ಕೊಳೆತು ದುರ್ವಾಸನೆ ಬೀರುತ್ತಿದೆ ತ್ಯಾಜ್ಯ: ಮಂಗಳೂರು ಸ್ಮಾರ್ಟ್‌ ಸಿಟಿಗೆ ಕಳಂಕ ಸೆಂಟ್ರಲ್ ಮಾರ್ಕೆಟ್!

Update: 2019-08-28 16:28 GMT

ಮಂಗಳೂರು, ಆ.28: ಮಹಾನಗರ ಮಂಗಳೂರು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಇತ್ತೀಚೆಗೆ ಸ್ಮಾರ್ಟ್ ಸಿಟಿಯಾಗಿಯೂ ಪರಿವರ್ತನೆಯಾಗುತ್ತಿದೆ. ಆದರೆ, ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ ಮಾತ್ರ ಇದಕ್ಕೆ ತದ್ವಿರುದ್ಧವಾಗಿದ್ದು, ಕಸ ವಿಲೇವಾರಿಯೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಮನಪಾ ನಿಗದಿ ಮಾಡಿದ ಸೆಂಟ್ರಲ್ ಮಾರ್ಕೆಟ್ ನ ಮಾಂಸದಂಗಡಿಯ ಪಕ್ಕದಲ್ಲಿ ಈಗಾಗಲೇ ತ್ಯಾಜ್ಯ ಹಾಕಿದ್ದನ್ನು ಮನಪಾದ ಕಸ ವಿಲೇವಾರಿ ತಂಡ ಸಾಗಿಸುತ್ತದೆ. ಆದರೆ, ಕಳೆದ ಹಲವು ದಿನಗಳಿಂದ ತ್ಯಾಜ್ಯ ಸಾಗಾಟ ನಡೆದೇ ಇಲ್ಲ ಎನ್ನುವಂತೆ ಭಾಸವಾಗುತ್ತಿದೆ. ತ್ಯಾಜ್ಯ ರಾಶಿ ಬಿದ್ದಿದ್ದು, ದುರ್ವಾಸನೆ ಮುಖ, ಮೂಗಿಗೆ ರಾಚುತ್ತಿದೆ.

ಮಾರ್ಕೆಟ್ ನಲ್ಲಿರುವ ಹಮಾಲಿಗಳು ಕಸದ ಲಾರಿಗಳು ನಿಂತಿದ್ದರೂ ಕೂಡ ಕಸವನ್ನು ಲಾರಿಗೆ ತುಂಬಿಸುವ ಬದಲು ರಸ್ತೆಯ ಪಕ್ಕದಲ್ಲಿಯೇ ರಾಶಿ ಹಾಕಿಕೊಂಡು ಹೋಗುತ್ತಾರೆ. ಇಲ್ಲಿ ವ್ಯಾಪಾರಸ್ಥರು ಮೂಗು ಮುಚ್ಚಿ ವಹಿವಾಟಿನಲ್ಲಿ ತೊಡಗಬೇಕಾಗಿದೆ. ಪಾಲಿಕೆ ಸಿಬ್ಬಂದಿಯ ನಿರ್ಲಕ್ಷತನದ ಪಾಲೂ ಇದರಲ್ಲಿದೆ.

“ಕೆಟ್ಟ ಕುಂಬಳಕಾಯಿ, ಸೌತೆ, ಬದನೆಯಂತಹ ತರಕಾರಿಯ ತ್ಯಾಜ್ಯವೆಲ್ಲ ಸೆಂಟ್ರಲ್ ಮಾರ್ಕೆಟ್‌ ನ ಮಾಂಸದಂಗಡಿ ಸಮೀಪ ಗುಡ್ಡೆ ಹಾಕಲಾಗುತ್ತಿದೆ. ಇದರಿಂದ ಗ್ರಾಹಕರು ಮೂಗು ಮುಚ್ಚಿಕೊಂಡು ತರಕಾರಿ, ಹಣ್ಣುಹಂಪಲು ಖರೀದಿಸುವ ದುಃಸ್ಥಿತಿ ನಿರ್ಮಾಣವಾಗಿದೆ. ವ್ಯಾಪಾರಸ್ಥರಂತೂ ತ್ಯಾಜ್ಯದ ವಾಸನೆಯಿಂದ ಕಂಗಾಲಾಗಿದ್ದಾರೆ. ಕಳೆದ ಆರು ದಿನಗಳಿಂದ ತ್ಯಾಜ್ಯದ ಬೃಹತ್ ಗುಡ್ಡೆ ತುಂಬಿ ರಸ್ತೆಗೆ ಚಾಚಿಕೊಂಡಿದ್ದು, ಅರ್ಧ ರಸ್ತೆಯೇ ಆಪೋಶನ ತೆಗೆದುಕೊಂಡಿದೆ” ಎಂದು ಸೆಂಟ್ರಲ್ ಮಾರ್ಕೆಟ್‌ನ ವ್ಯಾಪಾರಸ್ಥ ಝಮೀರ್ ವಾಮಂಜೂರು ಅಸಹನೆ ಹೊರ ಹಾಕಿದರು.

