ಆ ‘ಐತಿಹಾಸಿಕ ಅನ್ಯಾಯ’ ಮರುಕಳಿಸಬಾರದು

Update: 2019-09-05 18:30 GMT

‘‘ಅರಣ್ಯದೊಳಗೆ ತಮ್ಮ ಭೂಮಿ ಇದೆಯೆಂದು ದಾವೆ ಹಾಕಿದ್ದು, ಆ ದಾವೆ ತಿರಸ್ಕೃತರಾದವರು ಅರಣ್ಯದೊಳಗಿನ ಜಾಗವನ್ನು ತೆರವು ಮಾಡಿ ಹೋಗಬೇಕು’’ ಎಂಬ ಫೆಬ್ರವರಿ 13, 2019ರ ಸುಪ್ರೀಂ ಕೋರ್ಟಿನ ಆಜ್ಞೆಯು ಅರಣ್ಯ ಸಂರಕ್ಷಣೆ, ಹವಾಮಾನ ವೈಪರೀತ್ಯ ಮತ್ತು ಸಾಮಾಜಿಕ ನ್ಯಾಯಗಳ ವಿಚಾರಗಳಲ್ಲಿ ದೊಡ್ಡದೊಂದು ಚರ್ಚೆಯನ್ನೇ ಹುಟ್ಟುಹಾಕಿದೆ. ಕಾನೂನನ್ನು ಜಾರಿಗೊಳಿಸುವ ಸಂಸ್ಥೆಗಳಿಂದ ತಪ್ಪಾಗಿದ್ದಿರಬಹುದೆಂಬ ಸಾಧ್ಯತೆಯನ್ನು ನೋಡಿ ನ್ಯಾಯಾಧೀಶರು ತಮ್ಮದೇ ಆದೇಶಕ್ಕೆ ತಡೆಯಾಜ್ಞೆಯನ್ನು ಕೊಟ್ಟಿದ್ದಾರೆ. ಅರಣ್ಯದ ಹಕ್ಕು ಕೇಳುತ್ತಿರುವ ಜನರಿಗೆ ಅವರ ಹಕ್ಕು ಕೊಡಲು ಮಾಡುತ್ತಿರುವ ಪ್ರಕ್ರಿಯೆಯನ್ನು ಇನ್ನೊಮ್ಮೆ ಪುನರ್ವಿಮರ್ಶಿಸಲು ರಾಜ್ಯ ಸರಕಾರಗಳಿಗೆ ಕೇಳಿಕೊಂಡಿದೆ. ಆದರೆ ಈ ಅರಣ್ಯವಾಸಿಗಳಿಗೆ ಆದ ಐತಿಹಾಸಿಕ ಅನ್ಯಾಯವನ್ನು ನಮ್ಮ ರಾಜ್ಯ ಸರಕಾರಗಳು ಗುರುತಿಸುತ್ತವೆಯೇ? ಒಪ್ಪಿಕೊಳ್ಳುತ್ತವೆಯೇ? ಆಗಿರುವ ಆ ಅನ್ಯಾಯಗಳನ್ನು ‘ಅರಣ್ಯ ಹಕ್ಕು ಕಾಯ್ದೆಯು ಹೇಳುವ ರೀತಿಯಲ್ಲಿ ತಿದ್ದಬಹುದೇ?

ಅವರು ಅರಣ್ಯವಾಸಿಗಳೇ? ಅಲ್ಲವೇ? ಎಂದು ಪ್ರಮಾಣಿಸಿ ನೋಡುವ ಕಾರ್ಯವು ಬಹುತೇಕ ಹಂತಗಳಲ್ಲಿ ಅಪೂರ್ಣವಾಗಿಡು ಅ ವುದರ ಮೂಲಕ ದೇಶದಲ್ಲೇ ಅತ್ಯಂತ ಬಲಹೀನ, ಮಾಹಿತಿ ಇಲ್ಲದಂಥ ಶೋಷಿತ ಆದಿವಾಸಿಗಳಿಗೆ ಐತಿಹಾಸಿಕವಾಗಿ ನಾಗರಿಕ ಸಮಾಜವು ಮಾಡಿರುವ ಅನ್ಯಾಯವನ್ನು ಪರಿಹರಿಸುವುದರಲ್ಲಿ ಇಂದಿನ ಸಮಾಜವು ಸೋತಿದೆ.

