ಜನರಿಂದ ದೂರವಾಗುತ್ತಿರುವ ಸಾರ್ವಜನಿಕ ಬ್ಯಾಂಕ್‌ಗಳು

Update: 2019-09-05 06:42 GMT

ಭಾರತದ ಆರ್ಥಿಕತೆ ಬಂದ ಹಾದಿಯಲ್ಲಿ ಮರಳುವ ಸಿದ್ಧತೆ ನಡೆಸುತ್ತಿದೆ. ‘ಬ್ಯಾಂಕ್‌ಗಳ ವಿಲೀನ’ ಆ ಹಾದಿಯಲ್ಲಿ ಮಹತ್ವದ ಹೆಜ್ಜೆಯಾಗಿದೆ. ಭಾರತದ ಬ್ಯಾಂಕಿಂಗ್ ಕ್ಷೇತ್ರಗಳಿಗೂ, ದೇಶದ ಅಭಿವೃದ್ಧಿಗೂ ಕರುಳಬಳ್ಳಿಯ ಸಂಬಂಧವಿದೆ. ಆರಂಭದಲ್ಲಿ ಶ್ರೀಮಂತರಷ್ಟೇ ಫಲಾನುಭವಿಗಳಾಗಿದ್ದ ಬ್ಯಾಂಕನ್ನು ‘ರಾಷ್ಟ್ರೀಕರಣ’ದ ಮೂಲಕ ಸರ್ವರಿಗೂ ತೆರೆದುಕೊಟ್ಟದ್ದು ಇಂದಿರಾ ಗಾಂಧಿಯ ಸರಕಾರ. ಆವರೆಗೆ ಬೃಹತ್ ಶ್ರೀಮಂತರಿಗೆ ಬಂಡವಾಳದ ಮೂಲವಾಗಿದ್ದ ಬ್ಯಾಂಕ್ ತನ್ನ ಗ್ರಾಹಕರನ್ನು ವಿಸ್ತರಿಸಿಕೊಂಡಿತು. ರೈತರಿಗೆ ಹಸುಕೊಳ್ಳುವುದಕ್ಕೂ ಸಾಲ ನೀಡುವಷ್ಟರ ಮಟ್ಟಿಗೆ ಬ್ಯಾಂಕ್ ಜನಸಾಮಾನ್ಯರನ್ನು ತಲುಪಿತು. ಜನಸಾಮಾನ್ಯರ ‘ನಂಬಿಕೆ’ಯ ತಳದಲ್ಲಿ ಬ್ಯಾಂಕುಗಳು ಅದರ ಜೊತೆ ಜೊತೆಯಲ್ಲೇ ದೇಶವೂ ಅಭಿವೃದ್ಧಿಯೆಡೆಗೆ ಮುನ್ನುಗ್ಗಿತು. ಫೈನಾನ್ಸ್‌ಗಳ ಕೈಯಲ್ಲಿ, ಬಡ್ಡಿ ವ್ಯಾಪಾರಿಗಳ ಕೈಯಲ್ಲಿ ನಲುಗುತ್ತಿದ್ದ ಗ್ರಾಮೀಣ ಪ್ರದೇಶದ ಜನರಿಗೆ ಬ್ಯಾಂಕ್‌ಗಳು ಆಶಾದಾಯಕವಾದವು. ಆದರೆ ಇತ್ತೀಚಿನ ದಿನಗಳಲ್ಲಿ ಬ್ಯಾಂಕ್‌ನ ಕುರಿತಂತೆ ಧೋರಣೆಗಳು ಬದಲಾಗತೊಡಗಿವೆ.

