ಕೊಡವರು ಪುರೋಹಿತರ ಮುಷ್ಟಿಯಿಂದ ಹೊರ ಬರಬೇಕು: ಎ. ಕೆ. ಸುಬ್ಬಯ್ಯ

Update: 2019-08-27 18:36 GMT

ಬ್ರಾಹ್ಮಣ ಪುರೋಹಿತರು ಹಲವು ಕಟ್ಟುಕತೆಗಳನ್ನು, ಇಲ್ಲದ ಹಲವು ದೇವರುಗಳನ್ನು ಸೃಷ್ಟಿಸಿ ಕೊಡವರ ಮೇಲೆ ಹೇರುವುದರ ಮೂಲಕ ಬ್ರಾಹ್ಮಣ ಪುರೋಹಿತರನ್ನು ದೂರ ಇಟ್ಟಿದ್ದ ಕೊಡವ ಜನಾಂಗವನ್ನು ತಮ್ಮ ಕಕ್ಷೆಯೊಳಗೆ ಸೆಳೆದುಕೊಳ್ಳುವುದರಲ್ಲಿ ಸಫಲರಾಗಿದ್ದಾರೆಂದು ಊಹಿಸಿದರೆ ಅದು ಸರಿಯಾದ ಊಹೆಯೇ ಆಗುತ್ತದೆ. ಈಗ ಕೊಡವರ ಮದುವೆ, ಶವ ಸಂಸ್ಕಾರ, ತಿಥಿ ಮುಂತಾದ ಆಚರಣೆ ಹಾಗೂ ಕೈಲ್ ಪೊಳ್ದು ಹಾಗೂ ಹುತ್ತರಿ ಹಬ್ಬದಲ್ಲಿ ಕೋಲಾಟವನ್ನು ಬಿಟ್ಟರೆ ಉಳಿದೆಲ್ಲ ಆಚರಣೆ ಮತ್ತು ಹಬ್ಬಗಳಲ್ಲಿ ಬ್ರಾಹ್ಮಣ ಪೂಜಾರಿಗಳದೇ ಪಾತ್ರ. ಹೀಗೆ ಕೊಡವರು ತಮ್ಮನ್ನು ತಮಗರಿವಿಲ್ಲದೆಯೇ ಪುರೋಹಿತರ ಅಧೀನವಾಗಿರಿಸುವುದರಿಂದ ಲಾಭ ಯಾರಿಗಾಗಿದೆಯೆಂದು ವಿಮರ್ಶಿಸುವ ಅಗತ್ಯವಿದೆ ಎಂದು ನನಗನಿಸುತ್ತದೆ.

  ಆಕಸ್ಮಿಕವಾಗಿ ನಾನಿಂದು, ದೂರದರ್ಶನ ಪರದೆ ಬಿಡಿಸಿದಾಗ ಚಂದನದಲ್ಲಿ ಕೊಡವ ಭಾಷೆಯಲ್ಲಿ ಹಾಡುಗಾರಿಕೆ ಕಾರ್ಯಕ್ರಮವೊಂದು ಬಿತ್ತರಿಸಲ್ಪಡುತ್ತಿತ್ತು. ಕೊಡವ ವೇಷ ಭೂಷಣಗಳಿಂದ ಅಲಂಕರಿಸಿಕೊಂಡಿದ್ದ ಕೊಡವ ಮಹಿಳೆಯರು, ಆಧುನಿಕ ಸಂಗೀತ ಸ್ವರದೊಡನೆ ಧ್ವನಿ ಸೇರಿಸಿಕೊಂಡು ಹಜ್ಜೆ ಹಾಕುತ್ತಾ ತಮ್ಮ ಮಧುರ ಕಂಠದಿಂದ ಕೊಡವ ಕವಿ ಐಚೆಟ್ಟಿರ ಮುತ್ತಣ್ಣ ವಿರಚಿತ ಕೊಡವ ಭಾಷೆಯ ಹಾಡುಗಳನ್ನು ಹಾಡುತ್ತಿದ್ದರು.

 ಬೆಂಗಳೂರು ಕೊಡವ ಕೂಟಕ್ಕೆ ಸೇರಿದ ಕಲಾವಿದರು, ಈ ಕಾರ್ಯಕ್ರಮವನ್ನು ನಡೆಸುತ್ತಿದ್ದರೆಂದು ತಿಳಿಯಿತು. ಕಾರ್ಯಕ್ರಮದ ನಿರೂಪಣೆ ಜವಾಬ್ದಾರಿ ಹೊತ್ತಿದ್ದ, ಮಧ್ಯ ವಯಸ್ಸಿನ ಮಹಿಳೆ, ಆಕರ್ಷಣೀಯವಾಗಿ ಕಾರ್ಯಕ್ರಮದ ವಿವರಣೆಯನ್ನು ನೀಡಿದ್ದು ಸಹ ಹಾಡುಗಾರಿಕೆಯಷ್ಟೇ ಮನಮೋಹಕವಾಗಿತ್ತು. ಕಲಾವಿದರ ಹಾಗೂ ನಿರೂಪಣೆಗಾರ್ತಿಯ ಹಸರುಗಳನ್ನು ನಾನು ಬರೆದಿಟ್ಟುಕೊಳ್ಳಬೇಕಾಗಿತ್ತೆಂದು ನನಗೆ ಆ ಮೇಲೆ ಅನಿಸಿತು. ಕಾರ್ಯಕ್ರಮ ಮುಗಿಯುತ್ತಲೇ ಕಾರ್ಯಕ್ರಮದಲ್ಲಿ ಕಾಣಿಸಿ ಕೊಂಡವರ ಹೆಸರುಗಳನ್ನು ನಾನು ಮರೆತು ಬಿಟ್ಟೆ, ಹೀಗಾಗಿ ಅವರ ಹೆಸರುಗಳನ್ನು ಉಲ್ಲೇಖಿಸಲು ಸಾಧ್ಯವಾಗಿಲ್ಲ.