ಮಾರಕ ರೋಗಗಳ ಅಪಾಯ

ಸೆಂಟ್ರಲ್ ಮಾರ್ಕೆಟ್‌ ನ ತ್ಯಾಜ್ಯದ ಗುಡ್ಡೆಗಳು ಮಾರಕ ರೋಗಗಳನ್ನು ಆಹ್ವಾನಿಸುವಂತಿದೆ. ಮಾರ್ಕೆಟ್‌ನ ಹಲವು ವ್ಯಾಪಾರಸ್ಥರು ಈಗಾಗಲೇ ಡೆಂಗ್, ಮಲೇರಿಯದಂತಹ ಕಾಯಿಲೆಗಳಿಂದ ಬಳಲಿ ಜರ್ಝರಿತಗೊಂಡಿದ್ದಾರೆ. ತ್ಯಾಜ್ಯವನ್ನು ಇಂದು ತೆಗೆಯುತ್ತಾರೆ; ನಾಳೆ ತೆಗೆಯುತ್ತಾರೆನ್ನುವ ಆಶಾಭಾವನೆಯಲ್ಲೇ ದಿನದೂಡುತ್ತಿದ್ದು, ಗುರುವಾರವೇ ಮನಪಾ ಆಯುಕ್ತರಿಗೆ ಮನವಿ ಸಲ್ಲಿಸಿ, ಕ್ರಮಕ್ಕೆ ಆಗ್ರಹಿಸುತ್ತೇವೆ ಎಂದು ಝಮೀರ್ ವಾಮಂಜೂರು ತಿಳಿಸಿದರು.

 “ಪಾಲಿಕೆಯ ತ್ಯಾಜ್ಯ ವಿಲೇವಾರಿ ವಾಹನ ಬಾರದೆ ಒಂದು ವಾರವೇ ಕಳೆಯಿತು. ಕಸ ತುಂಬುವಾಗ ಇದನ್ನು ಮತ್ತಷ್ಟು ಡ್ರಜ್ಜಿಂಗ್ ಮಾಡಿ ಸಾಗಿಸುವ ಭರದಲ್ಲಿ ಈ ತ್ಯಾಜ್ಯದ ನೀರು ನೇರವಾಗಿ ರಸ್ತೆಯಲ್ಲೇ ಸಾಗಿ ಅಲ್ಲಿರುವ ಅಂಗಡಿಗಳ ಮುಂಭಾಗದಲ್ಲಿ ಹರಿಯುತ್ತದೆ. ಈ ಸಮಸ್ಯೆಯಿಂದಾಗಿ ಮಾಂಸದಂಗಡಿಗೆ ಸಾಗುವ ರಸ್ತೆಯಲ್ಲಿ ಯಾರು ನೇರವಾಗಿ ಹೋಗಲು ಸಾಧ್ಯವಿಲ್ಲ. ಮತ್ತೊಂದೆಡೆ ತ್ಯಾಜ್ಯ ಹಾಕುವ ಜಾಗವನ್ನು ಸರಿ ಮಾಡಿದರೆ ಕಸದ ಸಮಸ್ಯೆಗೆ ಕೊಂಚ ಮುಕ್ತಿ ನೀಡಬಹುದು” ಎನ್ನುತ್ತಾರೆ ಸೆಂಟ್ರಲ್ ಮಾರ್ಕೆಟ್‌ನ ಮತ್ತೋರ್ವ ವ್ಯಾಪಾರಸ್ಥ.

ಸೆಂಟ್ರಲ್ ಮಾರ್ಕೆಟ್‌ ನಲ್ಲಿನ ತ್ಯಾಜ್ಯದ ಗುಡ್ಡೆಗಳಿಂದಾಗಿ ರಸ್ತೆಯಲ್ಲಿಯೇ ತ್ಯಾಜ್ಯನೀರು ಹರಿದು ವಾಹನಗಳ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ. ಒಂದು ವಾರದಲ್ಲೆ ಮೂರು-ನಾಲ್ಕು ಅಪಘಾತ ಸಂಭವಿಸಿವೆ. ಬುಧವಾರ ಮಧ್ಯಾಹ್ನವೂ ಬೈಕೊಂದು ಸ್ಕಿಡ್‌ಆಗಿ ಬಿದ್ದು, ಸವಾರ ಹಾಗೂ ಸಹಸವಾರೆ ಗಾಯಗೊಂಡಿದ್ದಾರೆ. ಪಾಲಿಕೆಯೇ ಇದಕ್ಕೆ ಹೊಣೆ ಹೊರಬೇಕು.

- ಝಮೀರ್ ವಾಮಂಜೂರು, ಸೆಂಟ್ರಲ್ ಮಾರ್ಕೆಟ್ ವ್ಯಾಪಾರಸ್ಥ

Full View

Writer - ಬಂದೇನವಾಝ್ ಮ್ಯಾಗೇರಿ

contributor

Editor - ಬಂದೇನವಾಝ್ ಮ್ಯಾಗೇರಿ

contributor

Similar News