×
Ad

ನೋಟುಗಳನ್ನು ಗುರುತಿಸಲು ಅಂಧರಿಗೆ ನೆರವಾಗಲು ಆರ್‌ಬಿಐನಿಂದ ಆ್ಯಪ್

Update: 2019-09-06 22:28 IST

ಮುಂಬೈ,ಸೆ.6: ಕರೆನ್ಸಿ ನೋಟುಗಳನ್ನು ಗುರುತಿಸಲು ಅಂಧರಿಗೆ ನೆರವಾಗುವ ಮೊಬೈಲ್ ಆ್ಯಪ್‌ವೊಂದನ್ನು ತಾನು ಬಿಡುಗಡೆಗೊಳಿಸಲಿದ್ದು,ಇದಕ್ಕೆ ಇಂಟರ್ನೆಟ್ ಸಂಪರ್ಕ ಅಗತ್ಯವಿಲ್ಲ ಎಂದು ಆರ್‌ಬಿಐ ಶುಕ್ರವಾರ ಬಾಂಬೆ ಉಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.

ಆ್ಯಪ್‌ನ ಬೀಟಾ ಆವೃತ್ತಿಯನ್ನು ನ.1ಕ್ಕೆ ಬಿಡುಗಡೆಗೊಳಿಸಲಾಗುವುದು. ಬಳಕೆದಾರರಿಂದ ಮರುಮಾಹಿತಿಗಳನ್ನು ಸ್ವೀಕರಿಸಿದ ಬಳಿಕ ಆ್ಯಪ್‌ನ ಅಂತಿಮ ಆವೃತ್ತಿಯನ್ನು ಬಿಡುಗಡೆಗೊಳಿಸಲಾಗುವುದು ಎಂದು ಆರ್‌ಬಿಐ ವಕೀಲ ವೆಂಕಟೇಶ ಧೋಂಡ್ ಅವರು ಮುಖ್ಯ ನ್ಯಾಯಾಧೀಶ ಪ್ರದೀಪ ನಂದ್ರಜೋಗ್ ಮತ್ತು ನ್ಯಾ.ಭಾರತಿ ಡಾಂಗ್ರೆ ಅವರ ಪೀಠಕ್ಕೆ ತಿಳಿಸಿದರು.

ಆರ್‌ಬಿಐ ಹೊಸದಾಗಿ ಬಿಡುಗಡೆಗೊಳಿಸಿರುವ ನೋಟುಗಳು ಮತ್ತು ನಾಣ್ಯಗಳನ್ನು ಗುರುತಿಸಲು ದೃಷ್ಟಿದೋಷವುಳ್ಳ ವ್ಯಕ್ತಿಗಳಿಗೆ ಕಠಿಣವಾಗುತ್ತಿದೆ ಎಂದು ದೂರಿ ರಾಷ್ಟ್ರೀಯ ಅಂಧರ ಸಂಘ(ಎನ್‌ಎಬಿ)ವು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಉಚ್ಚ ನ್ಯಾಯಾಲಯವು ನಡೆಸುತ್ತಿದೆ.

ಗುರುವಾರ ಕಾಶ್ಮೀರದಲ್ಲಿಯ ಸಂವಹನ ನಿರ್ಬಂಧಗಳನ್ನು ಉಲ್ಲೇಖಿಸಿದ್ದ ಪೀಠವು,ಇಂತಹ ಸ್ಥಿತಿಯಲ್ಲಿ ಆರ್‌ಬಿಐನ ಪ್ರಸ್ತಾವಿತ ಆ್ಯಪ್ ನೋಟುಗಳನ್ನು ಗುರುತಿಸಲು ದೃಷ್ಟಿಹೀನರಿಗೆ ಹೇಗೆ ನೆರವಾಗುತ್ತದೆ ಎಂದು ಪ್ರಶ್ನಿಸಿತ್ತು.

20,10,2 ಮತ್ತು 1ರೂ.ಗಳ ನೂತನ ನಾಣ್ಯಗಳು ವಿಶೇಷ ಗುರುತುಗಳನ್ನು ಹೊಂದಿದ್ದು,ಅವುಗಳನ್ನು ಗುರುತಿಸಲು ಅಂಧರಿಗೆ ನೆರವಾಗಲಿವೆ ಮತ್ತು ಈ ನಾಣ್ಯಗಳನ್ನು ನವೆಂಬರ್ ವೇಳೆಗೆ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗುವುದು ಎಂದು ಸರಕಾರಿ ಟಂಕಸಾಲೆ ಅಧಿಕಾರಿಗಳು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ನೂತನ ನಾಣ್ಯಗಳನ್ನು ಪೀಠದ ಮತ್ತು ಉಪಸ್ಥಿತರಿದ್ದ ಕೆಲವು ಅಂಧ ಅರ್ಜಿದಾರರ ಪರಿಶೀಲನೆಗಾಗಿ ನೀಡಲಾಗಿದ್ದು,ಅರ್ಜಿದಾರರು ಅವುಗಳನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದರು.

‘ ನಾವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದೇವೆ,ಆದರೆ ನಾಣ್ಯಗಳ ಗಾತ್ರ ಸಣ್ಣಗಾಗುತ್ತಿದೆ ’ ಎಂದು ನ್ಯಾ.ನಂದ್ರಜೋಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News