‘‘ಭಾರತೀಯತ್ವ’’ ಎಂದರೇನು?

Update: 2019-09-08 09:36 GMT

ಪ್ರತಿಯೊಂದು ನಾಗರಿಕತೆಗೂ ಪ್ರಪಂಚದ ಹಾಗೂ ಪ್ರಪಂಚದಲ್ಲಿ ಮನುಷ್ಯನ ಸ್ಥಾನದ ಬಗ್ಗೆ, ಪ್ರಪಂಚದ ವೌಲ್ಯಗಳ ಬಗ್ಗೆ ತನ್ನದೇ ಆದ ದೃಷ್ಟಿಕೋನ, ಅಭಿಪ್ರಾಯ ಇರುತ್ತದೆ. ನಮ್ಮ ನಾಗರಿಕತೆಯಲ್ಲಿ ಇನ್ನೊಬ್ಬರ ಭಾವನೆಗಳನ್ನು, ಅನುಭವಗಳನ್ನು ಹಂಚಿಕೊಳ್ಳುವ ಸಾಮರ್ಥ್ಯ, ಇನ್ನೊಬ್ಬರ ಸ್ಥಾನದಲ್ಲಿ ನಮ್ಮನ್ನು ಇಟ್ಟು ಅವರ ಸಂಕಷ್ಟಗಳನ್ನು ಅರ್ಥ ಮಾಡಿಕೊಳ್ಳುವ ಗುಣ ಅಥವಾ ಭಾವಸೂಕ್ಷ್ಮತೆ (ಎಂಪಥಿ) ಒಂದು ಮುಖ್ಯವಾದ, ಪ್ರಬಲವಾದ ಮೌಲ್ಯವಾಗಿದೆ.

ಭಾರತೀಯ ನಾಗರಿಕತೆಯ ಅತ್ಯಂತ ಶ್ರೇಷ್ಠ ಐಕಾನ್‌ಗಳಲ್ಲಿ ಕೆಲವರು (ಬುದ್ಧ, ಕಬೀರ್, ನಾನಕ್, ತುಕಾರಾಮ, ಬಸವ, ಟಾಗೋರ್, ಗಾಂಧಿ) ನಾವು ಮನುಷ್ಯ ಜೀವಿಗಳಿಗಷ್ಟೇ ಅಲ್ಲ, ಅಸ್ತಿತ್ವದಲ್ಲಿರುವ ಸಕಲ ಜೀವಿಗಳಿಗೂ ಸ್ಪಂದಿಸಲು ಎಂಪಥಿ ಅತ್ಯವಶ್ಯಕ ಎಂದು ಭಾವಿಸಿದ್ದಾರೆ. ಈ ನಿಟ್ಟಿನಲ್ಲಿ ಟಾಗೋರ್ ಮತ್ತು ಗಾಂಧಿ ಸಂಪೂರ್ಣ ಸಹಮತ ಹೊಂದಿದ್ದಾರೆ. ‘‘ಭ್ರಾತೃತ್ವ ಈಗ ದೂರದ ಒಂದು ಆಕಾಂಕ್ಷೆಯಾಗಿದೆ. ನನಗೆ ಭ್ರಾತೃತ್ವ ಎಂಬುದು ನಿಜವಾದ ಅಧ್ಯಾತ್ಮಿಕತೆಯ ಒಂದು ಒರೆಗಲ್ಲಾಗಿದೆ’’ ಎನ್ನುತ್ತಾರೆ ಗಾಂಧಿ ತನ್ನ ಒಂದು ಪತ್ರದಲ್ಲಿ. ‘‘ಎಲ್ಲ ಜೀವಿಗಳ ಬಗ್ಗೆ ನಮಗೆ ಜೀವಂತವಾದ ಒಂದು ರಕ್ತ ಸಂಬಂಧಿ ಭಾವನೆ (ಕಿನ್‌ಶಿಪ್) ಎಲ್ಲಿಯವರೆಗೆ ಬರುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಎಲ್ಲ ಪ್ರಾರ್ಥನೆಗಳು ಮತ್ತು ಧಾರ್ಮಿಕ ಆಚರಣೆಗಳು ವ್ಯರ್ಥ’’ ಎನ್ನುತ್ತಾರೆ ಅವರು.

ನನ್ನ ತಿಳಿವಳಿಕೆಯ ಪ್ರಕಾರ ಅನುಕಂಪ (ಸಿಂಪತಿ) ಎಂದರೆ ಕಿನ್‌ಶಿಪ್‌ನ ಭಾವನೆ, ನಮ್ಮ ರಕ್ತ ಸಂಬಂಧಿಯನ್ನೂ ಮೀರಿ ಎಲ್ಲರ ಬಗ್ಗೆಯೂ ಅವರು ‘ನಾವು’ ಎಂಬ ಒಂದು ಭಾವನೆ. ಈ ಭಾವನೆ ಮಾನವರಿಗೆ ಮಾತ್ರ ಸೀಮಿತವಾಗಿರದೆ ನಮ್ಮ ಸುತ್ತ ಇರುವ ಪ್ರಪಂಚಕ್ಕೂ ವಿಸ್ತರಿಸುತ್ತದೆ. ಸಿಂಪತಿಯನ್ನು ನಾವು ಹಲವು ತಳ ಶಿಬಿರಗಳಿರುವ ಬೆಟ್ಟವನ್ನು ಹತ್ತುವ ಕ್ರಿಯೆಗೆ ಹೋಲಿಸಬಹುದು.

ಬೆಟ್ಟದ ಶಿಖರ ಕಾಣಿಸದ ಮೊದಲ ಶಿಬಿರವೆಂದರೆ, ಸಹನೆ. ಇತರರಿಗೆ ಅನುಮಾನದ ಲಾಭವನ್ನು ನೀಡುವುದು ಎಂದು ಸಹನೆಯನ್ನು ವ್ಯಾಖ್ಯಾನಿಸ ಲಾಗಿದೆ. ಎರಡನೆಯ, ಇದಕ್ಕಿಂತ ಸ್ವಲ್ಪ ಎತ್ತರದಲ್ಲಿರುವ ಶಿಬಿರವನ್ನು ಕಾರುಣ್ಯ (ಕಂಪ್ಯಾಶನ್) ಎಂದು ಕರೆಯಬಹುದು. ಕೊನೆಯ ಮತ್ತು ಮೂರನೆಯ ಶಿಬಿರವೇ ಎಂಪಥಿ. ಈ ಶಿಬಿರದಿಂದ ವ್ಯಕ್ತಿ ಪರ್ವತದ ಶಿಖರವನ್ನೇರಲು ಆರಂಭಿಸುತ್ತಾನೆ. ಇನ್ನೊಬ್ಬ ವ್ಯಕ್ತಿಯ ‘ಭಾವನೆಯ ಒಳಗೆ’ ಹೊಕ್ಕು ಅನುಭವಿಸುವ ಭಾವನೆ ಈ ಎಂಪಥಿ. ಎಂಪಥಿ ಪ್ರಕೃತಿಯನ್ನೂ ಒಳಗೊಳ್ಳಬಹುದು.