ನಿರೂಪಣೆಗಾರ್ತಿ ಕಾರ್ಯಕ್ರಮವನ್ನು ಆಕರ್ಷಕವಾಗಿ ನಿರೂಪಿಸಿದರು. ಹಾಡುಗಾರ್ತಿಯರು, ಕೊಡವ ಕವಿ ಐಚೆಟ್ಟಿರ ಮುತ್ತಣ್ಣನವರ ಹಾಡುಗಳನ್ನು ಆಧುನಿಕ ಸಂಗೀತದೊಡನೆ ಜೋಡಿಸಿಕೊಂಡು ಮನಮೋಹಕವಾಗಿ ಹಾಡಿದರು. ಈ ಕಾರ್ಯಕ್ರಮಗಳ ಭಾಗಿಗಳಾಗಿದ್ದ ಎಲ್ಲ ಕಲಾವಿದರಿಗೆ ನನ್ನ ಅಭಿನಂದನೆಗಳು.

ಕೊಡವ ಸಾಹಿತ್ಯ ಹಾಗೂ ಕಲೆ ಅಭಿವೃದ್ಧಿ ಕಾಣದೆ ಓಬೀರಾಯನ ಕಾಲದಲ್ಲಿದ್ದಂತೆಯೇ ಇದೆಯೆಂದು ನಾನು ತಪ್ಪಾಗಿ ತಿಳಿದಿದ್ದೆ. ದೂರದರ್ಶನ ಚಂದನದಲ್ಲಿ ಬಿತ್ತರಿಸಲ್ಪಟ್ಟ ಕಾರ್ಯಕ್ರಮ, ಕೊಡವ ಸಂಸ್ಕೃತಿ ಹಾಗೂ ಸಾಹಿತ್ಯ ಆಧುನಿಕತೆಯೊಡನೆ ಗಣನೀಯವಾಗಿ ಹೆಜ್ಜೆಯಿಟ್ಟು ನಡೆಯತ್ತಿದೆಯೆಂದು ತೋರಿಸಿಕೊಟ್ಟಿತು. ಇದರಿಂದ ನನಗೆ ತುಂಬಾ ಸಂತೋಷವಾಯಿತು.

ಕೊಡವ ಸಂಸ್ಕೃತಿ ಮತ್ತು ಹಾಡುಗಳು ಇನ್ನೂ ಬೊಳಕಾಟು, ಉಮ್ಮತಾಟು, ಕೋಲಾಟ, ಕೊಂಬುಕೊಟ್ಟು ಆಟಕ್ಕೆ ಸೀಮಿತವಾಗಿದೆಯೆನ್ನುವುದು ಇದೀಗ ಸುಳ್ಳಾಗಿದೆ. ಅದೀಗ ಆಧುನಿಕತೆಯೊಡನೆ ಹೆಜ್ಜೆಯಿಡುತ್ತಿದೆ. ಹೊಸ ದಿಕ್ಕು ದೆಸೆಯನ್ನು ಕಂಡುಕೊಳ್ಳುತ್ತಿದೆ. ಕೊಡವ ಸಂಸ್ಕೃತಿ ಮತ್ತು ಮನಸ್ಸನ್ನು ಶಿಲಾಯುಗಕ್ಕೆ ಎಳೆಯುತ್ತಿರುವ ಪ್ರವೃತ್ತಿಗಳಿಗೆ ಇದು ಅಪವಾದ ಮಾತ್ರವಲ್ಲ ಸವಾಲು ಕೂಡ ಹೌದು.

ನಂದಿನೆರವಂಡ ನಾಚಪ್ಪನೆಂಬ ಮೂರ್ಖನೊಬ್ಬ ತನ್ನ ಸ್ವಾರ್ಥಕ್ಕಾಗಿ ಕೊಡವ ಸಂಸ್ಕೃತಿಯನ್ನು ನಗೆಪಾಟಿಲಿಗೆ ಗುರಿಮಾಡುತ್ತಲೂ ಕೊಡವರ ಮಾನ ಮರ್ಯಾದೆಯನ್ನು ಬೀದಿಯಲ್ಲಿ ಹರಾಜು ಮಾಡುತ್ತಲೂ ಕೊಡವ ಸಂಸ್ಕೃತಿಗೆ ತಾನೇ ವಾರೀಸುದಾರನೆಂದು ಹೇಳಿಕೊಳ್ಳುತ್ತಾ ತಾನು ಹೇಳುವುದೇ ಕೊಡವ ಸಂಸ್ಕೃತಿಯೆಂದು ಬೀಗುತ್ತಾ ಕೊಡವರನ್ನು ಮಂಡೆತುಣಿಯಿಂದ ಚೆಕ್ಕು ವಸ್ತ್ರದೆಡೆಗೆ, ಅವರ ಸಂಸ್ಕೃತಿಯನ್ನು ಅಂಬಲ ಮಂದು ಮಾನ್ಯಗಳಿಂದ ಮಡಿಕೇರಿಯ ರಾಜಾಸೀಟಿಗೆ ಎಳೆಯುತ್ತಿರುವುದನ್ನು ಕಂಡು ಜಿಗುಪ್ಸೆಗೊಂಡಿದ್ದ ನನಗೆ ಬೆಂಗಳೂರು ಕೊಡವ ಕೂಟದ ಕಾರ್ಯಕ್ರಮ ಕಾರ್ಮೋಡದ ನಡುವಿನ ಬೆಳ್ಳಿಗೆರೆಯಂತೆ ಕಂಡಿತು. ಈ ಕಾರ್ಯಕ್ರಮದಲ್ಲಿ ಐಚೆಟ್ಟಿರ ಮುತ್ತಣ್ಣನವರ ಐದು ಹಾಡುಗಳು ಕಲಾವಿದೆಯರಿಂದ ಹಾಡಲ್ಪಟ್ಟವು. ಅವುಗಳೆಂದರೆ ಕಾಫಿ ಕೊಯ್ಯುವ ಹಾಡು, ಕೊಡವ ಮದುವೆಯ ಹಾಡು, ಬ್ರಹ್ಮಗಿರಿ ಏರುವ ಹಾಡು, ಪಾಡಿ ಇಗ್ಗುತ್ತಪ್ಪ ದೇವರನ್ನು ಕುರಿತು ‘ಪೊಲತೆನ್ನ’ ಎಂದು ಬೇಡುವ ಹಾಡು. ಹಾಗೆ ‘ಉಷಾ’ ಎಂಬ ಹೆಸರಿನ ಪ್ರಕೃತಿ ಸಿರಿಯನ್ನು ವರ್ಣಿಸುವ ಹಾಡು. ಕೊಡಗು ಸಿರಿ ಎನ್ನುವುದು ಕಾರ್ಯಕ್ರಮಕ್ಕೆ ನೀಡಲಾಗಿದ್ದ ಆಕರ್ಷಕ ಹೆಸರು. ಈ ಹಾಡುಗಳಲ್ಲಿ ಮೂಲವಾದದ ಸುಳಿವಿಲ್ಲ. ಮನಸ್ಸನ್ನು ಸಂಕುಚಿತಗೊಳಿಸುವ ಪ್ರವೃತ್ತಿಯಿಲ್ಲ. ಮನಸ್ಸು ಮತ್ತು ಹೃದಯಗಳನ್ನು ವಿಕಸಿತಗೊಳಿಸಿ, ವಿಶಾಲಗೊಳಿಸುವ ತಳಹದಿಯುಳ್ಳ ಹಾಡುಗಳಿವು. ಈ ಕಾರ್ಯಕ್ರಮವನ್ನು ನಿರೂಪಣೆ ಮಾಡಿದಾಕೆ ಕೊಡವ ಮದುವೆಗೆ ಸಂಬಂಧಿಸಿದ ಹಾಡನ್ನು ಪ್ರೇಕ್ಷಕರಿಗೆ ಪರಿಚಯಿಸುತ್ತಾ ಕೊಡವ ಮದುವೆಯಲ್ಲಿ ಮಂತ್ರ ತಂತ್ರಗಳಿಲ್ಲದೆ ತಂತ್ರತಾಲಿಗಳಿಲ್ಲದೆ, ತಾಯಿ ಮದುಮಗಳ ಕೊರಳಿಗೆ ಮಾಲೆ ತೊಡಿಸುವುದರ ಬಗ್ಗೆ ವಿವರಿಸಿದ್ದು, ಕೊಡವ ಸಂಸ್ಕೃತಿಗೆ ಕಳಸಪ್ರಾಯವಾಗಿತ್ತು. ಕೊಡವರ ವಿವಾಹ ಮಹೋತ್ಸವದಲ್ಲಿ ಪುರೋಹಿತನ ಪ್ರವೇಶವಿಲ್ಲದರ ಬಗ್ಗೆ ಹೆಚ್ಚಿನ ಒತ್ತು ನೀಡುವುದಕ್ಕಾಗಿ ನಿರೂಪಣೆಗಾರ್ತಿ ಶ್ರಮವಹಿಸಿದ್ದು ಅರ್ಥಪೂರ್ಣ.

ಹಾಗೆಯೇ ಕಾವೇರಿ ಮಾತೆ ಮತ್ತು ಪಾಡಿ ಇಗ್ಗುತ್ತಪ್ಪ ಕೊಡವರ ಕುಲದೇವರು ಮತ್ತು ಮನೆ ದೇವರೆಂಬುದನ್ನು ಸೂಚಿಸುವ ಮಾತುಗಳನ್ನೂ ಕಾರ್ಯಕ್ರಮದ ನಿರೂಪಣಾಗಾರ್ತಿ ಆಡಿದರು. ಇದು ಕೊಡವರಲ್ಲಿ ಆಳವಾಗಿ ಬೇರು ಬಿಟ್ಟಿರುವ ನಂಬಿಕೆಯನ್ನು ಪುಷ್ಟೀಕರಿಸುವಂತಹದ್ದು. ದೇವರ ಅಸ್ತಿತ್ವದ ಬಗ್ಗೆ ನನ್ನ ವೈಯಕ್ತಿಕ ನಂಬಿಕೆ ಏನೇ ಇರಲಿ, ಸಾರ್ವತ್ರಿಕವಾಗಿ ಜನ ದೇವರ ಇರವನ್ನು ಅಲ್ಲಗಳೆಯುವುದಿಲ್ಲ. ದೇವರು ಇರಬಹುದೇ ಯಾ ಇಲ್ಲವೇ ಎಂಬುದನ್ನು ಚಿಂತಿಸುವ ಗೋಜಿಗೆ ಜನ ಹೋಗುವುದಿಲ್ಲ. ಯಾವ ಆಧಾರವನ್ನೂ ಬಯಸದೆ, ದೇವರಿದ್ದಾನೆಂದೇ ಜನ ಕಣ್ಣು ಮುಚ್ಚಿಕೊಂಡು ನಂಬುತ್ತಾರೆ. ಹಾಗೆಯೇ ಕೊಡವರು ಕಾವೇರಿ ಮಾತೆಯನ್ನು ಮನೆದೇವರೆಂದೂ ಪಾಡಿ ಇಗ್ಗುತ್ತಪ್ಪ ಕುಲದೇವರೆಂದೂ ನಂಬುತ್ತಾರೆ.

ನನ್ನ ದೃಷ್ಟಿಯಲ್ಲಿ ಕಾವೇರಿ ಪುರಾಣವೆಂಬುದು ಬ್ರಾಹ್ಮಣ ಪುರೋಹಿತರು ಹೆಣೆದ ಕಟ್ಟು ಕತೆ. ಕೊಡವರು ಕೊಡಗಿನಲ್ಲಿ ಹೆಚ್ಚು ಪ್ರವರ್ಧಮಾನಕ್ಕೆ ಬಂದ ಮೇಲೆ ಬ್ರಾಹ್ಮಣರನ್ನು ದೂರ ಇಟ್ಟಿದ್ದ ಕೊಡವರನ್ನು ತಮ್ಮ ಮುಷ್ಟಿಯಲ್ಲಿ ಹಿಡಿದಿಟ್ಟುಕೊಳ್ಳುವುದಕ್ಕೆ ಬ್ರಾಹ್ಮಣ ಪುರೋಹಿತರು ಕಾವೇರಿ ಪುರಾಣವೆಂಬ ಕಟ್ಟುಕತೆಯನ್ನು ಸೃಷ್ಟಿಸಿ ಸ್ಕಂದ ಪುರಾಣದಲ್ಲಿ ತುರುಕಿದ್ದಾರೆ. ಈ ಮೂಲಕ ಕಾವೇರಿ ಮಾತೆಯೆಂಬ ಕುಲದೇವತೆಯನ್ನು ಕೊಡವರಿಗೆ ನೀಡಿದವರು ್ರಾಹ್ಮಣ ಪುರೋಹಿತರು.