ಒಂದು ಕಾಲದಲ್ಲಿ ಜನರಿಗಾಗಿ ಬ್ಯಾಂಕ್ ಇದ್ದಿದ್ದರೆ, ಇಂದು ಬ್ಯಾಂಕ್‌ಗಳಿಗಾಗಿ ಜನಸಾಮಾನ್ಯರನ್ನು ಸರಕಾರ ಬಲಿಕೊಡಲು ಮುಂದಾಗಿದೆ. ನೋಟು ನಿಷೇಧದ ಬಳಿಕವಂತೂ ಜನರು ಬ್ಯಾಂಕ್‌ನ ಕುರಿತಂತೆ ನಂಬಿಕೆಯನ್ನು ಕಳೆದುಕೊಂಡಿರುವುದು ಮಾತ್ರವಲ್ಲ, ಅದರ ಕುರಿತಂತೆ ಭಯವನ್ನು ಬೆಳೆಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ‘ಬ್ಯಾಂಕ್ ದರೋಡೆ’ಗಳು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದರೆ ಇಂದು ಬ್ಯಾಂಕ್‌ಗಳೇ ಜನಸಾಮಾನ್ಯರನ್ನು ದರೋಡೆ ಮಾಡುತ್ತಿರುವುದು ಚರ್ಚೆಗೆ ಒಳಗಾಗುತ್ತಿದೆ. ಬ್ಯಾಂಕ್‌ಗಳ ಸುಧಾರಣೆಗಳ ಹೆಸರಿನಲ್ಲಿ ನಡೆಯುತ್ತಿರುವ ‘ಬ್ಯಾಂಕ್ ವಿಲೀನ’ ನಿಧಾನಕ್ಕೆ ರಾಷ್ಟ್ರೀಕರಣಗೊಂಡ ಬ್ಯಾಂಕ್‌ಗಳ ಅಸ್ತಿತ್ವಕ್ಕೆ ಮುಳ್ಳಾಗುವ ಎಲ್ಲ ಸೂಚನೆಗಳು ಕಾಣುತ್ತಿವೆ. ಇಂದು ಸರಕಾರ ಬ್ಯಾಂಕ್ ವಿಲೀನಗಳಿಂದಾಗುವ ಲಾಭಗಳನ್ನು ಜನರ ಮುಂದಿಡುತ್ತಿದೆ. ದೀರ್ಘಾವಧಿಯಲ್ಲಿ ತೆರಿಗೆದಾರರ ಹಣ ಉಳಿತಾಯ, ನಿರ್ವಹಣಾ ವೆಚ್ಚದಲ್ಲಿ ಇಳಿಕೆ, ಕಾರ್ಯದಕ್ಷತೆಯಲ್ಲಿ ಹೆಚ್ಚಳ ಮೊದಲಾದವುಗಳ ಕಡೆಗೆ ಸರಕಾರ ಬೆರಳು ಮಾಡಿದೆ. ಆದರೆ ಈ ಹಿಂದೆ ನಷ್ಟದಲ್ಲಿರುವ ಇತರ ಬ್ಯಾಂಕ್‌ಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಎಸ್‌ಬಿಐಯ ಸ್ಥಿತಿಗತಿಯನ್ನು ನೋಡಿದಾಗ, ಸರಕಾರದ ಪ್ರಯತ್ನ ಯಶಸ್ವಿಯಾಗಿಲ್ಲ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗಿ ಬಿಡುತ್ತದೆ.

ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕ್ ಶಾಖೆಗಳು ಒಂದೊಂದಾಗಿ ಮುಚ್ಚುಗಡೆಯಾಗುತ್ತಿವೆ. ಬ್ಯಾಂಕ್‌ಗಳು ಕೇವಲ ಬೃಹತ್ ಬಂಡವಾಳಶಾಹಿಗಳನ್ನಷ್ಟೇ ಗುರಿಯಾಗಿಸಿಕೊಂಡಿವೆೆ. ಇದು ತಳಸ್ತರದಲ್ಲಿ ದೇಶದ ಅಭಿವೃದ್ಧಿಯ ಮೇಲೆ ಭಾರೀ ಪರಿಣಾಮಗಳನ್ನು ಬೀರತೊಡಗಿದೆ. ಜೊತೆಗೆ ಭಾರೀ ಪ್ರಮಾಣದ ಗ್ರಾಹಕರಿಂದ ಬ್ಯಾಂಕ್‌ಗಳು ದೂರವಾಗಲಿವೆ. ನೂರಕ್ಕೂ ಅಧಿಕ ಬೃಹತ್ ಉದ್ಯಮಿಗಳ ಕೋಟ್ಯಂತರ ಸಾಲಗಳಿಂದ ತತ್ತರಿಸಿರುವ ಬ್ಯಾಂಕ್‌ಗಳನ್ನು ಎತ್ತಿ ನಿಲ್ಲಿಸುವ ಈ ಪ್ರಯತ್ನಕ್ಕೆ ದೇಶದ ಆರ್ಥಿಕತೆ ಭಾರೀ ಬೆಲೆಕೊಡಬೇಕಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಂತಿಮವಾಗಿ ಈ ದೇಶದಲ್ಲಿ ಮತ್ತೆ ಖಾಸಗಿ, ವಿದೇಶಿ ಬ್ಯಾಂಕ್‌ಗಳು ವಿಜೃಂಭಿಸುವ ದಿನಗಳನ್ನು ಇದು ಹೇಳುತ್ತಿದೆ. ಭಾರತದಲ್ಲಿ ರಾಷ್ಟ್ರೀಕರಣಗೊಂಡ ಬ್ಯಾಂಕ್‌ಗಳ ಉದ್ದೇಶವು ಲಾಭ ಮಾಡುವುದಲ್ಲ. ಬದಲಿ ತನ್ಮೂಲಕ ದೇಶವನ್ನು ಲಾಭದೆಡೆಗೆ ಕೊಂಡೊಯ್ಯುವುದು. ದೇಶವೆಂದರೆ ಇನ್ನಾರೂ ಅಲ್ಲ, ಬ್ಯಾಂಕಿನ ಗ್ರಾಹಕರೇ. ಇದರ ಭಾಗವಾಗಿ ಬ್ಯಾಂಕುಗಳ ಸರಕಾರದ ರಾಜಕೀಯ ಹಾಗೂ ಆರ್ಥಿಕ ಕಾರ್ಯಸೂಚಿಗೆ ನೆರವಾಗುವುದು ಈವರೆಗೆ ಅದರ ಹೊಣೆಗಾರಿಕೆಯಾಗಿತ್ತು. ಬ್ಯಾಂಕುಗಳು ಸಣ್ಣ ಪುಟ್ಟ ಸಾಲ ಪಡೆಯುವವರಿಗೆ, ರಫ್ತು, ಕೃಷಿವಲಯ, ಸಣ್ಣ ಗಾತ್ರದ ಉದ್ಯಮದಂತಹ ಆದ್ಯತಾ ವಲಯಗಳಿಗೆ ಸಾಲ ನೀಡಬೇಕಾಗಿದೆ ಅಥವಾ ಅವುಗಳಿಗಾಗಿ ಸರಕಾರಕ್ಕೆ ಸಾಲ ನೀಡಬೇಕಾಗಿದೆ. ಇದರ ಜೊತೆ ಬ್ಯಾಂಕುಗಳು ಮೂಲಸೌಕರ್ಯ ಯೋಜನೆಗಳಿಗೆ ಅಥವಾ ಕೆಲವು ನಿರ್ದಿಷ್ಟ ಕಂಪೆನಿಗಳ ಸಮೂಹಕ್ಕೆ ಸಾಲವನ್ನು ನೀಡಬೇಕು. ಇಂದು ಬ್ಯಾಂಕ್‌ಗಳು ಈ ‘ಸೇವೆ’ಯನ್ನೇ ಹೊರೆಯೆಂದು ಭಾವಿಸಿವೆೆ. ಇದೇ ಸಂದರ್ಭದಲ್ಲಿ ಲಾಭದ ಉದ್ದೇಶದಿಂದ ಬೃಹತ್ ಕಾರ್ಪೊರೇಟ್ ಸಂಸ್ಥೆಗಳಿಗೆ ನೀಡಿದ ಸಾಲಗಳೇ ಬ್ಯಾಂಕ್‌ಗಳಿಗೆ ಉರುಳಾಗಿದೆ ಎನ್ನುವುದನ್ನು ಮರೆತು ಬಿಟ್ಟಿದೆ.

ಒಂದೆಡೆ ಸರಕಾರ ಬಡವರಿಗೆ ಬ್ಯಾಂಕ್‌ಗಳನ್ನು ಪರಿಚಯಿಸಲು ಜನಧನ್ ಖಾತೆ ಆರಂಭಿಸಿತು. ಬ್ಯಾಂಕ್ ಖಾತೆ ರಹಿತರಿಗಾಗಿ ಆರಂಭಿಸಲಾದ ಜನಧನ್ ಖಾತೆಗಳನ್ನು ಹೆಚ್ಚಾಗಿ ಸಾರ್ವಜನಿಕರಂಗದ ಬ್ಯಾಂಕ್‌ಗಳಲ್ಲೇ ಪ್ರಾರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಖಾತೆಗಳ ಗತಿಯೇನು? ಬ್ಯಾಂಕ್‌ಗಳ ಏಕೀಕರಣದಿಂದಾಗಿ ಇದು ಬದಲಾವಣೆಯಾಗುವ ಸಾಧ್ಯತೆಯಿದೆಯೇ?. ಮುಂದಿನ ದಿನಗಳಲ್ಲಿ ಜನಧನ್ ಖಾತೆಗಳು ಒಂದು ವ್ಯಂಗ್ಯವಾಗಿ ಇತಿಹಾಸವನ್ನು ಸೇರಲಿವೆೆ. ಹಣವೇ ಇಲ್ಲದ ಖಾಲಿ ಖಾತೆಗಳು ಬ್ಯಾಂಕ್‌ಗಳಿಗೆ ನಿರ್ವಹಣೆಗೆ ದುಬಾರಿಯಾಗುವ ನೆಪದಲ್ಲಿ ಅವುಗಳು ಹಂತಹಂತವಾಗಿ ಮುಚ್ಚಲ್ಪಡುತ್ತವೆ. ಇಷ್ಟಕ್ಕೂ ದುಡಿಯುವುದಕ್ಕೆ ಕೆಲಸವೇ ಇಲ್ಲವೆಂದ ಮೇಲೆ ಜನರು ಜನಧನ್ ಖಾತೆಯನ್ನು ಬಳಸಿಕೊಳ್ಳುವುದಾದರೂ ಹೇಗೆ? ಇದೇ ಸಂದರ್ಭದಲ್ಲಿ ದೇಶಾದ್ಯಂತ ಸಹಸ್ರಾರು ಶಾಖೆಗಳು ಮುಚ್ಚುವುದರಿಂದ, ಬ್ಯಾಂಕ್ ಮತ್ತೆ ಜನಸಾಮಾನ್ಯರಿಗೆ ದೂರವಾಗುವುದು ಮಾತ್ರವಲ್ಲ, ಲಕ್ಷಾಂತರ ಜನರು ಉದ್ಯೋಗಗಳನ್ನು ಕಳೆದುಕೊಳ್ಳಲಿದ್ದಾರೆ.

