ತುಘಲಕ್ ಮಾದರಿ ಆಡಳಿತ

Update: 2019-09-06 08:16 GMT

ಆತ ಕೊಂಡು ಕೊಂಡ ‘ಸೆಕೆಂಡ್ ಹ್ಯಾಂಡ್’ ಸ್ಕೂಟರ್ ಬೆಲೆ 15,000 ರೂಪಾಯಿ. ಆತನಿಗೆ ಪೊಲೀಸರು ದಂಡ ವಿಧಿಸಿರುವುದು 23,000 ರೂಪಾಯಿ. ಇದು ದ್ವಿಚಕ್ರವಾಹನ ಸವಾರನ ಕತೆಯಾಯಿತು. ಮಗದೊಂದೆಡೆ ರಿಕ್ಷಾವನ್ನೇ ಜೀವನಾಧಾರವಾಗಿಸಿರುವ ಚಾಲಕನೊಬ್ಬನಿಗೆ ಪೊಲೀಸರು 32,000 ರೂಪಾಯಿಯನ್ನು ದಂಡವಾಗಿ ವಿಧಿಸಿದ್ದಾರೆ. ಮಗದೊಂದೆಡೆ ಟ್ರಾಕ್ಟರ್ ಚಾಲಕನಿಗೆ 59,000 ರೂಪಾಯಿ ದಂಡವನ್ನು ವಿಧಿಸಲಾಗಿದೆ. ದಂಡ ವಿಧಿಸುವ ಪೊಲೀಸ್ ಸಿಬ್ಬಂದಿಗೆ ಸ್ಪಷ್ಟವಾಗಿ ಗೊತ್ತಿದೆ, ಯಾವ ರೀತಿಯಲ್ಲೂ ಆ ದಂಡವನ್ನು ಕಟ್ಟುವ ಸ್ಥಿತಿಯಲ್ಲಿ ಆತನಿಲ್ಲ ಎನ್ನುವುದು. ಒಂದು ರೀತಿಯಲ್ಲಿ ಆ ದಂಡ ಆ ಬಡವನ ಬದುಕನ್ನೇ ಬೀದಿ ಪಾಲು ಮಾಡುತ್ತದೆ. ಇಂತಹದೊಂದು ಹೃದಯ ಶೂನ್ಯವಾದ ದಂಡವನ್ನು ಕಟ್ಟುವಂತಹ ಅಪರಾಧವಾದರೂ ಏನು? ಸೆಪ್ಟಂಬರ್ 1ರಿಂದ ರಾಜ್ಯಗಳಲ್ಲಿ ಜಾರಿಗೆ ಬಂದಿರುವ ಹೊಸ ಮೋಟಾರು ವಾಹನ ಕಾಯ್ದೆ ಮಾಡುತ್ತಿರುವ ಅವಾಂತರಗಳು ಇವು. ಮುಹಮ್ಮದ್ ಬಿನ್ ತುಘಲಕ್ ತನ್ನ ಆಡಳಿತದಲ್ಲಿ ನಡೆಸಲು ಹೊರಟ ಪ್ರಯೋಗಗಳು ಹೇಗೆ ನಗೆಪಾಟಲಿಗೀಡಾಯಿತು ಎನ್ನುವುದನ್ನು ನಾವು ಇತಿಹಾಸ ಪಠ್ಯದಲ್ಲಿ ಓದಿದ್ದೇವೆ. ಸ್ವಾತಂತ್ರಾನಂತರ ಅದೇ ತುಘಲಕ್‌ನ ಮಾದರಿಯನ್ನಿಟ್ಟುಕೊಂಡು ಸರಕಾರ ಆಡಳಿತ ನಡೆಸಲು ಹೊರಟಿದೆಯೇ ಎಂದು ಜನರು ಆತಂಕಪಡುವಂತಹ ಸನ್ನಿವೇಶ ನಿರ್ಮಾಣವಾಗಿದೆ.