ಅಪರೂಪದ ಸಂತರು ಮಾತ್ರ ಈ ಮೂರು ಭಾವನೆಗಳ ಹಂತವನ್ನು ದಾಟಿ ಎಂಪಥಿ ಎಂಬ ಶಿಖರವನ್ನು ತಲುಪಬಲ್ಲರು. ‘ಎಲ್ಲ ಜೀವಿಗಳನ್ನು ತನ್ನಲ್ಲಿ ಮತ್ತು ತನ್ನನ್ನು ಎಲ್ಲ ಜೀವಿಗಳಲ್ಲಿ ಕಾಣುವವನು’ ಎಂದು ಉಪನಿಷತ್ತುಗಳು ಹೇಳುವ ಆದರ್ಶ ಇದೇ. ಸಹನೆ, ಕಾರುಣ್ಯ ಮತ್ತು ಎಂಪಥಿಯ ಮೂಲ ಶಿಬಿರಗಳಿಂದ ಅನುಕಂಪ ಶಿಬಿರದ ಒಂದು ನೋಟವಷ್ಟೇ ದೊರೆತರೆ ಸಾಕು, ನಮ್ಮಲ್ಲಿ ಬಹುತೇಕರು ತಾವು ಅದೃಷ್ಟವಂತರೆಂದೂ ತಿಳಿದುಕೊಳ್ಳಬಹುದು. ಆದರೂ, ಸಾಮಾಜಿಕ ಕೂಡುವಿಕೆ ಮತ್ತು ಏಕತೆಗೆ ಅನಿವಾರ್ಯವಾಗಿರುವ ಅನುಕಂಪ ಇತರ ವೌಲ್ಯಗಳ ಮುಂದೆ ಕಳೆಗುಂದಿರುವುದನ್ನು ನಾವು ಗಮನಿಸಬಹುದು. ಅನುಕಂಪ ಎಂಬುದು ಪ್ರೀತಿಯ ಅತ್ಯಂತ ಉನ್ನತ ಸ್ತರ, ಭಾರತೀಯ ನಾಗರಿಕತೆಯಲ್ಲಿ ಅನುಕಂಪಕ್ಕೆ ವಿಶೇಷ ಮಹತ್ವ ನೀಡಲಾಗಿದೆ. ನ್ಯಾಯ, ತಪ್ಪುಗಳನ್ನು ಸರಿಪಡಿಸುವುದು ಇತ್ಯಾದಿ ವೌಲ್ಯಗಳ ಮುಂದೆ ಅನುಕಂಪಕ್ಕೆ ಮಂಕು ಕವಿದಂತೆ ಭಾಸವಾಗುತ್ತಿದೆ. ಫ್ರೆಂಚ್ ಕ್ರಾಂತಿಯ ಪ್ರಸಿದ್ಧ ಘೋಷಣೆ ನಮಗೆಲ್ಲ ಪರಿಚಿತವಾಗಿದೆ: ಸ್ವಾತಂತ್ರ, ಸಮಾನತೆ, ಭ್ರಾತೃತ್ವ. ಈ ಚಿಕ್ಕಪಟ್ಟಿಯಲ್ಲಿ ಭ್ರಾತೃತ್ವಕ್ಕೆ ಕೊನೆಯ ಸ್ಥಾನ ಇದೆ ಎಂಬುದು ಗಮನಾರ್ಹ ಮತ್ತು ಸಮಕಾಲೀನ ವಾಗ್ವಾದದಲ್ಲಿ ಈ ಭ್ರಾತೃತ್ವವನ್ನು ಬದಿಗೆ ಸರಿಸಿಲ್ಲವಾದರೂ ಇದು ಸಂಪೂರ್ಣ ಮೂಕವಾಗಿದೆ.

ಪಾಶ್ಚಾತ್ಯ ಬೌದ್ಧಿಕ ಗುರುಗಳ ಆಕರ್ಷಣೆಗೆ ಒಳಗಾಗಿರುವ ನಮಗೆ, ಆಧುನಿಕ ಭಾರತೀಯ ಮನಸ್ಸಿನಲ್ಲಿ ಅಧಿಕಾರದ ಪಾತ್ರದ ಕುರಿತಾಗಿರುವ ಪಾಶ್ಚಾತ್ಯ ಪರಿಕಲ್ಪನೆ ನಮ್ಮ ಸಾಮಾಜಿಕ ಸಂಬಂಧಗಳಲ್ಲಿ ಎಷ್ಟೊಂದು ಅತಿಯಾದ ಸ್ಥಾನವನ್ನು ಆಕ್ರಮಿಸಿಕೊಂಡಿದೆ ಎಂಬುದು ಅರ್ಥವಾಗುತ್ತಿಲ್ಲ.

ದುರ್ಬಲರು ಹಾಗೂ ದಮನಿತರಿಗಾಗಿ ನ್ಯಾಯದ ಹೆಸರಿನಲ್ಲಿ ನಡೆಯುತ್ತಿರುವ ಸಾಮಾಜಿಕ ಚಳವಳಿಗಳು ನಮ್ಮ ದೇಶದಲ್ಲಿ ತೀವ್ರಗತಿಯಲ್ಲಿ ಹೆಚ್ಚುತ್ತಿವೆ. ಇವುಗಳು ಪಾರಂಪರಿಕ ಶ್ರೇಣಿ ವ್ಯವಸ್ಥೆಗಳನ್ನು ಹಾಗೂ ಅಧಿಕಾರ ಚೌಕಟ್ಟುಗಳನ್ನು ಅಲ್ಲಾಡಿಸುತ್ತಿವೆ. ಆದರೆ ಇವುಗಳಲ್ಲಿ ಹಲವು ಚಳವಳಿಗಳು ನ್ಯಾಯ ಎಂಬ ಒಂದೇ ಒಂದು ನೆಲೆಯ ಆಧಾರದಲ್ಲಿ ಕಾರ್ಯಚರಿಸುವಂತೆ ಕಾಣುತ್ತದೆ. ನ್ಯಾಯ ಎನ್ನುವುದು ಅಧಿಕಾರಕ್ಕೆ, ಏರುಪೇರಾಗಿರುವ ಹಾಗೂ ನ್ಯಾಯೋಚಿತವಲ್ಲದ ಅಧಿಕಾರ ಸಂಬಂಧಗಳಿಗೆ, ಅಧಿಕಾರದ ಪ್ರಶ್ನೆಗೆ ಸಂಬಂಧಿಸಿದ್ದಾಗಿದೆ.

ನ್ಯಾಯದ ಹುಡುಕಾಟದಲ್ಲಿ ಫಲಿತಾಂಶ ಮುಖ್ಯವಾಗುತ್ತದೆಯೇ ಹೊರತು ಜನರು ಸಾಗುವ ಮಾರ್ಗವಲ್ಲ. ನ್ಯಾಯದ ಹೆಸರಿನಲ್ಲಿ, ನ್ಯಾಯಕ್ಕಾಗಿ ಹಿಂಸೆಯನ್ನು ಪ್ರಬಲವಾಗಿ ಸಮರ್ಥಿಸಿದವರಿದ್ದಾರೆ. ಅಂತಹ ಸಂದರ್ಭಗಳಲ್ಲಿ ನ್ಯಾಯಕ್ಕಾಗಿ ನಡೆಸುವ ಹುಡುಕಾಟದ, ಹೋರಾಟದ ತೀವ್ರತೆಯನ್ನು ಅನುಕಂಪ ಕಾರುಣ್ಯ ನಿಯಂತ್ರಿಸುವುದು ಬೇಡವೇ? ಒಂದು ತಪ್ಪನ್ನು ಸರಿಪಡಿಸುವ ನಮ್ಮ ಪ್ರಯತ್ನದಲ್ಲಿ ನಾವು ಗಾಂಧಿ ಮತ್ತು ಟಾಗೋರ್ ಯಾವುದು ಭಾರತೀಯ ನಾಗರಿಕತೆಯನ್ನು ವ್ಯಾಖ್ಯಾನಿಸುವ ಒಂದು ಮೂಲ ಲಕ್ಷಣವೆಂದು ತಿಳಿದಿದ್ದರೋ, ನಂಬಿದ್ದರೋ ಆ ಮೂಲ ಲಕ್ಷಣವನ್ನು, ಅಂದರೆ ಅನುಕಂಪವನ್ನು ಕಳೆದುಕೊಳ್ಳುವ, ಅನುಕಂಪಕ್ಕೆ ಕುರುಡಾಗುವ ಅಪಾಯದಲಿದ್ದೇವೆಯೇ?

