×
Ad

ಪರಮಾಣು ಶಕ್ತ ದೇಶಗಳ ನಡುವಿನ ಸಂಘರ್ಷವು ಇಡೀ ಜಗತ್ತಿಗೆ ಮಾರಕ: ಪಾಕ್ ಪ್ರಧಾನಿ ಇಮ್ರಾನ್ ಖಾನ್

Update: 2019-08-31 23:25 IST

ಇಸ್ಲಾಮಾಬಾದ್, ಆ. 31: ‘‘ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿದೆಯೆನ್ನಲಾದ ಮಾನವಹಕ್ಕು ದಮನದಿಂದ ಪ್ರಪಂಚದ ಗಮನವನ್ನು ಬೇರೆಡೆಗೆ ಸೆಳೆಯಲು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲೆ ಭಾರತ ದಾಳಿ ನಡೆಸಿದರೆ ಪಾಕಿಸ್ತಾನವು ತಕ್ಕ ಪ್ರತಿಕ್ರಿಯೆಯನ್ನು ನೀಡುವುದು’’ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಶುಕ್ರವಾರ ಹೇಳಿದ್ದಾರೆ.

‘‘ಪ್ರತಿಯೊಂದು ಇಟ್ಟಿಗೆಯನ್ನು ಕಲ್ಲಿನಿಂದ ಎದುರಿಸಲಾಗುವುದು’’ ಎಂದು ‘‘ಕಾಶ್ಮೀರದ ಜನತೆಗೆ ಬೆಂಬಲ ಸೂಚಿಸಲು’’ ಇಸ್ಲಾಮಾಬಾದ್‌ನಲ್ಲಿ ಏರ್ಪಡಿಸಲಾದ ಸಭೆಯೊಂದರಲ್ಲಿ ಮಾತನಾಡಿದ ಅವರು ಹೇಳಿದರು.

ಭಾರತ ಭಯಾನಕ ಸಂಗತಿಯೊಂದನ್ನು ಮಾಡಲಿದೆ ಎಂದು ನಾವು ಜಗತ್ತನ್ನು ಎಚ್ಚರಿಸುತ್ತಿದ್ದೇವೆ’’ ಎಂದರು. ‘‘ನರೇಂದ್ರ ಮೋದಿಯವರೇ, ನಾನು ನಿಮಗೆ ಹೇಳಬಯಸುತ್ತೇನೆ, ನಾನು ನಿಮಗೆ ತಕ್ಕುದಾದ ಉತ್ತರವನ್ನು ನೀಡುತ್ತೇವೆ. ನಮ್ಮ ಸಶಸ್ತ್ರ ಪಡೆಗಳು ಸಿದ್ಧವಾಗಿವೆ’’ ಎಂದು ಅವರು ನುಡಿದರು.

ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಭಾರತ ದಾಳಿ ನಡೆಸಬಹುದು ಎಂಬ ಬಗ್ಗೆ ನಾನು ಜಾಗತಿಕ ಸಮುದಾಯವನ್ನು ಎಚ್ಚರಿಸಿದ್ದೇನೆ ಎಂದು ಹೇಳಿದ ಅವರು, ಪರಮಾಣು ಶಕ್ತ ದೇಶಗಳಾದ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಯಾವುದೇ ಸಂಘರ್ಷವು ದಕ್ಷಿಣ ಏಶ್ಯಕ್ಕೆ ಸೀಮಿತವಾಗಿರುವುದಿಲ್ಲ ಎಂದರು.

‘‘ಪರಮಾಣು ಶಕ್ತ ದೇಶಗಳ ನಡುವಿನ ಯಾವುದೇ ಸಂಘರ್ಷವು ಇಡೀ ಜಗತ್ತಿಗೆ ಮಾರಕ ಎನ್ನುವುದನ್ನು ಅಂತರ್‌ರಾಷ್ಟ್ರೀಯ ಸಮುದಾಯ ತಿಳಿದುಕೊಳ್ಳಬೇಕು’’ ಎಂದು ಹೇಳಿದ ಅವರು, ಸೆಪ್ಟಂಬರ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ತಾನು ಈ ವಿಷಯವನ್ನು ಪ್ರಸ್ತಾಪಿಸುತ್ತೇನೆ ಎಂದರು.

370 ಹಿಂದೆ ಪಡೆದರೆ ಮಾತ್ರ ಭಾರತದ ಜೊತೆ ಮಾತುಕತೆ

  ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸುವ ನಿರ್ಧಾರವನ್ನು ಭಾರತ ಹಿಂದಕ್ಕೆ ಪಡೆದುಕೊಂಡರೆ, ಅಲ್ಲಿನ ನಿರ್ಬಂಧಗಳನ್ನು ಕೊನೆಗೊಳಿಸಿದರೆ ಹಾಗೂ ಸೇನೆಯನ್ನು ಬರಾಕ್‌ಗಳಿಗೆ ಕಳುಹಿಸಿದರೆ ಮಾತ್ರ ಅದರ ಜೊತೆಗೆ ಮಾತುಕತೆ ನಡೆಯಬಹುದು ಎಂದು ‘ನ್ಯೂಯಾರ್ಕ್ ಟೈಮ್ಸ್’ನಲ್ಲಿ ಬರೆದ ಲೇಖನವೊಂದರಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

‘‘ಕಾಶ್ಮೀರದ ಕುರಿತು ತೆಗೆದುಕೊಂಡಿರುವ ನಿರ್ಧಾರದಿಂದ ಭಾರತ ಹಿಂದೆ ಸರಿಯುವಂತೆ ಮಾಡಲು ಜಗತ್ತು ವಿಫಲವಾದರೆ, ಅದರ ಪರಿಣಾಮಗಳನ್ನು ಇಡೀ ಜಗತ್ತು ಅನುಭವಿಸುತ್ತದೆ. ಎರಡು ಪರಮಾಣು ಶಕ್ತ ದೇಶಗಳು ಸೇನಾ ಸಂಘರ್ಷದತ್ತ ಮುಖ ಮಾಡಿವೆ’’ ಎಂದು ಅವರು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News