ಗಮನ ಸೆಳೆಯುತ್ತಿರುವ ಬಿಗ್ ಥ್ರೀ

Update: 2019-08-26 04:02 GMT

ಕಳೆದ ಕೆಲವು ವರ್ಷಗಳಿಂದ ಗ್ರಾನ್‌ಸ್ಲಾಮ್ ಪ್ರಶಸ್ತಿಯ ಮೇಲೆ ಪ್ರಾಬಲ್ಯ ಸಾಧಿಸಿರುವ, ಬಿಗ್ ಥ್ರೀ ಖ್ಯಾತಿಯ ರೋಜರ್ ಫೆಡರರ್, ರಫೆಲ್ ನಡಾಲ್ ಹಾಗೂ ನೊವಾಕ್ ಜೊಕೊವಿಕ್ ಯುಎಸ್ ಓಪನ್‌ನಲ್ಲೂ ತಮ್ಮ ಪ್ರಭುತ್ವ ಮುಂದುವರಿಸಲು ಸಜ್ಜಾಗಿದ್ದಾರೆ.

 ಅಗ್ರ ಶ್ರೇಯಾಂಕದ ಫೆಡರರ್, ನಡಾಲ್ ಹಾಗೂ ಜೊಕೊವಿಕ್ ಕಳೆದ 11 ಗ್ರಾನ್‌ಸ್ಲಾಮ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಹಾಲಿ ಚಾಂಪಿಯನ್ ಜೊಕೊವಿಕ್ ಕಳೆದ 5 ಗ್ರಾನ್‌ಸ್ಲಾಮ್‌ಟೂರ್ನಿಗಳ ಪೈಕಿ 4ರಲ್ಲಿ ಜಯ ಸಾಧಿಸಿದ್ದಾರೆ. ಕಠಿಣ ಡ್ರಾ ಎದುರಿಸುತ್ತಿರುವ ಹೊರತಾಗಿಯೂ ನ್ಯೂಯಾರ್ಕ್‌ನಲ್ಲಿ ಪ್ರಶಸ್ತಿ ತನ್ನಲ್ಲೇ ಉಳಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ.

 17ನೇ ಗ್ರಾನ್‌ಸ್ಲಾಮ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಜೊಕೊವಿಕ್ ಪುರುಷರ ಸಿಂಗಲ್ಸ್‌ನ ತನ್ನ ಮೊದಲ ಸುತ್ತಿನ ಪಂದ್ಯದಲ್ಲಿ ರೊಬರ್ಟೊ ಕರ್ಬಾಲ್ಲೆಸ್‌ರನ್ನು ಎದುರಿಸಲಿದ್ದಾರೆ. ಸೆಮಿ ಫೈನಲ್‌ನಲ್ಲಿ 5 ಬಾರಿಯ ಚಾಂಪಿಯನ್ ಫೆಡರರ್, ನಾಲ್ಕನೇ ಸುತ್ತಿನಲ್ಲಿ ಮಾಜಿ ಚಾಂಪಿಯನ್ ಸ್ಟ್ಯಾನ್ ವಾವ್ರಿಂಕ ಅಥವಾ 2017ರ ಫೈನಲಿಸ್ಟ್ ಕೆವಿನ್ ಆ್ಯಂಡರ್ಸನ್‌ರನ್ನು ಎದುರಿಸುವ ಸಾಧ್ಯತೆಯಿದೆ.

ರಶ್ಯದ ಐದನೇ ಶ್ರೇಯಾಂಕದ ಡೆನಿಲ್ ಮಡ್ವೆಡೆವ್ ಯುಎಸ್ ಓಪನ್‌ಗಿಂತ ಮೊದಲು ಹೆಚ್ಚು ನಿರೀಕ್ಷೆ ಮೂಡಿಸಿರುವ ಯುವ ಆಟಗಾರ. ಕ್ವಾರ್ಟರ್ ಫೈನಲ್‌ನಲ್ಲಿ ಜೊಕೊವಿಕ್‌ರನ್ನು ಎದುರಿಸುವ ಸಾಧ್ಯತೆಯಿದೆ.

20 ಗ್ರಾನ್‌ಸ್ಲಾಮ್ ಪ್ರಶಸ್ತಿಗಳ ಒಡೆಯ ಫೆಡರರ್ ಸಿನ್ಸಿನಾಟಿ ಟೂರ್ನಿಯಲ್ಲಿ 3ನೇ ಸುತ್ತಿನಲ್ಲಿ ಸೋತಿದ್ದರೂ ಯು.ಎಸ್.ಓಪನ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದ್ದಾರೆ. ಫೆಡರರ್ ಕಳೆದ ತಿಂಗಳು ವಿಂಬಲ್ಡನ್ ಫೈನಲ್‌ನಲ್ಲಿ ಸೋತ ಬಳಿಕ ಕೇವಲ 2 ಪಂದ್ಯಗಳಲ್ಲಿ ಆಡಿದ್ದಾರೆ.

ದ್ವಿತೀಯ ರ್ಯಾಂಕಿನ ನಡಾಲ್ ಅವರು ರೋಮ್ ಓಪನ್, ಫ್ರೆಂಚ್ ಓಪನ್ ಹಾಗೂ ಮಾಂಟ್ರಿಯಲ್ ಓಪನ್‌ನಲ್ಲಿ ಪ್ರಶಸ್ತಿ ಜಯಿಸಿ ಉತ್ತಮ ಫಾರ್ಮ್ ನಲ್ಲಿದ್ದಾರೆ. ವಿಂಬಲ್ಡನ್ ಟೂರ್ನಿಯ ಸೆಮಿ ಫೈನಲ್‌ನಲ್ಲಿ ಫೆಡರರ್‌ಗೆ ಸೋತಿದ್ದರು.

18 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ನಡಾಲ್ ಜೂನ್‌ನಲ್ಲಿ 12ನೇ ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿ ಗಮನ ಸೆಳೆದಿದ್ದರು. ಕಳೆದ ವರ್ಷ ಯು.ಎಸ್. ಓಪನ್‌ನ ಸೆಮಿ ಫೈನಲ್‌ನಲ್ಲಿ ಮಂಡಿನೋವಿನಿಂದಾಗಿ ಗಾಯ ಗೊಂಡು ನಿವೃತ್ತಿಯಾಗಿದ್ದ ನಡಾಲ್ ಈ ಬಾರಿಯ ಟೆನಿಸ್ ಕಾಳಗಕ್ಕೆ ಸಿದ್ಧವಾಗಿರುವುದಾಗಿ ಘೋಷಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News