ಸಂಶೋಧಕನಾಗಿ ನಾನು

Update: 2019-08-29 18:42 GMT

 ವ್ಯಕ್ತಿಯ ಬೆಳವಣಿಗೆಗೆ ಪ್ರೀತಿಯಷ್ಟೇ ಮುಖ್ಯವಾದುದು ವಿರೋಧ. ನಾನು ಪ್ರೀತಿಯಿಂದ ಒಂದು ಅಡಿ ಬೆಳೆದರೆ, ವಿರೋಧದಿಂದ ಎರಡು ಅಡಿ ಬೆಳೆದಿದ್ದೇನೆ. ಶಂಬಾ ಅವರೂ ಬೆಳೆದುದು ಹೀಗೆಯೇ. ಇದಕ್ಕೆ ಕಾರಣ, ನಿಜವಾದ ಸಂಶೋಧಕನು ಬರಹದಂತೆ ಬದುಕಿನಲ್ಲಿಯೂ ಅಸತ್ಯದ ಕೂಡ ಒಪ್ಪಂದ ಮಾಡಿಕೊಳ್ಳದ ಹಟಮಾರಿಯಾಗಿರುವುದು. ಇಂಥ ಸಂದರ್ಭಗಳಲ್ಲಿ ಎಷ್ಟೇ ಗಾಸಿಯಾದರೂ, ಭೌತಿಕ ಹಾನಿಗೆ ಒಳಗಾದರೂ ಸಂಶೋಧನೆಯ ಬಗೆಗಿನ ಅಂತರ್ಮುಖತೆಯನ್ನು ಅವನು ಕಳೆದುಕೊಳ್ಳಬಾರದು. ಇದು ನನ್ನ ಸಂಶೋಧನೆಯ ಜೀವನದೃಷ್ಟಿಯಾಗಿದೆ.

ಶ್ರದ್ಧೆ ಶ್ರಮ ಸಮಯ ಇವುಗಳನ್ನು ಜೀವನದ ವೌಲ್ಯಗಳೆಂದು ನಂಬಿದವನು ನಾನು. ಇದರಿಂದಾಗಿ ಸರಿಯಾದ ಸಮಯಕ್ಕೆ ಸರಿಯಾದ ಕೆಲಸ ಮಾಡುವ ಪ್ರವೃತ್ತಿ ನನ್ನಲ್ಲಿ ತಕ್ಕ ಮಟ್ಟಿಗೆ ಬೆಳೆದುಬಂದಿದೆ. plan your work and work your plan ಎಂಬ ಸೂಕ್ತಿಯಿಂದ ಪ್ರಭಾವಿತನಾಗಿ, ವಿದ್ಯಾರ್ಥಿ ದೆಸೆಯಿಂದಲೂ ಕಾರ್ಯವನ್ನು ಯೋಜಿಸುವ, ಯೋಜನೆಯನ್ನು ಕಾರ್ಯಗತಗೊಳಿಸುವ ಜೀವನಪದ್ಧತಿಯನ್ನು ಬೋಧನವೃತ್ತಿ,ಸಂಶೋಧನೆ ಪ್ರವೃತ್ತಿಗಳಲ್ಲಿ ಪಾಲಿಸುತ್ತ ಬಂದಿದ್ದೇನೆ.
ನನಗೆ ಬೋಧನೆ ತುಂಬ ಇಷ್ಟ. ಅರವತ್ತೂ ನಿಮಿಷಗಳನ್ನು ಸಾರ್ಥಕಗೊಳಿಸಲು ನಾನು ಪೂರ್ವಸಿದ್ಧತೆಯೊಂದಿಗೇ ವರ್ಗಕೋಣೆಯನ್ನು ಪ್ರವೇಶಿಸುತ್ತೇನೆ. ಇದು ನನ್ನ ಪ್ರಾಧ್ಯಾಪಕರಾದ ಪ್ರೊ.ಬಿ.ಟಿ. ಸಾಸನೂರ ಅವರಿಂದ ಬಂದ ಬಳುವಳಿಯಾಗಿದೆ. ವರ್ಗ ಪ್ರಾರಂಭವನ್ನು ಸೂಚಿಸುವ ಗಂಟೆಯ ಧ್ವನಿಯೊಂದಿಗೇ ನಾನು ಕೋಣೆಯನ್ನು ಪ್ರವೇಶಿಸಿ, ಬೋಧನೆಗೆ ಇಳಿಯುತ್ತೇನೆ. ಅದು ಬಂಗಾರವನ್ನು ಶುದ್ಧೀಕರಿಸುವ ಬೆಂಕಿಯಾಗಿ ಕಂಡಿದೆ. ಹೀಗಾಗಿ ನನ್ನನ್ನು ಬೆಳೆಸಿದ ಒಂದು ಮುಖ್ಯ ನೆಲೆ ವರ್ಗಕೋಣೆಯೆಂದು ತಿಳಿಸಿದ್ದೇನೆ.
