ಟೈಮ್ ಮ್ಯಾಗಝಿನ್ ನ ‘ವಿಶ್ವದ ಶ್ರೇಷ್ಠ ಸ್ಥಳಗಳ ಪಟ್ಟಿ’ಯಲ್ಲಿ ಏಕತೆಯ ಪ್ರತಿಮೆ

Update: 2019-08-28 11:03 GMT

ಹೊಸದಿಲ್ಲಿ, ಆ.28: ದಕ್ಷಿಣ ಗುಜರಾತ್ ನ ನರ್ಮದಾ ನದಿಗೆ ಕಟ್ಟಲಾಗಿರುವ ಸರ್ದಾರ್ ಅಣೆಕಟ್ಟಿನ ಎದುರು ತಲೆಯೆತ್ತಿರುವ ಸರ್ದಾರ್ ಪಟೇಲ್ ಅವರ ಜಗತ್ತಿನ ಅತ್ಯಂತ ಎತ್ತರದ ಏಕತಾ ಪ್ರತಿಮೆ ಈಗ ಟೈಮ್ ಮ್ಯಾಗಝಿನ್ ನ ‘ವಿಶ್ವದ ಮಹಾನ್ ಸ್ಥಳಗಳು’ (ಗ್ರೇಟೆಸ್ಟ್ ಪ್ಲೇಸಸ್ 2019) ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಈ ಪಟ್ಟಿಯಲ್ಲಿ ಜಗದ್ವಿಖ್ಯಾತ ಹಾಗೂ ಪ್ರವಾಸಿಗರ ಕಣ್ಮನ ಸೆಳೆಯುವ ಅಸಾಮಾನ್ಯ ಪಾರ್ಕುಗಳು, ರೆಸ್ಟಾರೆಂಟುಗಳು, ಹೋಟೆಲುಗಳು ಹಾಗೂ ಮ್ಯೂಸಿಯಂಗಳೂ ಸೇರಿವೆ.

ಗುಣಮಟ್ಟ, ನಾವೀನ್ಯತೆ ಮುಂತಾದ ಮಾನದಂಡಗಳ ಆಧಾರದಲ್ಲಿ ವಿವಿಧ ಸ್ಥಳಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತವೆ. ಏಕತೆಯ ಪ್ರತಿಮೆ ಹೊರತಾಗಿ ನ್ಯಾಷನಲ್ ಮ್ಯೂಸಿಯಂ ಆಫ್ ಕತರ್, ಕೆನಡಾದ ಟೊರಂಟೋದಲ್ಲಿನ ವಂಡರ್ ಲ್ಯಾಂಡ್, ನ್ಯೂಯಾರ್ಕ್ ನಗರದ ಜೇಮ್ಸ್ ಟೌನ್ ನಲ್ಲಿನ ನ್ಯಾಷನಲ್ ಕಾಮಿಡಿ ಸೆಂಟರ್, ಹಾಂಗ್ ಕಾಂಗ್ ನ ಚೀನೀ ರಂಗಮಂದಿರ ಕ್ಸಿಖ್ಯು ಸೆಂಟರ್ ಹಾಗೂ ಹೆಲ್ಸಿಂಕಿ ಸೆಂಟ್ರಲ್ ಲೈಬ್ರರಿ, ಊಡಿ ಈ ಟೈಮ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಟೈಮ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಸರ್ದಾರ್ ಪಟೇಲ್ ಅವರ 182 ಮೀಟರ್ ಎತ್ತರದ ಭವ್ಯ ಮೂರ್ತಿಯನ್ನು ಸುಮಾರು  3,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್ 2018ರಂದು ಪಟೇಲ್ ಅವರ 143ನೇ ಜನ್ಮದಿನಾಚರಣೆಯ ಸಂದರ್ಭ ಈ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ಈ ಬೃಹತ್ ಪ್ರತಿಮೆಯನ್ನು ಶಿಲ್ಪಿ ರಾಮ್ ವಿ ಸುತರ್ ನಿರ್ಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News