ಸೆರೆನಾ, ಬಾರ್ಟಿ ಮೂರನೇ ಸುತ್ತಿಗೆ ಪ್ರವೇಶ

Update: 2019-08-29 17:27 GMT

ನ್ಯೂಯಾರ್ಕ್, ಆ.29: ಯುಎಸ್ ಓಪನ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಸೋಲಿನ ಭೀತಿ ಎದುರಿಸಿದ ಅಮೆರಿಕದ ಹಿರಿಯ ಆಟಗಾರ್ತಿ ಸೆರೆನಾ ವಿಲಿಯಮ್ಸ್ ತಮ್ಮದೇ ದೇಶದ ವೈಲ್ಡ್‌ರ್  ಕಾರ್ಡ್ ಆಟಗಾರ್ತಿ ಕ್ಯಾಥೆರಿನ್ ಮೆಕ್ನೆಲ್ಲಿ ಅವರನ್ನು 5-7, 6-3, 6-1 ಸೆಟ್‌ಗಳ ಅಂತರದಿಂದ ಮಣಿಸಿದರು. ಮೊದಲ ಸೆಟ್ ಸೋಲಿನಿಂದ ಬೇಗನೆ ಚೇತರಿಸಿಕೊಂಡ ಸೆರೆನಾ ಉಳಿದೆರಡು ಸೆಟ್‌ಗಳಲ್ಲಿ ಜಯ ಸಾಧಿಸಿ ಮೂರನೇ ಸುತ್ತು ತಲುಪಿದರು.

ವಿಶ್ವದ ನಂ.6ನೇ ಆಟಗಾರ್ತಿ ಸೆರೆನಾ 17ರ ಹರೆಯದ ಎದುರಾಳಿ ಕ್ಯಾಥೆರಿನ್ ಹುಟ್ಟುವ ಎರಡು ವರ್ಷಗಳ ಮೊದಲೇ ಯುಎಸ್ ಓಪನ್‌ನಲ್ಲಿ ಚೊಚ್ಚಲ ಪ್ರಶಸ್ತಿ ಜಯಿಸಿದ್ದರು. ಈ ತನಕ ಆರು ಬಾರಿ ಯುಎಸ್ ಓಪನ್ ಕಿರೀಟ ಧರಿಸಿರುವ ಸೆರೆನಾ 24ನೇ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿ ಮಾರ್ಗರೆಟ್ ಕೋರ್ಟ್ ದಾಖಲೆ ಸರಿಗಟ್ಟುವ ವಿಶ್ವಾಸದಲ್ಲಿದ್ದಾರೆ.

ಸೆರೆನಾ ಮುಂದಿನ ಸುತ್ತಿನಲ್ಲಿ ತೈವಾನ್‌ನ ಸಿ-ಸು-ವೀ ಅಥವಾ ಝೆಕ್‌ನ ಕರೊಲಿನಾ ಮುಚೊವಾರನ್ನು ಎದುರಿಸಲಿದ್ದಾರೆ.

ಮತ್ತೊಂದು ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ಅಶ್ ಬಾರ್ಟಿ ಎರಡನೇ ಸೆಟ್‌ನಲ್ಲಿ ಕಠಿಣ ಸವಾಲು ಎದುರಿಸಿದ್ದರೂ ಅಮೆರಿಕದ ಲೌರೆನ್ ಡೇವಿಸ್‌ರನ್ನು 6-2, 7-6(2) ಸೆಟ್‌ಗಳಿಂದ ಮಣಿಸಿ ಯು.ಎಸ್. ಓಪನ್‌ನಲ್ಲಿ ಮೂರನೇ ಸುತ್ತು ತಲುಪಿದರು.

ಫ್ರೆಂಚ್ ಓಪನ್ ಚಾಂಪಿಯನ್ ಬಾರ್ಟಿ ನೆಟ್‌ನಲ್ಲಿ ಆಕ್ರಮಣಕಾರಿ ಆಟಗಾರ್ತಿ ಎನ್ನುವುದನ್ನು ಮತ್ತೊಮ್ಮೆ ನಿರೂಪಿಸಿದರು. ವಿಶ್ವದ ನಂ.2ನೇ ಆಟಗಾರ್ತಿ ಬಾರ್ಟಿ ಮುಂದಿನ ಸುತ್ತಿನಲ್ಲಿ ಗ್ರೀಸ್‌ನ ಮರಿಯಾ ಸಕ್ಕಾರಿ ಅಥವಾ ಚೀನಾದ ಪೆಂಗ್ ಶುಐ ಅವರನ್ನು ಶುಕ್ರವಾರ ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News