ಬುಡಕಟ್ಟು ಜನರ (ಸಮಾಜಕಲ್ಯಾಣ) ಇಲಾಖೆಯು ಇನ್ನೊಮ್ಮೆ ಜನರ ಅರಣ್ಯ ಹಕ್ಕು ಪ್ರತಿಪಾದನೆಯನ್ನು ಪರಿಶೀಲಿಸೋಣವೆಂದು ಕುಳಿತಿತು ಎಂದೇ ಇಟ್ಟುಕೊಳ್ಳೋಣ. ಆ ಸಮುದಾಯದ ಕಾಡಿನೊಂದಿಗಿನ ಸಂಬಂಧ, ಅಲ್ಲಿದ್ದ ಅವರ ಜೀವನ, ಕಾಡಿನಲ್ಲಿ ಕೃಷಿ ಪದ್ಧತಿಯನ್ನು ಈ ಇಲಾಖೆ ಗುರುತಿಸೀತೇ? ಅಧಿಕಾರಶಾಹಿಯು ಅದನ್ನು ಅರ್ಥಮಾಡಿಕೊಂಡೀತೇ? ಬಹುತೇಕ ಇಲ್ಲ. ಹಿಂದೆಲ್ಲ ಬುಡಕಟ್ಟು ಜನರು ಕಾಡಿನಲ್ಲಿ ಕೃಷಿ ಮಾಡಿಕೊಂಡೂ, ಕಾಡನ್ನು ಮತ್ತು ತಮ್ಮನ್ನು ತಾವು ಕೂಡಾ ರಕ್ಷಣೆ ಮಾಡಿಕೊಳ್ಳುತ್ತಿದ್ದರು ಎನ್ನುವುದು ಇವರಿಗೆ ಅರ್ಥವಾಗಲು ಸಾಧ್ಯವೇ ಇಲ್ಲ. ಎಷ್ಟೋ ಬಾರಿ ಅಲೆಮಾರಿಗಳಾಗಿರುತ್ತಿದ್ದ ಆ ಸಮುದಾಯ ಎಲ್ಲಿ ಉಳುಮೆ ಮಾಡುತ್ತಿದ್ದರು, ಹೇಗೆ ಬೆಳೆ ತೆಗೆಯುತ್ತಿದ್ದರೆಂಬುದು ನಾಗರಿಕರೆನ್ನಿಸಿಕೊಂಡವರಿಗೆ ಅರ್ಥವಾಗುವಂಥಾದ್ದಲ್ಲ. ಅತ್ಯಂತ ಸೂಕ್ಷ್ಮ ವಿವರಗಳನ್ನೂ ದಾಖಲಿಸಿಟ್ಟಿರುವ ಬ್ರಿಟಿಷರು ಕೂಡ ತೀರಾ ಅಸಾಂಪ್ರದಾಯಿಕವಾಗಿ, ಮಾಡಲಸಾಧ್ಯವಾಗಿರುವಂಥ ಆ ಕೃಷಿ ಪದ್ಧತಿಯನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಹಿಂದೆ ದಾಖಲಾಗದ್ದನ್ನು ಇಂದು ಹೇಗೆ ದಾಖಲಿಸಿಯಾರು? ಹಿಂದಾಗಿದ್ದ ತಪ್ಪನ್ನು ಸರಿಪಡಿಸಬೇಕಾಗಿರುವ ಇಂದಿನ ಅಧಿಕಾರಿಗಳು ಮತ್ತೊಮ್ಮೆ ಎಲ್ಲವನ್ನೂ ಅದೇ ಕನ್ನಡಕದ ಮೂಲಕ ನೋಡಿ ಅದೇ ತಪ್ಪನ್ನೆಸಗಬಹುದು. ಹಿಂದೆ ಅವರ ಜೀವನ ಪದ್ಧತಿಯನ್ನು ವಸಾಹತುಶಾಹಿ ಗುರುತಿಸದಿದ್ದುದರಿಂದ ಈ ಜನಕ್ಕೆ ಅನ್ಯಾಯವಾಗಿದೆ, ಆ ಕಾರಣದಿಂದ ಅವರು ಇಂಥ ಸ್ಥಿತಿಯಲ್ಲಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳದಿರಬಹುದು. ಬ್ರಿಟಿಷರ ನೋಟವನ್ನೇ ಹೊತ್ತ ನಮ್ಮ ದೇಶದ ಅಧಿಕಾರಶಾಹಿ, ಸ್ವಾತಂತ್ರ್ಯಾನಂತರವೂ ಬುಡಕಟ್ಟು ಜನರ ಜೀವನವನ್ನು ಗುರುತಿಸಲಿಲ್ಲ, ಗೌರವಿಸಲಿಲ್ಲ. ತಮ್ಮದನ್ನು ತಮಗೆ ಕೊಡಿ ಎಂದು ಕೇಳಿಕೊಂಡ ಅವರ ಬೇಡಿಕೆಯನ್ನು ಮನ್ನಿಸಲಿಲ್ಲ.

ಬಿಳಿಗಿರಿ ರಂಗನ ಬೆಟ್ಟದ ಅಂಚಿಗೆ ಜೀವನವನ್ನು ನೂಕುತ್ತಿರುವ 74 ವರ್ಷದ ಸೋಮಣ್ಣ ಮತ್ತು 67 ವರ್ಷದ ಮಾದಮ್ಮ (ಹೆಸರು ಬದಲಾಯಿಸಿದೆ) ಅವರ ಉದಾಹರಣೆಯನ್ನೇ ತೆಗೆದುಕೊಳ್ಳಿ. ಸೋಲಿಗ ದಂಪತಿಗಳಿವರು. ಕೊಳ್ಳೆಗಾಲ ತಾಲೂಕಿನ ಕಾಂಚಗಳ್ಳಿ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಇವರದಾಗಿದ್ದ ಬಿಳಿಗಿರಿ ರಂಗನ ಬೆಟ್ಟ ಹೊರಗಿನವರಿಗೆ ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಬಿಳಿಗಿರಿ ರಂಗನ ಹುಲಿ ಅಭಯಾರಣ್ಯ. 2006ರ ಅರಣ್ಯ ಹಕ್ಕಿನ ಕಾಯ್ದೆಯ ಬಗ್ಗೆ ಕೇಳಿದ ಈ ದಂಪತಿ ಈಗಿನ ಹುಲಿ ಅಭಯಾರಣ್ಯದೊಳಗಿನ ತಮ್ಮ ಹಾಡಿಯಲ್ಲಿ ಮತ್ತೆ ಉಳುಮೆ ಮಾಡಲು ಹಕ್ಕು ಪತ್ರ ಕೋರಿದರು. ಇನ್ನು ಮುಂದಾದರೂ ಈ ಸ್ವತಂತ್ರ ಭಾರತ ದೇಶದಲ್ಲಿ ನಮ್ಮವರೇ ಅಧಿಕಾರಿಗಳಾಗಿದ್ದಲ್ಲಿ ತಮ್ಮ ಕಾಡಿನಲ್ಲಿ ಮತ್ತೆ ತಮಗೆ ಜೀವಿಸುವ ಅಧಿಕಾರ ಸಿಗುತ್ತದೆಂಬ ಆಶೆ ಅವರಲ್ಲಿ ಚಿಗುರಿತ್ತು. ಎರಡು ತಿಂಗಳ ನಂತರ ಅವರ ಅರ್ಜಿ ತಿರಸ್ಕೃತವಾಗಿದೆಯೆಂಬ ಉತ್ತರ ಬಂದಾಗ ಅವರಿಗೆ ಆಘಾತವಾಗಿತ್ತು. ಅವರ ಅಜ್ಜಂದಿರ ಕಾಲದಿಂದಲೂ ಬೇಡಿಕೊಳ್ಳುತ್ತಲೇ ಇರುವ ಅವರಿಗೆ ಇದೇ ಉತ್ತರ ಬರುತ್ತಲೇ ಇದೆ. ಆದರೆ ಈ ಬಾರಿ ಅರಣ್ಯ ಹಕ್ಕಿನ ಕಾಯ್ದೆ ಬಂದಿದ್ದರಿಂದ ಅವರಲ್ಲಿ ಹೊಸ ಆಶೆ ಚಿಗುರಿತ್ತು. ಇಂದು ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ಜೇನುಕುರುಬ, ಬೆಟ್ಟಕುರುಬ, ಸೋಲಿಗ, ಯರವ, ಹಕ್ಕಿಪಿಕ್ಕಿ ಮುಂತಾದ ಅನೇಕ ಬುಡಕಟ್ಟು ಜನರ ವಸತಿಗಳಿವೆ. ಅವರೆಲ್ಲರದೂ ಇಂಥದ್ದೇ ನಿರಾಶ್ರಯ, ಮತ್ತೆ ಸೋಲಿನ ನಿರಾಶಾದಾಯಕ ಅನುಭವದ ಕತೆಗಳು.

