ಗೌರವ ಪಿಎಚ್.ಡಿ. ಪ್ರಶಸ್ತಿ ಪ್ರದಾನ: ಒಂದು ನವ ಉದ್ಯಮ?

Update: 2019-09-03 18:38 GMT

ಪತ್ರಿಕಾ ವರದಿಗಾರ ತಾನೊಬ್ಬ ಗೌರವ ಡಾಕ್ಟರೇಟ್ ಪದವಿ ಆಕಾಂಕ್ಷಿ ಎಂದು ಐವಿಎಪಿಎಯನ್ನು ಸಂಪರ್ಕಿಸಿದಾಗ ಆ ಸಂಸ್ಥೆಯ ಪ್ರತಿನಿಧಿಯೊಬ್ಬರು ಹೇಳಿದರಂತೆ: ‘‘ನಲವತ್ತೈದು ವರ್ಷ ವಯಸ್ಸು ದಾಟಿದವರು ಪದವಿಗಾಗಿ ಅರ್ಜಿ ಸಲ್ಲಿಸಲು ಅರ್ಹರು ಮತ್ತು ಅದಕ್ಕೆ ರೂ. 25 ಸಾವಿರ ತೆರಬೇಕಾಗುತ್ತದೆ. ರೂ. 5 ಸಾವಿರ ನೋಂದಣಿ ಶುಲ್ಕ, ರೂ. 10 ಸಾವಿರ ಗೌರವ ಡಾಕ್ಟರೇಟ್ ಪ್ರಮಾಣ ಪತ್ರದ ಬಾಬ್ತು, ರೂ. 5 ಸಾವಿರ ಘಟಿಕೋತ್ಸವದಲ್ಲಿ ಗೌನ್ ಬಾಬ್ತು ಮತ್ತು ಅಭ್ಯರ್ಥಿಗಳ ಸಾಧನೆಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಲು ರೂಪಾಯಿ ಐದು ಸಾವಿರ.
ಅಧಿಕೃತ ಮೂಲಗಳ ಪ್ರಕಾರ ಗೌರವ ಪಿಎಚ್.ಡಿ. ಒಂದರ ಬೆಲೆ 35 ಸಾವಿರದಿಂದ 1.5 ಲಕ್ಷ ರೂಪಾಯಿವರೆಗೆ ಇದೆ.

 ಒಂದು ವಿಶ್ವವಿದ್ಯಾನಿಲಯ ನೀಡುವ, ನೀಡಬಹುದಾದ ಅತ್ಯುನ್ನತ ಪದವಿ ಪಿಎಚ್.ಡಿ.; ಈ ಪದವಿ ಪಡೆದವರು ‘ಡಾಕ್ಟರ್ ಆಫ್ ಫಿಲಾಸಫಿ’ ಎನ್ನುವುದರ ಸಂಕ್ಷಿಪ್ತ ರೂಪವಾಗಿ ‘Dr’ ಎಂಬ ಗೌರವಕ್ಕೆ ಪಾತ್ರರಾಗುತ್ತಾರೆ. ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಯು. ಆರ್. ಅನಂತಮೂರ್ತಿಯವರು 1960ರ ದಶಕದಲ್ಲಿ ಕಾಮನ್ವೆಲ್ತ್ ವಿದ್ಯಾರ್ಥಿ ವೇತನ ಪಡೆದು ಇಂಗ್ಲೆಂಡಿಗೆ ಹೋಗಿ ಸಂಶೋಧನೆ ನಡೆಸಿ ಸಿದ್ಧಪಡಿಸಿದ ಪಿಎಚ್.ಡಿ. ಥೀಸಿಸ್ ‘ಪಾಲಿಟಿಕ್ಸ್ ಆ್ಯಂಡ್ ಫಿಕ್ಷನ್ ಇನ್ ದಿ 1930ಸ್’ (ಮಹಾಪ್ರಬಂಧ) ಐವತ್ತು ವರ್ಷಗಳ ಬಳಿಕ, (ಅವರು ತೀರಿಕೊಂಡ ನಂತರ) ಪ್ರಕಟವಾಯಿತು. ಅಂದಿನ ದಿನಗಳಲ್ಲಿ ಪಿಎಚ್.ಡಿ. ಪದವಿ ಎಷ್ಟು ಗೌರವಯುತ ಹಾಗೂ ಬೆರಳೆಣಿಕೆಯಷ್ಟು ಮಂದಿ ಪಡೆಯಬಹುದಾಗಿದ್ದ ಪದವಿ ಆಗಿತ್ತೆಂದರೆ ಆಗ ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದ ಅಂತರ್‌ರಾಷ್ಟ್ರೀಯ ಖ್ಯಾತಿಯ ಪ್ರೊಫೆಸರ್ ಸಿ.ಡಿ. ನರಸಿಂಹಯ್ಯನವರು ಒಂದು ಘಟನೆಯನ್ನು ನಮ್ಮ ತರಗತಿಯಲ್ಲಿ ಹೇಳಿದ್ದರು.