ಮುಹಮ್ಮದ್ ಬಿನ್ ತುಘಲಕ್‌ನನ್ನು ಗಿರೀಶ್ ಕಾರ್ನಾಡ್ ಒಬ್ಬ ಕ್ರಾಂತಿಕಾರಿ ಆಲೋಚನೆಗಳಿರುವ ಆಡಳಿತಗಾರ ಎಂದು ಬಣ್ಣಿಸುತ್ತಾರೆ. ಆದರೆ ಅನುಷ್ಠಾನದಲ್ಲಿ ಆ ಆಲೋಚನೆಗಳೆಲ್ಲವೂ ವಿಫಲವಾಗುತ್ತವೆ. ಪರಿಣಾಮವಾಗಿ ಆತನನ್ನು ಇತಿಹಾಸ ಒಬ್ಬ ಮೂರ್ಖ, ಅವಿವೇಕಿ ರಾಜನಾಗಿ ಗುರುತಿಸುತ್ತದೆ. ಸದ್ಯಕ್ಕೆ ಮೋದಿಯವರ ಆಡಳಿತದ ಸ್ಥಿತಿ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ತನ್ನ ಸಾಮ್ರಾಜ್ಯದ ವ್ಯಾಪ್ತಿಗೆ ಅನುಸಾರವಾಗಿ ಆಳ್ವಿಕೆಗೆ ಅನುಕೂಲವಾಗಲು ರಾಜಧಾನಿಯನ್ನು ದಿಲ್ಲಿಯಿಂದ ದೌಲತಾಬಾದ್‌ಗೆ ಮುಹಮ್ಮದ್ ಬಿನ್ ತುಘಲಕ್ ವರ್ಗಾಯಿಸುತ್ತಾನೆ. ಸಾಮ್ರಾಜ್ಯದ ಕೇಂದ್ರಭಾಗದಲ್ಲಿರುವುದರಿಂದ ಆಡಳಿತಕ್ಕೆ ಅನುಕೂಲವಾಗುವುದೇನೋ ಸರಿ. ಆದರೆ ವರ್ಗಾವಣೆಯ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡು ಯೋಜನೆ ವಿಫಲವಾಗುತ್ತದೆ. ದೌಲತಾಬಾದ್ ರಾಜಧಾನಿ ಪಾಳುಬಿದ್ದ ನಗರವಾಗುತ್ತದೆ. ಮತ್ತೆ ಆತ ರಾಜಧಾನಿಯನ್ನು ದಿಲ್ಲಿಗೆ ವರ್ಗಾಯಿಸುತ್ತಾನೆ. ಈ ಸಂದರ್ಭದಲ್ಲಿ ಅಪಾರ ಸಾವುನೋವುಗಳು ಸಂಭವಿಸುತ್ತವೆ. ಅಂತೆಯೇ, ತಾಮ್ರದ ನಾಣ್ಯದ ಬದಲು ಚರ್ಮದ ನಾಣ್ಯದ ಕುರಿತ ಆತನ ಕಲ್ಪನೆಯೂ ಆಧುನಿಕವಾಗಿತ್ತು. ತಾಮ್ರವಾದರೂ, ಚರ್ಮವಾದರೂ, ರಾಜಮುದ್ರೆಗೆ ಬೆಲೆಯಿರುವುದರಿಂದ ತಾಮ್ರದ ಬದಲು ಚರ್ಮವನ್ನು ಬಳಸಲು ಯೋಚಿಸುತ್ತಾನೆ. ಇದರಿಂದ ನಾಣ್ಯ ತಯಾರಿಯ ವೆಚ್ಚದಲ್ಲಿ ಬಾರೀ ಉಳಿತಾಯವಾಗುತ್ತದೆ ಎನ್ನುವುದು ಆತನ ಲೆಕ್ಕಾಚಾರವಾಗಿತ್ತು. ಆದರೆ ಇಲ್ಲೂ ವಿಫಲವಾಗುತ್ತಾನೆ. ಚರ್ಮದ ನಕಲಿ ನಾಣ್ಯಗಳು ಅವನ ಯೋಜನೆಯನ್ನು ಬುಡಮೇಲು ಮಾಡುತ್ತವೆ. ಹೀಗೆ ತನ್ನ ಒಂದೊಂದು ದೂರದೃಷ್ಟಿಯ ಯೋಜನೆಗಳ ಮೂಲಕವೇ ಮುಹಮ್ಮದ್ ಬಿನ್ ತುಘಲಕ್ ಜನರ ಆಕ್ರೋಶ, ಟೀಕೆ ಅಂತಿಮವಾಗಿ ತಮಾಷೆಗಳಿಗೆ ಬಲಿಯಾಗುತ್ತಾನೆ. ಪ್ರಜಾಸತ್ತಾತ್ಮಕವಾದ ಈ ದಿನಗಳಲ್ಲಿ ನರೇಂದ್ರ ಮೋದಿಯವರ ಆಡಳಿತ ಮುಹಮ್ಮದ್ ಬಿನ್ ತುಘಲಕ್ ಆಡಳಿತದ ಅಣಕದಂತಿದೆ.