ಅರಣ್ಯದ ವೈಯಕ್ತಿಕ ಹಕ್ಕುಗಳ ಬಗ್ಗೆ ವಿಚಾರಿಸಲು ಅರಣ್ಯಇಲಾಖೆಯ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಗ್ರಾಮಅರಣ್ಯ ಹಕ್ಕು ಸಮಿತಿಯ ಸದಸ್ಯರು, ಜಮೀನು ತನ್ನದೆಂದು ಕೇಳಿಕೊಂಡ ವ್ಯಕ್ತಿಯ ಜೊತೆಗೆ ಆ ಸ್ಥಳಕ್ಕೆ ಹೋಗಬೇಕು. ಆದರೆ ಇಂದು ಆ ಜಾಗವು ಸಂರಕ್ಷಿತ ಪ್ರದೇಶವಾಗಿರುವುದರಿಂದ ಅರಣ್ಯ ಇಲಾಖೆಯ ಅಭಯಾರಣ್ಯ ವಿಭಾಗಕ್ಕೆ ಸೇರಿದ ಅಧಿಕಾರಿಗಳು ಮಾತ್ರ ಒಳಗೆ ಹೋಗುತ್ತಾರೆ. ಹಿಂದೆ ಸಂರಕ್ಷಿತ, ಅಭಯಾರಣ್ಯವೆಂದು ಘೋಷಣೆಯಾಗಿ ನೋಟಿಫಿಕೇಶನ್ ಮಾಡಿದಾಗ ತಮ್ಮ ಇಲಾಖೆಯೇ ಅರಣ್ಯದಿಂದ ಹೊರ ಹಾಕಿದ್ದ ಕುಟುಂಬಗಳಿವು. ಇಷ್ಟೆಲ್ಲ ವರ್ಷಗಳ ಕಾಲ ಅವರಿಗೆ ತಮ್ಮ ನೆಲಕ್ಕೆ ಬರಲು ಇಲಾಖೆಯು ಕೊಡಲೇ ಇಲ್ಲ ಎಂಬುದರ ಬಗೆಯೂ ಅರಿವಿಲ್ಲದ ಈ ಅಧಿಕಾರಿಗಳು ಆ ಖಾಲಿ ಜಾಗಕ್ಕೆ ಹೋಗಿ ನೋಡಿ ಬಂದು, ‘‘ಅಲ್ಲಿ ಯಾರೂ ಇಲ್ಲ, ಯಾರೂ ಉಳುಮೆ ಮಾಡುತ್ತಿಲ್ಲ’’ ಎಂದು ವರದಿ ಮಾಡುತ್ತಾರೆ. ಈ ಜಾಗವನ್ನು ಕೈಗೆ ತೆಗೆದುಕೊಂಡ ಅರಣ್ಯ ಇಲಾಖೆಯು ಅಲ್ಲಿ ತೋಪುಗಳನ್ನು ಬೆಳೆಸಿರಬಹುದು ಅಥವಾ ನೈಸರ್ಗಿಕವಾಗಿಯೇ ಅಲ್ಲೀಗ ಗಿಡಗಂಟಿಗಳು ಬೆಳೆದುಕೊಂಡಿರಬಹುದು.

ಅರಣ್ಯವಾಸಿಗಳನ್ನು ಅಂದು ‘ಕಾಡು ಮನುಷ್ಯ’ರೆಂದು ಕರೆದರು ಬ್ರಿಟಿಷರು. ವಸಾಹತು ಕಾಲದಲ್ಲಿ ನೋಟಿಫೈ ಆಗಿದ್ದ ಅರಣ್ಯ ಮತ್ತು ಕಾದಿಟ್ಟ ಅರಣ್ಯದ ಆಳ್ವಿಕೆಯನ್ನು ಬ್ರಿಟಿಷರಿಂದ ಸ್ವತಂತ್ರ ಭಾರತದ ಅರಣ್ಯ ಇಲಾಖೆಯು ತನ್ನ ಕೈಗೆ ತೆಗೆದುಕೊಂಡಿತು. ಈ ಅರಣ್ಯದ ‘ಕಾಡು ಮನುಷ್ಯ’ರ ಪಾಲಿಗೆ ಅರಣ್ಯ ಇಲಾಖೆಗಳ ದಾಖಲೆಗಳಲ್ಲಿ 1.ಸುಮಾರು ಕಾಲು ಎಕರೆಯಷ್ಟು ಭಾಗದ ಹಳ್ಳಿ, 2.ಕಾಲು ಎಕರೆಯಷ್ಟು ಅವರ ಸ್ಮಶಾನ ಭೂಮಿ, 3.ಅವರ ದೇವಸ್ಥಾನ ಮತ್ತು ಅವರ ಜಲಮೂಲಗಳು ಮತ್ತು 4.ಅವುಗಳಿಗೆ ಹೋಗಿ ಬರಲು ಅರಣ್ಯ ಇಲಾಖೆಯೇ ಮಾಡಿಕೊಟ್ಟ ಚಿಕ್ಕದಾದ ಕಿರುದಾರಿ ಇವನ್ನು ದಾಖಲೆ ಮಾಡಿಡಲಾಗಿದೆ. ಆದರೆ ಇವೊಂದೂ ದಾಖಲೆಯಲ್ಲಿ ಆ ಕಾಡು ಮನುಷ್ಯರು ತಮ್ಮ ಆಹಾರವನ್ನು ಎಲ್ಲಿಂದ, ಹೇಗೆ ಪಡೆಯುತ್ತಿದ್ದರು ಎಂಬ ಬಗ್ಗೆ ಯಾವುದೇ ರೀತಿಯ ಉಲ್ಲೇಖ ಇಲ್ಲ. ಮನೆ, ದೇವಸ್ಥಾನ, ಜಲಮೂಲ ಇವಿಷ್ಟರಿಂದಲೇ ಯಾರಾದರೂ, ಅದರಲ್ಲೂ ಮನುಷ್ಯ ಬದುಕಬಹುದೇ? ಅವರೆಲ್ಲ ಕಾಡಿನಲ್ಲಿ ಸಿಕ್ಕಿದ್ದನ್ನು ತಿಂದೇ ಜೀವನ ಮಾಡುತ್ತಿದ್ದರೆಂದಾದರೆ ಅದನ್ನೇ ದಾಖಲಿಸಬಹುದಿತ್ತಲ್ಲ? ಈ ದಾಖಲೆಗಳಲ್ಲಿ ಗುಡಿಸಲಿನಿಂದ ದೇವಸ್ಥಾನಕ್ಕೆ ಹೋಗುವ ದಾರಿ, ಅಲ್ಲಿಂದ ಇನ್ನೊಂದು ಹಾಡಿಗೆ ಹೋಗುವ ಹಾದಿಗಳನ್ನು, ದನಕರುಗಳನ್ನು ಮೇಯಲು ಕರೆದುಕೊಂಡು ಹೋಗುವ ಹಾದಿಗಳನ್ನು ಸಹ ಬಹಳ ಸ್ಪಷ್ಟವಾಗಿ ನಮೂದಿಸಿರುವಾಗ ಅವರು ಕಾಡಿನಿಂದ ಹಣ್ಣು ಹಂಪಲುಗಳನ್ನು ತೆಗೆದುಕೊಂಡು ಬರುವ ದಾರಿ, ಹೊಲಗಳನ್ನು ಮಾಡಿದ ಜಾಗ ಮತ್ತು ಅಲ್ಲಿಗೆ ದಾರಿಗಳನ್ನೇಕೆ ದಾಖಲಿಸಿಲ್ಲ? ಅಂದಿನ ಇಲಾಖೆ ಮಾಡಿದ ತಪ್ಪಿಗೆ, ಈ ಸಮುದಾಯಕ್ಕೆ ಎಸಗಿದ ದ್ರೋಹಕ್ಕೆ ಇಂದು ಅರಣ್ಯ ಹಕ್ಕು ಕಾಯ್ದೆ 2006ನ್ನು ಸರಿಯಾಗಿ ಇವರು ಜಾರಿಯಲ್ಲಿ ತರಲೇಬೇಕು. ಆದರೇನು, ಹಕ್ಕು ನೀಡುವ ಸಂದರ್ಭದಲ್ಲಿ ಆಗ ಮಾಡಿದ ತಪ್ಪನ್ನು ‘ತಪ್ಪಾಗಿದೆ’ ಎಂದು ಸ್ವೀಕರಿಸದೆ ಅಧಿಕಾರಿಗಳು ಬುಡಕಟ್ಟು ಜನರಿಗೆ ಮತ್ತೊಮ್ಮೆ ಹಕ್ಕಿನ ನಿರಾಕರಣೆ ಮಾಡುತ್ತಿದ್ದಾರೆ.

