ಟೆಸ್ಟ್ ಕ್ರಿಕೆಟ್: ಧೋನಿಯ ಮತ್ತೊಂದು ದಾಖಲೆ ಮುರಿದ ಕೊಹ್ಲಿ

Update: 2019-09-03 03:56 GMT

ಹೊಸದಿಲ್ಲಿ, ಸೆ.3: ಭಾರತ ಟೆಸ್ಟ್ ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ ನಾಯಕ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ವೆಸ್ಟ್‌ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ 257 ರನ್‌ಗಳ ಭರ್ಜರಿ ಗೆಲುವಿನೊಂದಿಗೆ ಕೊಹ್ಲಿಯವರ ವರ್ಣರಂಜಿತ ಕ್ರಿಕೆಟ್ ಅಧ್ಯಾಯಕ್ಕೆ ಹೊಸ ಗರಿ ಸೇರ್ಪಡೆಯಾದಂತಾಗಿದೆ.

ಕಿಂಗ್‌ಸ್ಟನ್‌ನಲ್ಲಿ ಭಾರತ ಸಾಧಿಸಿದ ಗೆಲುವು ಕೊಹ್ಲಿ ನಾಯಕರಾಗಿ ಭಾರತಕ್ಕೆ ತಂದುಕೊಟ್ಟ 28ನೇ ಗೆಲುವಾಗಿದೆ. ಸಾಂಪ್ರದಾಯಿಕ ಕ್ರಿಕೆಟ್‌ನಲ್ಲಿ ಭಾರತದ ಯಶಸ್ವಿ ನಾಯಕ ಎನಿಸಿಕೊಂಡಿದ್ದ ಮಹೇಂದ್ರ ಸಿಂಗ್ ಧೋನಿ (27) ಅವರ ದಾಖಲೆಯನ್ನು ಕೊಹ್ಲಿ ಅಳಿಸಿಹಾಕಿದರು. ಧೋನಿ 60 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರೆ, ಕೊಹ್ಲಿ ಕೇವಲ 48 ಪಂದ್ಯಗಳಲ್ಲಿ ಈ ದಾಖಲೆ ಸ್ಥಾಪಿಸಿದರು.

ಉಳಿದಂತೆ 49 ಪಂದ್ಯಗಳ ಪೈಕಿ 21 ಪಂದ್ಯ ಗೆದ್ದುಕೊಟ್ಟ ಸೌರವ್ ಗಂಗೂಲಿ ಹಾಗೂ 47 ಪಂದ್ಯಗಳಲ್ಲಿ 14 ಪಂದ್ಯ ಗೆದ್ದುಕೊಟ್ಟ ಮುಹಮ್ಮದ್ ಅಝರುದ್ದೀನ್ ಯಶಸ್ವಿ ನಾಯಕರ ಪಟ್ಟಿಯಲ್ಲಿ ನಂತರದ ಸ್ಥಾನಗಳಲ್ಲಿರುವವರು.

468 ರನ್‌ಗಳ ಅಸಾಧ್ಯ ಗುರಿಯನ್ನು ಬೆನ್ನಟ್ಟಿದ ವೆಸ್ಟ್‌ಇಂಡೀಸ್ ಬ್ಯಾಟ್ಸ್‌ಮನ್‌ಗಳು ಪ್ರತಿರೋಧ ತೋರದೇ ನಾಲ್ಕನೇ ದಿನವೇ 59.5 ಓವರ್‌ಗಳಲ್ಲಿ 210 ರನ್‌ಗಳಿಗೆ ಗಂಟುಮೂಟೆ ಕಟ್ಟಿದರು. ಇದರೊಂದಿಗೆ ಟಿ-20ಯಲ್ಲಿ 3-0 ಹಾಗೂ ಟೆಸ್ಟ್‌ನಲ್ಲಿ 2-0 ಕ್ಲೀನ್‌ಸ್ವೀಪ್‌ನೊಂದಿಗೆ ಭಾರತ ಪ್ರವಾಸ ಮುಗಿಸಿದಂತಾಗಿದೆ.

ಈ ಎರಡು ಟೆಸ್ಟ್ ಜಯದೊಂದಿಗೆ ಭಾರತ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಪ್ರಥಮ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ. 120 ಅಂಕಗಳನ್ನು ಹೊಂದಿದ ಭಾರತ ಅಂಕಪಟ್ಟಿಯಲ್ಲಿ 9 ಅಂಕಗಳ ಮುನ್ನಡೆಯಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News