ದೇಶದೊಳಗಿರುವ ಕಪ್ಪುಹಣವೆಲ್ಲ ಬಂದು ಬೀಳುತ್ತದೆ ಎಂದು ಮೋದಿ ಸರಕಾರ ನೋಟು ನಿಷೇಧ ಮಾಡಿತು. ಆದರೆ ಅಂತಿಮವಾಗಿ ಕಪ್ಪು ಹಣ ಬರಲೇ ಇಲ್ಲ. ಬದಲಿಗೆ ನೋಟು ನಿಷೇಧದ ಕಾರಣದಿಂದ ಬೊಕ್ಕಸಕ್ಕೆ ಭಾರೀ ಹೊರೆ ಬಿತ್ತು. ಜನಸಾಮಾನ್ಯರು ತಮ್ಮದೇ ಹಣಕ್ಕಾಗಿ ಬ್ಯಾಂಕ್ ಮುಂದೆ ಸರದಿಯಲ್ಲಿ ನಿಲ್ಲುವ ದೈನೇಸಿ ಸ್ಥಿತಿ ನಿರ್ಮಾಣವಾಯಿತು. ಸಣ್ಣ ಉದ್ದಿಮೆಗಳು ಸರ್ವನಾಶವಾಯಿತು. ನಗದಿನ ಬದಲು ಡಿಜಿಟಲೀಕರಣ ವಂಚನೆ ಪ್ರಕರಣಗಳನ್ನು ಹೆಚ್ಚಿಸಿತೇ ಹೊರತು, ಆರ್ಥಿಕ ಪುನಶ್ಚೇತನಕ್ಕೆ ಯಾವ ರೀತಿಯ ಸಹಾಯವನ್ನೂ ಮಾಡಲಿಲ್ಲ. ಇದೀಗ ಸಾರಿಗೆ ನಿಯಮಗಳನ್ನು ಸರಿಪಡಿಸಲು ಸರಕಾರ ಜಾರಿಗೊಳಿಸಿದ ಮೋಟಾರು ವಾಹನ ಕಾಯ್ದೆಯೂ ನೇರವಾಗಿ ಜನಸಾಮಾನ್ಯರಿಗೇ ಆಘಾತಗಳನ್ನು ನೀಡುತ್ತಿದೆ. ಈಗಾಗಲೇ ಆಟೊಮೊಬೈಲ್ ಉದ್ಯಮಗಳು ಭಾರೀ ಹಿನ್ನಡೆ ಅನುಭವಿಸುತ್ತಿವೆ. ಗಾಯದ ಮೇಲೆ ಬರೆ ಎಳೆದಂತೆ ನೂತನ ಕಾಯ್ದೆ ವಾಹನ ಉದ್ಯಮಗಳ ಮೇಲೆ ಇನ್ನಷ್ಟು ದುಷ್ಪರಿಣಾಮಗಳನ್ನು ಬೀರತೊಡಗಿದೆ. ಜನರು ತಾವು ಉಪಯೋಗಿಸುತ್ತಿರುವ ವಾಹನಗಳನ್ನೇ ಭಯದಿಂದ ನೋಡುವಂತಹ ಸ್ಥಿತಿ ನಿರ್ಮಾಣವಾಗಿದೆ.

