ನಾಯಕತ್ವದ ಮೊದಲ ಪರೀಕ್ಷೆಯಲ್ಲಿ ಹರ್ಮನ್ ತೇರ್ಗಡೆ

Update: 2019-08-23 18:13 GMT

ಹೊಸದಿಲ್ಲಿ, ಆ.23: ಟೋಕಿಯೊದಲ್ಲಿ ಕೊನೆಗೊಂಡ ಒಲಿಂಪಿಕ್ ಟೆಸ್ಟ್ ಟೂರ್ನಿಯಲ್ಲಿ ಭಾರತದ ಹಾಕಿ ಯಶಸ್ಸು ಗಳಿಸಿರುವ ಹಿನ್ನೆಲೆಯಲ್ಲಿ ಭಾರತದ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಅವರು ಸಂತೃಪ್ತಿ ವ್ಯಕ್ತಪಡಿಸಿದ್ದಾರೆ.

 ವರ್ಲ್ಡ್ ನಂ.5 ಭಾರತ ಟೋಕಿಯೊಗೆ ತೆರಳಿದಾಗ ತಂಡದಲ್ಲಿ ಅನುಭವಿಗಳ ಕೊರತೆ ಕಾಡುತ್ತಿತ್ತು. ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿತ್ತು. ಹಿರಿಯರ ಅನುಪಸ್ಥಿತಿಯಲ್ಲಿ ನಾಯಕನಾಗಿ ಮೊದಲ ಬಾರಿ ಹರ್ಮನ್‌ಪ್ರೀತ್ ಸಿಂಗ್ ತಂಡವನ್ನು ಮುನ್ನಡೆಸಿದ್ದರು. ಅವರ ನಾಯಕತ್ವದಲ್ಲಿ ಯುವ ತಂಡ ಉತ್ತಮ ಪ್ರದರ್ಶನ ನೀಡಿದೆ. ಬುಧವಾರ ಫೈನಲ್‌ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ 5-0 ಅಂತರದಲ್ಲಿ ಜಯ ಗಳಿಸಿ ಪ್ರಶಸ್ತಿಯನ್ನು ಬಾಚಿಕೊಂಡಿದೆ.

     ‘‘ ಪ್ರತಿಯೊಬ್ಬರು ಕೈಜೋಡಿಸಿದರೆ ನಮಗೆ ನಮ್ಮ ಗುರಿಯನ್ನು ಯಶಸ್ವಿಯಾಗಿ ಸಾಧಿಸಲು ಸಾಧ್ಯ ಅದೇ ರೀತಿಯಲ್ಲಿ ನಮ್ಮ ತಂಡದ ಆಟಗಾರರು ಸಂಘಟಿತ ಪ್ರಯತ್ನ ನಡೆಸಿ ತಂಡದ ಯಶಸ್ವಿಗೆ ನೆರವಾಗಿದ್ದಾರೆ. ಎಲ್ಲರ ಸಹಕಾರದೊಂದಿಗೆ ತಂಡವನ್ನು ಮೊದಲ ಬಾರಿ ಮುನ್ನಡೆಸಲು ನನಗೆ ಅಪೂರ್ವ ಅವಕಾಶ ಸಿಕ್ಕಿದೆ. ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಿದ ಕಾರಣದಿಂದಾಗಿ ನಮ್ಮದು ಯುವ ತಂಡವಾಗಿತ್ತು. ಯುವ ಆಟಗಾರರು ಸಿಕ್ಕಿದ ಅವಕಾಶವನ್ನು ಚೆನ್ನಾಗಿ ಬಳಿಸಿಕೊಂಡಿದ್ದಾರೆ. ಇದಕ್ಕಾಗಿ ತಂಡದ ಎಲ್ಲರನ್ನು ಅಭಿನಂದಿಸುತ್ತೇನೆ’’ ಎಂದು ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಹೇಳಿದ್ದಾರೆ.