ಬೋಧನೆಗಿಂತ ಬಹುಶಿಸ್ತೀಯ ಬೋಧನೆ ನನಗೆ ತುಂಬ ಪ್ರೀತಿ. ಹೀಗಾಗಿ ಪಂಪಭಾರತವನ್ನು ಕಾವ್ಯವೌಲ್ಯ, ಜೀವನವೌಲ್ಯ, ಪ್ರೇರಣ-ಪ್ರಭಾವ ಇತ್ಯಾದಿ ಆಯಾಮಗಳಿಂದ ಮುನ್ನಡೆಸಿಕೊಂಡು ಹೋಗುತ್ತ, ಕೃತಿಯನ್ನು ಅದರ ಹಿಂದಿರುವ ಜೀವನವನ್ನು-ಇನ್ನೂ ಹಿಂದಿರುವ ಸತ್ಯವನ್ನು ಶೋಧಿಸುವುದು ನನ್ನ ಬೋಧನಪದ್ಧತಿಯಾಗಿದೆ. ಕಾವ್ಯವಿರಲಿ, ಶಾಸ್ತ್ರವಿರಲಿ, ಬೋಧನೆಯಲ್ಲಿ ಇನ್ನೊಬ್ಬರ ಅನುಭವಗಳನ್ನು ನಾನು ಬಳಸಿಕೊಳ್ಳುವುದು ತೀರ ಕಡಿಮೆ. ನನ್ನ ಅನುಭವ ಆಲೋಚನೆಗಳನ್ನೇ ವರ್ಗದಲ್ಲಿ ನಾನು ಮೂರ್ತಗೊಳಿಸುತ್ತೇನೆ. ಹೀಗಾಗಿ ಇನ್ನೊಬ್ಬರ ಕೃತಿಗಳಿಗಿಂತ ಭಿನ್ನರೀತಿಯಲ್ಲಿ ಗ್ರಂಥಸಂಪಾದನಶಾಸ್ತ್ರ, ಸಂಶೋಧನಶಾಸ್ತ್ರ, ನಾಮಶಾಸ್ತ್ರ ಕೃತಿಗಳನ್ನು ರಚಿಸುವುದು ನನಗೆ ಸಾಧ್ಯವಾಯಿತು. ಇವುಗಳಲ್ಲಿ ಯಾರದು ಸರಿ? ಎಷ್ಟು ಸರಿ? ಎಂಬುದನ್ನು ವಿದ್ವಾಂಸರು ನಿರ್ಣಯಿಸಬೇಕಾಗಿದೆ.
