದಿದ್ದಾರೆ.

95ರ ಹರೆಯದ ಬಲ್ಬೀರ್ ಸಿಂಗ್ ಓರ್ವ ಶ್ರೇಷ್ಠ ಕ್ರೀಡಾಪಟುವಾಗಿದ್ದರು ಎಂದು ಸಿಂಗ್ ಅವರು ಮೋದಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

‘‘ಬಲ್ಬೀರ್ ಸೀನಿಯರ್‌ಗೆ ಭಾರತ ರತ್ನ ಪ್ರಶಸ್ತಿ ನೀಡುವ ವಿಚಾರಕ್ಕೆ ಸಂಬಂಧಿಸಿ ನಿಮ್ಮ ಗಮನ ಸೆಳೆಯಲು ಬಯಸುವೆ. ಸ್ವಾತಂತ್ರ ಪಡೆದ ಬಳಿಕ ಭಾರತದ ಓರ್ವ ಗೌರವಾನ್ವಿತ ಹಾಗೂ ಅದ್ಭುತ ಕ್ರೀಡಾಪಟುವಾಗಿರುವ ಬಲ್ಬೀರ್ ಸಿಂಗ್ ಸೀನಿಯರ್‌ಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ವಿನಂತಿಸುತ್ತೇನೆ’’ ಎಂದು ಅಮರೀಂದರ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಭಾರತೀಯ ಹಾಕಿ ತಂಡ 1948, 1952 ಹಾಗೂ 1956ರಲ್ಲಿ ಒಲಿಂಪಿಕ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಸಂದರ್ಭದಲ್ಲಿ ಬಲ್ಬೀರ್ ಸಿಂಗ್ ತಂಡದ ಭಾಗವಾಗಿದ್ದರು. 1956ರ ಒಲಿಂಪಿಕ್ಸ್‌ನಲ್ಲಿ ಭಾರತದ ನಾಯಕತ್ವವನ್ನು ವಹಿಸಿದ್ದರು.

‘‘ಬಲ್ಬೀರ್ ಸಿಂಗ್(ಸೀನಿಯರ್)ಅವರ ಕೊಡುಗೆಯನ್ನು ಗುರುತಿಸಿ 1957ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.ಬಲ್ಬೀರ್ ಸಿಂಗ್‌ರನ್ನು(ಸೀನಿಯರ್)ಭಾರತ ರತ್ನ ಪ್ರಶಸ್ತಿಗೆ ಪರಿಗಣಿಸಬೇಕೆಂದು ನಿಮಗೆ ಬಲವಾದ ಶಿಫಾರಸು ಹಾಗೂ ಕೋರಿಕೆ ಸಲ್ಲಿಸುತ್ತಿದ್ದೇನೆ’’ ಎಂದು ಅಮರೀಂದರ್ ಪತ್ರದಲ್ಲಿ ಬರೆದಿದ್ದಾರೆ.

ದೇಶದ ಅತ್ಯಂತ ಎತ್ತರದ ಕ್ರೀಡಾಪಟುಗಳ ಪೈಕಿ ಒಬ್ಬರಾಗಿರುವ ಬಲ್ಬೀರ್ ಸೀನಿಯರ್ ಆಧುನಿಕ ಒಲಿಂಪಿಕ್ಸ್ ಇತಿಹಾಸದಲ್ಲಿ ಅಂತರ್‌ರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(ಐಒಸಿ)ಆಯ್ಕೆ ಮಾಡಿರುವ 16 ದಂತಕತೆಗಳ ಪೈಕಿ ಭಾರತದಿಂದ ಆಯ್ಕೆಯಾದ ಏಕೈಕ ಹಾಕಿ ದಿಗ್ಗಜರಾಗಿದ್ದಾರೆ. ಒಲಿಂಪಿಕ್ ಗೇಮ್ಸ್‌ನಲ್ಲಿ ಪುರುಷರ ಹಾಕಿ ಫೈನಲ್‌ನಲ್ಲಿ ವೈಯಕ್ತಿಕವಾಗಿ ಗರಿಷ್ಠ ಗೋಲು ಗಳಿಸಿರುವ ವಿಶ್ವ ದಾಖಲೆ ಈಗಲೂ ಬಲ್ಬೀರ್ ಅವರ ಹೆಸರಲ್ಲಿದೆ. 1952ರಲ್ಲಿ ನಡೆದ ಹೆಲ್ಸಿಂಕಿ ಗೇಮ್ಸ್‌ನಲ್ಲಿ ನೆದರ್ಲೆಂಡ್ ವಿರುದ್ಧ ಭಾರತ 6-1 ಅಂತರದಿಂದ ಗೆದ್ದ ಪಂದ್ಯದಲ್ಲಿ ಬಲ್ಬೀರ್ ಐದು ಗೋಲುಗಳನ್ನು ಗಳಿಸಿದ್ದರು. ಬಲ್ಬೀರ್ 1975ರಲ್ಲಿ ವಿಶ್ವಕಪ್ ಜಯಿಸಿದ್ದ ಭಾರತ ಹಾಕಿ ತಂಡದ ಮ್ಯಾನೇಜರ್ ಆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News