ಎನ್‌ಆರ್‌ಸಿ: ಬೆಟ್ಟ ಅಗೆದು ಇಲಿ ಹಿಡಿದವರು...

Update: 2019-09-02 04:42 GMT

ಸರಕಾರ ಏಕಾಏಕಿ ನೋಟು ನಿಷೇಧ ಘೋಷಣೆ ಮಾಡಿದಾಗ ‘ದೇಶದ ಕಪ್ಪು ಹಣವೆಲ್ಲ ಬಹಿರಂಗವಾಗಿ ದೇಶದ ಆರ್ಥಿಕತೆ ಸುಭಿಕ್ಷವಾಗುತ್ತದೆ’ ಎಂದೇ ಜನರು ಭಾವಿಸಿದ್ದರು. ಅದಕ್ಕಾಗಿ ದೇಶದ ಜನರು ಅಪಾರ ನಷ್ಟಗಳನ್ನು, ಸಂಕಟಗಳನ್ನು ಸಹಿಸಿಕೊಂಡರು. ಆದರೆ ಕಪ್ಪು ಹಣ ಹೊರಗೆ ಬರಲೇ ಇಲ್ಲ. ಬದಲಿಗೆ ಅರ್ಥವ್ಯವಸ್ಥೆ ಅಸ್ತವ್ಯಸ್ತವಾಯಿತು. ಸಣ್ಣ ಉದ್ದಿಮೆಗಳು ಮುಚ್ಚಿದವು. ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿದವು. ನೋಟು ನಿಷೇಧದಿಂದ ಬ್ಯಾಂಕ್ ಅವ್ಯವಹಾರಗಳಲ್ಲಿ ಇಳಿಕೆಯಾಗುತ್ತದೆ, ಭಯೋತ್ಪಾದನೆ ನಿಲ್ಲುತ್ತದೆ ಎಂಬ ಸರಕಾರದ ಭರವಸೆಗಳೆಲ್ಲ ಹುಸಿಯಾಯಿತು.

ನೋಟು ನಿಷೇಧಕ್ಕಾಗಿ ಸರಕಾರ ಅಪಾರ ಹಣವನ್ನು ವ್ಯಯ ಮಾಡಿತಾದರೂ ಅದರ ಪ್ರತಿಯಾಗಿ ಎಳ್ಳಷ್ಟು ಲಾಭವೂ ಬರಲಿಲ್ಲ. ಯಾವುದೇ ಆರ್ಥಿಕ ತಜ್ಞರ ಮಾರ್ಗದರ್ಶನವಿಲ್ಲದೆ, ಆರೆಸ್ಸೆಸ್ ಮತ್ತು ಅಂಬಾನಿಯಂತಹ ಕಾರ್ಪೊರೇಟ್ ದನಿಗಳ ಮೂಗಿನ ನೇರಕ್ಕೆ ನಡೆದ ಈ ನೋಟು ನಿಷೇಧ ದೇಶವನ್ನು ಎಂತಹ ಗಂಡಾಂತರಕ್ಕೆ ತಳ್ಳಿತ್ತು ಎನ್ನುವುದಕ್ಕೆ ನಾವು ಸಾಕ್ಷಿಯಾಗಿದ್ದೇವೆ. ಇದೀಗ ಅಸ್ಸಾಮಿನಲ್ಲಿ ಬಿಡುಗಡೆಗೊಂಡಿರುವ ಎನ್‌ಆರ್‌ಸಿ ಅಥವಾ ಪೌರತ್ವ ನೋಂದಣಿಗೂ ನೋಟು ನಿಷೇಧದ ಗತಿಯೇ ಒದಗಿದೆ. ಇಲ್ಲಿ ನೋಟಿನ ಬದಲಿಗೆ ನಿರ್ದಿಷ್ಟ ಸಮುದಾಯದ ಜನರನ್ನೇ ದೇಶದಿಂದ ನಿಷೇಧಿಸಲು ಸರಕಾರ ಸಂಚು ಹೂಡಿತ್ತು. ಅಸ್ಸಾಂ ಸೇರಿದಂತೆ ಈಶಾನ್ಯದಲ್ಲಿ ಕೋಟ್ಯಂತರ ಅಕ್ರಮ ವಲಸಿಗರು ನೆಲೆಸಿದ್ದಾರೆ ಎನ್ನುವ ಆರೆಸ್ಸೆಸ್ ಹರಡುತ್ತಾ ಬಂದಿದ್ದ ವದಂತಿಯ ತಳಹದಿಯಲ್ಲಿ ನಡೆದ ಈ ಎನ್‌ಆರ್‌ಸಿ ಪಟ್ಟಿಯನ್ನು ಇದೀಗ ಉಗುಳಲೂ-ನುಂಗಲೂ ಆಗದೆ ಸರಕಾರ ಏದುಸಿರು ಬಿಡುತ್ತಿದೆ. ಹಲವು ಕೋಟಿಗಳನ್ನು ಚೆಲ್ಲಿ, ನಡೆಸಿದ ಎನ್‌ಆರ್‌ಸಿಯಿಂದ ಈ ದೇಶಕ್ಕಾಗಿರುವ ನಿಜವಾದ ಲಾಭವಾದರೂ ಏನು ? ಎಂಬ ಪ್ರಶ್ನೆಗೆ ಉತ್ತರ ನೀಡುವವರೇ ಇಲ್ಲವಾಗಿದ್ದಾರೆ. ಎನ್‌ಆರ್‌ಸಿ ಪಟ್ಟಿಯ ವಿರುದ್ಧ ಸ್ವತಃ ಅಸ್ಸಾಮಿನ ಬಿಜೆಪಿಯೇ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದೆ. ಇನ್ನು ಅಲ್ಲಿನ ಬಿಜೆಪಿಯೇತರ ಜನಸಾಮಾನ್ಯರ ಪಾಡು ಅದು ಹೇಗಿರಬಹುದು?