ಪಠ್ಯ ಕೈಯಲ್ಲಿ ಇದ್ದರೆ, ಅದು ನನಗೆ ಒಂದು ನೆವ. ನಾನೇ ಪಠ್ಯವಾಗಿ ಬಿಡುವುದು ನನ್ನ ಸ್ವಭಾವ. ಈ ಬಗೆಯ ಅದ್ವೈತಸ್ಥಿತಿಯಲ್ಲಿ ನಿಂತು, ನಾನು ಸುಖದ ಕ್ಷಣಗಳನ್ನು ಅನುಭವಿಸುವುದು ವರ್ಗಕೋಣೆಯಲ್ಲಿ, ವಿದ್ಯಾರ್ಥಿಗಳ ಜೊತೆಯಲ್ಲಿ. ಹೀಗಾಗಿ ಈ ವರೆಗಿನ 30 ವರ್ಷಗಳ ಕಾಲಾವಧಿಯಲ್ಲಿ ರಜೆಯ ದಿನಗಳನ್ನು ಹೊರತುಪಡಿಸಿ. ನಾನು ವರ್ಗಬೋಧನೆಯನ್ನು ಒಂದು ಸಲವೂ ತಪ್ಪಿಸಿಕೊಂಡಿಲ್ಲ. ನನ್ನ ಈ ರೀತಿ ಒಂದು ನೀತಿಯಾಗಿ ಬೆಳೆದು, Habit is the second personality ಎಂಬಂತೆ ಅದು ನನ್ನ ಶಿಕ್ಷಕ ವ್ಯಕ್ತಿತ್ವವಾಗಿ ರೂಪಗೊಂಡಿದೆ. ನನ್ನ ವಿದ್ಯಾರ್ಥಿಗಳು ನನ್ನ ನಿಷ್ಠುರತೆ- ಅತಿರೇಕಗಳನ್ನು ಕೆಲವೊಮ್ಮೆ ಒಪ್ಪಲಿಕ್ಕಿಲ್ಲ. ವರ್ಗಬೋಧನೆಗೆ ಸಂಬಂಧಿಸಿದ ನನ್ನ ಈ ವರ್ತನೆಯನ್ನು ಮಾತ್ರ ಅವರು ಪ್ರೀತಿಸುತ್ತಲೇ ಬಂದಿದ್ದಾರೆ.
ಪಿಎಚ್.ಡಿ. ಮಾರ್ಗದರ್ಶನ, ನನಗೆ ಪ್ರೌಢವಿದ್ಯಾರ್ಥಿಗಳೊಂದಿಗೆ ನಡೆಸುವ ಮುಕ್ತ ಅಧ್ಯಯನವೆನಿಸಿದೆ. ಉತ್ತಮ ಪ್ರಬಂಧ ರೂಪಿಸುವುದೆಂದರೆ ವಿದ್ಯಾರ್ಥಿಯ ಜೊತೆಗೆ ಮಾರ್ಗದರ್ಶಕನೂ ಶೈಕ್ಷಣಿಕವಾಗಿ ಬೆಳೆಯುವುದು ಎಂಬ ಅನುಭವ ನನ್ನದಾಗಿದೆ. ಉಪೇಕ್ಷಿತ, ವೌಲಿಕ ವಿಷಯಗಳನ್ನು ಆಯ್ದುಕೊಂಡುದರಿಂದಾಗಿ ಶಾಸನಗಳಲ್ಲಿ ಕರ್ನಾಟಕದ ಸ್ತ್ರೀ ಸಮಾಜ, ಶಾಸನಗಳಲ್ಲಿ ಕರ್ನಾಟಕದ ವರ್ತಕವರ್ಗ, ಆರನೆಯ ವಿಕ್ರಮಾದಿತ್ಯನ ಶಾಸನಗಳು: ಒಂದು ಅಧ್ಯಯನ, ಶ್ರೀಕೃಷ್ಣ ಪಾರಿಜಾತ; ಒಂದು ಆಧ್ಯಯನ, ಕೊಡ್‌ಕಲ್ ಬಸವಣ್ಣ ; ಒಂದು ಅಧ್ಯಯನ, ಕುಮಾರವ್ಯಾಸನ ರೂಪಕಗಳು; ಒಂದು ಅಧ್ಯಯನ ಇತ್ಯಾದಿ ಪಿಎಚ್.ಡಿ ಪ್ರಬಂಧಗಳು ನನ್ನ ಮಾರ್ಗದರ್ಶನದಲ್ಲಿ ಬೆಳಕು ಕಂಡಿವೆ.