ದಕ್ಷಿಣ ಭಾರತದ ವಿಶ್ವವಿದ್ಯಾನಿಲಯವೊಂದರ ಘಟಿಕೋತ್ಸವ ಸಮಾರಂಭದಲ್ಲಿ ಆ ವರ್ಷ ಒಟ್ಟು ತೊಂಬತ್ತು ಪಿಎಚ್.ಡಿ. ಪದವಿಗಳನ್ನು ಪ್ರದಾನ ಮಾಡಲಾಗಿತ್ತು. ಸಮಾರಂಭದ ಶಿಷ್ಟಾಚಾರದಂತೆ ವಿಶ್ವವಿದ್ಯಾನಿಲಯದ ಕುಲಪತಿಗಳು ಆ ಸಮಾರಂಭದಲ್ಲಿ ಭಾಗವಹಿಸಿದ್ದರು. ಬಳಿಕ ಅವರು ಪ್ರೊ. ಸಿ. ಡಿ. ನರಸಿಂಹಯ್ಯನವರೊಡನೆ ‘‘ತೊಂಬತ್ತು ಪಿಎಚ್.ಡಿ.ಗಳ ವಿಶೇಷ ಸಹವಾಸದಲ್ಲಿ ನಾನಿದ್ದೆ’’ ಎಂದು ಹೆಮ್ಮೆಯಿಂದ ಹೇಳಿದರಂತೆ. ಇದನ್ನು ತರಗತಿಯಲ್ಲಿ ಹೇಳುತ್ತಾ ಸಿ.ಡಿ.ಎನ್. ಆಡಿದ ಮಾತು ನೆನಪಾಗುತ್ತದೆ: ‘‘ತೊಂಬತ್ತು ಪಿಎಚ್.ಡಿ.ಗಳಂತೆ! ನಿಜವಾಗಿ ತೊಂಬತ್ತು ಎಂ.ಎ. ಗಳಿರಬಾರದು!’’
ಒಂದು ವಿಶ್ವವಿದ್ಯಾನಿಲಯ ಒಂದು ವರ್ಷದಲ್ಲಿ ತೊಂಬತ್ತು ಪಿಎಚ್.ಡಿ. ಪದವಿಗಳನ್ನು ನೀಡುವುದಾದರೆ ಅದು ತುಂಬಾ ದೊಡ್ಡ ಸಂಖ್ಯೆಯಾಯಿತು; ಪಿಎಚ್.ಡಿ. ಅಷ್ಟೊಂದು ಸುಲಭವಾಗಬಾರದು; ಸುಲಭ ಲಭ್ಯವಾಗಬಾರದು ಎಂಬುದು ಅವರ ಮಾತಿನ ಇಂಗಿತವಾಗಿತ್ತು. ಕಳೆದ ಕೆಲ ವರ್ಷಗಳ ಅವಧಿಯಲ್ಲಿ ಕರ್ನಾಟಕದ ಒಂದು ವಿಶ್ವವಿದ್ಯಾನಿಲಯ ನೀಡಿದ ಪಿಎಚ್.ಡಿ. ಪದವಿಗಳು ದ್ವಿಗುಣಗೊಂಡಿವೆ. ಒಂದು ಘಟಿಕೋತ್ಸವದಲ್ಲಿ ಮುನ್ನೂರಕ್ಕೂ ಹೆಚ್ಚು ಮಂದಿಗೆ ಪಿಎಚ್.ಡಿ. ಡಿಗ್ರಿ ಪ್ರದಾನ ಮಾಡಲಾಯಿತು ಎಂಬ ವರದಿಯ ಹಿನ್ನೆಲೆಯಲ್ಲಿ ಈ ಮಾತುಗಳನ್ನು ಬರೆಯಬೇಕಾಯಿತು.
