ಮೆಹಬೂಬಾರನ್ನು ಭೇಟಿಯಾಗಲು ಪುತ್ರಿಗೆ ಸುಪ್ರೀಂ ಕೋರ್ಟ್ ಅನುಮತಿ

Update: 2019-09-05 16:20 GMT

ಹೊಸದಿಲ್ಲಿ, ಸೆ. 5: ಸನಾ ಇಲ್ತಿಝಾ ಅವರು ತನ್ನ ತಾಯಿ, ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರನ್ನು ಭೇಟಿಯಾಗಲು ಶ್ರೀನಗರಕ್ಕೆ ತೆರಳಲು ಸುಪ್ರೀಂ ಕೋರ್ಟ್ ಗುರುವಾರ ಅನುಮತಿ ನೀಡಿದೆ. “ನನಗೆ ಶ್ರೀನಗರದಲ್ಲಿರುವ ನಿವಾಸಕ್ಕೆ ತೆರಳುವುದಕ್ಕೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಅಲ್ಲಿ ಸಂಚರಿಸಲು ಸಾಧ್ಯವಾಗಲಾರದು” ಎಂದು ಇಲ್ತಿಝಾ ಮನವಿಯಲ್ಲಿ ಹೇಳಿದ್ದರು.

ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರನ್ನು ಒಳಗೊಂಡ ಪೀಠ, ಇಲ್ತಿಜಾಗೆ ಅವರ ತಾಯಿಯನ್ನು ಭೇಟಿಯಾಗಲು ಅವಕಾಶ ನೀಡಿತು. ಇಲ್ತಿಝಾ ಅವರು ತನ್ನ ತಾಯಿಯನ್ನು ಭೇಟಿಯಾಗಲು ಪ್ರಸ್ತುತ ವಾಸ್ತವ್ಯವಿರುವ ಚೆನ್ನೈಯಿಂದ ಶ್ರೀನಗರಕ್ಕೆ ತೆರಳಲು ಆಡಳಿತ ಅನುಮತಿ ನೀಡುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ನ್ಯಾಯಮೂರ್ತಿಗಳಾದ ಎಸ್.ಎ. ಬೊಬ್ಡೆ ಹಾಗೂ ಎಸ್.ಎ. ನಝೀರ್ ಅವರನ್ನು ಕೂಡ ಒಳಗೊಂಡ ಪೀಠ ಹೇಳಿತು.

ಇಲ್ತಿಝಾ ಅವರು ಶ್ರೀನಗರದ ಇತರ ಭಾಗಗಳ ಸುತ್ತಮುತ್ತ ಸಂಚರಿಸಲು ಬಯಸಿದರೆ ಜಿಲ್ಲಾಡಳಿತದಿಂದ ಅನುಮತಿ ಪಡೆಯಬಹುದು ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ. ತನ್ನ ತಾಯಿಯನ್ನು ಒಂದು ತಿಂಗಳಿಂದ ಭೇಟಿಯಾಗದೇ ಇರುವುದರಿಂದ ಅವರ ಆರೋಗ್ಯದ ಬಗ್ಗೆ ಕಳವಳ ಉಂಟಾಗಿದೆ ಎಂದು ಇಲ್ತಿಜಾ ಮನವಿಯಲ್ಲಿ ಹೇಳಿದ್ದರು. ಇಲ್ತಿಝಾ ಪರವಾಗಿ ವಾದ ಮಂಡಿಸಿದ ನ್ಯಾಯವಾದಿ ನಿತ್ಯಾ ರಾಮಕೃಷ್ಣನ್ ಅವರು, ಇಲ್ತಿಝಾ ದೀರ್ಘ ಕಾಲದಿಂದ ತನ್ನ ತಾಯಿಯನ್ನು ಭೇಟಿಯಾಗಿಲ್ಲ. ಆದುದರಿಂದ ಭೇಟಿಯಾಗಲು ಅವಕಾಶ ನೀಡಬೇಕು ಎಂದು ಕೋರಿದ್ದರು.

ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಹಾಗೂ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಮೆಹಬೂಬಾ ಮುಫ್ತಿ ಅವರ ತಾಯಿ ಗುಲ್ಶನ್ ಆರಾ ಹಾಗೂ ಸಹೋದರಿ ರುಬಯ್ಯಿ ಸಯೀದ್ ಆಗಸ್ಟ್ 29ರಂದು ಮೆಹಬೂಬಾ ಮುಫ್ತಿ ಅವರನ್ನು ಭೇಟಿಯಾಗಿದ್ದಾರೆ ಎಂದು ಅವರು ಹೇಳಿದರು. ಮನವಿಯ ಕಾರಣಗಳು ನಿಜವಾದುದಲ್ಲ. ಮನವಿಗೆ ಬೇರೆ ಕಾರಣಗಳು ಇವೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News