ಬ್ರಿಟನ್: ಪಾಕ್ ರೈಲ್ವೆ ಸಚಿವರಿಗೆ ಹಲ್ಲೆ

Update: 2019-08-24 17:24 GMT

   ಇಸ್ಲಾಮಾಬಾದ್, ಆಗಸ್ಟ್ 24: ಬ್ರಿಟನ್ ಪ್ರವಾಸದಲ್ಲಿರುವ ಪಾಕಿಸ್ತಾನದ ರೈಲ್ವೆ ಸಚಿವ ಶೇಖ್ ರಶೀದ್ ಅಹ್ಮದ್ ಅವರ ಮೇಲೆ ಲಂಡ್‌ನಲ್ಲಿ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಪಕ್ಷದ ಇಬ್ಬರು ಪದಾಧಿಕಾರಿಗಳು ಹಲ್ಲೆ ನಡೆಸಿದ್ದಾರೆ. ತಮ್ಮ ನಾಯಕ ಬಿಲಾವಲ್ ಭುಟ್ಟೋ ಝರ್ದಾರಿ ವಿರುದ್ಧ ನಿಂದನಾತ್ಮಕ ಪದಗಳನ್ನು ಬಳಸಿದ್ದಾರೆಂದು ಆರೋಪಿಸಿ ಅವರು, ಶೇಖ್ ರಶೀದ್ ಅವರ ಮೇಲೆ ಮೊಟ್ಟೆಗಳನ್ನು ಎಸೆದಿದ್ದಾರೆ ಹಾಗೂ ಹಲ್ಲೆ ನಡೆಸಿದ್ದಾರೆಂದು ವರದಿಯಾಗಿದೆ.

   ಅವಾಮಿ ಮುಸ್ಲಿಂ ಲೀಗ್ ಪಕ್ಷದ ಅಧ್ಯಕ್ಷರೂ ಆಗಿರುವ ಅಹ್ಮದ್ ಅವರು ಮಂಗಳವಾರ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಪಾಲ್ಗೊಳ್ಳುವುದಕ್ಕಾಗಿ ಲಂಡನ್‌ನ ಹೊಟೇಲ್‌ನಿಂದ ಹೊರಬರುತ್ತಿದ್ದಾಗ ಅವರ ಮೇಲೆ ಹಲ್ಲೆ ನಡೆಸಲಾಗಿದೆಯೆಂದು ವರದಿಗಳು ತಿಳಸಿವೆ.

ಮಂಗಳವಾರದಂದು ಈ ಘಟನೆಯ ನಡೆದಿದ್ದು, ಹಲ್ಲೆಯ ಬಳಿಕ ದಾಳಿಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ. ಆದರೆ ಈ ಬಗ್ಗೆ ಬುಧವಾರ ಬ್ರ್ರಿಟನ್‌ಲ್ಲಿನ ಪಿಪಿಪಿ ಪಕ್ಷದ ಇಬ್ಬರು ಪದಾಧಿಕಾರಿಗಳಾದ ಯುರೋಪ್‌ನಲ್ಲಿನ ಪಿಪಿಪಿ ಪಕ್ಷದ ಯುವ ಘಟಕದ ಅಧ್ಯಕ್ಷ ಆಸಿಫ್ ಅಲಿ ಖಾನ್ ಮತ್ತು ಬೃಹತ್ ಲಂಡನ್ ಪಿಪಿಪಿ ಪಕ್ಷದ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಸಮಾಹ್ ನಾಝ್ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿ ತಾವು ಅಹ್ಮದ್ ಮೇಲೆ ದಾಳಿ ನಡೆಸಿದ್ದಾಗಿ ಹೇಳಿಕೊಂಡಿದ್ದಾರೆ.

    ‘‘ಪಿಪಿಪಿ ಪಕ್ಷದ ಅಧ್ಯಕ್ಷ ಬಿಲಾವಲ್ ಭುಟ್ಟೊ ಝರ್ದಾರಿ ವಿರುದ್ಧ ಅಹ್ಮದ್ ಅವರು ತನ್ನ ಸಂದರ್ಶನಗಳಲ್ಲಿ ಅತ್ಯಂತ ನಿಂದನಾತ್ಮಕ ಪದಗಳನ್ನು ಬಳಸುತ್ತಿದ್ದರು. ಇಂತಹ ಅನಾಗರಿಕರ ವ್ಯಕ್ತಿಯ ವಿರುದ್ಧ ದಾಳಿಗೆ ನಾವು ಮೊಟ್ಟೆಗಳನ್ನು ಮಾತ್ರವೇ ಬಳಸಿದ್ದಕಾಗಿ, ಆತ ನಮಗೆ ಧನ್ಯವಾದ ಹೇಳಬೇಕಾಗಿದೆ’’ ಎಂದು ಅಸೀಫ್ ಅಲಿಖಾನ್ ಹಾಗೂ ಸಮಾಹ್ ನಾಝ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News