 ಇನ್ನೊಂದೆಡೆ, ಕಳೆದ ಒಂದು ದಶಕದಲ್ಲಿ ದೇಶದ ವಿವಿಧ ವಿಶ್ವವಿದ್ಯಾನಿಲಯಗಳು ಸಮಾಜದ ವಿವಿಧ ರಂಗಗಳಲ್ಲಿ ‘‘ವಿಶಿಷ್ಟ ಸೇವೆ ಸಲ್ಲಿಸಿದವರಿಗೆ’’ ಗೌರವ ಪಿಎಚ್.ಡಿ. ಪದವಿ ನೀಡುವ ಪರಿಪಾಠ ತೀವ್ರಗತಿಯಲ್ಲಿ ಬೆಳೆಯಿತು. ಇದು ಈಗ ಯಾವ ಮಟ್ಟಕ್ಕೆ ತಲುಪಿದೆ ಎಂದರೆ ಆಂಗ್ಲ ಪತ್ರಿಕೆಯೊಂದು ಪ್ರಕಟಿಸಿರುವ ವರದಿಯೊಂದನ್ನು ಗಮನಿಸಿದರೆ ಸದ್ಯದಲ್ಲೇ ಗೌರವ ಪಿಎಚ್.ಡಿ. ಎಂದರೆ ಜನರು ನಗುವ ಅಥವಾ ಮೂಗು ಮುರಿಯುವ ಪರಿಸ್ಥಿತಿ ಬರಬಹುದು ಅನ್ನಿಸುತ್ತದೆ. ಈಗಾಗಲೇ ‘ಬುದ್ಧಿಜೀವಿ’ ಎಂಬ ಶಬ್ದಕ್ಕೆ ಅದೇ ರೀತಿಯ ಸ್ಥಿತಿ ಬಂದಿದೆ. ಭಾರತದಲ್ಲಿ ಒಂದು ನಿರ್ದಿಷ್ಟ ಸಿದ್ಧಾಂತಕ್ಕೆ ಶರಣಾಗಿರುವವರು, ಯಥಾಸ್ಥಿತಿವಾದಿಗಳನ್ನು ಪ್ರಶ್ನಿಸುವವರನ್ನು, ಸ್ವತಂತ್ರವಾಗಿ ಯೋಚಿಸಿ ಪ್ರಭುತ್ವದ ನೀತಿ ನಿಯಮಗಳನ್ನು ವಿಮರ್ಶಿಸುವವರನ್ನು ‘ಬುದ್ಧಿಜೀವಿಗಳು’ ಎಂದು ಒಮ್ಮಿಮ್ಮೆ ಸಿಟ್ಟಿನಿಂದ ಒಮ್ಮಿಮ್ಮೆ ತಿರಸ್ಕಾರದಿಂದ ಉಲ್ಲೇಖಿಸುತ್ತಿದ್ದಾರೆ. ಕೆಲವೊಮ್ಮೆ ಅಪಹಾಸ್ಯ ಸೂಚಕವಾಗಿಯೂ ಈ ಶಬ್ದ ಬಳಕೆಯಾಗತೊಡಗಿದೆ. ಇದರ ಜೊತೆಗೆ ‘ಚಿಂತಕ’ ಎಂಬ ಪದ ಕೂಡ ಬೇಕಾಬಿಟ್ಟಿಯಾಗಿ ಬಳಕೆಯಾಗುತ್ತಿದೆ. ಎಷ್ಟರ ಮಟ್ಟಿಗೆ ಎಂದರೆ ಒಮ್ಮೆ ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿಯವರು ಉಡುಪಿಯ ಕಾರ್ಯಕ್ರಮವೊಂದರಲ್ಲಿ ಸ್ವಾಗತ ಭಾಷಣಕಾರ ಅವರನ್ನು ‘ಚಿಂತಕ’ ಎಂದು ಪರಿಚಯಿಸಿದಾಗ ನಗುತ್ತಾ, ‘‘ನನ್ನನ್ನು ಹಾಗೆ ಮಾತ್ರ ಕರೆಯಬೇಡಿ’’ ಎಂದಿದ್ದರು.
