ಭ್ರಷ್ಟಾಚಾರ ನಡೆಯುವ ರೀತಿಯೂ ನಾವು ನೋಡುವ ರೀತಿಯೂ

Update: 2019-09-09 08:41 GMT

ಹಣಕಾಸಿನ ಅಥವಾ ಆರ್ಥಿಕ ಭ್ರಷ್ಟತೆಗಿಂತಲೂ ನಮ್ಮನ್ನು ಕಾಡಬೇಕಿರುವುದು ನೈತಿಕ ಭ್ರಷ್ಟತೆ. ಆದರೆ ಅದು ನಮ್ಮನ್ನು ಕಾಡುತ್ತಿಲ್ಲ. ಹಾಗಾಗಿಯೇ ಅನೈತಿಕತೆಯ ಸರದಾರರೂ ಶಾಸನಸಭೆಗಳಲ್ಲಿ ಪ್ರತಿಷ್ಠಿತ ಸ್ಥಾನಗಳನ್ನು ಅಲಂಕರಿಸುತ್ತಾರೆ. ಅತ್ಯಾಚಾರಿಗಳೂ ಸಭ್ಯಸ್ಥರಂತೆ ಸಮಾಜದಲ್ಲಿ ವಿಜೃಂಭಿಸುತ್ತಾರೆ.ಪ್ರಜಾತಂತ್ರ ವೌಲ್ಯಗಳನ್ನೇ ಭ್ರಷ್ಟಗೊಳಿಸಿ, ಸಂವಿಧಾನವನ್ನೇ ಉಲ್ಲಂಘಿಸುವವರೂ ಅನಭಿಷಿಕ್ತ ದೊರೆಗಳಂತೆ ವಿಜೃಂಭಿಸುತ್ತಾರೆ. 

ಭ್ರಷ್ಟಾಚಾರ ಬಂಡವಾಳ ವ್ಯವಸ್ಥೆಯ ಅಕ್ರಮ ಸಂತಾನ. ಇದನ್ನು ನಿರೂಪಿಸಲು ಯಾವ ಅಂಕಿ ಅಂಶಗಳೂ ಅಗತ್ಯವಿಲ್ಲ. ಏಕೆಂದರೆ ಬಂಡವಾಳದ ಮೂಲ ಲಕ್ಷಣವೇ ಕ್ರೋಡೀಕರಣ. ಕ್ರೋಡೀಕರಣಕ್ಕೆ ಅಗತ್ಯವಾದ ಮಾರ್ಗ ಸಂಪತ್ತಿನ ಲೂಟಿ. ಲೂಟಿಗೆ ಅನುವು ಮಾಡಿಕೊಡುವ ಮಾರ್ಗ ಬಂಡವಾಳದ ಧ್ರುವೀಕರಣ. ಈ ಧ್ರುವೀಕರಣಕ್ಕೆ ಮೂಲ ಶೋಷಣೆ. ಶೋಷಣೆಯ ಮೂಲ ಊಳಿಗಮಾನ್ಯ ವ್ಯವಸ್ಥೆ. ಊಳಿಗಮಾನ್ಯ ವ್ಯವಸ್ಥೆಯ ಬುನಾದಿ ಇರುವುದು ಉತ್ಪಾದನಾ ಸಂಬಂಧಗಳಲ್ಲಿ. ಉತ್ಪಾದಕೀಯ ಶಕ್ತಿಗಳ ಶೋಷಣೆ ಉತ್ಪಾದನಾ ಸಂಬಂಧಗಳನ್ನು ನಿರ್ಧರಿಸುವ ಒಂದು ಮಾರ್ಗ. ಇವಿಷ್ಟೂ ಇತಿಹಾಸದಲ್ಲಿ ನಿರೂಪಿತವಾಗಿರುವ ಸತ್ಯ. ಅಲ್ಲಗಳೆಯಲಾಗದ ಸತ್ಯವೂ ಹೌದು. ಹಾಗಾಗಿ ಭ್ರಷ್ಟಾಚಾರ ಒಂದು ಪಿಡುಗು ಎಂದು ನಾವು ಹುಯಿಲೆಬ್ಬಿಸುವ ಮುನ್ನ ಈ ಪಿಡುಗಿಗೆ ಮೂಲ ಕಾರಣವಾದ ಸಾಂಕ್ರಾಮಿಕ ರೋಗದ ಸೋಂಕು ಎಲ್ಲಿದೆ ಎಂದು ಹುಡುಕಬೇಕಲ್ಲವೇ? ನಾವು ಈ ಸೋಂಕನ್ನು ವ್ಯಕ್ತಿಗಳಲ್ಲಿ ಹುಡುಕುತ್ತೇವೆ. ರೋಗ ಪತ್ತೆಯಾದ ಕೂಡಲೇ ಚಿನ್ನದ ನಿಧಿ ಸಿಕ್ಕಂತೆ ಸಂಭ್ರಮಿಸುತ್ತೇವೆ. ಉಪ್ಪು ತಿಂದಿದ್ದಾರೆ ನೀರು ಕುಡಿಯಲಿ ಬಿಡಿ ಎಂದು ಮೀಸೆ ತಿರುವುತ್ತೇವೆ. ನಮಗೆ ಮೀಸೆ ಇಲ್ಲದಿದ್ದರೆ ಪಕ್ಕದವರದ್ದಾದರೂ ಆಯಿತು. ಆದರೆ ಈ ಸಂಭ್ರಮ ಕೊನೆಯಾಗುವ ಮುನ್ನವೇ ಮತ್ತೊಬ್ಬ ರೋಗಿಷ್ಟ ಎದ್ದು ಬಂದಿರುತ್ತಾನೆ. ನಾವು ನಮ್ಮ ಪ್ರಾತಿನಿಧಿತ್ವ ಇದೆ ಎಂದು ಭಾವಿಸಿ ಆರಿಸಿ ಕಳುಹಿಸುವ ಜನಪ್ರತಿನಿಧಿಗಳ ಸಭೆ ಈ ರೋಗಕ್ಕೆ ಚಿಕಿತ್ಸೆ ನೀಡುತ್ತಲೇ ಇರುತ್ತದೆ. ರೋಗಿಷ್ಟರಿಗೆ ಚುಚ್ಚುಮದ್ದು ನೀಡುತ್ತಿರುತ್ತದೆ. ಆದರೆ ರೋಗಕ್ಕೆ ಕಾರಣ ಏನೆಂದು ತಪಾಸಣೆ ಮಾಡುವುದೇ ಇಲ್ಲ. ಮಧುಮೇಹ ಇರುವವರಿಗೆ ಸಾಮಾನ್ಯವಾಗಿ ವೈದ್ಯರು ಎಚ್ಬಿಎ1ಸಿ ತಪಾಸಣೆ ಮಾಡಿಸಲು ಸಲಹೆ ನೀಡುತ್ತಾರೆ. ಏಕೆಂದರೆ ಇದು ಕಳೆದ ಆರು ತಿಂಗಳ ಅವಧಿಯಲ್ಲಿ ರಕ್ತದಲ್ಲಿನ ಗ್ಲೂಕೋಸ್ ಅಂಶದ ಪ್ರಮಾಣವನ್ನು ತಿಳಿಸುತ್ತದೆ. ಇದನ್ನೇ ಆಧರಿಸಿ ಮಾತ್ರೆ/ಇನ್ಸುಲಿನ್ ನೀಡುತ್ತಾರೆ. ಭ್ರಷ್ಟಾಚಾರಕ್ಕೂ ಹೀಗೆಯೇ ತಪಾಸಣೆ ಮಾಡಬೇಕು. ಡಿಕೆಶಿ, ಚಿದಂಬರಂ, ಕಾರ್ತಿ ಇವರ ಪ್ರಕರಣಗಳಲ್ಲಿ ನಿನ್ನೆಯ ದಿನದ ಗ್ಲೂಕೋಸ್ ಅಂಶವನ್ನು ಪರಿಶೀಲಿಸಲಾಗುತ್ತಿದೆ. ಎಚ್ಬಿಎ1ಸಿ ತಪಾಸಣೆ ಮಾಡಿದರೆ ಹಲವು ವರ್ಷಗಳ ಹಿಂದಿನಿಂದಲೂ ಇದ್ದಿರಬಹುದಾದ ಗ್ಲೂಕೋಸ್ ಪ್ರಮಾಣ ತಿಳಿಯುತ್ತದೆ. ಆದರೆ ಸರಕಾರಿ ವೈದ್ಯರು, ಅಂದರೆ ಸಿಬಿಐ, ಜಾರಿನಿರ್ದೇಶನಾಲಯ ಇತ್ಯಾದಿ, ಈ ತಪಾಸಣೆಗೆ ಸಲಹೆಯನ್ನೇ ನೀಡುವುದಿಲ್ಲ. ಕೆಲವು ವೈದ್ಯರು ಸ್ಟೆರಾಯ್ಡೆ ಮದ್ದು ನೀಡುವ ಮೂಲಕ ತಕ್ಷಣವೇ ಗುಣಪಡಿಸಲು ಯತ್ನಿಸಿ ರೋಗಿಯನ್ನು ಮತ್ತೆಮತ್ತೆ ತಮ್ಮ ಬಳಿಗೆ ಬರುವಂತೆ ಮಾಡುವ ಹಾಗೆಯೇ ಇನ್ನು ಕೆಲವರು ಸರಿಯಾದ ಚಿಕಿತ್ಸೆ ನೀಡದೆಯೇ ಶಾಶ್ವತ ರೋಗಿಗಳನ್ನೂ ಸೃಷ್ಟಿಸುತ್ತಿರುತ್ತಾರೆ. ನೈತಿಕತೆ ಇರುವ ವೈದ್ಯರು ಮಾತ್ರ ರೋಗಿ ಮತ್ತೊಮ್ಮೆ ತಮ್ಮ ಬಳಿ ಬರದಿರಲಿ ಎಂದು ಆಶಿಸಿ ಗುಣಪಡಿಸುವಂತಹ ಚಿಕಿತ್ಸೆ ನೀಡುತ್ತಾರೆ. ಇಂತಹ ವೈದ್ಯರನ್ನು ನಮ್ಮ ಜನಪ್ರತಿನಿಧಿಗಳಲ್ಲಿ ಅಥವಾ ಅವರು ಆಡಳಿತ ನಡೆಸುವ ವ್ಯವಸ್ಥೆಯಲ್ಲಿ ಕಾಣಲಾಗುವುದಿಲ್ಲ. ಹಾಗಾಗಿಯೇ ನಗರ್ವಾಲಾನಿಂದ ಚಿದಂಬರಂವರೆಗೆ, ಬೊಫೋರ್ಸ್ನಿಂದ ರಫೇಲ್ವರೆಗೆ, ಶರಾವತಿಯಿಂದ ನರ್ಮದಾರವರೆಗೆ ಭ್ರಷ್ಟಾಚಾರದ ತೊರೆಗಳು ವಿಭಿನ್ನ ಮಾರ್ಗಗಳನ್ನು ಬಳಸಿ ನದಿಗಳನ್ನು ಸೇರಿ ಆಡಳಿತ ವ್ಯವಸ್ಥೆ ಎನ್ನಲಾಗುವ ಸಾಗರದಲ್ಲಿ ಲೀನವಾಗುತ್ತಲೇ ಇರುತ್ತವೆ. ಭಾರತದ 70 ವರ್ಷಗಳ ಇತಿಹಾಸದಲ್ಲಿ ಎಷ್ಟು ಭ್ರಷ್ಟಾಚಾರದ ಪ್ರಕರಣಗಳು ದಾಖಲಾಗಿವೆ ಒಮ್ಮೆ ಹಿಂದಿರುಗಿ ನೋಡಿ. ಎಷ್ಟು ರಾಜಕಾರಣಿಗಳು ಆರೋಪಿಗಳಾಗಿದ್ದರು ಎನ್ನುವುದನ್ನೂ ಗಮನಿಸಿ. ಭ್ರಷ್ಟಾಚಾರ ಒಂದು ರೀತಿಯಲ್ಲಿ ಕೋಮು ರಾಜಕಾರಣದಂತೆ. ಮೊದಲು ಸುಪ್ತವಾಗಿದ್ದು ನಂತರ ಗುಪ್ತಗಾಮಿನಿಯಾಗಿ ಹರಿದು ಈಗ ಪುಟಿದೆದ್ದು ನಿಂತಿದೆ. ಸಾರ್ವಜನಿಕರಿಗೆ ಒಬ್ಬ ರಾಜಕಾರಣಿಗೆ ಶಿಕ್ಷೆಯಾಗುವುದು ಆಡಳಿತಾರೂಢ ಸರಕಾರದ ನಿಷ್ಠೆಯ ಸಂಕೇತವಾಗಿ ಕಾಣುತ್ತದೆ. ಆದರೆ ಕೆಲವೇ ವರ್ಷಗಳ ನಂತರ ಅದೇ ರಾಜಕಾರಣಿ ಮತ್ತೊಂದು ಪಕ್ಷದಲ್ಲಿ ಸಚಿವರಾಗಿಯೋ, ಮುಖ್ಯಮಂತ್ರಿಯಾಗಿಯೋ ರಾರಾಜಿಸುತ್ತಾರೆ. ಆಗ ತಮಗೆ ಶಿಕ್ಷೆ ನೀಡಿದವರನ್ನು ಶಿಕ್ಷಿಸಲು ಒಂದು ಕೊಂಡಿ ಸಿಕ್ಕೇ ಸಿಗುತ್ತದೆ. ಏಕೆಂದರೆ ಇದು ಆಲಿಬಾಬಾ ಕಥೆ ಇದ್ದಂತೆ. ಡಾ. ರಾಜ್ಕುಮಾರ್ ಅವರ ಕೈವಾರ ಮಹಾತ್ಮೆ ಚಿತ್ರದಲ್ಲಿ ಒಂದು ದೃಶ್ಯ ಬರುತ್ತದೆ. ಕೈವಾರ ನಾರಾಯಣರು ತಪಸ್ಸು ಮಾಡುತ್ತಿರುವ ಗುಹೆಯೊಳಗೆ ಬಾಲಕೃಷ್ಣ ಮತ್ತು ನರಸಿಂಹರಾಜು ಕಳ್ಳತನದಿಂದ ನುಗ್ಗುತ್ತಾರೆ. ಕಗ್ಗತ್ತಲ ಗವಿ. ಹೆಜ್ಜೆ ಇಡುವುದೇ ಕಷ್ಟ. ಏನೋ ಕೀಟಲೆ ಮಾಡುವ ಉದ್ದೇಶ. ಆಗ ನರಸಿಂಹರಾಜುವಿನ ಕಾಲಿಗೆ ಏನೋ ತಗಲುತ್ತದೆ. ಹಾವು ಎಂದೆಣಿಸಿ ಕಿರುಚಲು ಮುಂದಾಗುತ್ತಾನೆ. ಅಗ ಬಾಲಕೃಷ್ಣ ಮೆಲುದನಿಯಲ್ಲಿ ‘‘ನೋಡಿದ್ಯೇನೋ ಅದಕ್ಕೇ ಹೇಳೋದು ಕಳ್ಳಂಗೆ ಚೇಳು ಕಚ್ಚಿದ್ರೆ ಅರ್ಚೋಕೂ ಆಗಲ್ಲ ಕಿರ್ಚೋಕೂ ಆಗಲ್ಲ ಅಂತ ’’ ಎನ್ನುತ್ತಾನೆ. ಎಂತಹ ದಾರ್ಶನಿಕ ಸಂಭಾಷಣೆ ಅಲ್ಲವೇ ? ನಮ್ಮ ರಾಜಕಾರಣದ ಪರಿಸ್ಥಿತಿ ಭಿನ್ನವಾಗಿದೆ ಎನಿಸುತ್ತದೆಯೇ? ಬಹಳ ಸಹಜವಾಗಿ, ಸಲೀಸಾಗಿ ಸಾರ್ವಜನಿಕರ ನಡುವೆ ಕೇಳಿಬರುವ ಮಾತೆಂದರೆ ‘‘ರಾಜಕಾರಣದಲ್ಲಿ ಎಲ್ಲರೂ ಕಳ್ಳರೇ’’ ಎನ್ನುವುದು. ಇದು ಪೂರ್ಣ ಸತ್ಯವಲ್ಲ. ಆದರೆ ಪರಿಪೂರ್ಣ ಸುಳ್ಳು ಸಹ ಅಲ್ಲ. ಭ್ರಷ್ಟಾಚಾರ ಕಡಿಮೆಯಾಗಿದೆ ಎಂದು ಬೆನ್ನುತಟ್ಟಿಕೊಳ್ಳುವವರು ತಮ್ಮ ಸುತ್ತಲಿನ ಪ್ರಪಂಚವನ್ನು ನೋಡದೆಯೇ ಮಾತನಾಡುತ್ತಾರೆ ಎನ್ನುವುದು ಸತ್ಯ. ಒಂದು ದೇವಸ್ಥಾನದಲ್ಲಿ ಹೆಚ್ಚು ಜನಸಂದಣಿ ಇದ್ದರೆ ಗರ್ಭಗುಡಿಯ ಬಳಿ ಹೋಗಲು ಅಲ್ಲಿ ಕಾವಲಿರುವ ಪೊಲೀಸ್ ಅಥವಾ ಭದ್ರತಾ ಸಿಬ್ಬಂದಿಗೆ ದಕ್ಷಿಣೆ ಸಲ್ಲಿಸುವ ಕಾಲದಲ್ಲಿ ನಾವಿದ್ದೇವೆ. ಸಾಲುಗಟ್ಟಿ ನಿಂತ ಜನರನ್ನು ಹಿಂದೆ ತಳ್ಳಿ ಒಳಹೋಗಲು ಕಿಸೆಗೆ ನೋಟು ತುರುಕುವ ಜನರ ನಡುವೆ ನಾವಿದ್ದೇವೆ. ನಿಜ ಅಲ್ಲವೇ ? ಒತ್ತುವರಿ ಮಾಡಿಕೊಂಡ ಭೂಮಿ, ಮೋರಿಯ ಮೇಲೆ ಹಾಕುವ ಕಲ್ಲುಹಾಸು, ಪರವಾನಿಗೆ ಇಲ್ಲದೆ ಕಟ್ಟುವ ಅಂತಸ್ತುಗಳು, ಗೃಹಬಳಕೆ ವಿದ್ಯುತ್ ಶುಲ್ಕ ಪಾವತಿಸಿ ವಾಣಿಜ್ಯ ಉದ್ದೇಶಗಳಿಗೆ ಮನೆಗಳನ್ನೇ ಬಳಸಿಕೊಳ್ಳುವುದು ಹೀಗೆ ಇವೆಲ್ಲವೂ ನಮ್ಮ ನಿತ್ಯ ಜೀವನದ ಭ್ರಷ್ಟ ಮುಖವಾಡಗಳು. ನಾವು ಎಷ್ಟು ಭ್ರಷ್ಟರಾಗಿದ್ದೇವೆ ಎಂದರೆ ಸರಕಾರ ಬಡ ಜನತೆಗೆಂದು ಉಚಿತವಾಗಿ ನೀಡುವ ಅಕ್ಕಿ ಮತ್ತು ಧಾನ್ಯಗಳನ್ನು ಸಾರಾಸಗಟಾಗಿ ಖರೀದಿಸುವುದನ್ನು ನೋಡುತ್ತಲೂ ಸುಮ್ಮನಿದ್ದೇವೆ ಅಲ್ಲವೇ? ಉಚಿತ ಅಕ್ಕಿ ನೀಡುವುದರಿಂದ ಜನರು ಸೋಮಾರಿಗಳಾಗುತ್ತಾರೆ ಎಂದು ಹೀಗಳೆಯುವವರೇ ಪಡಿತರ ಕೇಂದ್ರಕ್ಕೆ ಹೋಗಿ ಮೂಟೆಗಟ್ಟಲೆ ಅಕ್ಕಿ ಖರೀದಿಸಿ (ಅಗ್ಗದ ದರದಲ್ಲಿ ಎಂದು ಹೇಳಬೇಕಿಲ್ಲ ) ಅನ್ನದಾಸೋಹಕ್ಕೋ, ಹೋಟೆಲ್ಗೋ ಬಳಸುವುದನ್ನೂ ನೋಡುತ್ತಾ ಸುಮ್ಮನಿದ್ದೇವೆ. ನಮ್ಮದೇ ನಿವೇಶನ, ನಮ್ಮದೇ ಮನೆ ಕೊಳ್ಳಲೂ ಸಹ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಕೈ ಬೆಚ್ಚಗಾಗದೆ ನೋಂದಣಿ ಅಸಾಧ್ಯ. ಏಕೆಂದರೆ ನಮ್ಮ ನಿಯಮೋಲ್ಲಂಘನೆಯೂ ಮಿತಿಮೀರಿರುತ್ತದೆ. ಗೃಹಮಂಡಲಿ ಮತ್ತು ನಗರಾಭಿವೃದ್ಧಿ ಪ್ರಾಧಿಕಾರಗಳು ನಿರ್ಮಿಸುವ ಮನೆಗಳನ್ನು ಹೊರತುಪಡಿಸಿದರೆ ಸರಕಾರದ ನಿಯಮದಂತೆ ಕಟ್ಟಿರುವ ಒಂದಾದರೂ ಮನೆಯನ್ನು ನೋಡಲು ಸಾಧ್ಯವಿದೆಯೇ? ನಾಗರಿಕ ಸಮಾಜದ ಸುಶಿಕ್ಷಿತ ಪ್ರತಿನಿಧಿಗಳೇ ಅತಿ ಹೆಚ್ಚು ನಿಯಮೋಲ್ಲಂಘನೆಯಲ್ಲಿ ತೊಡಗಿರುವುದನ್ನು ದಿನನಿತ್ಯ ಕಾಣುತ್ತೇವೆ ಅಲ್ಲವೇ? ಈಗ ಮೋಟಾರು ವಾಹನ ಕಾಯ್ದೆಯ ತಿದ್ದುಪಡಿಯಿಂದ ಪಡುತ್ತಿರುವ ಬವಣೆಯನ್ನೇ ನೋಡಿ. ಶುಲ್ಕ ದುಬಾರಿಯಾಗಿದೆ ನಿಜ. ಅತಿಯಾಯಿತು ಎನ್ನುವುದೂ ದಿಟ. ಆದರೆ ಎಷ್ಟು ಸುಶಿಕ್ಷಿತ ಪೋಷಕರು 18 ವರ್ಷದ ಕೆಳಗಿನ ಮಕ್ಕಳಿಗೆ ವಾಹನ ನೀಡದೆ ಇರುತ್ತಾರೆ? ‘‘ಏನ್ಮಾಡೋಕಾಗುತ್ತದೆ, ಪಾಪ ಮಗು ಕಾಲೇಜ್ಗೂ ಹೋಗ್ಬೇಕು, ಟ್ಯೂಷನ್ಗೂ ಹೋಗ್ಬೇಕು, ನೀಟು, ಸೀಯೀಟಿ, ಕೋಚಿಂಗ್ ಕ್ಲಾಸು ಎಲ್ಲದಕ್ಕೂ ಹೇಗೆ ಓಡಾಡ್ತಾನೆ, ಅವರ್ಗೇನು ರೂಲ್ಸ್ ಮಾಡ್ಬಿಡ್ತಾರೆ ಮಕ್ಳುಓದೋದ್ಬೇಡ್ವೇ’’ ಎಂದು ಹೇಳುತ್ತಲೇ ಎಂಟನೇ ಕ್ಲಾಸಿನ ಮಕ್ಕಳಿಗೂ ದ್ವಿಚಕ್ರವಾಹನ ಕೊಡಿಸಿಯೇ ತೀರುತ್ತಾರೆ. ಒಂದು ವೇಳೆ ಪೊಲೀಸರು ಹಿಡಿದರು ಅಂದ್ಕೊಳ್ಳಿ, ‘‘ಅಲ್ಲಿ ದೊಡ್ದೊಡ್ಡೋರು ಕೊಳ್ಳೆ ಹೊಡೀತಾರೆ ಅವರ್ನ ಹಿಡೀರೀ ನಮ್ಮ ಮಕ್ಕಳ್ನೇಕೆ ಹಿಂಸೆ ಮಾಡ್ತೀರಿ’’ ಅಂತ ದಬಾಯಿಸ್ತಾರೆ. ಇಂತಹ ಸುಶಿಕ್ಷಿತ ಪೋಷಕರಿಗೇನೂ ಕಡಿಮೆ ಇಲ್ಲ. ಇವರಿಗೆ ಡಿಕೆಶಿಯ ಬಂಧನ ಅದೇಕೆ ಸಂಭ್ರಮ ಉಂಟುಮಾಡುತ್ತದೆ. ಲಾಲು ಯಾದವ್ಗೆ ಶಿಕ್ಷೆಯಾದರೆ ಏಕೆ ಖುಷಿಯಾಗುತ್ತದೆ. ತಮ್ಮ ಹಿತ್ತಲಲ್ಲೇ ಇರುವ ಭ್ರಷ್ಟತೆಯ ಗದ್ದೆಯಲ್ಲಿ ನಾಟಿ ಮಾಡುತ್ತಲೇ ಪಕ್ಕದ ಮನೆಯವರ ರೆಫ್ರಿಜರೇಟರ್ ಮೇಲೆ ಕಣ್ಣು ಹಾಯಿಸುವ ಪ್ರವೃತ್ತಿ ಹೆಚ್ಚಾಗಿರುವುದರಿಂದಲೇ ನಮಗೆ ಭ್ರಷ್ಟಾಚಾರದ ಸ್ವರೂಪವೇ ಅರಿವಾಗಿಲ್ಲ. ಈಗ ದಿಲ್ಲಿಯತ್ತ ನೊಡೋಣ. ಇಲ್ಲಿ ನೀಡಿದ ಉದಾಹರಣೆಗಳನ್ನು, ಉಲ್ಲೇಖಿಸಿದ ಪ್ರಸಂಗಗಳನ್ನು ಲೋಕಸಭೆೆ, ರಾಜ್ಯಸಭೆ ಮತ್ತು ವಿಧಾನಸಭೆಗಳ ಅಂಗಳದಲ್ಲಿ ನಿಲ್ಲಿಸಿ ನೋಡಿ. ಅರ್ಥವಾಗುತ್ತದೆ. ಬಂಡವಾಳ ವ್ಯವಸ್ಥೆ ಮೇಲು ಕೀಳುಗಳನ್ನು ಸೃಷ್ಟಿಸುತ್ತಲೇ ಇರುತ್ತದೆ. ಉಳ್ಳವರು, ಇಲ್ಲದವರು ಪರಸ್ಪರ ಕಚ್ಚಾಟದಲ್ಲೇ ತೊಡಗಿರುವಂತೆ ಸದಾ ಎಚ್ಚರ ವಹಿಸುತ್ತದೆ. ಪಕ್ಕದಲ್ಲೇ ಹರಿಯುತ್ತಿರುವ ತೊರೆಯಲ್ಲಿನ ನೀರನ್ನು ಮುಟ್ಟಲೂ ಆಗದಂತಹ ಪರಿಸ್ಥಿತಿಯನ್ನು ನಿರ್ಮಿಸಿಬಿಡುತ್ತದೆ. ಆಗ ಆ ನೀರನ್ನು ಕದಿಯುವವರ ಸಂಖ್ಯೆ ಹೆಚ್ಚಾದಂತೆಯೇ ಕದಿಯುವ ತಂತ್ರಗಳೂ ಹೆಚ್ಚಾಗುತ್ತವೆ. ಮಾರ್ಗಗಳೂ ವಿಭಿನ್ನವಾಗಿರುತ್ತವೆ, ವೈವಿಧ್ಯಮಯವಾಗಿರುತ್ತವೆ. ಬೊಫೋರ್ಸ್ ಮತ್ತು ರಫೇಲ್ ನಡುವೆ ಒಮ್ಮೆ ತುಲನಾತ್ಮಕವಾಗಿ ಕಣ್ಣು ಹಾಯಿಸಿದರೆ ಮೇಲ್ಮಟ್ಟದ ಭ್ರಷ್ಟಾಚಾರ ಎಷ್ಟು ವ್ಯವಸ್ಥಿತವಾಗಿ ನಡೆಯುತ್ತದೆ ಮತ್ತು ಹೇಗೆ ಜನಸಾಮಾನ್ಯರ ಕಣ್ಣಿಗೆ ಮಣ್ಣೆರಚಿ ಮುಂದೆ ಸಾಗುತ್ತದೆ ಎಂದು ಅರಿವಾಗುತ್ತದೆ. ಈಗ ಸ್ವತಂತ್ರ ಭಾರತದ ಇತಿಹಾಸದತ್ತ ಒಮ್ಮೆ ಕಣ್ಣು ಹಾಯಿಸಿ ನೋಡಿ. ಎಷ್ಟು ಭ್ರಷ್ಟ ರಾಜಕಾರಣಿಗಳಿಗೆ ಶಿಕ್ಷೆಯಾಗಿದೆ? ಶಿಕ್ಷೆಗೊಳಗಾದ ಎಷ್ಟು ಭ್ರಷ್ಟರನ್ನು ನಾವು ಶಾಸನ ಸಭೆಗಳಿಂದ ದೂರ ಇಟ್ಟಿದ್ದೇವೆ? ಎಷ್ಟು ಪಕ್ಷಗಳು ಭ್ರಷ್ಟರಿಗೆ ಪ್ರವೇಶವಿಲ್ಲ ಎಂದು ಬೋರ್ಡ್ಹಾಕಿವೆ ? ಇಲ್ಲ ಅಲ್ಲವೇ, ಇಲ್ಲವೇ ಇಲ್ಲ. ಇದರರ್ಥ ಏನು? ಈ ವ್ಯವಸ್ಥೆ ಭ್ರಷ್ಟಾಚಾರ ಇಲ್ಲದೆ ನಡೆಯುವುದೇ ಇಲ್ಲ. ಹಾಗಾಗಿಯೇ ಪ್ರಾಮಾಣಿಕ ಅಧಿಕಾರಿಗಳು ನಮಗೆ ಮ್ಯೂಸಿಯಂ ಪೀಸ್ಗಳಂತೆ ಕಾಣುತ್ತಾರೆ ಇಲ್ಲವಾದರೆ ಹೀರೋಗಳಾಗಿ ರಜತ ಪರದೆಗೆ ಕಥಾವಸ್ತುಗಳಾಗಿಬಿಡುತ್ತಾರೆ ಅದೂ ಇಲ್ಲದಿದ್ದರೆ ವರ್ಗಾವಣೆಗಳ ಪೀಡನೆಯಿಂದ ರಾಜೀನಾಮೆ ನೀಡಿ ತೆಪ್ಪಗಾಗಿಬಿಡುತ್ತಾರೆ. ಅಧಿಕಾರಶಾಹಿಯಲ್ಲಿ ಪ್ರಾಮಾಣಿಕರಿಗೆ ಈ ಆಯ್ಕೆಗಳಿವೆ. ಆದರೆ ಪಾಪ ರಾಜಕಾರಣಿಗಳಿಗೆ, ಇತ್ತ ನಿವೃತ್ತಿಯೂ ಇಲ್ಲ ಅತ್ತ ಸನ್ಯಾಸತ್ವವೂ ಇಲ್ಲ. ಹಾಗಾಗಿ ಬೇಲಿ ಹಾರುತ್ತಾ ಯಾವುದೋ ಒಂದು ಪ್ರಶಸ್ತ ಜಾಗದಲ್ಲಿ ಕುರ್ಚಿಯನ್ನು ಹುಡುಕುತ್ತಾ ಅಂಡಲೆಯುತ್ತಿರುತ್ತಾರೆ. ಇಂದು ದ್ರೋಹಿ ಎಂದವನು ನಾಳೆ ಬಾರಯ್ಯೋ ಗೆಳೆಯಾ ಎಂದು ಆಲಂಗಿಸಿಕೊಳ್ಳುತ್ತಾನೆ ಎಂಬ ಅರಿವು ಪ್ರತಿಯೊಬ್ಬ ರಾಜಕಾರಣಿಗೂ ಇರುತ್ತದೆ. ಹಾಗಾಗಿ ತಾವು ಒಮ್ಮೆ ಕಂಬಿ ಎಣಿಸಿದರೂ ಮತ್ತೊಂದು ಸಂದರ್ಭದಲ್ಲಿ ಕಂಬಿಗಳನ್ನು ನಿಯಂತ್ರಿಸಲೂಬಹುದು ಎಂಬ ದೃಢ ಆತ್ಮವಿಶ್ವಾಸ ಅವರಲ್ಲಿರುತ್ತದೆ. ಬಂಡವಾಳ ವ್ಯವಸ್ಥೆ ಇಂತಹ ಆತ್ಮವಿಶ್ವಾಸಕ್ಕೆ ಅಗತ್ಯವಾದ ಪರಿಕರಗಳನ್ನು ಒದಗಿಸುತ್ತಲೇ ಇರುತ್ತದೆ. 