 ನಿಜ. ನೂತನ ಕಾಯ್ದೆಯಲ್ಲಿ ಹಲವು ಒಳಿತುಗಳೂ ಇವೆ. ಚಾಲನಾ ಪರವಾನಿಗೆ ಮೊದಲಿಗಿಂತ ಸುಲಭ. ಅಪಘಾತ ಸಂದರ್ಭದಲ್ಲಿ ಸಂತ್ರಸ್ತರಿಗೆ ವೈದ್ಯಕೀಯ ಸೌಲಭ್ಯಗಳನ್ನು ತಕ್ಷಣ ಒದಗಿಸಲು ಈ ಕಾಯ್ದೆ ಆದೇಶಿಸುತ್ತದೆ. ಈ ಸಂಬಂಧ ಕಾನೂನಿಗೆ ಸಂಬಂಧಪಟ್ಟ ಸಣ್ಣ ಪುಟ್ಟ ತೊಡಕುಗಳನ್ನು ನಿವಾರಿಸಿದೆ. ಆದರೆ ಕಾನೂನು ಪಾಲಿಸದ ಪ್ರಯಾಣಿಕರಿಗೆ ಸರಕಾರ ವಿಧಿಸಲು ಹೊರಟಿರುವ ದಂಡ ಮಾತ್ರ ಬೆಚ್ಚಿ ಬೀಳಿಸುವಂತಿದೆ. ಈವರೆಗೆ ವಿವಿಧ ಟೋಲ್‌ಗೇಟ್‌ಗಳು ವಾಹನ ಚಾಲಕರನ್ನು ದರೋಡೆ ಮಾಡುತ್ತಿದ್ದರೆ ಮುಂದಿನ ದಿನಗಳಲ್ಲಿ ಸಾರಿಗೆ ಇಲಾಖೆಗಳು ಚಾಲಕರನ್ನು ದೋಚಲಿವೆ. ಇಂತಹ ದಂಡ ಈ ದೇಶದಲ್ಲಿ ರಸ್ತೆ ಅವಘಡಗಳನ್ನು ತಪ್ಪಿಸಬಹುದು, ಎನ್ನುವುದಕ್ಕಿಂತ, ಸಾರಿಗೆ ನಿಯಮ ಉಲ್ಲಂಘನೆ ದೇಶದಲ್ಲಿ ಸಾಮಾನ್ಯವಾಗಿರುವುದರಿಂದ, ದಂಡದ ಮೂಲಕ ಅಪಾರ ಸಂಗ್ರಹ ಮಾಡಬಹುದು ಎನ್ನುವ ದೂರಾಲೋಚನೆ ಎದ್ದು ಕಾಣುತ್ತಿದೆ. ಬಹುಶಃ ನೋಟು ನಿಷೇಧದಲ್ಲಿ ಕಳೆದುಕೊಂಡುದನ್ನು ಈ ಕಾಯ್ದೆಯ ಮೂಲಕ ತುಂಬಿಸಿಕೊಳ್ಳಲು ಹೊರಟಂತಿದೆ. ಕೊಲ್ಲಿ ರಾಷ್ಟ್ರಗಳಲ್ಲಿ ಇಂತಹ ದಂಡ ವಿಧಿಸುವ ಕ್ರಮಗಳಿವೆ. ಆದರೆ ಕೊಲ್ಲಿ ರಾಷ್ಟ್ರಗಳಲ್ಲಿ ಇರುವಂತಹ ರಸ್ತೆಗಳು ನಮ್ಮ ದೇಶದಲ್ಲಿ ಇದೆಯೇ? ಅಲ್ಲಿರುವ ಸುಸಜ್ಜಿತ ಸಾರಿಗೆ ತಂತ್ರಜ್ಞಾನಗಳು, ಕಚೇರಿಗಳು ಇಲ್ಲಿವೆಯೆ? ಹೊಂಡಗಳಿಂದ ತುಂಬಿದ ರಸ್ತೆಗಳು, ಅರ್ಧಕ್ಕೆ ನಿಂತ ಸೇತುವೆಗಳು, ಫೂಟ್‌ಪಾತ್ ಕೊರತೆ, ಕಳಪೆ ನಿರ್ವಹಣೆ ಇತ್ಯಾದಿಗಳಿಗೆ ಯಾವುದೇ ಈ ದೇಶದಲ್ಲಿ ಯಾವುದೇ ದಂಡ ಇಲ್ಲ.

