ಮ್ಯಾನ್‌ಹೋಲ್ ಸ್ವಚ್ಛಗೊಳಿಸುತ್ತಿದ್ದ ಐವರ ದಾರುಣ ಸಾವು

Update: 2019-08-23 03:40 GMT

ಗಾಝಿಯಾಬಾದ್, ಆ.23: ಹದಿನಾಲ್ಕು ಅಡಿ ಆಳದ ಮ್ಯಾನ್‌ಹೋಲ್‌ನಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಪೌರ ಕಾರ್ಮಿಕರು ಹಾಗೂ ಅವರ ಮೇಲ್ವಿಚಾರಕ ಮೃತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ.

ನಂದಗ್ರಾಮದ ಕೃಷ್ಣಕುಂಜ ಕಾಲನಿಯಲ್ಲಿ ಯಾವುದೇ ಸುರಕ್ಷಾ ಸಾಧನಗಳಿಲ್ಲದೇ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರು ಮೃತಪಟ್ಟ ಈ ಘಟನೆಯಿಂದ ರಾಜಧಾನಿ ತಲೆತಗ್ಗಿಸುವಂತಾಗಿದೆ.

ನಿರ್ಮಾಣ ಹಂತದಲ್ಲಿದ್ದ ಒಳಚರಂಡಿ ವ್ಯವಸ್ಥೆಯಲ್ಲಿ ಒಂದೂವರೆ ಅಡಿ ವಿಸ್ತಾರದ ಮ್ಯಾನ್‌ಹೋಲ್‌ಗೆ ಸಂಪರ್ಕ ಕಲ್ಪಿಸುವ ಕಾರ್ಯದಲ್ಲಿ ನಿರತರಾಗಿದ್ದಾಗ ಈ ದುರಂತ ಸಂಭವಿಸಿದೆ. ಉತ್ತರ ಪ್ರದೇಶದ ಜಲನಿಗಮ, ಅಟಲ್ ಮಿಷನ್ ಫಾರ್ ರಿಜುವನೇಶನ್ ಅಂಡ್ ಅರ್ಬಲ್ ಟ್ರಾನ್ಸ್‌ಫಾರ್ಮೇಶನ್ ಯೋಜನೆಯಡಿ ಖಾಸಗಿ ಗುತ್ತಿಗೆದಾರರೊಬ್ಬರ ಮೂಲಕ ಈ ಕೆಲಸ ನಿರ್ವಹಿಸುತ್ತಿತ್ತು. ಈ ಸಂಬಂಧ ಎಫ್‌ಐಆರ್ ದಾಖಲಾಗಿದ್ದು, ನಿಗಮದ ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ಮೃತಪಟ್ಟವರನ್ನು ದಾಮೋದರ (40), ಹೊರ್ಲಿ(35), ಸಂದೀಪ್ (30), ಶಿವಕುಮಾರ್ (32), ಅವರ ಮೇಲ್ವಿಚಾರಕ ವಿಜಯಕುಮಾರ್ (40) ಎಂದು ಗುರುತಿಸಲಾಗಿದೆ. ಎಲ್ಲರೂ ಬಿಹಾರದ ಸಮಷ್ಟಿಪು ಜಿಲ್ಲೆ ಸಿಂಘಿಯಾ ಜಿಲ್ಲೆಯವರು. ಸಂದೀಪ್, ಶಿವಕುಮಾರ್ ಹಾಗೂ ವಿಜಯ್ ಸಂಬಂಧಿಕರು.

ದಿಲ್ಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಇಂಥ ದುರಂತ ಸರಣಿ ಮುಂದುವರಿದಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಕೂಡಾ ದಕ್ಷಿಣ ದಿಲ್ಲಿಯ ಮೋತಿನಗರದಲ್ಲಿ ಒಳಚರಂಡಿ ಸ್ವಚ್ಛತಾ ಕಾರ್ಯದಲ್ಲಿದ್ದ ಐವರು ಕಾರ್ಮಿಕರು ಮೃತಪಟ್ಟಿದ್ದರು.

ಗುರುವಾರ ಸಂಜೆ ನಡೆದ ಘಟನೆ ಸಂಬಂಧ ಗುತ್ತಿಗೆದಾರ, ಇಎಂಎಸ್ ಇನ್ಫ್ರಾಕಾನ್ ಮತ್ತು ಜಲನಿಗಮ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಿ, ಎಲ್ಲ ಸರ್ಕಾರಿ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ತಡೆಹಿಡಿಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News