ಅದನ್ನು ಕೊಡವರು ಯಾವಾಗ ಮರುಮಾತಾಡದೆ ಸ್ವೀಕರಿಸಿದರೋ ಅಂದೇ ತಮಗೆ ಯಾರೂ ಮಿಗಿಲಿಲ್ಲವೆಂದು ತಮ್ಮ ಸಂಸ್ಕೃತಿ ಹಾಗೂ ಜೀವನ ಪದ್ಧತಿ ಶ್ರೇಷ್ಠವೆಂದು ಯಾರ ಹಂಗೂ ಇಲ್ಲದೆ ಸ್ವತಂತ್ರವಾಗಿ ಜೀವಿಸುತ್ತಿದ್ದ ಕೊಡವ ಜನಾಂಗ ಬ್ರಾಹ್ಮಣರ ಮುಷ್ಟಿಯೊಳಗೆ ತಮಗರಿವಿಲ್ಲದೆಯೇ ಸೇರಿಹೋದರು. ಪಾಡಿ ಇಗ್ಗುತ್ತಪ್ಪ ದೇವರು ಕೊಡವರ ಮನೆ ದೇವರಾದದ್ದರಲ್ಲಿಯೂ ಕೈವಾಡ ಇದ್ದೇ ಇದೆ.

ಅಷ್ಟು ಮಾತ್ರವಲ್ಲ ದೇಶಾದ್ಯಂತ ಅಸಂಖ್ಯಾತ ಹಿಂದೂ ದೇವರುಗಳನ್ನು ಬ್ರಾಹ್ಮಣ ಪುರೋಹಿತರು ತಮ್ಮ ಸ್ವಾರ್ಥಕ್ಕೋಸ್ಕರ ಸೃಷ್ಟಿಸಿ ಜನರ ಮೇಲೆ ಹೇರಿದ್ದಾರೆಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಹೀಗೆ ಸೃಷ್ಟಿಸಲ್ಪಟ್ಟ ಅಸಂಖ್ಯಾತ ದೇವರುಗಳಿಗೆ ಜನರಿಂದಲೇ ಅಸಂಖ್ಯಾತ ದೇವಸ್ಥಾನಗಳನ್ನು ನಿರ್ಮಿಸಿ ಅದರೊಳಗೆ ಕೂತ ಪರೋಹಿತರು ಇಡೀ ಸಮಾಜದ ಜುಟ್ಟನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡರು.

ಜುಟ್ಟಿನ ಮೇಲಿನ ಈ ಹಿಡಿತ ಸಡಿಲವಾಗದಂತೆ ನೋಡಿಕೊಳ್ಳಲು ಜನರನ್ನು ಜ್ಞಾನದಿಂದ ವಂಚಿಸಿ, ಮೂಢನಂಬಿಕೆಯನ್ನು ಹರಡುವುದರ ಮೂಲಕ ಇಡೀ ಜನಸ್ತೋಮವನ್ನು ಅಂಧಕಾರದಲ್ಲಿಟ್ಟು ಶೋಷಿಸುತ್ತಾ ಆಡಂಬರದಿಂದ ಸುಖಪಡುತ್ತಾ ಬದುಕಿಕೊಂಡು ಬೆವರು ಸುರಿಸದೆ ಬಾಳಿದವರು ಪುರೋಹಿತರು.

ಸಮಾಜದಲ್ಲಿ ಇಂದು ಬೇರು ಬಿಟ್ಟಿರುವ ಶೋಷಣೆ, ಮೋಸ, ವಂಚನೆ, ಅನಾಚಾರ, ಭ್ರಷ್ಟಾಚಾರಗಳೆಲ್ಲವುಗಳ ಉಗಮ ಸ್ಥಾನವೇ ನಮ್ಮ ದೇವಸ್ಥಾನಗಳೆಂಬುದು ನನ್ನ ಇಂದಿನ ದೃಢವಾದ ನಂಬಿಕೆಯಾಗಿದೆ. ಅಂದ ಮೇಲೆ ನಮ್ಮ ದೇಶ ಮತ್ತು ಜನತೆ, ಅಭಿವೃದ್ಧಿ ಪಥದಲ್ಲಿ ಸಾಗಬೇಕಾದರೆ ಜಗತ್ತಿನಲ್ಲಿ ತಲೆಯೆತ್ತಿ ನಿಲ್ಲಬೇಕಾದರೆ ದೇವರುಗಳನ್ನು ನಿರಾಕರಿಸುವುದಕ್ಕೆ ಸಾಧ್ಯವಿದ್ದಷ್ಟು ಜ್ಞಾನ ಮತ್ತು ಧೈರ್ಯ ಸಂಪಾದಿಸುವಂತಾಗಬೇಕೆಂಬುದು ನಿಜವಾದರೂ ಅದು ಅಷ್ಟು ಸುಲಭ ಸಾಧ್ಯವಲ್ಲವೆಂಬುದರ ಅರಿವೂ ನನಗಿದೆ. ಅದಕ್ಕಾಗಿ ಈ ದೇಶದಲ್ಲಿ ಮತ್ತೊಬ್ಬ ಬುದ್ಧ ಭಗವಾನನ ಉದಯವಾಗಬೇಕು. ಆ ದಿನಗಳಿಗಾಗಿ ಕಾಯೋಣ.

