ಮೂರನೇ ಆ್ಯಶಸ್ ಟೆಸ್ಟ್: ಇಂಗ್ಲೆಂಡ್‌ಗೆ ರೋಚಕ ಜಯ

Update: 2019-08-25 15:37 GMT

ಲೀಡ್ಸ್, ಆ.25: ಆತಿಥೇಯ ಇಂಗ್ಲೆಂಡ್ ತಂಡ ಆಸ್ಟ್ರೇಲಿಯ ವಿರುದ್ಧ ಮೂರನೇ ಆ್ಯಶಸ್ ಟೆಸ್ಟ್ ಪಂದ್ಯವನ್ನು ಕೇವಲ ಒಂದು ವಿಕೆಟ್‌ನಿಂದ ಗೆದ್ದುಕೊಂಡಿದೆ. ಈ ಮೂಲಕ ನಾಲ್ಕನೇ ಇನಿಂಗ್ಸ್‌ನಲ್ಲಿ ಮೊದಲ ಬಾರಿ ಗರಿಷ್ಠ ರನ್ ಚೇಸಿಂಗ್ ಮಾಡಿ ಮಹತ್ವದ ಸಾಧನೆ ಮಾಡಿದೆ. ಈ ಗೆಲುವಿನ ಮೂಲಕ 5 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.

 ರವಿವಾರ ಗೆಲ್ಲಲು 359 ರನ್ ಗುರಿ ಪಡೆದಿದ್ದ ಇಂಗ್ಲೆಂಡ್ ಒಂದು ಹಂತದಲ್ಲಿ 286 ರನ್‌ಗೆ 9 ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಬಂಡೆಯಂತೆ ಕ್ರೀಸ್‌ನಲ್ಲಿ ನಿಂತ ವಿಶ್ವಕಪ್‌ನ ಹೀರೋ ಸ್ಟೋಕ್ಸ್ ಬಾಲಂಗೋಚಿ ಲೀಚ್(ಔಟಾಗದೆ 1)ಅವರೊಂದಿಗೆ ಕೊನೆಯ ವಿಕೆಟ್‌ನಲ್ಲಿ 76 ರನ್ ಸೇರಿಸಿ ಇಂಗ್ಲೆಂಡ್‌ಗೆ ಅಸಾಮಾನ್ಯ ಗೆಲುವು ತಂದರು.

ಔಟಾಗದೆ 131ರನ್ ಗಳಿಸಿದ ಸ್ಟೋಕ್ಸ್ 218 ಎಸೆತಗಳಲ್ಲಿ 10 ಬೌಂಡರಿ ಹಾಗೂ 8 ಸಿಕ್ಸರ್‌ಗಳನ್ನು ಸಿಡಿಸಿದರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯ ತನ್ನ ಮೊದಲ ಇನಿಂಗ್ಸ್‌ನಲ್ಲಿ 179 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ಕೇವಲ 67 ರನ್ ಗಳಿಸಿ ಆಸೀಸ್‌ಗೆ ಮೊದಲ ಇನಿಂಗ್ಸ್ ನಲ್ಲಿ 112 ರನ್ ಮುನ್ನಡೆ ಬಿಟ್ಟುಕೊಟ್ಟಿತು.

 ಎರಡನೇ ಇನಿಂಗ್ಸ್‌ನಲ್ಲಿ 246 ರನ್ ಗಳಿಸಿ ಆಲೌಟಾಗಿರುವ ಆಸ್ಟ್ರೇಲಿಯ ತಂಡ ಇಂಗ್ಲೆಂಡ್ ಗೆಲುವಿಗೆ 359 ರನ್ ಕಠಿಣ ಸವಾಲು ನೀಡಿತು.

ನಾಲ್ಕನೇ ದಿನವಾದ ರವಿವಾರ 3 ವಿಕೆಟ್ ನಷ್ಟಕ್ಕೆ 156 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಇಂಗ್ಲೆಂಡ್ ಭೋಜನ ವಿರಾಮದ ವೇಳೆಗೆ 4 ವಿಕೆಟ್‌ಗಳ ನಷ್ಟಕ್ಕೆ 238 ರನ್ ಗಳಿಸಿತ್ತು. ಬೆನ್ ಸ್ಟೋಕ್ಸ್ (32)ಹಾಗೂ ಜಾನಿ ಬೈರ್‌ಸ್ಟೋವ್(36)5ನೇ ವಿಕೆಟ್‌ಗೆ 86 ರನ್ ಸೇರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಬೈರ್‌ಸ್ಟೋವ್ ಔಟಾದ ಬಳಿಕ ಸ್ಟೋಕ್ಸ್ ಅವರೊಂದಿಗೆ ಆರ್ಚರ್ 25 ರನ್ ಸೇರಿಸಿದರು. ಸ್ಟುವರ್ಟ್ ಬ್ರಾಡ್ ಖಾತೆ ತೆರೆಯಲು ವಿಫಲರಾದರು. ಜೋಸ್ ಬಟ್ಲರ್(1) ಹಾಗೂ ಕ್ರಿಸ್ ವೋಕ್ಸ್(1) ಕೂಡ ಬೇಗನೆ ವಿಕೆಟ್ ಕೈಚೆಲ್ಲಿದರು. ಆಗ ಗೆಲುವಿನ ಹೊಣೆ ಹೊತ್ತ ಸ್ಟೋಕ್ಸ್ ಏಕಾಂಗಿಯಾಗಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದಕ್ಕೂ ಮೊದಲು 75 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಇಂಗ್ಲೆಂಡ್ ನಾಯಕ ಜೋ ರೂಟ್ ದಿನದ ಆರನೇ ಓವರ್‌ನಲ್ಲಿ 77 ರನ್ ಗಳಿಸಿ ಔಟಾದರು. ಔಟಾಗುವ ಮೊದಲು 205 ಎಸೆತಗಳಲ್ಲಿ 7 ಬೌಂಡರಿ ಗಳಿಸಿದ್ದಾರೆ. ಡೆನ್ಲಿ(50, 155 ಎಸೆತ, 8 ಬೌಂಡರಿ)ಅರ್ಧಶತಕ ಗಳಿಸಿ ತಂಡವನ್ನು ಆಧರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News