ಆಂಗ್ಲ ಪತ್ರಿಕೆ ಪ್ರಕಟಿಸಿದ ಗೌರವ ಪಿಎಚ್.ಡಿ. ಕುರಿತಾದ ವರದಿ ಓದಿದಾಗ ಕನ್ನಡ ಶಬ್ದಗಳ ಸರಣಿಯಲ್ಲಿ ಹೀಗೆ ಅಪಮೌಲ್ಯಗೊಳ್ಳುವ, ಹೀನಾರ್ಥ ಪ್ರಾಪ್ತಿಯ ಅಂಚಿನಲ್ಲಿರುವ ಅಪಹಾಸ್ಯ ಸೂಚಕವಾಗಿ ಬಳಕೆಯಾಗುವ ಸರದಿ ಗೌರವ ಪಿಎಚ್.ಡಿ. ಎಂಬ ಶಬ್ದಗಳಿಗೆ ಬಂದಿರಬಹುದು ಅನ್ನಿಸಿತು.
ವರದಿಯ ಪ್ರಕಾರ, ಮಂಡ್ಯ ಹಾಗೂ ಮೈಸೂರು ಭಾಗಗಳಲ್ಲಿ ಈ ಜುಲೈ-ಆಗಸ್ಟ್ ಎರಡೇ ತಿಂಗಳುಗಳಲ್ಲಿ ನಡೆದ ಎರಡು ಘಟಿಕೋತ್ಸವಗಳಲ್ಲಿ ಕನಿಷ್ಠ ಮುನ್ನೂರು ಮಂದಿ ಗೌರವ ಡಾಕ್ಟರೇಟ್ ಪಡೆದಿದ್ದಾರೆ. ‘ನ್ಯಾಷನಲ್ ವರ್ಚ್‌ವಲ್ ಯುನಿವರ್ಸಿಟಿ ಫಾರ್ ಪೀಸ್ ಆ್ಯಂಡ್ ಎಜುಕೇಷನ್’ (ಎನ್‌ವಿಯುಪಿ) ಎಂಬ ಬೆಂಗಳೂರು ಸಮೀಪದ ಕಮ್ಮನಹಳ್ಳಿಯಲ್ಲಿ ಕಚೇರಿ ಹೊಂದಿರುವ ವಿಶ್ವವಿದ್ಯಾನಿಲಯವು ಈ ಪದವಿ ಪ್ರದಾನ ಸಮಾರಂಭಗಳನ್ನು ನಡೆಸಿತ್ತು. ಮೊದಲ ಘಟಿಕೋತ್ಸವ ಬೆಂಗಳೂರಿನಲ್ಲಿ ನಡೆದಿದ್ದರೆ ಎರಡನೆಯ ಘಟಿಕೋತ್ಸವ ಮೈಸೂರಿನ ಕಲಾಮಂದಿರದಲ್ಲಿ ನಡೆದಿದೆ. ಅಲ್ಲಿ 153 ಮಂದಿಗೆ ಅವರು ಮಾಡಿದ ಸಮಾಜ ಸೇವೆಗಾಗಿ ಗೌರವ ಡಾಕ್ಟರೇಟ್ ಪದವಿ ನೀಡಲಾಗಿದೆ.
