×
Ad

ಚೀನಾ: ಜಿನ್‌ಪಿಂಗ್ ಬಗ್ಗೆ ವರದಿ ಮಾಡಿದ್ದ ಪತ್ರಕರ್ತನ ಉಚ್ಚಾಟನೆ

Update: 2019-08-31 23:27 IST

ಬೀಜಿಂಗ್, ಆ. 31: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಆ ದೇಶದ ಕಮ್ಯುನಿಸ್ಟ್ ಪಾರ್ಟಿ ರಾಜಕೀಯದ ಬಗ್ಗೆ ವ್ಯಾಪಕವಾಗಿ ವರದಿ ಮಾಡಿರುವ ‘ವಾಲ್ ಸ್ಟ್ರೀಟ್ ಜರ್ನಲ್’ನ ಬೀಜಿಂಗ್ ವರದಿಗಾರನ ಪತ್ರಿಕಾ ಸ್ವಾತಂತ್ರವನ್ನು ನವೀಕರಿಸಲು ಚೀನಾದ ಅಧಿಕಾರಿಗಳು ನಿರಾಕರಿಸಿದ್ದಾರೆ. ಈ ಮೂಲಕ ಅವರನ್ನು ವಾಸ್ತವಿಕವಾಗಿ ಚೀನಾದಿಂದ ಉಚ್ಚಾಟಿಸಿದಂತಾಗಿದೆ.

ಸಿಂಗಾಪುರದ ವರದಿಗಾರ ಚುನ್ ಹಾನ್ ವೊಂಗ್ ಒಂದು ತಿಂಗಳ ಹಿಂದೆ, ಇನ್ನೋರ್ವ ‘ವಾಲ್ ಸ್ಟ್ರೀಟ್ ಜರ್ನಲ್’ ವರದಿಗಾರನೊಂದಿಗೆ ಸೇರಿ, ಚೀನಾ ಅಧ್ಯಕ್ಷ ಕ್ಸಿ ಯ ಸೋದರ ಸಂಬಂಧಿಯೋರ್ವ ಜೂಜು, ಕಪ್ಪುಹಣ ಬಿಳುಪು ಮತ್ತು ಸಂಘಟಿತ ಅಪರಾಧದೊಂದಿಗೆ ನಂಟು ಹೊಂದಿರುವ ಆರೋಪಕ್ಕೆ ಸಂಬಂಧಿಸಿ ಆಸ್ಟ್ರೇಲಿಯ ನಡೆಸಿದ ತನಿಖೆಯ ವಿವರಗಳನ್ನೊಳಗೊಂಡ ವರದಿಯನ್ನು ತಯಾರಿಸಿದ್ದರು.

‘‘ಚೀನಾದ ಹೆಸರು ಕೆಡಿಸುವ ಮತ್ತು ಅದರ ಮೇಲೆ ದಾಳಿ ನಡೆಸುವ ಕೆಲವು ವಿದೇಶಿ ಪತ್ರಕರ್ತರ ಕೆಟ್ಟ ಉದ್ದೇಶವನ್ನು ನಾವು ದೃಢವಾಗಿ ವಿರೋಧಿಸುತ್ತೇವೆ’’ ಎಂದು ಚೀನಾದ ವಿದೇಶ ಸಚಿವಾಲಯ ಹೇಳಿದೆ.

‘‘ಇಂಥ ಪತ್ರಕರ್ತರು ಸ್ವಾಗತಾರ್ಹರಲ್ಲ’’ ಎಂದು ಅದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News