ಶಿಕ್ಷಕನ ಥಳಿತಕ್ಕೆ ವಿದ್ಯಾರ್ಥಿ ಬಲಿ: ರೊಚ್ಚಿಗೆದ್ದ ಸಹಪಾಠಿಗಳಿಂದ ಶಾಲೆಗೆ ಬೆಂಕಿ

Update: 2019-09-08 17:54 GMT

ಲಾಹೋರ್,ಸೆ.8: ಪಾಠವೊಂದನ್ನು ಕಂಠಪಾಠ ಮಾಡದೆ ಇದ್ದುದಕ್ಕಾಗಿ ಅಧ್ಯಾಪಕನಿಂದ ಬರ್ಬರವಾಗಿ ಥಳಿಸಲ್ಪಟ್ಟ ತಮ್ಮ ಸಹಪಾಠಿಯು ಸಾವನ್ನಪ್ಪಿದ್ದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಶಾಲೆಗೆ ಬೆಂಕಿಹಚ್ಚಿದ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತದಲ್ಲಿ ನಡೆದಿದೆ.

 ಮಧ್ಯ ಲಾಹೋರ್‌ನ ಗುಲ್ಷನಿ ರಾವಿ ಪ್ರದೇಶದಲ್ಲಿರುವ ಅಮೆರಿಕನ್ ಲಿಸೆಸ್ಟಫ್ ಸ್ಕೂಲ್‌ನ 10ನೇ ತರಗತಿಯ ವಿದ್ಯಾರ್ಥಿಯಾದ ಹಾಫಿಝ್ ಹುನೈನ್ ಬಿಲಾಲ್ ನನ್ನು ಪಾಠವನ್ನು ಕಂಠಪಾಠ ಮಾಡಿಲ್ಲವೆಂಬ ನೆಪದಿಂದ ಶಿಕ್ಷಕನೊಬ್ಬ ಆತನನ್ನು ಬರ್ಬರವಾಗಿ ಥಳಿಸಿದ್ದರು.

 ಗಂಭೀರವಾಗಿ ಗಾಯಗೊಂಡ ಬಾಲಕನು ಸ್ಥಳದಲ್ಲೇ ಕುಸಿದುಬಿದ್ದಿದ್ದನು. ಆತನನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ದಾರಿ ಮಧ್ಯೆ ಆತ ಕೊನೆಯುಸಿರೆಳೆದನೆಂದು ಪೊಲೀಸರು ತಿಳಿಸಿದ್ದಾರೆ.

ಸಹಪಾಠಿಯ ಸಾವಿನಿಂದ ಕೆರಳಿದ ವಿದ್ಯಾರ್ಥಿಗಳ ಗುಂಪೊಂದು ಶಾಲಾ ಕಟ್ಟಡದ ಮೇಲೆ ಪೆಟ್ರೋಲ್‌ಬಾಂಬ್‌ಗಳನ್ನು ಎಸೆದರು. ಇದರಿಂದ ಬೆಂಕಿ ಹೊತ್ತಿ ಉರಿದು ಇಡೀ ಶಾಲಾ ಕಟ್ಟಡಕ್ಕೆ ಹರಡಿತೆಂದು ವರದಿಗಳು ತಿಳಿಸಿವೆ. ಆನಂತರ ಬಂದ ಅಗ್ನಿಶಾಮಕದಳವು ಕೆಲವು ಗಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಲು ಸಫಲವಾಯಿತು. ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಚದುರಿಸಿದ ಪೊಲೀಸರು ಕೆಲವರನ್ನು ವಶಕ್ಕೆ ತೆಗೆದುಕೊಂಡಿತೆಂದು ಮೂಲಗಳು ತಿಳಿಸಿವೆ.

ಮೃತ ಬಾಲಕನ ತಂದೆ ನೀಡಿದ ದೂರಿನ ಮೇರೆಗೆ ಶಿಕ್ಷಕ ಕಮ್ರಾನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಶಾಲೆಯ ಪ್ರಾಂಶುಪಾಲರನ್ನು ಕೂಡಾ ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News