ವೃತ್ತಿಯಲ್ಲಿ ಬೋಧಕನಾಗಿರುವ ನಾನು ಪ್ರವೃತ್ತಿಯಲ್ಲಿ ಬೆಳೆದುದು ಸಂಶೋಧಕನಾಗಿ, ಆದರೆ ಮೂಲತ: ನನ್ನದು ಸೃಜನಶೀಲ ಮನಸ್ಸು. ಡಾ. ಆರ್.ಸಿ ಹಿರೇಮಠ ಅವರ ಪರಿಸರದಲ್ಲಿ ವಿದ್ಯಾರ್ಥಿ ಜೀವನವನ್ನು ರೂಪಿಸಿಕೊಳ್ಳಬೇಕಾಗಿ ಬಂದ ಕಾರಣ, ಅವರ ವಿದ್ವತ್ತು ಕವಿಯಾಗಲಿದ್ದ ನನಗೆ ಸಂಶೋಧಕನ ದಾರಿ ತೋರಿಸಿತು. ವೃತ್ತಿಜೀವನ ಪ್ರಾರಂಭಿಸಿದ ಹೊಸದರಲ್ಲಿ ಕವಿಯಾಗಿರಬೇಕೋ? ಸಂಶೋಧಕನಾಗಬೇಕೋ? ಎಂಬ ಎರಡು ದಾರಿಗಳು ನನ್ನ ಮುಂದೆ ತೆರೆದುಕೊಂಡಿದ್ದವು. ಆದರೆ ಅಂದಿನ ಧಾರವಾಡದ ವಾತಾವರಣವು ನನ್ನನ್ನು ಕವಿಯಾಗಿ ಬೆಳೆಯಗೊಡಲಾರದೆಂದೇ ಸ್ಪಷ್ಟವಾಯಿತು. ಆಕಸ್ಮಿಕ ಆಯ್ಕೆ ಎನಿಸಿದ್ದ ಸಂಶೋಧನೆ ಆಗ ಅನಿವಾರ್ಯವಾಗಿ ಪರಿಣಮಿಸಿತು. ಆರಂಭದ ಆ ದಿನಗಳಲ್ಲಿ ಅನೇಕ ಜನ ಹಿರಿಯ ಸಂಶೋಧಕರ ಆದರ್ಶದಲ್ಲ್ಲಿ, ಅದರಲ್ಲಿಯೂ ಡಾ. ಎಂ. ಚಿದಾನಂದಮೂರ್ತಿ ಅವರ ಆಕರ್ಷಣೆಯಲ್ಲಿ, ನಾನು ಸಂಶೋಧನೆಯನ್ನು ಒಂದು ಗಂಭೀರವ್ರತವೆಂದು ಸ್ವೀಕರಿಸಿದೆನು.
ನಾವು ‘‘ಶಬ್ದಮಣಿ ದರ್ಪಣ’’ ಸಂಗ್ರಹಿಸುತ್ತಲಿದ್ದ ಸಂದರ್ಭ. ನನಗೆ ತಿಳಿದಂತೆ ಸಂಗ್ರಹಿಸಿದೆ. ಹೊಳೆದಂತೆ ಹೊಸಗನ್ನಡ ವೃತ್ತಿ ಬರೆದೆ. ಲೋಕಸೇವಾ ಆಯೋಗದ ಸದಸ್ಯರಾಗಿದ್ದ ಬಿ.ಟಿ.ಯವರಿಗೆ ಬಿಡುವಿರಲಿಲ್ಲ. ಒಂದು ವಾರ ಬೆಂಗಳೂರಿನಲ್ಲಿ ಅವರ ಜೊತೆ ಕಾಲಕಳೆಯಬೇಕಾಯಿತು. ಹಗಲು-ರಾತ್ರಿ ಚರ್ಚೆ, ತಿದ್ದುಪಡಿ, ಆಗ ‘’ಶಾಸ್ತ್ರ ಶಿಸ್ತು’’ ಎಂದರೇನು? ಎಂಬುದು ನನಗೆ ಗೊತ್ತಾಯಿತು. ‘’ಚೆನ್ನಾಗಿ ಬರೆಯುವುದು ಬೇರೆ-ಸರಿಯಾಗಿ ಬರೆಯುವುದು ಬೇರೆ’’ ಎಂಬ ತರಬೇತಿಯೂ ನನಗೆ ಪ್ರಾಪ್ತವಾಯಿತು. ನಾನು ಬರೆದ ಅರ್ಥಗಳಿಗೆ ಮೆಚ್ಚುಗೆ ಸೂಚಿಸುತ್ತ, ಮಧ್ಯ ಮಧ್ಯ ನನ್ನ ವಾದವನ್ನು ಮೃದುವಾಗಿ ಮುರಿಯುತ್ತ, ಕೆಲವೊಮ್ಮೆ ತಮ್ಮ ಸೋಲನ್ನ್ನು ಒಪ್ಪಿಕೊಳ್ಳುತ್ತಲಿದ್ದ ಆ ದಿನಗಳು ವಿದ್ವತ್ತಿನ ಕ್ರೀಡೆಯಂತೆ ಕಳೆದವು. ‘’ಜ್ಞಾನದ ಮುಂದೆ ಯಾರೂ ದೊಡ್ಡವರಲ್ಲ’’ ಎಂಬ ಅವರ ನಿಲುವು, ಈ ಮೊದಲು ವಿಜಾಪುರ ಕಾಲೇಜು ದಿನಗಳಲ್ಲಿಯೇ ನನ್ನ ಗಮನಕ್ಕೆ ಬಂದಿದ್ದಿತು.
