ಬಾಹ್ಯಾಕಾಶದಲ್ಲೂ ಮನುಷ್ಯನಿಂದ ಅಪರಾಧ !: ತನಿಖೆ ನಡೆಸುತ್ತಿರುವ ನಾಸಾ

Update: 2019-08-25 18:13 GMT

ಹೊಸದಿಲ್ಲಿ,ಆ.25: ಬಾಹ್ಯಾಕಾಶದಲ್ಲಿ ನಡೆಸಲಾದ ಮೊದಲ ಅಪರಾಧವಾಗಬಹುದಾದ ಪ್ರಕರಣದ ತನಿಖೆಯನ್ನು ನಾಸಾ ನಡೆಸುತ್ತಿದೆ ಎಂದು ‘ದಿ ನ್ಯೂಯಾರ್ಕ್ ಟೈಮ್ಸ್ ’ವರದಿ ಮಾಡಿದೆ.

ಗಗನಯಾತ್ರಿ ಆ್ಯನ್ನೆ ಮೆಕ್ಲೇನ್ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಆರು ತಿಂಗಳ ನಿಯೋಜನೆ ಯಲ್ಲಿದ್ದಾಗ ಸಮರ್ ವೋರ್ಡನ್ ಅವರ ಗುರುತು ಕಳವು ಮಾಡಿದ ಮತ್ತು ಅವರ ಖಾಸಗಿ ಬ್ಯಾಂಕ್ ಖಾತೆಯನ್ನು ಪ್ರವೇಶಿಸಿದ್ದ ಆರೋಪವನ್ನು ಎದುರಿಸುತ್ತಿದ್ದಾರೆ. ಇಬ್ಬರೂ ಮಹಿಳೆಯರಾಗಿದ್ದು, ಸಲಿಂಗ ದಂಪತಿಗಳಾಗಿದ್ದ ಅವರು ಈಗ ಪ್ರತ್ಯೇಕಗೊಂಡಿದ್ದಾರೆ.

ಈ ಬಗ್ಗೆ ವೋರ್ಡನ್ ಅವರು ಈ ವರ್ಷದ ಆರಂಭದಲ್ಲಿ ಫೆಡರಲ್ ಟ್ರೇಡ್ ಕಮಿಷನ್‌ಗೆ ದೂರು ಸಲ್ಲಿಸಿದ್ದರೆ, ಅವರ ಕುಟುಂಬವು ನಾಸಾದ ಇನ್ಸ್‌ಪೆಕ್ಟರ್ ಜನರಲ್ ಕಚೇರಿಗೆ ಇನ್ನೊಂದು ದೂರನ್ನು ಸಲ್ಲಿಸಿತ್ತು.

ತನ್ನ ಕಕ್ಷಿದಾರರು ಯಾವುದೇ ತಪ್ಪನ್ನು ಮಾಡಿಲ್ಲ ಮತ್ತು ಬಾಹ್ಯಾಕಾಶ ನಿಲ್ದಾಣದಲ್ಲಿದ್ದಾಗ ದಂಪತಿಗಯ ಜಂಟಿ ಖಾತೆಯ ಮೇಲೆ ನಿಗಾಯಿರಿಸಲು ಬ್ಯಾಂಕ್ ದಾಖಲೆಗಳನ್ನು ಪರಿಶೀಲಿಸಿದ್ದರು. ಇದೇನೂ ಹೊಸದಲ್ಲ,ತಮ್ಮಿಬ್ಬರ ನಡುವಿನ ದಾಂಪತ್ಯದಲ್ಲಿ ಅವರು ಈ ಕಾರ್ಯವನ್ನು ಆಗಾಗ್ಗೆ ಮಾಡುತ್ತಲೇ ಇದ್ದರು ಎಂದು ಮೆಕ್ಲೇನ್ ಪರ ವಕೀಲರು ತಿಳಿಸಿದ್ದಾರೆ.

ನಾಸಾ ತನಿಖಾಧಿಕಾರಿಗಳು ಇಬ್ಬರೂ ಮಹಿಳೆಯರನ್ನು ಸಂಪರ್ಕಿಸಿದ್ದಾರೆ ಎಂದು ಪತ್ರಿಕೆಯು ವರದಿ ಮಾಡಿದೆ.

ಜೂನ್‌ನಲ್ಲಿ ಭೂಮಿಗೆ ಮರಳಿದ್ದ ಮೆಕ್ಲೇನ್ ಐತಿಹಾಸಿಕ ಸರ್ವ ಮಹಿಳಾ ಬಾಹ್ಯಾಕಾಶ ನಡಿಗೆಗಾಗಿ ನಾಸಾ ಆಯ್ಕೆ ಮಾಡಿದ್ದ ಇಬ್ಬರು ಮಹಿಳೆಯರಲ್ಲಿ ಒಬ್ಬರಾಗುವ ಮೂಲಕ ಪ್ರಸಿದ್ಧಿಗೆ ಪಾತ್ರರಾಗಿದ್ದರು. ಆದರೆ ಸೂಕ್ತವಾದ ಬಾಹ್ಯಾಕಾಶ ಉಡುಪುಗಳ ಕೊರತೆಯಿಂದಾಗಿ ನಾಸಾ ಮಾರ್ಚ್‌ನಲ್ಲಿ ತನ್ನ ಯೋಜನೆಯನ್ನು ಕೈಬಿಡುವ ಮೂಲಕ ಲಿಂಗ ತಾರತಮ್ಯದ ಆರೋಪಗಳಿಗೆ ಗುರಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News