ಭವಿಷ್ಯವನ್ನು ಧೀರವಾಗಿ ರೂಪಿಸಬೇಕು. ಅದಕ್ಕಾಗಿ ಗತಕಾಲದ ಸರಿಯಾದ ತಿಳುವಳಿಕೆ ಅಗತ್ಯ. ಆತ್ಮಜ್ಞಾನ ಮತ್ತು ಆತ್ಮಸಂಸ್ಕೃತಿ ಇವುಗಳ ಆಧಾರದ ಮೇಲೆ ನಮ್ಮ ಭವಿಷ್ಯವನ್ನು ರೂಪಿಸುವಂತಾಗಬೇಕು. ಭಾರತದ ಸಾಮಾಜಿಕ ಇತಿಹಾಸದಲ್ಲಿ ಬ್ರಾಹ್ಮಣರೆಂಬ ಒಂದು ಹೊಸ ಜಾತಿ ಉದ್ಭವವಾಗಿ ಅವರು ಶ್ರೇಷ್ಠರಾದ ಜನರೆಂದೂ, ದೇವರಿಗೂ ಅವರು ದೇವರುಗಳೆಂದೂ ನಂಬುವ ಸಮಾಜವೊಂದು ರೂಪುಗೊಳ್ಳುವುದಕ್ಕಿಂತಲೂ ಪೂರ್ವದಲ್ಲಿ ಈಗಿರುವಂತೆ ಅಸಂಖ್ಯಾತ ದೇವರುಗಳಿರಲಿಲ್ಲ. ಮನುಷ್ಯರೊಳಗೆ ಜಾತಿಗಳು ಹುಟ್ಟಿಕೊಂಡಿರಲಿಲ್ಲ. ಬುಡಕಟ್ಟುಗಳಿದ್ದವು. ಮೇಲು ಕೀಳುಗಳೆಂಬ ಭಾವನೆಗಳಿರಲಿಲ್ಲ. ಸ್ಪಶ್ಯ ಅಸ್ಪಶ್ಯರೆಂಬವರಿರಲಿಲ್ಲ. ಪ್ರಕೃತಿಯೇ ದೇವರಾಗಿತ್ತು. ಮಾನವರೆಲ್ಲರೂ ಸರಿ ಸಮಾನ ಹಕ್ಕುಳ್ಳವರಾಗಿದ್ದರು. ಪುರೋಹಿತರ ಭಾದೆ, ಜನತೆಗಿರಲಿಲ್ಲ.

ಪ್ರಕೃತಿ ಪೂಜಾವಿಧಿಗಳನ್ನು ಪ್ರತಿಯೊಂದು ಬುಡಕಟ್ಟಿನ ಬುದ್ಧಿವಂತನೆಂಬವನು ತನ್ನದೇ ಆದ ರೀತಿಯಲ್ಲಿ ವಿಧಿ ವಿಧಾನಗಳನ್ನು ರೂಪಿಸಿಕೊಂಡು ನಡೆಸುತ್ತಿದ್ದ. ಆ ಕಾಲದ ಜೀವನ ಪದ್ಧತಿಯ ಬಹುಪಾಲು ಈಗಲೂ ಕೊಡವರಲ್ಲಿ ಎದ್ದು ಕಾಣುತ್ತಿದೆ. ಅವುಗಳಲ್ಲಿ ಪ್ರಾಮುಖ್ಯವಾದುದು ತಮ್ಮ ಆಂತರಿಕ ಜೀವನಪದ್ಧತಿಯಲ್ಲಿ ಬ್ರಾಹ್ಮಣರನ್ನು ದೂರ ಇಟ್ಟಿರುವುದಾಗಿ ತಮ್ಮ ಆಚರಣೆಯಲ್ಲಿ ಕೊಡವರು ಪುರೋಹಿತರನ್ನು ಸೇರಿಸುವುದಿಲ್ಲ ಎಂಬ ಅಂಶದ ಬಗ್ಗೆ ಪಟ್ಟೋಲೆ ಪಳಮೆಯಲ್ಲಿಯೂ ಅದರ ಕರ್ತೃ ನಡಿಕೇರಿಯಂಡ ಚಿಣ್ಣಪ್ಪನವರು ಒತ್ತು ನೀಡಿದ್ದಾರೆ.

ಮೂಲತಃ ಕೊಡವರು ಬ್ರಾಹ್ಮಣಶಾಹಿಯ ಮುಷ್ಟಿಯೊಳಗಿರಲಿಲ್ಲವೆಂದೂ ಅದೊಂದು ಪ್ರತ್ಯೇಕ ಸ್ವತಂತ್ರ ಸಂಸ್ಕೃತಿಯಾಗಿತ್ತೆಂದೂ ಇದರಿಂದ ತಿಳಿಯಬಹುದು. ದೂರ ಇಟ್ಟಿದ್ದ ಬ್ರಾಹ್ಮಣ ಪುರೋಹಿತರಿಂದಲೇ ಕಾವೇರಿಯಲ್ಲಿ ಹಾಗೂ ಪಾಡಿ ಇಗ್ಗುತ್ತಪ್ಪ ದೇಗುಲದಲ್ಲಿ ಕೊಡವರು ಪೂಜೆ ಮಾಡಿಸಿಕೊಳ್ಳುವ ಪದ್ದತಿ ಬೆಳೆದಿರಬೇಕು. ನಂತರ ಊರುಗಳಲ್ಲಿ ಸೃಷ್ಟಿಯಾದ ದೇವಸ್ಥಾನಗಳೆಲ್ಲದರಲ್ಲೂ ಕೊಡವರು ಪಾಲುಗೊಳ್ಳುವಂತಾಗಿ ಪುರೋಹಿತರನ್ನು ತಮ್ಮ ತಲೆ ಮೇಲೆ ಹೇರಿಕೊಂಡರು. ಮನೆಗಳಲ್ಲಿ ಸತ್ಯನಾರಾಯಣ ಪೂಜೆ, ಗಣಪತಿ ಪೂಜೆ ಮುಂತಾದ ಕಾರ್ಯಕ್ರಮಗಳನ್ನು ಪುರೋಹಿತರಿಂದ ನಡೆಸುವ ಪದ್ಧ್ದತಿ ಸಹ ಬೆಳೆದು ಬಂದು ಕಾಲಕ್ರಮದಲ್ಲಿ ಪುರೋಹಿತರ ಅಧಿಕಾರವನ್ನು ತಮಗರಿವಿಲ್ಲದೆಯೇ ಸ್ವೀಕಾರ ಮಾಡಿಕೊಂಡಂತಾಯಿತು.

