ಜಮ್ಮುಕಾಶ್ಮೀರ: ಲಾಕಪ್‌ ನಲ್ಲಿದ್ದ ವ್ಯಕ್ತಿ ಮೃತ್ಯು

Update: 2019-09-06 17:09 GMT

ಶ್ರೀನಗರ,ಆ.4: ಜಮ್ಮುಕಾಶ್ಮೀರ ಪೊಲೀಸರು ಗುರುವಾರ ಬಂಧಿಸಿದ್ದ ವ್ಯಕ್ತಿಯೊಬ್ಬ ಜೈಲಿನಲ್ಲಿ ಮೃತಪಟ್ಟಿದ್ದಾನೆ. ಸಾವನ್ನಪ್ಪಿದ ವ್ಯಕ್ತಿಯನ್ನು ರಿಯಾಝ್ ಅಹ್ಮದ್ ಥೆಕ್ರಿ ಎಂದು ಗುರುತಿಸಲಾಗಿದ್ದು, ಆತ ಹಂಡ್ವಾರ ಜಿಲ್ಲೆಯ ಖ್ವಲಾಮಾಬಾದ್‌ನ ನಿವಾಸಿ ಸಲಾಂ ಯು ದೀನ್ ತೇಕ್ರಿ ಎಂಬವರ ಪುತ್ರನೆಂದು ತಿಳಿದುಬಂದಿದೆ.

  ಕಳವು ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಮೃತ ರಿಯಾಝ್ ಅಹ್ಮದ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 53 (ಕರ್ತವ್ಯ ನಿರ್ವಹಿಸದಂತೆ ಸಾರ್ವಜನಿಕ ಉದ್ಯೋಗಿಯನ್ನು ತಡೆಯಲು ಹಲ್ಲೆ ಅಥವಾ ಕ್ರಿಮಿನಲ್ ಸ್ವರೂಪದ ಬಲ ಪ್ರಯೋಗ) ಹಾಗೂ ಸೆಕ್ಷನ್ 379 (ಕಳವು) ಮತ್ತು ಸೆಕ್ಷನ್ 323 (ಏಕಪಕ್ಷೀಯವಾಗಿ ಹಾನಿ ಏಸಗಿದ್ದಕ್ಕೆ ಶಿಕ್ಷೆ) ಆರೋಪಗಳನ್ನು ಹೊರಿಸಲಾಗಿತ್ತು. ಆತನನ್ನು ಬುಧವಾರ ಪೊಲೀಸರು ಹಂಡ್ವಾರಾ ಜಿಲ್ಲೆಯ ಖ್ವಲಾಮಾಬಾದ್ ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದರು.

  ಮೃತ ರಿಯಾಝ್‌ನನ್ನು ಇನ್ನೋರ್ವ ಕೈದಿಯೊಂದಿಗೆ ಲಾಕಪ್‌ನಲ್ಲಿರಿಸಲಾಗಿತ್ತು. ಆದರೆ ಆತ ಲಾಕಪ್‌ಗೆ ತಾಗಿಕೊಂಡಿರುವ ಶೌಚಗೃಹದಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪ್ರಾಥಮಿಕ ತನಿಖಾ ವರದಿ ತಿಳಿಸಿದೆ.

   ರಿಯಾಝ್‌ನ ಮೃತದೇಹವನ್ನು ಆತನ ಕುಟುಂಬಕ್ಕೆ ಹಸ್ತಾಂತರಿಸಿದ ಕೂಡಲೇ, ಪೊಲೀಸರ ಒತ್ತಡದಿಂದಾಗಿ ಅದನ್ನು ದಫನಗೊಳಿಸಲಾಯಿತೆಂದು, ಹೆಸರು ಬಹಿರಂಗಪಡಿಸಲು ಇಚ್ಛಿಸದ ಸ್ಥಳೀಯರೊಬ್ಬರು ತಿಳಿಸಿದ್ದಾರೆಂದು ದಿ ಕ್ವಿಂಟ್ ಜಾಲತಾಣ ಪತ್ರಿಕೆ ವರದಿ ಮಾಡಿದೆ..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News