ಕರ್ತಾರ್‌ಪುರ: ಭಾರತ- ಪಾಕ್ ಮಾತುಕತೆ ಫಲಿತಾಂಶ ಏನು?

Update: 2019-09-05 04:07 GMT

ಅತ್ತಾರಿ (ಪಂಜಾಬ್), ಸೆ.5: ಕರ್ತಾರ್‌ಪುರ ಸಾಹಿಬ್ ಕಾರಿಡಾರ್ ಕುರಿತಂತೆ ಅಂತಿಮ ಒಪ್ಪಂದಕ್ಕೆ ಬರಲು ಭಾರತ ಹಾಗೂ ಪಾಕಿಸ್ತಾನ ವಿಫಲವಾಗಿವೆ.

ಬುಧವಾರ ನಡೆದ ದ್ವಿಪಕ್ಷೀಯ ಚರ್ಚೆಯ ವೇಳೆ, ಕರ್ತಾರ್‌ಪುರ್ ಸಾಹಿಬ್‌ಗೆ ಭೇಟಿ ನೀಡುವ ಪ್ರತಿ ಯತ್ರಾರ್ಥಿಗಳಿಗೆ 20 ಡಾಲರ್ ಶುಲ್ಕ ವಿಧಿಸುವ ಪಟ್ಟು ಸಡಿಲಿಸಲು ಪಾಕಿಸ್ತಾನ ನಿರಾಕರಿಸಿದ ಹಿನ್ನೆಲೆಯಲ್ಲಿ ಅಂತಿಮ ಒಪ್ಪಂದಕ್ಕೆ ಬರುವುದು ಸಾಧ್ಯವಾಗಲಿಲ್ಲ. ಉಭಯ ದೇಶಗಳ ನಡುವಿನ ಇನ್ನೊಂದು ವಿವಾದಿತ ಅಂಶವೆಂದರೆ, ಭಾರತೀಯ ರಾಜತಾಂತ್ರಿಕರು ಕರ್ತಾರ್‌ಪುರ ಸಾಹಿಬ್ ಗುರುದ್ವಾರ ಆವರಣದಲ್ಲಿ ಇರುವುದಕ್ಕೆ ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸಿರುವುದು. ಜತೆಗೆ ಯಾತ್ರಾರ್ಥಿಗಳ ಜತೆ ಶಿಷ್ಟಾಚಾರ ಅಧಿಕಾರಿಗಳಿಗೆ ಅವಕಾಶ ನೀಡಲು ಕೂಡಾ ಪಾಕಿಸ್ತಾನ ನಿರಾಕರಿಸಿದೆ.

ಆದಾಗ್ಯೂ, ಭಾರತೀಯ ಯಾತ್ರಾರ್ಥಿಗಳಿಗೆ ಗುರುದ್ವಾರ ಯಾತ್ರೆಗೆ ಯಾವುದೇ ನಿರ್ಬಂಧ ವಿಧಿಸದೇ ವೀಸಾರಹಿತ ಪ್ರವಾಸಕ್ಕೆ ಅವಕಾಶ ಮಾಡಿಕೊಡುವುದಕ್ಕೆ ಉಭಯ ದೇಶಗಳು ಸಮ್ಮತಿ ಸೂಚಿಸಿವೆ. ಪ್ರತಿದಿನ 5,000 ಭಾರತೀಯ ಯಾತ್ರಿಗಳು ಗುರುದ್ವಾರಕ್ಕೆ ಭೇಟಿ ನೀಡಲು ಕೂಡಾ ಒಪ್ಪಿಗೆ ದೊರಕಿದೆ. ಆದರೆ ವಿಶೇಷ ಸಂದರ್ಭಗಳಲ್ಲಿ 10 ಸಾವಿರ ಮಂದಿ ಭೇಟಿ ನೀಡಲು ಅವಕಾಶ ನೀಡಬೇಕು ಎಂಬ ಭಾರತದ ಆಗ್ರಹಕ್ಕೆ, ಮೂಲಸೌಕರ್ಯದ ಇತಿಮಿತಿ ಕಾರಣ ನೀಡಿ ಪಾಕಿಸ್ತಾನ ನಿರಾಕರಿಸಿದೆ.

"ಕರ್ತಾರ್‌ಪುರ ಕಾರಿಡಾರ್‌ನಲ್ಲಿ ಮೂಲಸೌಕರ್ಯ ಸೃಷ್ಟಿಸಲು ದೊಡ್ಡ ಮೊತ್ತದ ಹೂಡಿಕೆ ಮಾಡಿರುವ ಹಿನ್ನೆಲೆಯಲ್ಲಿ ಪ್ರತಿ ಯಾತ್ರಿಗಳಿಗೆ 20 ಡಾಲರ್ ಶುಲ್ಕ ವಿಧಿಸುವುದಾಗಿ ಪಾಕಿಸ್ತಾನ ಹೇಳಿದೆ. ಇದಕ್ಕೆ ಭಾರತದ ವಿರೋಧವಿದೆ" ಎಂದು ಭಾರತೀಯ ನಿಯೋಗದಲ್ಲಿದ್ದ ಪಂಜಾಬ್ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಹಸನ್‌ಲಾಲ್ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News