ಕೊಡವರಿಗೆ ಗುರು ಕಾರಣವೆನ್ನುವ ಪೂರ್ವಜರೇ ದೇವರುಗಳು. ಅನ್ಯದೇವರುಗರಲಿಲ್ಲ. ಕೊಡವರ ವಿವಾಹ, ಸಾವು, ತಿಥಿ, ಗೃಹ ಪ್ರವೇಶ, ನಾಮಕರಣ, ಮದುವೆ, ನಿಶ್ಚಿತಾರ್ಥ ಇವುಗಳಾವುದರಲ್ಲಿಯೂ ಪುರೋಹಿತರುಗಳಿಗೆ ಪ್ರವೇಶವೇ ಇರಲಿಲ್ಲ. ಬರಬರುತ್ತಾ ನಿಶ್ಚಿತಾರ್ಥದಲ್ಲಿ ಲಗ್ನಪತ್ರಿಕೆ ಬರೆಯುವುದರಲ್ಲಿ ಪುರೋಹಿತ ಪಾತ್ರ ವಹಿಸುವಂತಾಯಿತು. ಗೃಹ ಪ್ರವೇಶದಲ್ಲಿ ಗಣಪತಿ ಹೋಮ, ಸತ್ಯ ನಾರಾಯಣ ಪೂಜೆ ನಡೆಸುವುದರಿಂದ ಈಗ ಪುರೋಹಿತರ ಅವಶ್ಯಕತೆ ಅನಿವಾರ್ಯ. ನಾಮಕರಣ ಮತ್ತು ನಿಶ್ಚಿತಾರ್ಥದಂತಹ ಕಾರ್ಯಗಳನ್ನು ಕೆಲವರು ದೇವಸ್ಥಾನಗಳಲ್ಲಿ ನಡೆಸುವುದು ಹೆಚ್ಚಾಗುತ್ತಿದೆ. ಪುರೋಹಿತ ಪ್ರವೇಶ ಮಾಡದಿರುವವುಗಳೆಂದರೆ ಕೇವಲ ಮದುವೆ ಮತ್ತು ಸಾವು ಹಾಗೂ ತಿಥಿ ಕರ್ಮಾಂತರಗಳಲ್ಲಿ ಮಾತ್ರವಾಗಿದೆ.

ಹೀಗೆ ಕೊಡವರು ಬ್ರಾಹ್ಮಣೀಕರಣಗೊಂಡು ಬ್ರಾಹ್ಮಣರ ಕಪಿಮುಷ್ಟಿಗೆ ತಳ್ಳಲ್ಪಡುವುದರ ಮೂಲಕ ಹಿಂದೂಗಳೆಂಬ ಹಣೆಪಟ್ಟಿಕಟ್ಟಿಕೊಂಡರೆಂದು ತಿಳಿಯಬಹುದಾಗಿದೆ. ಇದರ ಬಗ್ಗೆ ವಿಚಾರ ಮಾಡುವ ಕಾಲ ಕೊಡವರಿಗೆ ಈಗ ಸನ್ನಿಹಿತವಾಗಿದೆಯೆಂದು ನನಗನಿಸುತ್ತದೆ. ತಿರುಕುರಳ ಎಂಬ ನೀತಿ ಸಂಹಿತೆಯನ್ನು ಬರೆದ ತಿಳುವಳಿಕೆ ಮನುಷ್ಯನ ವಿಚಾರ ಶಕ್ತಿಯನ್ನು ಹೆಚ್ಚಿಸುವ ಬಗ್ಗೆ ಹೆಚ್ಚಿನ ಒತ್ತು ಕೊಟ್ಟಿರುವುದು ಕಂಡು ಬರುತ್ತದೆ.

ಪ್ರತಿಯೊಂದು ಜನಾಂಗ ತನ್ನ ಇತಿಹಾಸದ ಬಗ್ಗೆ ಅರಿಯುವಂತಾಗಿರಬೇಕು. ಅರಿವು ಅಳಿಯದಂತೆ ರಕ್ಷಿಸುವ ಸ್ವಾರ್ಥವೆಂದು ತಿರುವಳ್ಳುವರ್ ತಿಳಿಸುತ್ತಾರೆ. ಇದನ್ನನುಸರಿಸಿ ನಾವು ವಿಚಾರಶಕ್ತಿಯ ಕಡೆಗೆ ವಾಲಿದಾಗ ಕೊಡವರು ತಮಗೊಂದು ಪ್ರಶ್ನೆಯನ್ನು ಹಾಕಿಕೊಳ್ಳಬೇಕಾಗಬಹುದು. ಕಾವೇರಿ ಮಾತೆ ಹಾಗೂ ಪಾಡಿ ಇಗ್ಗುತ್ತಪ್ಪ ದೇವರು ಕೊಡವರ ಮನೆ ದೇವರು ಹಾಗೂ ಕುಲದೇವರು ಎನ್ನುವುದಾದರೆ ತಮ್ಮ ನಡವಳಿಕೆಗಳಲ್ಲಿ ಬ್ರಾಹ್ಮಣ ಪುರೋಹಿತರನ್ನು ದೂರ ಇಟ್ಟ ಕೊಡವರು ತಲಕಾವೇರಿ ಹಾಗೂ ಪಾಡಿ ಇಗುತ್ತಪ್ಪ ದೇವಸ್ಥಾನಗಳೆರಡರಲ್ಲೂ ಬ್ರಾಹ್ಮಣ ಪುರೋಹಿತರಿಂದ ಪೂಜೆ ಯಾಕೆ ಮಾಡಿಸಿಕೊಳ್ಳುತ್ತಾರೆ? ಕೊಡವರು ತಮ್ಮ ಕುಲದೇವರನ್ನು ತಾವೇ ತಮ್ಮ ಭಾಷೆಯಲ್ಲಿಯೇ ಪೂಜೆ ಮಾಡಿಕೊಂಡು ಬರುವುದು ಸಾಧ್ಯವಿಲ್ಲವೇ?

