ನರಬಲಿ ನೀಡಲ್ಪಟ್ಟ 227 ಮಕ್ಕಳ ಅವಶೇಷಗಳು ಪತ್ತೆ

Update: 2019-08-28 08:35 GMT

ಲಿಮಾ : ನೂರಾರು ವರ್ಷಗಳ ಹಿಂದೆ ನರ ಬಲಿ ನೀಡಲ್ಪಟ್ಟ 227 ಮಕ್ಕಳ ಅವಶೇಷಗಳನ್ನು ಕೊಲಂಬಿಯನ್ ಪೂರ್ವ ಚಿಮು ಸಮುದಾಯದವರು ಬಳಸುತ್ತಿದ್ದ ಜಮೀನಿನಲ್ಲಿ ಪತ್ತೆಯಾಗಿದೆಯೆಂದು ಪೆರು ದೇಶದ ಪುರಾತತ್ವ ಶಾಸ್ತ್ರಜ್ಞರು ಹೇಳಿದ್ದಾರೆ.

ಇಷ್ಟೊಂದು ಸಂಖ್ಯೆಯಲ್ಲಿ ನರ ಬಲಿ ನೀಡಲಾದ ಮಕ್ಕಳ ಅವಶೇಷಗಳು ಪತ್ತೆಯಾಗಿರುವುದು ಇದೇ ಮೊದಲು ಎಂದು ತಿಳಿದುಬಂದಿದೆ. ರಾಜಧಾನಿ ಲಿಮಾ ನಗರದ ಉತ್ತರದ ಪ್ರವಾಸಿ ಬೀಚ್ ಪಟ್ಟಣ ಹುವಾಂಚಕೊ ಎಂಬಲ್ಲಿ ಈ ಹಿಂದೆ ಇದ್ದ ನರ ಬಲಿ ತಾಣದಲ್ಲಿ ಕಳೆದೊಂದು ವರ್ಷದಿಂದ ಪುರಾತತ್ವ ಶಾಸ್ತ್ರಜ್ಞರು ಶೋಧನೆ ನಡೆಸುತ್ತಿದ್ದಾರೆ.

ಚಿಮು ಸಮುದಾಯ ನಂಬಿರುವ ದೇವರುಗಳಿಗೆ ಸಮರ್ಪಿಸಲು ನಾಲ್ಕರಿಂದ 14 ವರ್ಷ ವಯಸ್ಸಿನ ಮಕ್ಕಳನ್ನು ಬಲಿ ನೀಡಲಾಗಿತ್ತು ಎಂದು  ಮುಖ್ಯ ಪುರಾತತ್ವಶಾಸ್ತ್ರಜ್ಞ ಫೆರೆನ್ ಕಾಸ್ಟಿಲ್ಲೋ ಹೇಳಿದ್ದಾರೆ. ಇನ್ನೂ ಹಲವು ಅವಶೇಷಗಳು ಪತ್ತೆಯಾಗಬಹುದು ಎಂದೂ ಅವರು  ತಿಳಿಸಿದ್ದಾರೆ. ಉತ್ಖನನ ನಡೆಸಿದ  ಸ್ಥಳಗಳಲ್ಲೆಲ್ಲಾ ಮಾನವ ಅವಶೇಷಗಳು ಪತ್ತೆಯಾಗುತ್ತಿವೆ ಎಂದು ಅವರು ಹೇಳಿದರು. ಸಮುದ್ರಕ್ಕೆ ಅಭಿಮುಖವಾಗಿ ಅವಶೇಷಗಳು ಪತ್ತೆಯಾಗಿದ್ದು ಕೆಲವು ಅವಶೇಷಗಳಲ್ಲಿ ಕೂದಲು ಮತ್ತು ಚರ್ಮ ಕೂಡ ಇದ್ದವು.

ಇಸವಿ 1200ರಿಂದ 1400ರ ನಡುವೆ ಚಿಮು ಸಂಪ್ರದಾಯದ ಜನರ ಜೀವಿತ ಕಾಲದಲ್ಲಿ ಈ ಮಕ್ಕಳನ್ನು ಬಲಿ ನೀಡಿರಬೇಕೆಂದು ಅಂದಾಜಿಸಲಾಗಿದೆ. ಈ ನಿರ್ದಿಷ್ಟ ಸ್ಥಳದಲ್ಲಿ ಉತ್ಖನನ ನಡೆಸುವ ಮೊದಲು ಪುರಾತತ್ವಶಾಸ್ತ್ರಜ್ಞರು  ಪಂಪಾ ಲಾ ಕ್ರೂಝ್ ಎಂಬಲ್ಲಿ  56 ಅಸ್ಥಿ ಪಂಜರಗಳನ್ನು ಜೂನ್ 2018ರಲ್ಲಿ ಪತ್ತೆಯಾಗಿದ್ದವು,. ಸುಮಾರು 140 ನರ ಬಲಿ ನೀಡಲ್ಪಟ್ಟ ಮಕ್ಕಳ ಅವಶೇಷಗಳು  ಎಪ್ರಿಲ್ 2018ರಲ್ಲಿ ಪತ್ತೆಯಾಗಿದ್ದವು.

ಪೆರು ಕರಾವಳಿಯಿಂದ ಇಕ್ವೆಡೋರ್ ತನಕ ಇದ್ದ ಚಿಮು ಸಮುದಾಯದ ಮಂದಿಯನ್ನು  ಇಂಕಾ ಸಾಮ್ರಾಜ್ಯ ವಶ ಪಡಿಸಿಕೊಂಡ ನಂತರ ಆ ಸಮುದಾಯ ಅವನತಿ ಕಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News