ಜಾಮೀನಿನಲ್ಲಿ ಬಿಡುಗಡೆ: ಬುಲಂದ್ ಶಹರ್ ಗಲಭೆ ಆರೋಪಿಗಳಿಗೆ ‘ಜೈ ಶ್ರೀ ರಾಂ’, ‘ವಂದೇ ಮಾತರಂ’ ಘೋಷಣೆಗಳ ಸ್ವಾಗತ!

Update: 2019-08-25 17:10 GMT

ಬುಲಂದ್‌ಶಹರ್, ಆ. 25: ಕಳೆದ ವರ್ಷ ಪೊಲೀಸ್ ಇನ್ಸ್‌ಪೆಕ್ಟರ್ ಹತ್ಯೆಗೆ ಕಾರಣವಾದ ಬುಲಂದ್‌ಶಹರ್ ಗುಂಪು ಹಿಂಸಾಚಾರ ಪ್ರಕರಣದಲ್ಲಿ ಬಂಧಿತರಾಗಿದ್ದ 6 ಮಂದಿ ಆರೋಪಿಗಳು ಶನಿವಾರ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದಾರೆ. ಬುಲಂದ್‌ಶಹರ್ ಕಾರಾಗೃಹದಲ್ಲಿ 6 ತಿಂಗಳು ಕಳೆದ ಬಳಿಕ ಬಿಡುಗಡೆಗೊಂಡಿರುವ ಆರೋಪಿಗಳಿಗೆ ಅವರ ಬೆಂಬಲಿಗರು ‘ವೀರೋಚಿತ’ ಸ್ವಾಗತ ನೀಡಿ ಗ್ರಾಮಕ್ಕೆ ಬರ ಮಾಡಿಕೊಂಡಿದ್ದಾರೆ.

 ಬುಲಂದ್‌ಶಹರ್ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳಾದ ಭಾರತೀಯ ಜನತಾ ಯುವ ಮೋರ್ಚಾ ಸದಸ್ಯ ಶಿಖಾರ್ ಅಗರ್ವಾಲ್ ಹಾಗೂ ಜೀತು ಫೌಜಿಯನ್ನು ಹೂ ಹಾರ ಹಾಕಿ, ‘ಜೈ ಶ್ರೀರಾಮ್’, ‘ಭಾರತ್ ಮಾತಾ ಕಿ ಜೈ’, ‘ವಂದೇ ಮಾತರಂ’ ಘೋಷಣೆ ಕೂಗಿ ಸ್ವಾಗತಿಸಿರುವ ವೀಡಿಯೊವನ್ನು ಸ್ಥಳೀಯ ಪತ್ರಕರ್ತನೋರ್ವ ದಾಖಲಿಸಿಕೊಂಡಿದ್ದಾರೆ.

ಇತರ ಆರೋಪಿಗಳನ್ನು ಹೇಮು, ಉಪೇಂದ್ರ, ರಾಘವ್, ಸೌರವ್ ಹಾಗೂ ರೋಹಿತ್ ರಾಘವ್ ಎಂದು ಗುರುತಿಸಲಾಗಿದೆ. ಗದ್ದೆಯೊಂದರಲ್ಲಿ ಪರಿತ್ಯಕ್ತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಎಸ್‌ಯುವಿ ವಾಹನದ ಒಳಗಡೆ ಪೊಲೀಸ್ ಇನ್ಸ್‌ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಅವರ ಮೃತದೇಹ ಪತ್ತೆಯಾದ ಬಳಿಕ ಇವರನ್ನು ಬಂಧಿಸಲಾಗಿತ್ತು. ಕಳೆದ ವರ್ಷ ಬುಲಂದ್‌ಶಹರ್‌ನ ಸಿಯಾನಾ ಪ್ರದೇಶದಲ್ಲಿ ಗೋಹತ್ಯೆ ಆರೋಪದಲ್ಲಿ ಗುಂಪೊಂದು ಹಿಂಸಾಚಾರ ನಡೆಸಿತ್ತು. ಈ ಸಂದರ್ಭ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಸ್ಥಳೀಯ ಯುವಕನೋರ್ವ ಹತ್ಯೆಯಾಗಿದ್ದ.

 ಮಹಾವ್ ಗ್ರಾಮದ ಹೊರವಲಯದ ಕಾಡಿನಲ್ಲಿ 25 ಜಾನುವಾರುಗಳ ಕಳೇಬರ ಪತ್ತೆ ಎಂಬ ವದಂತಿ ಬಳಿಕ ಹಿಂಸಾಚಾರ ಆರಂಭವಾಗಿತ್ತು. ಅಕ್ರಮವಾಗಿ ಗೋಹತ್ಯೆ ನಡೆಸುತ್ತಿರುವುದರಿಂದ ಈ ಕಳೇಬರಗಳು ಕಂಡು ಬಂದಿವೆ ಎಂದು ಸ್ಥಳೀಯರು ಆರೋಪಿಸಿದ್ದರು. ಗೋಹತ್ಯೆ ವಿರುದ್ಧ ಪ್ರತಿಭಟನೆ ನಡೆಸಿದ್ದ ಗ್ರಾಮಸ್ಥರು ಹಾಗೂ ಸಂಘಪರಿವಾರ ಸದಸ್ಯರು ಗೋವುಗಳ ಕಳೇಬರವನ್ನು ಟ್ರಾಕ್ಟರ್-ಟ್ರಾಲಿಯಲ್ಲಿ ಛಿಂಗಾರ್ವತಿ ಪೊಲೀಸ್ ಚೌಕಿಗೆ ಕೊಂಡೊಯ್ದು ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.

ಪೊಲೀಸ್ ಆಡಳಿತದ ವಿರುದ್ಧ ಪ್ರತಿಭಟನೆಕಾರರು ಘೋಷಣೆಗಳನ್ನು ಕೂಗಿದರು ಹಾಗೂ ಬುಲಂದ್‌ಶಹರ್-ಗರ್ಹ್‌ ರಾಜ್ಯ ಹೆದ್ದಾರಿಯಲ್ಲಿ ಸಂಚಾರಕ್ಕೆ ತಡೆ ಒಡ್ಡಿದ್ದರು. ಈ ಸಂದರ್ಭ ಸಿಯಾನ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಆಗಿದ್ದ ಸಿಂಗ್ ಗುಂಡಿನ ದಾಳಿ ಹಾಗೂ ಚೂಪಾದ ಆಯುಧದಿಂದ ಇರಿತಕ್ಕೊಳಗಾಗಿ ಗಾಯಗೊಂಡು ಮೃತಪಟ್ಟಿದ್ದರು. ಈ ಹಿಂಸಾಚಾರದಲ್ಲಿ 20 ವರ್ಷದ ಸ್ಥಳೀಯ ಯುವಕನೋರ್ವ ಕೂಡ ಮೃತಪಟ್ಟಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News