ಕಾವೇರಿ ಪುರಾಣವನ್ನು ಕೊಡವ ಭಾಷೆಯಲ್ಲಿ ಹಾಡಿದ ಹಾಡು ಪಟ್ಟೋಲೆ ಪಳಮೆಯಲ್ಲಿ ಕಂಡುಬರುತ್ತದೆ. ತಲಕಾವೇರಿಯಲ್ಲಿ ಬ್ರಾಹ್ಮಣ ಪುರೋಹಿತರಿಂದ ಸಂಸ್ಕೃತ ಶ್ಲೋಕಗಳನ್ನು ಹೇಳಿಸುತ್ತಾ ಪೂಜೆ ಮಾಡಿಸಿಕೊಳ್ಳುವ ಬದಲು ಕೊಡವರೇ ಕೊಡಗು ಭಾಷೆಯ ಕಾವೇರಿ ಪುರಾಣವನ್ನು ಹಾಡುತ್ತಾ ಪೂಜೆ ಮಾಡುವ ಕೊಡವ ಪುರೋಹಿತರನ್ನು ಸೃಷ್ಟಿಸಬಹುದಲ್ಲವೇ? ಹಾಗೆ ಇಗ್ಗುತ್ತಪ್ಪ ದೇವರ ಕುರಿತು ಸಹ ಕೊಡವ ಭಾಷೆಯಲ್ಲಿ ಬಾಳೋಪಾಟ್ ರೀತಿಯಲ್ಲಿ ಹಾಡು ರಚಿಸಿ ಹಾಡುತ್ತಾ ಕೊಡವರೇ ಪೂಜೆ ದೈವಭಕ್ತಿ ತೋರಿಸಿದರೆ ಸಾಕಾಗುವುದಿಲ್ಲವೇ?

ಪಟ್ಟ್ಟೋಲೆ ಪಳಮೆಯಲ್ಲಿ ದೇವತೆಯಡ ಪಾಟ್ ಎಂಬ ಅಧ್ಯಾಯವೊಂದಿದೆ. ಆ ಅಧ್ಯಾಯದಲ್ಲಿ ಹಲವಾರು ದೇವತೆಗಳನ್ನು ಕೊಡವ ಭಾಷೆಯಲ್ಲಿ ಸ್ತುತಿಸುತ್ತಾ ರಚಿಸಿದ ಹಾಡುಗಳನ್ನು ಮುದ್ರಿಸಲಾಗಿದೆ. ಕೊಡವರಿಗಾಗಿಯೇ ಮೀಸಲಾಗಿರುವ ಈ ದೇವರುಗಳನ್ನು ಕೊಡವರೇ ಕೊಡವ ಭಾಷೆಯಲ್ಲಿ ಹಾಡಿ ಪೂಜಿಸುವ ಪದ್ಧತಿ ಇದೆಯೆಂದು ಇದರಿಂದ ವ್ಯಕ್ತವಾಗುತ್ತದೆ. ಕೊಡವರು ಬ್ರಾಹ್ಮಣ ಪುರೋಹಿತರನ್ನು ದೂರ ಇಟ್ಟದ್ದಕ್ಕೆ ಇದೂ ಕೂಡ ಆಧಾರವಾಗಬಲ್ಲದು.

ಅಂದ ಮೇಲೆ ಕೊಡವರು ಕುಲದೇವರೆಂದು ನಂಬುವ ಕಾವೇರಮ್ಮೆ ಹಾಗೂ ಮನೆ ದೇವರೆಂದು ನಂಬುವ ಪಾಡಿ ಇಗುತ್ತಪ್ಪ ದೇವರನ್ನು ಬ್ರಾಹ್ಮಣ ಪುರೋಹಿತರ ಮೂಲಕ ಪೂಜೆ ಮಾಡಿಸಿಕೊಳ್ಳುವುದರಲ್ಲಿ ಅರ್ಥವೇನಿದೆ? ಕೊಡವರು ತಮ್ಮ ದೇವರುಗಳ ಪೂಜೆಯನ್ನು ತಾವೇ ಮಾಡಿಕೊಳ್ಳುವುದು ಸರಿಯಾದ ಮಾರ್ಗವಲ್ಲವೇ?

ಆದರೆ ಬ್ರಾಹ್ಮಣ ಪುರೋಹಿತರು ಹಲವು ಕಟ್ಟುಕತೆಗಳನ್ನು, ಇಲ್ಲದ ಹಲವು ದೇವರುಗಳನ್ನು ಸೃಷ್ಟಿಸಿ ಕೊಡವರ ಮೇಲೆ ಹೇರುವುದರ ಮೂಲಕ ಬ್ರಾಹ್ಮಣ ಪುರೋಹಿತರನ್ನು ದೂರ ಇಟ್ಟಿದ್ದ ಕೊಡವ ಜನಾಂಗವನ್ನು ತಮ್ಮ ಕಕ್ಷೆಯೊಳಗೆ ಸೆಳೆದುಕೊಳ್ಳುವುದರಲ್ಲಿ ಸಫಲರಾಗಿದ್ದಾರೆಂದು ಊಹಿಸಿದರೆ ಅದು ಸರಿಯಾದ ಊಹೆಯೇ ಆಗುತ್ತದೆ. ಈಗ ಕೊಡವರ ಮದುವೆ, ಶವ ಸಂಸ್ಕಾರ, ತಿಥಿ ಮುಂತಾದ ಆಚರಣೆ ಹಾಗೂ ಕೈಲ್ ಪೊಳ್ದು ಹಾಗೂ ಹುತ್ತರಿ ಹಬ್ಬದಲ್ಲಿ ಕೋಲಾಟವನ್ನು ಬಿಟ್ಟರೆ ಉಳಿದೆಲ್ಲ ಆಚರಣೆ ಮತ್ತು ಹಬ್ಬಗಳಲ್ಲಿ ಬ್ರಾಹ್ಮಣ ಪೂಜಾರಿಗಳದೇ ಪಾತ್ರ.

