ಕೇಂದ್ರ ಬಜೆಟ್ ನಲ್ಲಿ ನೌಕಾದಳದ ಅನುದಾನದಲ್ಲಿ ಕಡಿತ: ಅಡ್ಮಿರಲ್ ಕರಂಬೀರ್ ಸಿಂಗ್ ಅಸಮಾಧಾನ

Update: 2019-08-27 09:13 GMT

ಹೊಸದಿಲ್ಲಿ, ಆ.27: ಕೇಂದ್ರದ ಬಜೆಟಿನಲ್ಲಿ ರಕ್ಷಣಾ ಇಲಾಖೆಗೆ ಮೀಸಲಿರಿಸಲಾಗಿರುವ ಅನುದಾನದಲ್ಲಿ ನೌಕಾದಳದ ಪಾಲನ್ನು ಈ ಹಿಂದಿನ ಶೇ.18ರಿಂದ ಶೇ.13ಕ್ಕೆ ಇಳಿಸಿರುವ ಕುರಿತು ಉಲ್ಲೇಖಿಸಿರುವ ನೌಕಾದಳ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್, ಕಡಿಮೆ ಅನುದಾನ ಮೀಸಲಿರಿಸಿರುವುದರಿಂದ ಭಾರತದ ಗುರಿಯಾದ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ನಿಟ್ಟಿನಲ್ಲಿ ದೇಶದ ಜತೆ ಹೆಜ್ಜೆಯಿಡಲು ಕಷ್ಟವಾಗುತ್ತಿದೆ ಎಂದಿದ್ದಾರೆ.

ಭಾರತೀಯ ಸೇನೆಯ 17ನೇ ಮುಖ್ಯಸ್ಥರಾಗಿದ್ದ ದಿ ಬಿ.ಸಿ. ಜೋಷಿ ಅವರ ಸ್ಮರಣಾರ್ಥ, “ಇಂಡಿಯನ್ ಓಶನ್- ಚೇಂಜಿಂಗ್ ಡೈನಾಮಿಕ್- ಮೆರಿಟೈಮ್ ಸೆಕ್ಯುರಿಟಿ ಇಂಪೆರೇಟಿವ್ಸ್ ಫಾರ್ ಇಂಡಿಯಾ'' ಎಂಬ ವಿಷಯದ ಮೇಲೆ  ಭಾಷಣ ನೀಡುತ್ತಿದ್ದರು.

“ದೀರ್ಘಕಾಲಿಕ ಬಜೆಟರಿ ಬೆಂಬಲ ನಮ್ಮ ಮುಂದಿರುವ ಸವಾಲು. ನಾವು ಒಂದು ಹಡಗು ನಿರ್ಮಿಸಬೇಕಾದರೆ ಅದಕ್ಕೆ ಹತ್ತು  ವರ್ಷಗಳೇ ಬೇಕು. ನೌಕಾದಳದ ಸಾಮರ್ಥ್ಯ ಹೆಚ್ಚಿಸಲು ಇನ್ನಷ್ಟು ಬೆಂಬಲ ಅಗತ್ಯವಿದೆ'' ಎಂದು ಅವರು ಹೇಳಿದರು.

ಡಿಫೆನ್ಸ್ ಡಿಪ್ಲೊಮಸಿ ಫಂಡ್ ಸ್ಥಾಪಿಸಿ ಈ ಮೂಲಕ ಇತರ ದೇಶಗಳಿಗೆ ಸಹಾಯ ಮಾಡಿ ಪ್ರಬಲ ರಾಷ್ಟ್ರಗಳ ಪ್ರಭಾವ ಕಡಿಮೆಗೊಳಿಸುವ ಅಗತ್ಯವನ್ನೂ ಅವರು ಒತ್ತಿ ಹೇಳಿದರು.

“ನಾವು ಇತರ ರಾಷ್ಟ್ರಗಳಿಗೆ ಹಲವು ಆಶ್ವಾಸನೆಗಳನ್ನು ನೀಡುತ್ತೇವೆ. ಆದರೆ ಕಾರ್ಯಗತಗೊಳಿಸುವ ಕಾರ್ಯ ಅಸಮಾಧಾನಕರವಾಗಿದೆ. ಸೇನೆಯ ಮುಖ್ಯಸ್ಥರು ಒಂದು ಸ್ಥಳಕೆ ಹೋಗಿ ಅಲ್ಲಿ ಅಗತ್ಯ ಸಲಕರಣೆಗಳ ಪೂರೈಕೆಗೆ ಆಸ್ವಾಸನೆ ನೀಡಿ ಮರಳಿ ಅದನ್ನು ಪಡೆಯಲು ಮುಂದಿನ ಎರಡು ವರ್ಷ ಹೋರಾಟ ನಡೆಸುವ ಹಾಗಿರಬಾರದು, ಇಂತಹ ಕೆಲಸಗಳು ಶೀಘ್ರ ನಡೆಯಬೇಕು'' ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News