ಈ ಎಲ್ಲ ಬುಡಕಟ್ಟು ಸಮುದಾಯಗಳಿಗೆ ಸಂರಕ್ಷಿತ ಅರಣ್ಯದ ಹೊರಗೆ ಜಾಗ, ಪರಿಹಾರವನ್ನೆಲ್ಲ ಕೊಟ್ಟಾಗಿದೆಯಲ್ಲ, ಮತ್ತೇಕೆ ಆ ಮಾತು ಅನ್ನಬಹುದು ಹಲವರು. ಆದರೆ ಯಾತಕ್ಕೆ ಪರಿಹಾರ? ಕಳೆದುಕೊಂಡಿದ್ದಕ್ಕೆ ಪರಿಹಾರ ತಾನೇ? ಪರಿಹಾರ ನಿರ್ಧರಿಸುವ ಮೊದಲು ಕಳೆದುಕೊಂಡಿದ್ದೇನು ಎಂಬುದು ಗೊತ್ತಾಗಬೇಕಲ್ಲ? ಈ ಜನ ಸಮುದಾಯವು ಅರಣ್ಯದೊಳಗೆ ನೈಸರ್ಗಿಕವಾಗಿ ಬಾಳಿ, ತಾವೂ ಬದುಕಿ, ಅರಣ್ಯವನ್ನೂ ನಮಗಾಗಿ ಉಳಿಸಿಕೊಂಡಿದ್ದರು. ಅವರಿಂದಾಗಿ ನಮಗೆ ಈ ಅರಣ್ಯ ಸಂಪತ್ತಿದೆ. ನಾಳಿನ ಭವಿಷ್ಯಕ್ಕೆ ಅದನ್ನು ಉಳಿಸುವ ನಿಜವಾದ ಕಳಕಳಿ ನಮಗಿದ್ದರೆ ಇಂದು ಅವರದನ್ನು ಅವರಿಗೆ ಗೌರವಪೂರ್ವಕವಾಗಿ ವಾಪಸು ಕೊಟ್ಟುಬಿಡುವುದೊಂದೇ ಅವರಿಗೆ ಕೊಡಬಹುದಾದ ನಿಜವಾದ ಪರಿಹಾರ. ಆದರೆ ಅರಣ್ಯದ ಹಕ್ಕನ್ನು ದೊರಕಿಸಿಕೊಳ್ಳಲು ಕಾಯ್ದೆ ಹೇಳಿದ ಪ್ರಕ್ರಿಯೆಯನ್ನೂ ಮಾಡಲಾಗುತ್ತಿಲ್ಲ, ಅಷ್ಟೇ ಅಲ್ಲ, ಅರ್ಜಿಗಳು ತಿರಸ್ಕೃತವಾದ ಕಾರಣಕ್ಕೆ ಅವರಿಗೆ ಅತಿಕ್ರಮಣಕಾರರೆಂದು ಕರೆದಿರುವುದು ಅದಕ್ಕಿಂತ ದೊಡ್ಡ ವಂಚನೆ.

Writer - ರೋಶನಿ ಕುಟ್ಟಿ

contributor

Editor - ರೋಶನಿ ಕುಟ್ಟಿ

contributor

Similar News

ಜಗದಗಲ
ಜಗ ದಗಲ