ಮೈಸೂರಿನ ಟ್ರಸ್ಟ್ ಒಂದರ ಮ್ಯಾನೇಜಿಂಗ್ ಟ್ರಸ್ಟಿಯೊಬ್ಬರು ಜುಲೈ 29ರಂದು ಪಣಜಿಯಲ್ಲಿ ಬೆಂಗಳೂರಿನ ಇನ್ನೊಂದು ಸಂಸ್ಥೆಯಾಗಿರುವ ‘ಇಂಡಿಯನ್ ವರ್ಚುವಲ್ ಅಕಾಡಮಿ ಫಾರ್ ಪೀಸ್ ಆ್ಯಂಡ್ ಎಜುಕೇಷನ್’ (ಐವಿಎಪಿಇ) ಎಂಬ ಸಂಸ್ಥೆಯಿಂದ ಗೌರವ ಡಾಕ್ಟರೇಟ್ ಪದವಿ ಪಡೆದರು. ‘‘ನಾನು ವರ್ತಮಾನ ಪತ್ರಿಕೆಯೊಂದರಲ್ಲಿ ಒಂದು ಜಾಹೀರಾತು ಓದಿ ಅರ್ಜಿ ಸಲ್ಲಿಸಿದೆ. ಹದಿನೈದು ದಿನಗಳಲ್ಲಿ ನನಗೊಂದು ಪತ್ರ ಬಂತು. ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ನಾನು ಮಾಡಿರುವ ಪ್ರಯತ್ನಗಳಿಗೆ ಪಣಜಿಯಲ್ಲಿ ನನಗೆ ಪಿಎಚ್.ಡಿ. ಪದವಿ ಪ್ರದಾನ ಮಾಡಲಾಗುತ್ತದೆಂದು ಆ ಪತ್ರದಲ್ಲಿ ಬರೆಯಲಾಗಿತ್ತು.’’ ಪದವಿ ನೀಡಿಕೆಗೆ ತಾನೇನು ಹಣ ಪಾವತಿಸಿಲ್ಲ ಎಂದು ಅವರು ಹೇಳಿದ್ದಾರೆ.
ಮಂಡ್ಯ-ಮೈಸೂರು ಬೆಲ್ಟ್‌ನಲ್ಲಿ ಗೌರವ ಡಾಕ್ಟರೇಟ್ ಪದವಿ ಗಳಿಸಿದವರಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳು, ಬೀದಿಬದಿ ವ್ಯಾಪಾರಿಗಳು ಡಾಟಾ ಆಪರೇಟರ್‌ಗಳು ಕಾಂಟ್ರಾಕ್ಟರ್‌ಗಳು ಮತ್ತು ಸ್ಥಳೀಯ ಸಂಗೀತಗಾರರು ಸೇರಿದ್ದಾರೆ.
ವರದಿ ಹೇಳುವಂತೆ, ಎನ್‌ವಿಎಪಿಇ ಮತ್ತು ಐವಿಎಪಿಇಗಳಿಗೆ ವಿಶ್ವವಿದ್ಯಾನಿಲಯ ಅನುದಾನ ಆಯೋಗದ ಯುಜಿಸಿ ಮಾನ್ಯತೆ ಇಲ್ಲ. ಆದರೆ ಅವುಗಳು ತಾವು ನೀತಿ ಆಯೋಗದಲ್ಲಿ ನೋಂದಣಿ ಹೊಂದಿದ್ದೇವೆ ಎಂದು ಹೇಳುತ್ತಿವೆ.
ಆ ಪತ್ರಿಕಾ ವರದಿಗಾರ ತಾನೊಬ್ಬ ಗೌರವ ಡಾಕ್ಟರೇಟ್ ಪದವಿ ಆಕಾಂಕ್ಷಿ ಎಂದು ಐವಿಎಪಿಎಯನ್ನು ಸಂಪರ್ಕಿಸಿದಾಗ ಆ ಸಂಸ್ಥೆಯ ಪ್ರತಿನಿಧಿಯೊಬ್ಬರು ಹೇಳಿದರಂತೆ: ‘‘ನಲವತ್ತೈದು ವರ್ಷ ವಯಸ್ಸು ದಾಟಿದವರು ಪದವಿಗಾಗಿ ಅರ್ಜಿ ಸಲ್ಲಿಸಲು ಅರ್ಹರು ಮತ್ತು ಅದಕ್ಕೆ ರೂ. 25 ಸಾವಿರ ತೆರಬೇಕಾಗುತ್ತದೆ. ರೂ. 5 ಸಾವಿರ ನೋಂದಣಿ ಶುಲ್ಕ, ರೂ. 10 ಸಾವಿರ ಗೌರವ ಡಾಕ್ಟರೇಟ್ ಪ್ರಮಾಣ ಪತ್ರದ ಬಾಬ್ತು, ರೂ. 5 ಸಾವಿರ ಘಟಿಕೋತ್ಸವದಲ್ಲಿ ಗೌನ್ ಬಾಬ್ತು ಮತ್ತು ಅಭ್ಯರ್ಥಿಗಳ ಸಾಧನೆಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಲು ರೂಪಾಯಿ ಐದು ಸಾವಿರ.
ಅಧಿಕೃತ ಮೂಲಗಳ ಪ್ರಕಾರ ಗೌರವ ಪಿಎಚ್.ಡಿ. ಒಂದರ ಬೆಲೆ 35 ಸಾವಿರದಿಂದ 1.5 ಲಕ್ಷ ರೂಪಾಯಿವರೆಗೆ ಇದೆ.
ಏಜೆಂಟರು ಸಿರಿವಂತ ಕುಳಗಳನ್ನು ಸಂಪರ್ಕಿಸಿ ಅವರು ಸಲ್ಲಿಸಿರುವ ಸಮಾಜ ಸೇವೆಗಾಗಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಕೊಡಿಸುವುದಾಗಿ ಹೇಳುತ್ತಾರೆ. ‘ಡಾಕ್ಟರ್’ ಎಂಬ ಶಬ್ದಕ್ಕೆ ಇರುವ ಪ್ರತಿಷ್ಠೆ ಮತ್ತು ಫ್ಲೆಕ್ಸ್ ಬೋರ್ಡುಗಳಲ್ಲಿ ಹಾಗೂ ಆಹ್ವಾನ ಪತ್ರಿಕೆಗಳಲ್ಲಿ ತಮ್ಮ ಹೆಸರಿನ ಮುಂದೆ ಬಳಸಬಹುದಾದ ‘ಡಾ.’ ಎಂಬ ಹೆಮ್ಮೆಯ ಪದಕ್ಕಾಗಿ ಹಲವು ಸಿರಿವಂತರು ಏಜಂಟರು ಹೇಳುವಷ್ಟು ಹಣ ತೆತ್ತು ಗೌರವ ಪದವಿಗಳನ್ನು ಪಡೆಯುತ್ತಾರೆ.
ಹೀಗಾಗಿ, ಮಂಡ್ಯ ಜಿಲ್ಲೆಯ ಮೊಟ್ಟೆ ಮಾರಾಟ ಮಾಡಿ ಶ್ರೀಮಂತರಾಗಿರುವ ಅನಕ್ಷರಸ್ಥ ವ್ಯಕ್ತಿಯೊಬ್ಬರು ಈಗ ‘ಡಾ. ಗೌಡ’ ಆಗಿದ್ದಾರೆ. ಅವರನ್ನು ಇತರರಿಗೆ ಪರಿಚಯಿಸುವಾಗ, ಅವರು ತಮ್ಮನ್ನೇ ತಾನೇ ಪರಿಚಯಿಸಿಕೊಳ್ಳುವಾಗ ಬಳಸುವ ‘ಡಾಕ್ಟರ್’ ಪದದ ಬಳಕೆಯಿಂದ ಅವರು ತನ್ನ ಬದುಕಿನ ದೊಡ್ಡ ಕೊರತೆಯೊಂದನ್ನು ತುಂಬಿಕೊಂಡ ಸಂತೋಷ ಪಡುತ್ತಾರೆ!.