ಎರಡನೆಯ ವರ್ಷದ ಕ್ಲಾಸು ಕಾವ್ಯಮಂಜರಿ ಪಠ್ಯದ ‘‘ಬಿಜ್ಜಮಹಾದೇವಿ ತ್ರಿಪದಿ’’ ಕಲಿಸುತ್ತಿದ್ದರು.
ರಂಜಣಗಿ ಅಗ್ಗವಣಿ ಮಂಜು ಹರಿಯಲು ಕಾಸಿ
ನಂಜುಂಡ ನಿನ್ನ ಎರದೇನು ಮಗನಾಗು
ಕೆಂಜೆಡೆಯ ಹಿಕ್ಕಿ ಹೆಡಸೊಗೆದು॥

ಸ್ಫುಟವಾಗಿ ಓದುವುದು, ನಿರ್ದಿಷ್ಟ ಅರ್ಥ ಹೇಳುವುದು, ಅನ್ವಯಿಕ ವಿಮರ್ಶಾ ಮಾದರಿಯಲ್ಲಿ ಎಲ್ಲ ಮಗ್ಗಲುಗಳಿಂದ ವ್ಯಾಖ್ಯಾನಿಸುವುದು. ಇದು ಬಿ.ಟಿ.ಯವರ ಬೋಧನಾ ಪದ್ಧತಿ. ಓದಿನ ಗತ್ತಿನಲ್ಲಿಯೇ ಅರ್ಥ ಮತ್ತು ಅರ್ಥ ಪರಂಪರೆಗಳು ಅವತರಿಸುತ್ತಿದ್ದವು. ಆಮೇಲೆ ಐತಿಹಾಸಿಕ ತೌಲನಿಕ ಇತ್ಯಾದಿ ಕ್ರಮಗಳನ್ನು ಅನ್ವಯಿಸಿ ಮಾತಾಡತೊಡಗಿದರೆ ಪ್ರತಿನಿಮಿಷವೂ ಹೊಸ ಸಂಸ್ಕಾರ. ಬೆಲ್ ಬಾರಿಸಿದಾಗಲೇ ವಿದ್ಯಾರ್ಥಿಗಳಿಗೆ ಸ್ವಪ್ನಭಂಗದ ಅನುಭವ. ಮೇಲಿನ ಪದ್ಯದ ‘‘ಅಗ್ಗವಣಿ ಮಂಜು ಹರಿಯಲು ಕಾಸಿ’’ ಎಂಬುದಕ್ಕೆ ತಂಪು ನೀಗಿ ಬೆಚ್ಚಗಾಗುವಂತೆ ನೀರು ಕಾಸಿ’’ ಎಂದು ಅರ್ಥ ಹೇಳಿದರು. ವಿದ್ಯಾರ್ಥಿಯಾದ ನಾನು ‘‘ಸರ್, ಹಳ್ಳಿಯಲ್ಲಿ ಅರುಣೋದಯಕ್ಕೆ ಪರ್ಯಾಯವಾಗಿ ಮಂಜು ಹರಿಯುವುದು ಶಬ್ದ ಬಳಸುತ್ತಾರೆ. ನಸುಕಿನಲ್ಲಿಯೇ ನೀರನ್ನು ಕಾಸಿ ಕೂಡನ್ನು ಎರೆಯುವ ಅರ್ಥ ಇಲ್ಲಿರಬಹುದೇ?’’ ಎಂದು ಕೇಳಿದೆ. ವಿದ್ಯಾರ್ಥಿಗಳು ನನ್ನನ್ನೇ ನೋಡತೊಡಗಿದರು. ಗುರುಗಳು ‘‘ಸೋತವನು ತಾವಲ್ಲ, ಗೆದ್ದವನು ನಾನು’’ ಎಂಬ ಘನತೆಯಿಂದ ನನ್ನನ್ನು ನೋಡಿದರು. ‘‘ಇದು ತ್ರಿಪದಿ ಗ್ರಾಮೀಣ ಬಂಧ. ಗ್ರಾಮೀಣ ನುಡಿಗಟ್ಟು ಬಳಸಿರುವಂತಿದೆ. ಸರಿಯಾದ ಅರ್ಥ...’’ ಎಂದು ಮುಂತಾಗಿ ವಿವರಣೆ ನೀಡಿ ಪ್ರೋತ್ಸಾಹಿಸಿದರು. ಮುಂದೆಯೂ ಭೆಟ್ಟಿಯಾದಾಗಲೆಲ್ಲ ನಾನು ಗೆದೆಯಬೇಕೆಂದೇ, ಗೆದೆಯುವ ತರಬೇತಿ ಪಡೆಯಬೇಕೆಂದೇ ಪದೇ ಪದೇ ನನ್ನನ್ನು ಭಾಷಿಕವಾಗಿ, ಸಾಹಿತ್ಯಿಕವಾಗಿ ಕೆಣಕುತ್ತಿದ್ದರು. ಕ್ವಚಿತ್ತಾಗಿ ಭಿನ್ನಮತ ತಾಳುತ್ತಿದ್ದರೂ ಸಹಮತಕ್ಕೆ ಬರುತ್ತಿದ್ದುದೇ ಹೆಚ್ಚು.
ವ್ಯಕ್ತಿಯ ಬೆಳವಣಿಗೆಗೆ ಪ್ರೀತಿಯಷ್ಟೇ ಮುಖ್ಯವಾದುದು ವಿರೋಧ. ನಾನು ಪ್ರೀತಿಯಿಂದ ಒಂದು ಅಡಿ ಬೆಳೆದರೆ, ವಿರೋಧದಿಂದ ಎರಡು ಅಡಿ ಬೆಳೆದಿದ್ದೇನೆ. ಶಂಬಾ ಅವರೂ ಬೆಳೆದುದು ಹೀಗೆಯೇ. ಇದಕ್ಕೆ ಕಾರಣ, ನಿಜವಾದ ಸಂಶೋಧಕನು ಬರಹದಂತೆ ಬದುಕಿನಲ್ಲಿಯೂ ಅಸತ್ಯದ ಕೂಡ ಒಪ್ಪಂದ ಮಾಡಿಕೊಳ್ಳದ ಹಟಮಾರಿಯಾಗಿರುವುದು. ಇಂಥ ಸಂದರ್ಭಗಳಲ್ಲಿ ಎಷ್ಟೇ ಗಾಸಿಯಾದರೂ, ಭೌತಿಕ ಹಾನಿಗೆ ಒಳಗಾದರೂ ಸಂಶೋಧನೆಯ ಬಗೆಗಿನ ಅಂತರ್ಮುಖತೆಯನ್ನು ಅವನು ಕಳೆದುಕೊಳ್ಳಬಾರದು. ಇದು ನನ್ನ ಸಂಶೋಧನೆಯ ಜೀವನದೃಷ್ಟಿಯಾಗಿದೆ.