 ಸರಕಾರ ಬಿಡುಗಡೆಗೊಳಿಸಿರುವ ಎನ್‌ಆರ್‌ಸಿ ಪಟ್ಟಿಯಲ್ಲಿ 19 ಲಕ್ಷಕ್ಕೂ ಅಧಿಕ ಜನರು ಅತಂತ್ರರಾಗಿದ್ದಾರೆ. ಆದರೆ ಬಿಜೆಪಿ ಮತ್ತು ಆರೆಸ್ಸೆಸ್ ಯಾವ ವದಂತಿಗಳನ್ನು ಹುಟ್ಟು ಹಾಕಿತ್ತೋ ಅದು ಹುಸಿಯಾಗಿದೆ. 1979ರಲ್ಲಿ ಪೌರತ್ವ ನೋಂದಣಿಗಾಗಿ ಆಗ್ರಹ ಕೇಳಿ ಬಂದಾಗ, ಅಕ್ರಮ ವಲಸಿಗರ ಸಂಖ್ಯೆ ಕುರಿತಂತೆ ಇದ್ದ ಊಹೆಗಳು ಹುಸಿಯಾಗಿವೆ. ರಾಜೀವ್ ಗಾಂಧಿ ಸರಕಾರ 1985ರ ಅಸ್ಸಾಂ ಒಪ್ಪಂದದ ಭಾಗವಾಗಿ 1951ರ ಎನ್‌ಆರ್‌ಸಿಯನ್ನು ಮರುದೃಢೀಕರಿಸಲು ಒಪ್ಪಿತ್ತು. ಇದಾದ ಕನಿಷ್ಠ ಮೂರು ದಶಕಗಳ ಬಳಿಕ ನಡೆಸಿರುವ ಮತ್ತು ಈಗಿನ ಪರಿಸ್ಥಿತಿಯಲ್ಲಿ ಎಲ್ಲ ರೀತಿಯಿಂದಲೂ ನಿರುಪಯೋಗಿ ಆಗಿರುವ ಎನ್‌ಆರ್‌ಸಿಯಲ್ಲಿ ಶೇ. 6ಕ್ಕಿಂತಲೂ ಕಡಿಮೆ ಜನರು ನೈಜ ಭಾರತೀಯರಲ್ಲ ಎನ್ನುವುದಷ್ಟೇ ತಿಳಿದು ಬಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆಗಳಿವೆ. ಕೋಟ್ಯಂತರ ವಲಸಿಗರಿದ್ದಾರೆ ಎನ್ನುವ ವದಂತಿಗಳನ್ನು ಮುಂದಿಟ್ಟು ನಡೆದ ಅಸ್ಸಾಂ ಚಳವಳಿಗೆ ಇದರಿಂದ ಭಾರೀ ಹಿನ್ನಡೆಯಾಗಿದೆ. 1,100 ಕೋಟಿ ರೂಪಾಯಿ ವೆಚ್ಚ ಮತ್ತು 62,000 ಸಿಬ್ಬಂದಿಯ ಮೂಲಕ ನಡೆಸಿದ ಈ ಎನ್‌ಆರ್‌ಸಿಯಿಂದ ಅನಗತ್ಯ ಗೊಂದಲ ಸೃಷ್ಟಿಯಾಗಿದೆ. ಅಮೂಲ್ಯ ಸಮಯ, ಸಂಪತ್ತು ನಷ್ಟವಾಗಿದೆ. ಬಿಜೆಪಿಯ ಹಿಂದುತ್ವ ಸಿದ್ಧಾಂತಕ್ಕೆ ಒಂದಿಷ್ಟು ಇಂಧನ ಸಿಕ್ಕಿತು ಎನ್ನುವುದು ಬಿಟ್ಟರೆ, ದೇಶಕ್ಕೆ ಯಾವ ಲಾಭವೂ ಆಗಿಲ್ಲ. ಎನ್‌ಆರ್‌ಸಿ ಮರುದೃಢೀಕರಣದ ಹಿಂದಿದ್ದ ಯೋಚನೆ, ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದಿರುವವರನ್ನು ಗುರುತಿಸುವುದೇ ಆಗಿತ್ತು. ತಮ್ಮ ಸಂಪನ್ಮೂಲ ಮತ್ತು ಲಾಭಗಳಲ್ಲಿ ಪಾಲು ಪಡೆಯುತ್ತಿರುವ ಹೊರಗಿನವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಅಸ್ಸಾಂ ನಾಗರಿಕರ ಬಹುಹಳೆಯ ಆಗ್ರಹ ಇದಾಗಿತ್ತು. ಇಲ್ಲಿ ಗಮನಿಸಬೇಕಾದುದೇನೆಂದರೆ, ಈ ಆಕ್ರೋಶ ಎಲ್ಲ ಹೊರಗಿನವರ ವಿರುದ್ಧವಿತ್ತು. ಆದರೆ ಬಿಜೆಪಿ ಮಾತ್ರ ಅದನ್ನು ಕೇವಲ ಮುಸ್ಲಿಂ ವಲಸಿಗರ ವಿರುದ್ಧ ಎಂದು ಬದಲಾಯಿಸಲು ಪ್ರಯತ್ನಿಸಿತು. ಇದೀಗ ಬಹಿರಂಗವಾಗಿರುವ ಶೇ. 6ರಷ್ಟಿರುವ ಅಕ್ರಮ ವಲಸಿಗರು ಅಸ್ಸಾಮಿನ ಅಸಹನೆ, ಆಕ್ರೋಶಗಳ ನೈಜತೆಯನ್ನೇ ಪ್ರಶ್ನಿಸುತ್ತಿವೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಈ ಸಂಖ್ಯೆ ಮತ್ತಷ್ಟು ಕಡಿಮೆಯಾಗಲಿದೆ ಎನ್ನುವುದು.

ಎರಡು ಕರಡು ಪಟ್ಟಿಗಳ ನಂತರ 40 ಲಕ್ಷ ಜನರನ್ನು ಕೈಬಿಡಲಾಗಿತ್ತು. ನಂತರ ನಡೆದ ಆಕ್ಷೇಪ ಮತ್ತು ಮರುಪರಿಶೀಲನೆ ಪ್ರಕ್ರಿಯೆಯಲ್ಲಿ 20 ಲಕ್ಷಕ್ಕೂ ಅಧಿಕ ಮಂದಿ ಪಟ್ಟಿಯಿಂದ ತಮ್ಮನ್ನು ತಪ್ಪಾಗಿ ಹೊರಗಿಡಲಾಗಿದೆ ಎನ್ನುವುದನ್ನು ಸಾಬೀತುಪಡಿಸಲು ಯಶಸ್ವಿಯಾದರು ಮತ್ತು ಅವರ ಹೆಸರುಗಳನ್ನು ಅಂತಿಮ ಪಟ್ಟಿಯಲ್ಲಿ ಸೇರಿಸಲ್ಪಟ್ಟಿವೆ. ಇದೀಗ ಹೊರ ಬಂದಿರುವ ಪಟ್ಟಿಯಲ್ಲಿ ಕಾರ್ಗಿಲ್‌ನಲ್ಲಿ ಹೋರಾಡಿದ ಯೋಧನ ಹೆಸರು ಸೇರಿದೆ. ಹಾಲಿ ಶಾಸಕನ ಹೆಸರೂ ಸೇರಿಕೊಂಡಿದೆ. ಹಾಗಿರುವಾಗ, ಈ ಪಟ್ಟಿಯೂ ಅಂತಿಮವಲ್ಲ ಎನ್ನುವುದನ್ನು ನಾವು ಸುಲಭವಾಗಿ ಗ್ರಹಿಸಬಹುದಾಗಿದೆ. ನ್ಯಾಯಾಲಯದ ಮೆಟ್ಟಿಲನ್ನೇರಿದ ಬಳಿಕ ಈ ಶೇಕಡವಾರು ಅಂಕಿ ಇನ್ನಷ್ಟು ಇಳಿಕೆಯಾಗಲಿದೆ. ಕನಿಷ್ಟ ಶೇ. 4ನ್ನು ತಲುಪುವ ಸಾಧ್ಯತೆಗಳಿವೆ. ಬಿಜೆಪಿಯ ಹಿಂದುತ್ವ ರಾಜಕಾರಣಕ್ಕೆ ಎನ್‌ಆರ್‌ಸಿ ದುರ್ಬಳಕೆಯಾಗಿದೆಯಾದರೂ, ಅಂತಿಮ ಫಲಿತಾಂಶ ಅದಕ್ಕೆ ತಿರುಗುಬಾಣವಾಗಿ ಪರಿಣಮಿಸಿದೆ.