ಇದೆಲ್ಲಾ ಕೆೇಳುವಾಗ ತಮಾಷೆ ಅನ್ನಿಸಬಹುದಾದರೂ ಇದೊಂದು ವ್ಯಾಪಕ ಪಿಡುಗು ಆಗಿ, ಗೌರವ ಡಾಕ್ಟರೇಟ್ ನೀಡಿಕೆ ಹಣ ಮಾಡುವ, ಲಾಭ ಗಳಿಕೆಯ ಒಂದು ಉದ್ಯಮವಾಗುವ ಮೊದಲು ಸರಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ. ಇಲ್ಲವಾದಲ್ಲಿ ಈಗಾಗಲೇ ಗೌರವ ಪಿಎಚ್.ಡಿ. ಪಡೆದಿರುವ ಸೆಲೆಬ್ರಿಟಿಗಳು, ಸಿನೆಮಾ ನಟ ನಟಿಯರು, ಪ್ರಸಿದ್ಧ ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರು ತಮ್ಮ ಹೆಸರಿನ ಮುಂದೆ ‘ಡಾ.’ ಎಂದು ಸೇರಿಸಲು ಮುಜುಗರ ಪಡುವಂತಾದೀತು. ಭವಿಷ್ಯದಲ್ಲಿ ಪ್ರತೀ ಲೈಟ್ ಕಂಬಕ್ಕೆ ಅರ್ಧ ಡಜನ್ ಗೌರವ ಡಾಕ್ಟರೇಟ್ ಪಡೆದ ಎಲ್ಲ ರೀತಿಯ ಆಸಾಮಿಗಳ ಫ್ಲೆಕ್ಸ್ ಬೋರ್ಡುಗಳು, ಹೋರ್ಡಿಂಗ್‌ಗಳು, ಪೋಸ್ಟರ್‌ಗಳು ನಗರದಾದ್ಯಂತ ಕಂಡು ಬರುವುದನ್ನು ನೋಡಿ ವರ್ಷಗಟ್ಟಲೆ ಸಂಶೋಧನೆ, ಅಧ್ಯಯನ ನಡೆಸಿ ಡಾಕ್ಟರೇಟ್ ಪದವಿ ಪಡೆದವರು ‘‘ನೀವು ಔಷಧಿ ಕೊಡುವ ಡಾಕ್ಟರೋ? ಅಥವಾ ಸಮಾಜ ಸೇವೆಯ ಭಾಗವಾಗಿ ಅಕ್ಕಿ ಸೀರೆ ನೋಟ್ಬುಕ್ ಹಂಚುವ ಡಾಕ್ಟರೋ?’’ ಎಂಬ ಪ್ರಶ್ನೆಯನ್ನು ಎದುರಿಸಬೇಕಾಗಬಹುದು ಅಥವಾ ಇಂತಹ ಡಾಕ್ಟರುಗಳು ತಮ್ಮ ಹೆಸರಿನ ಮುಂದೆ ‘ಡಾ.’ ಜೊತೆಗೆ ‘ಡಾ. ಗೌ.’ (ಗೌರವ ಪಿಎಚ್.ಡಿ. ಪಡೆದ) ಎಂದು ಬರೆದು ಕೊಳ್ಳುವುದನ್ನು ಸರಕಾರ ಕಾನೂನು ಮೂಲಕ ಕಡ್ಡಾಯಗೊಳಿಸಬೇಕಾಗಲೂಬಹುದು. ಆ ಮೂಲಕ ಸರಕಾರ, ಸಂಶೋಧನೆ ನಡೆಸಿ ಮಹಾಪ್ರಬಂಧ ಬರೆದು ವಿಶ್ವವಿದ್ಯಾನಿಲಯಗಳಿಂದ ಪಿಎಚ್.ಡಿ. ಪದವಿ ಪಡೆದವರ ಮಾನವನ್ನು ಸ್ವಲ್ಪಮಟ್ಟಿಗಾದರೂ ಉಳಿಸಿದಂತಾದೀತು.

(bhaskarrao599@gmail.com)

Writer - ಡಾ. ಬಿ. ಭಾಸ್ಕರ ರಾವ್

contributor

Editor - ಡಾ. ಬಿ. ಭಾಸ್ಕರ ರಾವ್

contributor

Similar News

ಜಗದಗಲ
ಜಗ ದಗಲ