ಸಿಂಧು, ಪ್ರಣೀತ್ ಸೆಮಿ ಫೈನಲ್‌ಗೆ

Update: 2019-08-23 18:20 GMT

ಬಾಸೆಲ್, ಆ.23: ಇಲ್ಲಿ ನಡೆಯುತ್ತಿರುವ ಬಿಡಬ್ಲುಎಫ್ ವರ್ಲ್ಡ್ ಚಾಂಪಿಯನ್‌ಶಿಪ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಮತ್ತು ಪುರುಷರ ಸಿಂಗಲ್ಸ್‌ನಲ್ಲಿ ಸಾಯಿ ಪ್ರಣೀತ್ ಸೆಮಿಫೈನಲ್ ಪ್ರವೇಶಿಸಿದ್ದಾರೆ.

  ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಸಿಂಧು ಅವರು ವಿಶ್ವದ ಮಾಜಿ ನಂ.1 ಆಟಗಾರ್ತಿ ಚೈನಾ ತೈಪೆಯ ತಾಯ್ ತ್ಸು ಯಿಂಗ್ ಅವರನ್ನು ಮಣಿಸಿ ಸೆಮಿಫೈನಲ್‌ನಲ್ಲಿ ಅವಕಾಶ ದೃಢಪಡಿಸಿದರು.

ಸಿಂಧು ಅವರು ಯಿಂಗ್ ವಿರುದ್ಧ 12-21, 23-21 , 21-19 ಅಂತರದಲ್ಲಿ ಪ್ರಯಾಸದ ಜಯ ದಾಖಲಿಸಿದರು. ಮೊದಲ ಸೆಟ್‌ನಲ್ಲಿ ಸಿಂಧು ಹಿನ್ನಡೆ ಅನುಭವಿಸಿದರೂ ಬಳಿಕ ಸುಧಾರಿಸಿಕೊಂಡು ಆಡಿದರು. ಎರಡನೇ ಸೆಟ್‌ನಲ್ಲಿ ಮೇಲುಗೈ ಸಾಧಿಸಿದ ಸಿಂಧು ಬಳಿಕ ಎದುರಾಳಿಗೆ ಚೇರಿಸಿಕೊಳ್ಳಲು ಅವಕಾಶ ನೀಡಲಿಲ್ಲ. 71 ನಿಮಿಷಗಳಲ್ಲಿ ಎದುರಾಳಿಗೆ ಸೋಲಿನ ಆಗಾತ ನೀಡಿದರು. ಸಿಂಧು ವಿರುದ್ಧ ಯಿಂಗ್ ಕಠಿಣ ಹೋರಾಟ ನಡೆಸಿದರೂ ಫಲಕಾರಿಯಾಗಲಿಲ್ಲ. ಸಿಂಧು ಮತ್ತೊಮ್ಮೆ ಪದಕ ದೃಢಪಡಿಸಿದರು. ಸಿಂಧು ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ 2 ಬಾರಿ ಬೆಳ್ಳಿ ಮತ್ತು 2 ಬಾರಿ ಕಂಚು ಪಡೆದಿದ್ದರು. 2017, 2018ರಲ್ಲಿ ವರ್ಲ್ಡ್‌ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಸೋತು ಬೆಳ್ಳಿ ಪಡೆದಿದ್ದರು. 2013 ಮತ್ತು 2014ರಲ್ಲಿ ಕಂಚು ಪಡೆದಿದ್ದರು.

ಬುಧವಾರ ತಡ ರಾತ್ರಿ ನಡೆದ ಪಂದ್ಯದಲ್ಲಿ ಪಿ. ವಿ.ಸಿಂಧು ಅವರು ಚೈನಾ ತೈಪೆಯ ಪೈ ಯು ಪೊ ಅವರನ್ನು 21-14, 21-15 ಅಂತರದಲ್ಲಿ ಮಣಿಸಿ ಕ್ವಾರ್ಟರ್ ಫೈನಲ್‌ಗೆತೇರ್ಗಡೆಯಾಗಿದ್ದರು. ಸೈನಾ ನೆಹ್ವಾಲ್ ನೆದರ್‌ಲ್ಯಾಂಡ್‌ನ ಸೋರಾಯ ಡಿ ವಿಶ್ ಐಜ್ಬೆರ್ಗೆನ್ ಅವರನ್ನು 21-10, 21-11 ಅಂತರದಲ್ಲಿ ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು.

ದಾಖಲೆ ಬರೆದ ಪ್ರಣೀತ್

ಭಾರತದ ಬಿ.ಸಾಯಿ ಪ್ರಣೀತ್ ಅವರು ಜೋನಾಥನ್ ಕ್ರೀಸ್ಟೇ ಅವರನ್ನು 24-22, 21-14 ಅಂತರದಲ್ಲಿ ಸೋಲಿಸಿ ಸೆಮಿಫೈನಲ್ ಪ್ರವೇಶಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

ಇದರೊಂದಿಗೆ ಪ್ರಣೀತ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ದೃಢಪಡಿಸಿದ್ದಾರೆ. ವರ್ಲ್ಡ್ ಚಾಂಪಿಯನ್‌ಶಿಪ್‌ನ ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಪರ 36 ವರ್ಷಗಳ ಬಳಿಕ ಹೊಸ ದಾಖಲೆ ಬರೆದಿದ್ದಾರೆ. ಭಾರತದ ಪ್ರಕಾಶ್ ಪಡುಕೋಣೆ 1983ರಲ್ಲಿ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಪಡೆದಿದ್ದರು. ಆ ಬಳಿಕ ಭಾರತಕ್ಕೆ ಪುರುಷರ ಸಿಂಗಲ್ಸ್ ನಲ್ಲಿ ಪದಕ ಸಿಕ್ಕಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News