ಕರುಣರತ್ನೆ ಹೋರಾಟ, ಶ್ರೀಲಂಕಾ 2 ವಿಕೆಟ್ ನಷ್ಟಕ್ಕೆ 85

Update: 2019-08-22 18:41 GMT

ಕೊಲಂಬೊ, ಆ.22: ನಾಯಕ ಡಿಮುತ್ ಕರುಣರತ್ನೆ ಜವಾಬ್ದಾರಿಯುತ ಬ್ಯಾಟಿಂಗ್(ಔಟಾಗದೆ 49)ನೆರವಿನಿಂದ ನ್ಯೂಝಿಲ್ಯಾಂಡ್ ವಿರುದ್ಧ ಗುರುವಾರ ಆರಂಭವಾದ ಮಳೆ ಬಾಧಿತ 2ನೇ ಪಂದ್ಯದ ಮೊದಲ ದಿನದಾಟದಲ್ಲಿ ಶ್ರೀಲಂಕಾದ 2 ವಿಕೆಟ್‌ಗಳ ನಷ್ಟಕ್ಕೆ 85 ರನ್ ಗಳಿಸಿದೆ.

ಪಂದ್ಯದ ಮೊದಲ ಅವಧಿ ಮಳೆಗಾಹುತಿಯಾಗಿರುವುದು ಹಾಗೂ ಮಂದಬೆಳಕಿನಿಂದಾಗಿ ದಿನದಾಟ ಬೇಗನೆ ಕೊನೆಯಾದ ಕಾರಣ ಕೇವಲ 36.3 ಓವರ್‌ಗಳ ಪಂದ್ಯ ಆಡಲು ಸಾಧ್ಯವಾಗಿದೆ.

ಕಳೆದ ವಾರ ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿಶತಕ ಸಿಡಿಸಿದ್ದ ಕರುಣರತ್ನೆ 100 ಎಸೆತಗಳಲ್ಲಿ 6 ಬೌಂಡರಿಗಳ ಸಹಿತ ಔಟಾಗದೆ 49 ರನ್ ಗಳಿಸಿದ್ದಾರೆ. ಆರಂಭಿಕ ಜೊತೆಗಾರ ಲಹಿರು ತಿರಿಮನ್ನೆ ಹಾಗೂ ಕುಸಾಲ್ ಮೆಂಡಿಸ್ ವಿಕೆಟ್ ಬೇಗನೆ ಉರುಳಿದರೂ ದೃತಿಗೆಡದ ಎಡಗೈ ದಾಂಡಿಗ ಕರುಣರತ್ನೆ ಕ್ರೀಸ್ ಕಾಯ್ದುಕೊಂಡಿದ್ದಾರೆ. 59 ನಿಮಿಷಗಳ ಕಾಲ ಕ್ರೀಸ್‌ನಲ್ಲಿದ್ದ ತಿರಿಮನ್ನೆ ಕೇವಲ 2 ರನ್ ಗಳಿಸಿದರು.

  ವಿಲಿಯಮ್ ಸೊಮೆರ್‌ವಿಲ್ಲೆ ಬೌಲಿಂಗ್‌ನಲ್ಲಿ ನಾಯಕ ಕೇನ್ ವಿಲಿಯಮ್ಸನ್‌ಗೆ ಎಕ್ಸ್‌ಟ್ರಾ ಕವರ್‌ನಲ್ಲಿ ಕ್ಯಾಚ್ ನೀಡಿದ ತಿರಿಮನ್ನೆ ಪೆವಿಲಿಯನ್ ಹಾದಿ ಹಿಡಿದರು. 4 ಬೌಂಡರಿಗಳ ಸಹಿತ 32 ರನ್ ಗಳಿಸಿದ ಮೆಂಡಿಸ್ ನಾಯಕ ಕರುಣರತ್ನೆ ಜೊತೆ 2ನೇ ವಿಕೆಟ್ ಜೊತೆಯಾಟದಲ್ಲಿ 50 ರನ್ ಸೇರಿಸಿದರು. ಮಿಚೆಲ್ ಸ್ಯಾಂಟ್ನರ್ ಬದಲಿಗೆ ಆಡುವ 11ರ ಬಳಗವನ್ನು ಸೇರಿದ್ದ ಕಾಲಿನ್ ಡಿ ಗ್ರಾಂಡ್‌ಹೋಮ್ ಅವರು ಮೆಂಡಿಸ್ ವಿಕೆಟ್ ಪಡೆಯಲು ಸಫಲರಾದರು. ದಿನದಾಟದಂತ್ಯಕ್ಕೆ ಮಾಜಿ ನಾಯಕ ಆ್ಯಂಜೆಲೊ ಮ್ಯಾಥ್ಯೂಸ್(0)14 ಎಸೆತಗಳನ್ನು ಎದುರಿಸಿದರೂ ರನ್ ಗಳಿಸದೇ ಕರುಣರತ್ನೆಗೆ ಸಾಥ್ ನೀಡುತ್ತಿದ್ದಾರೆ.

ಆತಿಥೇಯ ಶ್ರೀಲಂಕಾ ತಂಡ ಈ ಪಂದ್ಯವನ್ನು ಡ್ರಾಗೊಳಿಸಿದರೆ 2 ಪಂದ್ಯಗಳ ಸರಣಿಯನ್ನು ವಶಪಡಿಸಿಕೊಳ್ಳಬಹುದು. ಉಭಯ ತಂಡಗಳು ಒಂದು ಬದಲಾವಣೆ ಮಾಡಿದ್ದವು. ಶ್ರೀಲಂಕಾ ತಂಡ ಹಿರಿಯ ಸ್ಪಿನ್ನರ್ ದಿಲ್ರುವಾನ್ ಪೆರೇರ ಅವರನ್ನು ಅಕಿಲ ಧನಂಜಯ ಬದಲಿಗೆ ಕಣಕ್ಕಿಳಿಸಿದೆ. ಧನಂಜಯ ಸಂಶಯಾಸ್ಪದ ಬೌಲಿಂಗ್ ಶೈಲಿ ಕಾರಣದಿಂದ ಬೌಲಿಂಗ್ ಮಾಡುವುದರಿಂದ ನಿಷೇಧಕ್ಕೆ ಒಳಗಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News