ಇತ್ತೀಚಿನ ವರ್ಷಗಳಲ್ಲಿ ವಿಶ್ವದಾದ್ಯಂತ ಹಲವು ಸಮುದಾಯಗಳನ್ನು ಹೊರಗಿಡುವ (ಎಕ್ಸಕ್ಲೂಸಿವ್) ರಾಷ್ಟ್ರೀಯತೆಗಳು ವಿಜೃಂಭಿಸಲಾರಂಭಿಸಿವೆ. ಟರ್ಕಿ, ಇಂಡೋನೇಶ್ಯ, ಭಾರತ ಮತ್ತು ಇಸ್ಲಾಮಿಕ್ ಜಗತ್ತಿನ ಕೆಲವು ಭಾಗಗಳಲ್ಲಿ, ಅಮೆರಿಕದ ಜನಾಂಗೀಯ ರಾಷ್ಟ್ರೀಯವಾದ, ಯುರೋಪಿನ ಬಹುಭಾಗಗಳಲ್ಲಿ ‘ಮಣ್ಣಿನ ಮಕ್ಕಳು’ ರಾಷ್ಟ್ರೀಯವಾದ ಪ್ರಬಲವಾಗುತ್ತಿರುವುದನ್ನು ನೋಡುವಾಗ, ಸೆಕ್ಯುಲರ್ ಆದ ಹಾಗೂ ಇನ್‌ಕ್ಲೂಸಿವ್ ಆದ, ಎಲ್ಲರನ್ನೂ ಒಳಗೊಳ್ಳುವ ರಾಷ್ಟ್ರೀಯವಾದ ಒಂದು ಉದಾರವಾದಿ ಕನಸಾಗಿತ್ತು ಎಂದು ಹೇಳಬೇಕಾಗುತ್ತದೆ. ಇಂದು ಈ ಕನಸು ಬಹಳಷ್ಟು ಮಂದಿಗೆ ಬೇಡವಾಗಿದೆ.

ಈಗ ನಮಗೆ ಬೇಕಾಗಿರುವುದು ನಮ್ಮ ನಾಗರಿಕತೆಯಲ್ಲ. ಆಳವಾದ ಬೇರು ಗಳಿರುವ ಭಾರತ ಎಂಬ ಪರಿಕಲ್ಪನೆಯ ಪುನರುಜ್ಜೀವನ. ನಮ್ಮ ಸಂಸ್ಕೃತಿಯ ಅತ್ಯಂತ ಶ್ರೇಷ್ಠ ಐಕಾನ್‌ಗಳು ಬೋಧಿಸಿ ಆಚರಿಸಿರುವ ಈ ಪರಿಕಲ್ಪನೆಯ ಪುನರುಜ್ಜೀವನ. ನಮ್ಮಲ್ಲಿ ಪ್ರತಿಯೊಬ್ಬರೂ ಇತರ ಮಾನವ ಜೀವಿಗಳೊಂದಿಗೆ ಸೇರಿಕೊಂಡಿದ್ದಾರೆ ಮತ್ತು ಎಲ್ಲ ಜೀವಿ ಹಾಗೂ ನಿರ್ಜೀವಿಗಳೊಂದಿಗೂ ತಳಕು ಹಾಕಿಕೊಂಡಿದ್ದಾರೆ ಎಂಬ ಭಾರತೀಯ ಪರಿಕಲ್ಪನೆ, ಐಡಿಯಾ ಇದು. ನಮಗೆ ಮಾತ್ರವಲ್ಲದೆ ಎಲ್ಲರಿಗೂ ಅನುಕಂಪ ತೋರಬೇಕೆಂಬ, ಎಲ್ಲರೊಂದಿಗೂ ಕೂಡಿಬಾಳಬೇಕೆಂಬ ಪರಿಕಲ್ಪನೆ ಇದು...

ಕೃಪೆ: ದಿ ಟೈಮ್ಸ್ ಆಫ್ ಇಂಡಿಯಾ

Writer - ಸುಧೀರ್ ಕಾಕರ್

contributor

Editor - ಸುಧೀರ್ ಕಾಕರ್

contributor

Similar News

ಜಗದಗಲ
ಜಗ ದಗಲ