ಗಗನಯಾನಕ್ಕೆ ಆಯ್ಕೆ: ಮೊದಲ ಹಂತ ತೇರ್ಗಡೆಯಾದ 12 ಪೈಲಟ್‌ಗಳು

Update: 2019-09-07 04:49 GMT

ಬೆಂಗಳೂರು, ಸೆ.7: ಭಾರತದ ಪ್ರಪ್ರಥಮ ಮನುಷ್ಯ ಸಹಿತ ಬಾಹ್ಯಾಕಾಶ ನೌಕಾ ಯೋಜನೆ ಗಗನಯಾನಕ್ಕೆ ಪೈಲಟ್‌ಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯ ಮೊದಲ ಹಂತದಲ್ಲಿ ಹನ್ನೆರಡು ಮಂದಿ ಆಯ್ಕೆಯಾಗಿದ್ದಾರೆ. 2022ರಲ್ಲಿ ಈ ಮಹತ್ವಾಕಾಂಕ್ಷಿ ಬಾಹ್ಯಾಕಾಶಯಾನ ನಿಗದಿಪಡಿಸಲಾಗಿದೆ.

ಭಾರತೀಯ ವಾಯುಪಡೆಯ ಬಾಹ್ಯಾಕಾಶ ವೈದ್ಯಕೀಯ ಸಂಸ್ಥೆ (ಎಐಎಂ)ಯ ಪ್ರಥಮ ವರ್ಷಾಚರಣೆಯಲ್ಲಿ ಅಂದರೆ 2018ರ ಆಗಸ್ಟ್ 15ರಂದು ಈ ಮಹತ್ವಾಕಾಂಕ್ಷಿ ಯೋಜನೆ ಘೋಷಿಸಲಾಗಿತ್ತು. ಅಂತಿಮವಾಗಿ ಈ ಬಾಹ್ಯಾಕಾಶ ನೌಕೆಯಲ್ಲಿ ನಾಲ್ಕು ಮಂದಿ ಪೈಲಟ್‌ಗಳು ಯಾನ ಕೈಗೊಳ್ಳಲಿದ್ದಾರೆ.

ಮೊದಲ ಹಂತದ ಪರೀಕ್ಷೆಯಲ್ಲಿ ದೈಹಿಕ ಮತ್ತು ಮಾನಸಿಕ ಮೌಲ್ಯಮಾಪನ ನಡೆಸಲಾಗಿದೆ. "ಮೊದಲ ಹಂತದಲ್ಲಿ ಆಯ್ಕೆಯಾದ ಪರೀಕ್ಷಾರ್ಥ ಪೈಲಟ್‌ಗಳಿಗೆ ತೀವ್ರ ದೈಹಿಕ ವ್ಯಾಯಾಮ ಪರೀಕ್ಷೆಗಳು, ಪ್ರಯೋಗಾಲಯ ತಪಾಸಣೆಗಳು, ರೇಡಿಯಾಲಜಿ ಮತ್ತು ಕ್ಲಿನಿಕಲ್ ತಪಾಸಣೆಗಳು ಮತ್ತು ಅವರ ಮಾನಸಿಕತೆಯ ವಿವಿಧ ಮಗ್ಗಲುಗಳ ಮೌಲ್ಯಮಾಪನ ನಡೆದಿದೆ" ಎಂದು ವಾಯುಪಡೆ ಪ್ರಕಟಿಸಿದೆ.

ಆದರೆ ಈ ಹಂತದಲ್ಲಿ ಪಾಲ್ಗೊಂಡವರ ಹೆಸರುಗಳನ್ನು ವಾಯುಪಡೆ ಬಹಿರಂಗಪಡಿಸಿಲ್ಲ. ಆಯ್ಕೆಯಾದ ಎಲ್ಲರೂ ಪುರುಷರು. ಮಹಿಳಾ ಪರೀಕ್ಷಾರ್ಥ ಪೈಲಟ್‌ಗಳನ್ನು ಹುಡುಕಲು ಸಮಯಾವಕಾಶ ಇಲ್ಲದ ಹಿನ್ನೆಲೆಯಲ್ಲಿ ಮೊದಲ ಮಿಷನ್‌ನಲ್ಲಿ ಎಲ್ಲ ಪುರುಷ ಪೈಲಟ್‌ಗಳೇ ಯಾನ ಕೈಗೊಳ್ಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News