ಅಪೌಷ್ಟಿಕತೆಯಿಂದ ಬಳಲುತ್ತಿರುವ ಗರ್ಭಿಣಿಯರು

Update: 2019-08-26 19:30 GMT

ಮಾನ್ಯರೇ,

ರಾಜ್ಯದಲ್ಲಿ ಶೇ. 50 ಗರ್ಭಿಣಿಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಾಗಿದೆ. ರಾಯಚೂರು ಜಿಲ್ಲೆಯೊಂದರಲ್ಲೇ ಶೇ. 75ರಷ್ಟು ಗರ್ಭಿಣಿಯರು ರಕ್ತಹೀನತೆಯನ್ನು ಅನುಭವಿಸುತ್ತಿದ್ದಾರೆಂದು ವರದಿಯಾಗುತ್ತಿದ್ದು, ಜಿಲ್ಲೆ ಅಗ್ರಸ್ಥಾನದಲ್ಲಿದೆ. ಹಿಮೋಗ್ಲೋಬಿನ್ ಮಟ್ಟ ಕಡಿಮೆ ಇರುವ ಗರ್ಭಿಣಿಯರನ್ನು ರಕ್ತಹೀನತೆಯಿಂದ ಬಳಲುವವರು ಎಂದು ಪರಿಗಣಿಸಲಾಗುತ್ತದೆ. ಸ್ವಾಭಾವಿಕವಾಗಿ, ಅವರ ಮಕ್ಕಳು ಕೂಡಾ ಅಪೌಷ್ಟಿಕತೆಯಿಂದ ಜನಿಸುತ್ತಾರೆ. ಅಪೌಷ್ಟಿಕತೆಯ ಮಟ್ಟದಲ್ಲಿ ಕೂಡಾ ರಾಜ್ಯವು ನಾಲ್ಕನೇ ಸ್ಥಾನದಲ್ಲಿದೆ. ಆರು ವರ್ಷದೊಳಗಿನ ಮಕ್ಕಳ ಮತ್ತು ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರ ಪೌಷ್ಟಿಕಾಂಶ ಮತ್ತು ಆರಂಭಿಕ ಕಲಿಕೆಯ ಅಗತ್ಯಗಳನ್ನು ಪರಿಹರಿಸಲು 1975 ರಲ್ಲಿ ಕೇಂದ್ರ ಸರಕಾರದ ಕಾರ್ಯಕ್ರಮವಾದ ಐಸಿಡಿಎಸ್ ಪ್ರಾರಂಭವಾಯಿತು. ಐಸಿಡಿಎಸ್ ಅಡಿಯಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಪೌಷ್ಟಿಕಾಂಶದ ಮಧ್ಯಸ್ಥಿಕೆಗಳು ಸಕಾರಾತ್ಮಕ ಪರಿಣಾಮ ಬೀರಲು ವಿಫಲವಾಗಿವೆ. ಇದು ರಾಜ್ಯದ ಅದರಲ್ಲೂ ರಾಯಚೂರಿನಂತಹ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿದಾಗ ಎಂತಹ ವ್ಯಕ್ತಿಗಾದರೂ ಸ್ಪಷ್ಟವಾಗಿ ಗೋಚರಿಸುತ್ತದೆ. ಕಳೆದ ಮೂರು ವರ್ಷಗಳಲ್ಲಿ ಬಿಡುಗಡೆಯಾದ ಹಣವನ್ನು ಕೇಂದ್ರ ಸರಕಾರದ ಪೌಷ್ಟಿಕಾಂಶ ಯೋಜನೆ 'ಪೋಷನ್ ಅಭಿಯಾನ್' ಅಡಿಯಲ್ಲಿ ರಾಜ್ಯ ಸರಕಾರ ಇನ್ನೂ ಸಮರ್ಪಕವಾಗಿ ಬಳಸಿಕೊಂಡಿಲ್ಲ. ಹೀಗಾಗಿ ರಾಯಚೂರು ಜಿಲ್ಲೆಯಲ್ಲಿ ಅಪೌಷ್ಟಿಕತೆಯಿಂದಾಗುವ ಸಾವುನೋವು ಹೆಚ್ಚಾಗುತ್ತಿದೆ. ರಾಜ್ಯ ಸರಕಾರ ಈ ಬಗ್ಗೆ ಇನ್ನಾದರೂ ಎಚ್ಚರಗೊಳ್ಳಬೇಕು.

-ವಿಜಯ್‌ಕುಮಾರ್ ಎಚ್. ಕೆ., ಶಕ್ತಿನಗರ, ರಾಯಚೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News