ಜೊತೆಗೆ ಬ್ಯಾಂಕ್‌ಗಳ ಅಯೋಮಯ ಸ್ಥಿತಿ, ದಿನಕ್ಕೊಂದು ನೀತಿ ಜನಸಾಮಾನ್ಯರು ಬ್ಯಾಂಕ್ ವ್ಯವಹಾರಗಳನ್ನು ಅನುಮಾನದಿಂದ ನೋಡುವಂತೆ ಮಾಡಿದೆ. ನಂಬಿಕೆಯ ತಳಹದಿಯ ಮೇಲೆ ನಿಂತ ಬ್ಯಾಂಕ್‌ನ ಅಡಿಗಲ್ಲು ದುರ್ಬಲವಾಗಿದೆ. ಜನರು ಬ್ಯಾಂಕ್‌ಗಳಲ್ಲಿ ಠೇವಣಿ ಇಡುವುದರಿಂದ ದೂರ ಸರಿಯುತ್ತಿದ್ದಾರೆ. ಬದಲಿಗೆ ಮತ್ತೆ ಚಿನ್ನ, ಜಮೀನು ಇತ್ಯಾದಿಗಳಲ್ಲಿ ಹಣವನ್ನು ಮುಚ್ಚಿಡತೊಡಗಿದ್ದಾರೆ. ಒಟ್ಟಿನಲ್ಲಿ ನಷ್ಟದಲ್ಲಿರುವ ಬ್ಯಾಂಕ್‌ಗಳನ್ನು ಇತರ ಬ್ಯಾಂಕ್‌ಗಳ ಜೊತೆಗೆ ವಿಲೀನಗೊಳಿಸಿ ಅದರ ನಷ್ಟವನ್ನು ಮರೆಮಾಚಿ, ಅಂತಿಮವಾಗಿ ಅದನ್ನು ಖಾಸಗಿಯ ತೆಕ್ಕೆಗೆ ಒಪ್ಪಿಸುವ ದೂರದ ಉದ್ದೇಶವನ್ನು ಸರಕಾರ ಹೊಂದಿದೆಯೆ ಎಂಬ ಅನುಮಾನ ಕಾಡತೊಡಗಿದೆ. ಈ ಎಲ್ಲ ಬೆಳವಣಿಗೆಗಳಲ್ಲಿ ಒಂದಂತು ಸ್ಪಷ್ಟವಾಗಿದೆ. ಇನ್ನು ಮುಂದೆ ಬ್ಯಾಂಕ್‌ಗಳಿರುವುದು ಸೇವೆಗಲ್ಲ. ಜನಸಾಮಾನ್ಯರಿಗಾಗಿಯೂ ಅಲ್ಲ. ರಾಷ್ಟ್ರೀಕರಣದ ಬಳಿಕ ತಳಸ್ತರದ ಜೊತೆಗೆ ಅಲ್ಪಸ್ವಲ್ಪ ಸಂಬಂಧವನ್ನು ಬೆಸೆದುಕೊಂಡಿದ್ದ ಬ್ಯಾಂಕ್‌ಗಳು ಅವರಿಂದ ದೂರವಾಗಲಿದೆ. ಇದು ನೇರವಾಗಿ ದೇಶದ ಅಭಿವೃದ್ಧಿಯ ಮೇಲೂ ಪರಿಣಾಮಬೀರಲಿದೆ. ಬ್ಯಾಂಕ್‌ಗಳು ಶ್ರೀಸಾಮಾನ್ಯರಿಂದ ದೂರವಾಗುವುದರ ನಿಜವಾದ ಅರ್ಥ, ಶ್ರೀಸಾಮಾನ್ಯರು ದೇಶದ ಅಭಿವೃದ್ಧಿಯ ಕೊಂಡಿಯಿಂದ ಕಳಚಿಕೊಳ್ಳುವುದು ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸುವ ಅಗತ್ಯವಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News