ಇಂತಹ ಒತ್ತಡ ತುಂಬಿದ ರಸ್ತೆಗಳಲ್ಲಿ ಚಾಲಕರಷ್ಟೇ ನಿಯಮಗಳನ್ನು ಪಾಲಿಸುವುದರಿಂದ ಚಾಲನೆ ಸಲೀಸಾಗುತ್ತದೆಯೇ? ಇಷ್ಟಕ್ಕೂ ಕಳಪೆ ರಸ್ತೆಗಳಿಗಾಗಿ ಯಾಕೆ ರಾಜಕಾರಣಿಗಳಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ದಂಡವನ್ನು ವಿಧಿಸಬಾರದು? ಸರಕಾರ ಒಮ್ಮೆ ಆರ್‌ಟಿಒ ಕಚೇರಿಗಳನ್ನು ಹೊಕ್ಕು ನೋಡಲಿ. ಆರ್‌ಟಿಒ ಕಚೇರಿಗಳು ಇನ್ನೂ ಮಧ್ಯವರ್ತಿಗಳಿಂದ ಮುಕ್ತವಾಗಿಲ್ಲ. ನಗರಗಳ ಬೀದಿ ಬೀದಿಗಳಲ್ಲಿ ವೈನ್ ಅಂಗಡಿಗಳನ್ನು ತೆರೆಯಲು ಪರವಾನಿಗೆ ನೀಡಿರುವ ಸರಕಾರ, ಮಗದೊಂದೆಡೆ ಮದ್ಯ ಸೇವಿಸಿ ವಾಹನಚಲಾಯಿಸುವವರಿಗೆ 10 ಸಾವಿರ ರೂ. ದಂಡ ವಿಧಿಸಲು ಹೊರಟಿದೆ. ಅದರ ಬದಲಿಗೆ ಮದ್ಯದಂಗಡಿಗಳನ್ನೇ ನಿಷೇಧ ಮಾಡಿ ಸಾರಿಗೆ ಕ್ಷೇತ್ರದಲ್ಲಿ ಮಾತ್ರವಲ್ಲ, ಎಲ್ಲ ರಂಗಗಳಲ್ಲೂ ಸುಧಾರಣೆ ತರಬಹುದಲ್ಲ? ನೂತನ ಕಾಯ್ದೆಯ ಲಾಭವೆಂದರೆ, ಭ್ರಷ್ಟ ಪೊಲೀಸ್ ಸಿಬ್ಬಂದಿ, ಅಧಿಕಾರಿಗಳು ಇನ್ನಷ್ಟು ಕೊಬ್ಬಲಿದ್ದಾರೆ. ಸಾರಿಗೆ ಇಲಾಖೆಗಳಲ್ಲಿ ಭ್ರಷ್ಟಾಚಾರ ಇನ್ನಷ್ಟು ಹೆಚ್ಚಲಿವೆೆ.

ಸರಕಾರಕ್ಕೆ ನಿಜಕ್ಕೂ ಸಾರಿಗೆ ನಿಯಮಗಳನ್ನು ಅನುಷ್ಠಾನಗೊಳಿಸುವ ಉದ್ದೇಶವಿದ್ದರೆ ಮೊದಲು ಕಳಪೆ ರಸ್ತೆಗಳನ್ನು ಉದ್ಧರಿಸಲಿ. ಜೊತೆಗೆ ಆರ್‌ಟಿಒ ಕಚೇರಿಗಳನ್ನು ಮಧ್ಯವರ್ತಿಗಳಿಂದ ಮುಕ್ತಗೊಳಿಸಲಿ. ಹಾಗೆಯೇ ಹಬ್ಬ ಹರಿದಿನಗಳ ಹೆಸರಲ್ಲಿ ರಸ್ತೆಯ ಮಧ್ಯೆಯೇ ಚಪ್ಪರ ಹಾಕಿ ಕುಣಿಯುವ, ಮೆರವಣಿಗೆಗಳನ್ನು ನಡೆಸಿ ಜನಸಾಮಾನ್ಯರಿಗೆ ಕಿರುಕುಳ ನೀಡುವ ಪ್ರವೃತ್ತಿಗಳಿಗೆ ಕಡಿವಾಣ ಹಾಕಲಿ. ಹಂತ ಹಂತವಾಗಿ ಜನರನ್ನು ಜಾಗೃತಿಗೊಳಿಸುತ್ತಾ, ಬಳಿಕ ‘ದಂಡ’ವನ್ನು ಕೈಗೆತ್ತಿಕೊಳ್ಳಲಿ. ಇಲ್ಲವಾದರೆ ದಂಡದ ಹೆಸರಿನಲ್ಲಿ ಬಡಪಾಯಿ ವಾಹನ ಚಾಲಕರ ತಲೆದಂಡವಾದೀತು. ಇದು ಈಗಾಗಲೇ ಆರ್ಥಿಕ ಹಿಂಜರಿತದಿಂದ ಕಂಗಾಲಾಗಿರುವ ದೇಶವನ್ನು ಇನ್ನಷ್ಟು ಸಂಕಟಗಳಿಗೆ ದೂಡೀತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News