ನಿಯಮ ಉಲ್ಲಂಘಿಸಿದ ಟ್ರಕ್ ಚಾಲಕನಿಗೆ ಭಾರೀ ದಂಡ: ದೇಶದಲ್ಲೇ ಇದು ಗರಿಷ್ಠ ಮೊತ್ತ

Update: 2019-09-08 13:16 GMT

ಭುವನೇಶ್ವರ: ಒಡಿಶಾದ ಸಂಬಾಲ್‍ಪುರ ಜಿಲ್ಲೆಯಲ್ಲಿ ಕಳೆದ ವಾರ ಹಲವು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಟ್ರಕ್ ಚಾಲಕರೊಬ್ಬರಿಗೆ 86,500 ರೂಪಾಯಿ ದಂಡ ವಿಧಿಸಿದ ಪ್ರಕರಣ ವರದಿಯಾಗಿದೆ. ಪರಿಷ್ಕೃತ ಮೋಟಾರು ವಾಹನ ಕಾಯ್ದೆಯಡಿ ವಿಧಿಸಿದ ಗರಿಷ್ಠ ಪ್ರಮಾಣದ ದಂಡ ಮೊತ್ತ ಇದಾಗಿದೆ.

ಸೆಪ್ಟೆಂಬರ್ 3ರಂದು ಅಶೋಕ್ ಜಾಧವ್ ಎಂಬ ಟ್ರಕ್ ಚಾಲಕನಿಗೆ ಈ ಭಾರಿ ಮೊತ್ತದ ದಂಡ ವಿಧಿಸಲಾಗಿದ್ದರೂ, ದಂಡ ಚಲನ್‍ನ ಚಿತ್ರಗಳು ಶನಿವಾರ ಸಂಜೆಯಿಂದೀಚೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಅನಧಿಕೃತ ವ್ಯಕ್ತಿ ಟ್ರಕ್ ಚಾಲನೆ ಮಾಡಲು ಅವಕಾಶ ನೀಡಿದ್ದಕ್ಕಾಗಿ 5000, ಲೈಸನ್ಸ್ ಇಲ್ಲದೇ ವಾಹನ ಚಾಲನೆ ಮಾಡಿದ್ದಕ್ಕಾಗಿ 5 ಸಾವಿರ, ಸಾಮಥ್ರ್ಯಕ್ಕಿಂತ 18 ಟನ್ ಓವರ್‍ಲೋಡ್ ಮಾಡಿದ್ದಕ್ಕಾಗಿ 56 ಸಾವಿರ, ಪ್ರಮಾಣ ಮೀರಿ ಲೋಡ್ ವಿಸ್ತರಿಸಿದ್ದಕ್ಕಾಗಿ 20 ಸಾವಿರ ಹಾಗೂ ಸಾಮಾನ್ಯ ಅಪರಾಧಕ್ಕೆ 500 ರೂಪಾಯಿ ದಂಡ ವಿಧಿಸಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಲಲಿತ್ ಮೋಹನ್ ಬೆಹೆರಾ ಸ್ಪಷ್ಟಪಡಿಸಿದ್ದಾರೆ.

ದಂಡದ ಮೊತ್ತ 86500 ರೂಪಾಯಿ ಆದರೂ ಚಾಲಕ ಪೊಲೀಸರ ಜತೆ ಐದು ಗಂಟೆಗಳ ಕಾಲ ಮಾತುಕತೆ ನಡೆಸಿ 70 ಸಾವಿರ ರೂಪಾಯಿ ಪಾವತಿಸಿದ್ದಾರೆ ಎನ್ನಲಾಗಿದೆ. ನಾಗಾಲ್ಯಾಂಡ್ ಮೂಲದ ಬಿಎಲ್‍ಎ ಇನ್‍ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಗೆ ಸೇರಿದ ಟ್ರಕ್‍ನಲ್ಲಿ ಜೆಸಿಬಿ ಯಂತ್ರವನ್ನು ಒಯ್ಯಲಾಗುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News