ಸುಳ್ಳು ಜಾತಿ ಪ್ರಮಾಣಪತ್ರ :ಅಜಿತ್ ಜೋಗಿಗೆ ಶಾಸಕ ಸ್ಥಾನ ಕೈ ತಪ್ಪುವ ಭೀತಿ

Update: 2019-08-27 08:59 GMT

ರಾಯ್ಪುರ, ಆ.27: ಛತ್ತೀಸ್ ಗಡದ ಮಾಜಿ  ಮುಖ್ಯ ಮಂತ್ರಿ  ಅಜಿತ್ ಜೋಗಿ ಅವರು ಬುಡಕಟ್ಟು ಜನಾಂಗದವರಲ್ಲ ಎಂದು ಹೈ ಕೋರ್ಟ್ ನಿಂದ ನೇಮಕಗೊಂಡಿದ್ದ ಸಮಿತಿಯು ವರದಿ ನೀಡಿದ್ದು,  ಅಸೆಂಬ್ಲಿ ಸ್ಥಾನವನ್ನು ಕಳೆದುಕೊಳ್ಳುವ ಅಪಾಯ ಎದುರಾಗಿದೆ.

ಮಾಜಿ ಸಿಎಂ ಅಜಿತ್ ಜೋಗಿ ಅವರ  ಜಾತಿ ಪ್ರಮಾಣಪತ್ರಗಳನ್ನು ರದ್ದುಪಡಿಸುವಂತೆ ಸಮಿತಿ ಶಿಫಾರಸು ಮಾಡಿದೆ. ಕಳೆದ ವಿಧಾನಸಭಾ ಚುನಾವಣೆಗೆ ಮೊದಲು  ಕಾಂಗ್ರೆಸ್ ನಿಂದ ದೂರವಾಗಿ  ಛತ್ತೀಸ್ ಗಢ ಕಾಂಗ್ರೆಸ್ (ಜನತಾಂತ್ರಿಕ) ಪಕ್ಷವನ್ನು ಕಟ್ಟಿದ್ದರು. ಬಳಿಕ ಅವರು ಬುಡಕಟ್ಟು ಜನಾಂಗಕ್ಕೆ ಮೀಸಲಾಗಿರುವ ಮಾರ್ವಾಹಿ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು.

ಸಮಿತಿಯು ಛತ್ತೀಸ್ ಗಡದ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ (ಸಾಮಾಜಿಕ ಸ್ಥಿತಿಯ ಪ್ರಮಾಣೀಕರಣದ ನಿಯಂತ್ರಣ) ಕಾಯ್ದೆ 2013 ರ ಅಡಿಯಲ್ಲಿ ಆದೇಶ ಹೊರಡಿಸಿದ್ದು, ಜೋಗಿಯ ಜಾತಿ ಪ್ರಮಾಣಪತ್ರಗಳನ್ನು ವಶಪಡಿಸಿಕೊಳ್ಳಲು ಉಪ ಪೊಲೀಸ್ ವರಿಷ್ಠಾಧಿಕಾರಿಗೆ ನಿರ್ದೇಶನ ನೀಡಿದೆ.

ಇದಕ್ಕೂ ಮೊದಲು 2018 ರಲ್ಲಿ, ಐಎಎಸ್ ಅಧಿಕಾರಿ ರೀನಾ ಬಾಬಾ ಕಾಂಗ್ಲೆ ನೇತೃತ್ವದ ಮತ್ತೊಂದು ಸಮಿತಿಯು ಜೋಗಿ ಬುಡಕಟ್ಟು ಜನಾಂಗದವನಲ್ಲ ಎಂದು ಘೋಷಿಸಿತ್ತು.

ಅಗತ್ಯ ದಾಖಲೆಗಳು ಮತ್ತು ಪುರಾವೆಗಳನ್ನು ನೀಡಲು ತನಗೆ ಅವಕಾಶ ನೀಡಿಲ್ಲ ಎಂದು ಜೋಗಿ ಕಾಂಗ್ರೆಸ್ ಸರ್ಕಾರವನ್ನು ದೂರಿದ್ದರು.  ಸಮಿತಿಯನ್ನು 'ಭೂಪೇಶ್ ಸಶಕ್ತ ಸಮಿತಿ' ಎಂದು ಹೇಳಿದ್ದರು.

"ನಾನು 1986 ರಲ್ಲಿ ನಾಗರಿಕ ಸೇವೆಗಳಿಗೆ ಸೇರಿಕೊಂಡೆ ಮತ್ತು 43 ವರ್ಷಗಳಲ್ಲಿ ನನಗೆ ಯಾವುದೇ ಸಮಸ್ಯೆಯಾಗಲಿಲ್ಲ. ಈಗ ಮಾತ್ರ ನನಗೆ ಸಮಸ್ಯೆಯನ್ನು ತಂದೊಡ್ಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News