ಹೀಗೆ ಕೊಡವರು ತಮ್ಮನ್ನು ತಮಗರಿವಿಲ್ಲದೆಯೇ ಪುರೋಹಿತರ ಅಧೀನವಾಗಿರಿಸುವುದರಿಂದ ಲಾಭ ಯಾರಿಗಾಗಿದೆಯೆಂದು ವಿಮರ್ಶಿಸುವ ಅಗತ್ಯವಿದೆ ಎಂದು ನನಗನಿಸುತ್ತದೆ. ಕೊಡವರು ಬಹುತೇಕ ಎಲ್ಲಾ ರೀತಿಯಲ್ಲಿ ಬ್ರಾಹ್ಮಣಶಾಹಿಯ ಮುಷ್ಟಿಯೊಳಗೆ ತಳ್ಳಲ್ಲಟ್ಟಿರುವುದರಿಂದ ಕೊಡವರಿಗೇನಾದರೂ ಲಾಭವಿದೆಯೇ ಎಂದು ಪ್ರಶ್ನಿಸಿಕೊಂಡು ಉತ್ತರ ಹುಡುಕಿದಾಗ ಕೊಡವರಿಗೆ ಇದರಿಂದ ಲಾಭವೇನೂ ಆಗಲಿಲ್ಲ. ಬರೇ ನಷ್ಟವೇ ಆಗಿದೆಯೆಂಬುದನ್ನು ಕಂಡುಕೊಳ್ಳಬಹುದು.

ಏಕೆಂದರೆ ತಾವೂ ಶೇಷ್ಠರೆಂದುಕೊಂಡು ಪುರೋಹಿತರನ್ನು ದೂರ ಇಟ್ಟಿದ್ದ ಕೊಡವರು ಬ್ರಾಹ್ಮಣರ ಸ್ವೀಕಾರ ಮಾಡಿದಂತಾಯಿತಲ್ಲವೇ? ಪೂಜೆ ಪುರಸ್ಕಾರಗಳಲ್ಲಿ ಪುರೋಹಿತರಿಗೆ ಕಾಣಿಕೆ ರೂಪದಲ್ಲಿ ಪ್ರತಿ ಸಂದರ್ಭಗಳಲ್ಲಿಯೂ ತೆರಿಗೆ ತೆರುವಂತಾಯಿತು. ತಲಕಾವೇರಿಯಲ್ಲಿಯೋ ಯಾ ಇನ್ನಾವುದೇ ದೇಗುಲದಲ್ಲಿಯೋ ಸೇವೆ ಸಲ್ಲಿಸುವ ಪುರೋಹಿತರುಗಳ ಆಜ್ಞಾನುವರ್ತಿಗಳಾಗಿ ಪೂಜೆ, ಯಜ್ಞ, ಹೋಮ ಹವನಾದಿಗಳಲ್ಲಿ ಕೊಡವರು ಪಾಲುಗೊಂಡು ತಮ್ಮ ಸಂಪತ್ತನ್ನು ಕರಗಿಸಿಕೊಳ್ಳುವುದರ ಜೊತೆಗೆ ಮೂಢನಂಬಿಕೆಗಳನ್ನು ಆಹ್ವಾನಿಸಿಕೊಂಡು ವಿಚಾರ ಶಕ್ತಿಯನ್ನು ಕಳೆದುಕೊಳ್ಳುವಂತಾಯಿತು.

ಪರಿಣಾಮವಾಗಿ ಕೊಡವರು ಹೊರಬೇಕಾಗಿ ಬಂದ ದೇವರುಗಳ ಭಾರ ಅಧಿಕಗೊಳ್ಳ್ಳುತ್ತಾ ಹೋಯಿತು. ಶಬರಿಮಲೆ ಅಯ್ಯಪ್ಪ, ಸುಬ್ರಹ್ಮಣ್ಯ, ಮುತ್ತಪ್ಪ, ಬೈತೂರಪ್ಪ ಮುಂತಾದ ದೇವರು ಕೊಡವರ ದೇವರುಗಳಾದರು. ಹೀಗೆ ಹೊಸ ಹೊಸ ದೇವರುಗಳನ್ನು ತಮ್ಮ ಮೇಲೆ ಹೇರಿಕೊಳ್ಳುತ್ತಾ ಬಂದ ಕೊಡವರು ಬಹಳಷ್ಟು ಜನ ಹೊಸದಾಗಿ ಕಲ್ಕಿ ಎಂಬ ದೇವರ ಅಧೀನಕ್ಕೂ ಒಳಗಾಗಿದ್ದಾರೆ. ಈ ಎಲ್ಲಾ ದೇವರುಗಳು ಕೊಡವರನ್ನು ಸಾಕುತ್ತಾರೋ ಎಂದು ಚಿಂತಿಸಿ ನೋಡಬೇಕು.

ಊರೂರುಗಳಲ್ಲಿ ಮೈಮೇಲೆ ಬರುವ ದೇವರುಗಳನ್ನೂ ಪ್ರಾಣಿ ಬಲಿ ತೆಗೆದುಕೊಳ್ಳುವ ದೇವರುಗಳನ್ನೂ ಕೊಡವರು ಪೋಷಿಸುತ್ತಾ ಬಂದಿದ್ದಾರೆ. ಮೈಮೇಲೆ ಬರುವ ಕೆಲವು ಊರು ದೇವರುಗಳು ಕನ್ನಡದಲ್ಲಿ ಮಾತನಾಡುತ್ತಾರೆ. ಮಲಬಾರಿಗೆ ಹೋಗಿ ಜ್ಯೋತಿಷ್ಯರ ಮೊರೆ ಹೋಗುವುದು ಮಾಟ ಮಂತ್ರ ತಂತ್ರಗಳನ್ನು ಆಹ್ವಾನಿಸುವುದು ಸಹ ಕೊಡವರಲ್ಲಿ ವಾಡಿಕೆಯಾಗಿದೆ.

ಕೇವಲ ಪೂರ್ವಜರನ್ನು ಪ್ರಕೃತಿಯನ್ನು ತಮ್ಮದೇ ರೀತಿಯಲ್ಲಿ ಬ್ರಾಹ್ಮಣ ಪುರೋಹಿತರನ್ನು ದೂರವಿಟ್ಟು ತಾವೇ ಪೂಜಿಸಿಕೊಳ್ಳುವ ಪದ್ಧತಿಯನ್ನು ಹೊಂದಿದ್ದ ಕೊಡವರು ನಂತರದ ದಿನಗಳಲ್ಲಿ ಪುರೋಹಿತರು ಸೃಷ್ಟಿಸಿದ ಎಲ್ಲಾ ದೇವರುಗಳನ್ನು ತಮ್ಮ ತಲೆ ಮೇಲೆ ಹೇರಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