ವಂಚನೆಗೊಳಗಾಗಿ 5.5 ಕೋಟಿ ರೂ. ಕಳೆದುಕೊಂಡ ವೈದ್ಯ ಕುಟುಂಬದೊಂದಿಗೆ ಆತ್ಮಹತ್ಯೆ

Update: 2019-09-04 08:49 GMT

ಅಮಲಾಪುರಂ, ಸೆ.4: ಪೂರ್ವ ಗೋದಾವರಿ ಜಿಲ್ಲೆಯ ಅಮಲಾಪುರಂನ ವೈದ್ಯರೊಬ್ಬರು ತಮ್ಮ ಪತ್ನಿ ಹಾಗೂ ಪುತ್ರನ ಜತೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಹಿಂದಿನ ರಹಸ್ಯವನ್ನು ಪೊಲೀಸರು ಬೇಧಿಸಿದ್ದಾರೆ. ತಮ್ಮಲ್ಲಿರುವ ವಿಶೇಷ, ಮಾಂತ್ರಿಕ ಶಕ್ತಿಯಿರುವ ಅಕ್ಕಿ ಕಾಳುಗಳನ್ನು ಉಪಯೋಗಿಸಿ ಹಣವನ್ನು ದ್ವಿಗುಣಗೊಳಿಸಬಹುದೆಂಬ ನಾಲ್ಕು ಮಂದಿ ಸದಸ್ಯರ ಗ್ಯಾಂಗ್ ನೀಡಿದ ಆಮಿಷಕ್ಕೆ ಬಲಿ ಬಿದ್ದಿದ್ದ ಆರ್ಥೋಪೀಡಿಕ್ ಸರ್ಜನ್ ಆಗಿರುವ ಡಾ. ಪೆನ್ಮೆತ್ಸ ರಾಮಕೃಷ್ಣಂ ರಾಜು ಅವರು ಸ್ಥಳೀಯ ಲೇವಾದೇವಿಗಾರರಿಂದ ಅತ್ಯಧಿಕ ಬಡ್ಡಿ ದರಕ್ಕೆ ಸಾಲ ಪಡೆದು ಆ ನಾಲ್ಕು ಮಂದಿಗೆ 5.5 ಕೋಟಿ ರೂ. ನೀಡಿದ್ದು ನಂತರ ತಾವು ವಂಚನೆಗೊಳಗಾಗಿದ್ದು ತಿಳಿಯುತ್ತಲೇ ಕುಟುಂಬದೊಂದಿಗೆ ಆತ್ಮಹತ್ಯೆಗೈದಿದ್ದರು.

ಅವರನ್ನು ವಂಚಿಸಿದ ತಂಡದ ವರಿಕೂಟಿ ವೆಂಕಟ ವೇಣುಧಾರ ಪ್ರಸಾದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ಶೋಧಿಸಲು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ.

ರಾಜು (55), ಅವರ ಪತ್ನಿ ಲಕ್ಷ್ಮೀ ದೇವಿ (45), ವೈದ್ಯ ಪುತ್ರ ಕೃಷ್ಣ ಸಂದೀಪ್ (25) ಕಳೆದ ವಾರ ಅನೆಸ್ತೆಟಿಕ್ ಔಷಧಿ ಸುಕೊಲ್ ಇದರ ಅತಿಯಾದ ಡೋಸ್ ತೆಗೆದುಕೊಂಡು ತಕ್ಷಣ ಸಾವನ್ನಪ್ಪಿದ್ದರು.

ಬಂಧಿತ ಆರೋಪಿ ಪ್ರಸಾದ್ ಕೃಷ್ಣಾ ಜಿಲ್ಲೆಯ ಕೊಡೂರು ಗ್ರಾಮದವನಾಗಿದ್ದರೂ ಹೈದರಾಬಾದ್ ನಿವಾಸಿಯಾಗಿದ್ದ. ಶಾವಲಿನ್, ಅನಂತರಾಮ್ ಹಾಗೂ ಶ್ರೀನಿವಾಸ್ ರಾವ್ ಎಂಬವರು ಆತನ ಸಹವರ್ತಿಗಳೆನ್ನಲಾಗಿದ್ದು ಅವರೆಲ್ಲರೂ  ತಮ್ಮಲ್ಲಿರುವ ಅಕ್ಕಿ ಕಾಳುಗಳಿಗೆ ದೇವರ ಚಿತ್ರಗಳಿರುವ ನಾಣ್ಯಗಳನ್ನು ಸೆಳೆಯುವ ಶಕ್ತಿಯಿದೆಯೆಂದು ಮುಗ್ಧ ಜನರನ್ನು ನಂಬಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News