 ‘‘ ನಮ್ಮ ತಂಡ ಜಪಾನ್, ಮಲೇಶ್ಯ ಮತ್ತು ನ್ಯೂಝಿಲ್ಯಾಂಡ್‌ನಂತಹ ತಂಡದ ವಿರುದ್ಧ ಚೆನ್ನಾಗಿ ಆಡಿದೆ. ನಾನು ಮೊದಲ ಬಾರಿ ನಾಯಕನಾಗಿ ಮುನ್ನಡೆಸಿದ ತಂ ಉತ್ತಮ ಪ್ರದರ್ಶನ ನೀಡಿರುವ ಹಿನ್ನೆಲೆಯಲ್ಲಿ ನನಗೆ ಸಂತಸವಾಗಿದೆ ’’ ಎಂದು 23ರ ಹರೆಯದ ಹರ್ಮನ್‌ಪ್ರೀತ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಭಾರತ ಒಲಿಂಪಿಕ್ ಟೆಸ್ಟ್ ಇವೆಂಟ್‌ನ ಮೊದಲ ಪಂದ್ಯದಲ್ಲಿ ಮಲೇಶ್ಯ ವಿರುದ್ಧ 6-0 ವಿಜಯ ಗಳಿಸುವ ಮೂಲಕ ಶುಭಾರಂಭ ಮಾಡಿತ್ತು. ಆದರೆ ಎರಡನೇ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ 1-2 ಅಂತರದಲ್ಲಿ ಸೋಲು ಅನುಭವಿಸಿತ್ತು. ಆದರೆ ಕೊನೆಯ ಪಂದ್ಯದಲ್ಲಿ ಆತಿಥೇಯ ಜಪಾನ್ ವಿರುದ್ಧ 6-3 ಅಂತರದಲ್ಲಿ ಜಯ ಗಳಿಸಿ ಫೈನಲ್‌ಗೆ ಪ್ರವೇಶ ಪಡೆದಿತ್ತು.

ಹರ್ಮನ್‌ಪ್ರೀತ್ ಸಿಂಗ್ ಎರಡು ಗೋಲುಗಳನ್ನು ದಾಖಲಿಸಿದ್ದರು. ಎರಡೂ ಗೋಲುಗಳನ್ನು ನ್ಯೂಝಿಲ್ಯಾಂಡ್ ವಿರುದ್ಧ ಗಳಿಸಿದ್ದರು. ನ್ಯೂಝಿಲ್ಯಾಂಡ್ ವಿರುದ್ಧ ಭಾರತ ಸೋಲು ಅನುಭವಿಸಿದ ಮೊದಲ ಪಂದ್ಯದಲ್ಲಿ ಗೋಲು ಗಳಿಸಿದ್ದರು. ಇನ್ನೊಂದು ಗೋಲು ಫೈನಲ್‌ನಲ್ಲಿ ದಾಖಲಿಸಿದ್ದರು.

  ಹರ್ಮನ್‌ಪ್ರೀತ್ ಸಿಂಗ್ ಮೇ 2015ರಲ್ಲಿ ಭುವನೇಶ್ವರ್‌ನಲ್ಲಿ ನಡೆದ ಜಪಾನ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಹರ್ಮನ್‌ಪ್ರೀತ್ ರಾಷ್ಟ್ರೀಯ ತಂಡ ಪ್ರವೇಶಿಸಿದ್ದರು. 2016 ರಿಯೋ ಒಲಿಂಪಿಕ್‌ನಲ್ಲಿ ಭಾರತದ ಪರ ಆಡಿದ ಓರ್ವ ಯುವ ಆಟಗಾರ ಎನಿಸಿಕೊಂಡಿದ್ದರು. ಆ ಬಳಿಕ 2016 ಮತ್ತು 2018ರಲ್ಲಿ ಎಫ್‌ಐಎಚ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಆಡಿದ್ದರು. ಕಾಮನ್‌ವೆಲ್ಸ್ ಗೇಮ್ಸ್, 2018ರಲ್ಲಿ ನಡೆದ ಏಶ್ಯನ್ ಗೇಮ್ಸ್ ಮತ್ತು ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ಅವರು ಆಡಿದ್ದರು.

ಕಳೆದ ಒಲಿಂಪಿಕ್‌ನಲ್ಲಿ ಆಡಿದ್ದೇನೆ. ಟೋಕಿಯೋದಲ್ಲಿ 2020ರಲ್ಲಿ ನಡೆಯಲಿರುವ ಒಲಿಂಪಿಕ್‌ಗೆ ಅರ್ಹತೆ ಪಡೆಯಲು ಭಾರತ ಪ್ರಯತ್ನ ಮುಂದುವರಿಸಲಿದೆ ಎಂದು ನಾಯಕ ಹರ್ಮನ್‌ಪ್ರೀತ್ ಸಿಂಗ್ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News