ಕಾಶ್ಮೀರದಲ್ಲಿ ಇಬ್ಬರು ಅಮಾಯಕರನ್ನು ಅಪಹರಿಸಿ ಕೊಲೆಗೈದ ಉಗ್ರರು

Update: 2019-08-27 05:07 GMT

 ಶ್ರೀನಗರ, ಆ.27: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರದ ಇಂತಹ ಮೊದಲ ಘಟನೆಯಲ್ಲಿ  ಜೈಶ್-ಎ-ಮೊಹಮ್ಮದ್ (ಜೆಎಂ) ಭಯೋತ್ಪಾದಕ ಗುಂಪಿನ ಉಗ್ರರು ಸೋಮವಾರ ಪುಲ್ವಾಮಾ ಜಿಲ್ಲೆಯ ಅರಣ್ಯ ಪ್ರದೇಶದಿಂದ ಅಲೆಮಾರಿ ಗುಜ್ಜರ್ ಸಮುದಾಯಕ್ಕೆ ಸೇರಿದ ಇಬ್ಬರನ್ನು  ಅಪಹರಿಸಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜೌರಿ ಜಿಲ್ಲೆಯ ಅಬ್ದುಲ್ ಖಾದಿರ್  ಕೊಹ್ಲಿ ಮತ್ತು ಶ್ರೀನಗರದ ಖೊನ್‌ಮೋಹ್ ಪ್ರದೇಶದ ಮಂಜೂರ್ ಅಹ್ಮದ್ ಅವರನ್ನು ಸೋಮವಾರ ಸಂಜೆ 7: 30 ರ ಸುಮಾರಿಗೆ ಪುಲ್ವಾಮಾ ಜಿಲ್ಲೆಯ ಟ್ರಾಲ್‌ನ ಅರಣ್ಯ ಪ್ರದೇಶದಿಂದ ತಾತ್ಕಾಲಿಕ ಆಶ್ರಯ 'ಧೋಕ್' ನಿಂದ ಅಪರಿಚಿತ ಬಂದೂಕುಧಾರಿಗಳು ಅಪಹರಿಸಿದ್ದಾರೆ ಎಂದು ಪೊಲೀಸ್ ವಕ್ತಾರರು ಮಾಯಹಿತಿ ನೀಡಿದ್ದಾರೆ.

ಉಗ್ರರ ಗುಂಡಿಗೆ ಬಲಿಯಾದ ಅಬ್ದುಲ್ ಖಾದಿರ್  ಕೊಹ್ಲಿ ಮೃತದೇಹ ಅರಣ್ಯ ಪ್ರದೇಶದಲ್ಲಿ ಸೋಮವಾರ ರಾತ್ರಿ ಪತ್ತೆ ಹಚ್ಚಿ ವಶಪಡಿಸಲಾಗಿದೆ. ಮತ್ತು ಅಹ್ಮದ್ ಅವರ ಮೃತದೇಹವನ್ನು ಮಂಗಳವಾರ ಬೆಳಗ್ಗೆ ವಶಪಡಿಸಿಕೊಳ್ಳಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ  ಡಿಜಿಪಿ ದಿಲ್ಬಾಗ್ ಹೇಳಿದರು.

ಕಣಿವೆ ರಾಜ್ಯ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು  ಆ.5ರಂದು ರದ್ದುಪಡಿಸಿದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ರಾಜ್ಯವನ್ನುಎರಡು  ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವುದಾಗಿ ಘೋಷಿಸಿದ ಬಳಿಕ ಮೊದಲ ಬಾರಿ  ಉಗ್ರರು ಅಮಾಯಕರನ್ನು ಅಪಹರಿಸಿ ಕೊಂದಿರುವ ಘಟನೆ ಇದಾಗಿದೆ.

ಆಗಸ್ಟ್ 20 ರಂದು, ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ನಡೆದ ಲಷ್ಕರ್ ಎ ತೋಯ್ಬಾ   ಮತ್ತು ಪೊಲೀಸರ ನಡುವಿನ ಗುಂಡಿನ ಕಾಳಗದಲ್ಲಿ  ಓರ್ವ ಲಷ್ಕರ್ ಎ ತೋಯ್ಬಾ ಉಗ್ರ  ಮತ್ತು ವಿಶೇಷ ಪೊಲೀಸ್ ಅಧಿಕಾರಿಯೊಬ್ಬರು  ಸಾವನ್ನಪ್ಪಿದರು, ಪಿಎಸ್ ಐಯೊಬ್ಬರು   ಗಾಯಗೊಂಡಿದ್ದರು. ಆಗಸ್ಟ್ 5 ರ ನಂತರ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಮೊದಲ  ಎನ್ ಕೌಂಟರ್ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News