ಒಂದು ವಿಷಯವನ್ನಂತೂ ನಾವು ಗಮನಿಸಬೇಕಾಗಿದೆ. ಈಗಾಗಲೇ ತಮ್ಮ ಪೌರತ್ವವನ್ನು ಸಾಬೀತುಪಡಿಸುವಲ್ಲಿ ವಿಫಲರಾಗಿರುವ ಶೇ. 90ರಷ್ಟು ವಿದೇಶಿಯರು ಕೂಡ ಇಂದು ನಿನ್ನೆ ಬಂದವರಲ್ಲ. ಅವರ ಮೂರು ತಲೆಮಾರು ಅಸ್ಸಾಮಿನಲ್ಲಿ ತಮ್ಮ ಬದುಕನ್ನು ಕಳೆದಿದೆ ಮತ್ತು ತಮ್ಮ ತಾಯ್ನೆಲವಾಗಿ ಅಸ್ಸಾಮನ್ನು ಪರಿಗಣಿಸಿದೆ. ಅವರೇನೂ ಈ ದೇಶಕ್ಕೆ ಉಗ್ರವಾದಿ ಚಟುವಟಿಕೆಗಳನ್ನು ನಡೆಸಲು ಬಂದವರಲ್ಲ. ಅಸ್ಸಾಮಿನ ಚಹಾದ ತೋಟ ಸೇರಿದಂತೆ ವಿವಿಧ ಎಸ್ಟೇಟುಗಳಲ್ಲಿ ಕೂಲಿ ಕಾರ್ಮಿಕರಾಗಿ ಬಂದು ಈ ನೆಲದವರೇ ಆಗಿ ಬದಲಾದವರು. ಈ ಅಂತಿಮ ಪಟ್ಟಿಯಲ್ಲಿ ಕೇವಲ ಮುಸ್ಲಿಮರು ಮಾತ್ರವಿಲ್ಲ, ಜೊತೆಗೆ ಬಂಗಾಳಿ ಹಿಂದೂಗಳು, ನೇಪಾಳಿಗಳು ಮತ್ತು ಅಗತ್ಯ ದಾಖಲೆಗಳನ್ನು ನೀಡಲು ವಿಫಲವಾದ ದೇಶೀಯ ಅಸ್ಸಾಮಿ ಬುಡಕಟ್ಟು ಜನಾಂಗದ ಕೆಲವರೂ ಸೇರಿದ್ದಾರೆ. ಇದರಿಂದ ಆತಂಕಗೊಂಡಿರುವ ಬಿಜೆಪಿ ಸದ್ಯ, ಪ್ರಮುಖವಾಗಿ ಬಾಂಗ್ಲಾದೇಶಕ್ಕೆ ಅಂಟಿಕೊಂಡಿರುವ ಭಾಗಗಳ ಜನರ ಮರುಪರಿಶೀಲನೆ ನಡೆಸಬೇಕು ಎಂದು ಸರ್ವೋಚ್ಚ ನ್ಯಾಯಾಲಯದ ಬಾಗಿಲು ಬಡಿಯುತ್ತಿದೆ. ಬಡ ಕೂಲಿಕಾರ್ಮಿಕರನ್ನು ಗುರಿಯಾಗಿಟ್ಟುಕೊಂಡು ತನ್ನ ‘ಹಿಂದುತ್ವ ರಾಜಕಾರಣ’ದ ಬೇರಿಳಿಸಲು ಹೊರಟ ಬಿಜೆಪಿ ಮತ್ತು ಆರೆಸ್ಸೆಸ್ ಅಸ್ಸಾಮಿನಲ್ಲಿ ಇಂಗು ತಿಂದ ಮಂಗನಂತಾಗಿದೆ. ಅಕ್ರಮ ವಲಸಿಗರನ್ನು ‘ಬಂಗಾಳ ಕೊಲ್ಲಿಗೆ ಎಸೆಯಲು ಯೋಗ್ಯವಾದ ಗೆದ್ದಲುಗಳು’ ಎಂದು ಅಮಿತ್ ಶಾ ಕರೆದಿದ್ದರು. ನಿಜ. ಅಮಿತ್ ಶಾ ಸರಕಾರ, ಬೆಟ್ಟವನ್ನು ಅಗೆದು ಇಲಿಯನ್ನೂ ಹಿಡಿಯದೆ ಒಂದಿಷ್ಟು ಗೆದ್ದಲುಗಳನ್ನಷ್ಟೇ ಹಿಡಿದು ಪೆಚ್ಚಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News