   ಸಂಶೋಧಕನ ನಿತ್ಯ ಒಡನಾಟ, ಸತ್ಯದ ಕೂಡ ಸತ್ಯವನ್ನೇ ಹೇಳುತ್ತೇನೆ ಸತ್ಯವನ್ನಲ್ಲದೆ ಬೇರೆ ಏನನ್ನೂ ಹೇಳುವುದಿಲ್ಲ ಎಂಬ ಧೋರಣೆ ಬರವಣಿಗೆಯಲ್ಲಿ ಬೆಳೆದು, ಅವನ ಬದುಕಿನಲ್ಲಿಯೂ ಅದು ಇಳಿಯುವುದೆಂದು ಕಾಣುತ್ತದೆ. ಇದರಿಂದ ಅವನು ಪರಿಸರಕ್ಕೆ ನಿಷ್ಠುರನಾಗುತ್ತಾನೆ: ಪರಿಸರದಿಂದ ಆಗಾಗ ಹಿಂಸೆಗೆ ಗುರಿಯಾಗುತ್ತಾನೆ. ಶೈಕ್ಷಣಿಕ ವಲಯದ ಅವನ ಸಂಶೋಧನೆಯನ್ನು ಸಾಮಾಜಿಕ ವಲಯಕ್ಕೆ, ಅಲ್ಲಿಂದ ಧಾರ್ಮಿಕ ವಲಯಕ್ಕೆ ತಳ್ಳಿದರೆ ಆ ಹಿಂಸೆಯ ಪ್ರಮಾಣ ಇನ್ನೂ ಹೆಚ್ಚುತ್ತದೆ. ಇಂಥ ಒಂದು ಅಗ್ನಿದಿವ್ಯ ಘಟನೆಯನ್ನು ನಾನು ದಾಟಿ ಬಂದುದು ನಿಮಗೆಲ್ಲ ಗೊತ್ತೇ ಇದೆ. ಆದರೆ ‘‘ಅಲ್ಲಾ ಕೇ ಘರ ಮೇ ದೇರ ಹೈ, ಅಂಧೇರೆ ನಹೀ’’ ಎಂಬಂತೆ ಹಿಂದಿನ ಮೂರು ಪುರಸ್ಕ್ಕಾರಗಳನ್ನೂ ನಾನು ಸಮಚಿತ್ತದಿಂದ ಸ್ವೀಕರಿಸುತ್ತ ಬಂದಿದ್ದೇನೆ, ಸಂಶೋಧಕನ ಜೀವನದಲ್ಲಿ ಇವೆಲ್ಲ ಸಹಜವೆಂದೇ ಅರ್ಥಮಾಡಿಕೊಂಡಿದ್ದೇನೆ.
20 ಜನರಿರುವ ಅವಿಭಕ್ತ ಒಕ್ಕಲಿಗ ಕುಟುಂಬದಲ್ಲಿ ಹುಟ್ಟಿ ಬೆಳೆದವ ನಾನು. ಕೆಲಸವನ್ನು ಮುಂದೆ ಇಟ್ಟು, ಹೆಸರನ್ನು ಹಿಂದೆ ಇಟ್ಟು ದುಡಿಯುವ ಮೂಲಕ ಕುಟುಂಬದ ಕೀರ್ತಿಯನ್ನು ಎತ್ತಿ ಹಿಡಿಯುವುದು ಅಲ್ಲಿಯ ಸಂಸ್ಕೃತಿ. ಈ ಸಮೂಹ ಸಂಸ್ಕೃತಿಯಲ್ಲಿ ಹುಟ್ಟಿ ಬೆಳೆದವನಾದುದರಿಂದ ‘‘ಕನ್ನಡ ಅಧ್ಯಯನಪೀಠ ಕುಟುಂಬದ ಬೆಳವಣಿಗೆಯೇ ನನ್ನ ಬೆಳವಣಿಗೆ’’ ಎಂಬ ಭಾವ ಮೊದಲಿನಿಂದಲೂ ನನ್ನಲ್ಲಿ ಗಹನವಾಗಿ ಬೆಳೆಯಿತು. ಹೀಗಾಗಿ ನನ್ನ ಗುರುಗಳಾದ ಡಾ. ಹಿರೇಮಠ ಅವರು ಕಟ್ಟಿದ ಕನ್ನಡ ವಿಭಾಗವನ್ನು ನೂರು ಅಂದ, ನೂರು ಚಂದಗಳಿಂದ ಕಟ್ಟಬೇಕೆಂದು ಅನೇಕ ಯೋಜನೆಗಳ ಕನಸನ್ನು ಕಣ್ಣಲ್ಲಿ ತುಂಬಿಕೊಂಡು ಬೆಳೆದೆ. ಆದರೆ ನಾನು ಮುಖ್ಯಸ್ಥನಾಗುವ ಹೊತ್ತಿಗೆ ಮುಖ್ಯಸ್ಥರ ಆವರ್ತನ ಪದ್ಧತಿ ಅಸ್ತಿತ್ವಕ್ಕೆ ಬಂದು ನನ್ನ ಕನಸುಗಳೆಲ್ಲ ಕರಗಿ ಹೋದವು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