1998ರಿಂದ ಇಲ್ಲಿಯವರೆಗೂ ವ್ಯಕ್ತಿಗತವಾಗಿ ಭ್ರಷ್ಟರಲ್ಲ ಎಂದು ಭಾವಿಸಬಹುದಾದ ಪ್ರಧಾನಮಂತ್ರಿಗಳನ್ನೇ ಕಂಡಿದ್ದೇವೆ. ಅಂತಿಮ ಸತ್ಯ ಕಣ್ಣಿಗೆ ಗೋಚರಿಸುವುದಿಲ್ಲ ಬಿಡಿ. ಆದರೂ ನಮ್ಮ ಸುತ್ತಲ ಸಮಾಜದಲ್ಲಿ ಏನನ್ನು ಕಂಡಿದ್ದೇವೆ? ಪ್ರತಿಯೊಬ್ಬರಲ್ಲೂ ಒಬ್ಬ ಡಿಕೆಶಿ, ಚಿದಂಬರಂ ಅಡಗಿರುತ್ತಾರೆ ಎಂಬ ವಾಸ್ತವ ನಮ್ಮ ಗ್ರಹಿಕೆಗೇ ಬರುವುದಿಲ್ಲ ಅಲ್ಲವೇ ? ಹಣಕಾಸಿನ ಅಥವಾ ಆರ್ಥಿಕ ಭ್ರಷ್ಟತೆಗಿಂತಲೂ ನಮ್ಮನ್ನು ಕಾಡಬೇಕಿರುವುದು ನೈತಿಕ ಭ್ರಷ್ಟತೆ. ಆದರೆ ಅದು ನಮ್ಮನ್ನು ಕಾಡುತ್ತಿಲ್ಲ. ಹಾಗಾಗಿಯೇ ಅನೈತಿಕತೆಯ ಸರದಾರರೂ ಶಾಸನಸಭೆಗಳಲ್ಲಿ ಪ್ರತಿಷ್ಠಿತ ಸ್ಥಾನಗಳನ್ನು ಅಲಂಕರಿಸುತ್ತಾರೆ. ಅತ್ಯಾಚಾರಿಗಳೂ ಸಭ್ಯಸ್ಥರಂತೆ ಸಮಾಜದಲ್ಲಿ ವಿಜೃಂಭಿಸುತ್ತಾರೆ. ಪ್ರಜಾತಂತ್ರ ವೌಲ್ಯಗಳನ್ನೇ ಭ್ರಷ್ಟಗೊಳಿಸಿ, ಸಂವಿಧಾನವನ್ನೇ ಉಲ್ಲಂಘಿಸುವವರೂ ಅನಭಿಷಿಕ್ತ ದೊರೆಗಳಂತೆ ವಿಜೃಂಭಿಸುತ್ತಾರೆ. ಸಂಚಾರಿ ನಿಯಮ ಉಲ್ಲಂಘಿಸುವವರಿಗೆ ಭ್ರಷ್ಟರೆಂದು ದಂಡ ವಿಧಿಸಲಾಗುತ್ತದೆ. ಆದರೆ ದೇಶದ ಸಂವಿಧಾನ ಉಲ್ಲಂಘಿಸುವವರು ಭ್ರಷ್ಟ ಸಂಹಾರಕರೆಂದು ಆರಾಧಿಸಲ್ಪಡುತ್ತಾರೆ. ಬಂಡವಾಳ ಇಂತಹ ಒಂದು ವ್ಯವಸ್ಥೆಯನ್ನೇ ಬಯಸುತ್ತದೆ. ಏಕೆಂದರೆ ಜನಸಾಮಾನ್ಯರನ್ನು ಸದಾ ಗೊಂದಲದಲ್ಲಿಯೇೀ ಇರಿಸಿ, ಭ್ರಮೆಗಳ ನಡುವೆ ಬದುಕುವಂತೆ ಮಾಡುವುದೇ ಬಂಡವಾಳ ವ್ಯವಸ್ಥೆಯ ಸಿದ್ಧಾಂತ. ಹಾಗಾಗಿ ನಾವು ಬೊಫೋರ್ಸ್, ಹರ್ಷದ್ ಮೆಹ್ತಾ, ಕಾರ್ಗಿಲ್ ಶವಪೆಟ್ಟಿಗೆ, ಆಗಸ್ಟಾ ವೆಸ್ಟ್ಲ್ಯಾಂಡ್, 2ಜಿ, ಕಾಮನ್ವೆಲ್ತ್, ಆದರ್ಶ, ಶಾರದಾ ಚಿಟ್ಫಂಡ್, ರಾಫೆಲ್ ಇವೆಲ್ಲವನ್ನೂ ಮರೆತು ಡಿಕೆಶಿ ಮತ್ತು ಚಿದಂಬರಂ ಅವರನ್ನು ಮನರಂಜನೆಯ ವಸ್ತುಗಳಂತೆ ನೋಡುತ್ತಲೇ ಮುನ್ನಡೆಯುತ್ತೇವೆ. ಅಷ್ಟರಲ್ಲಿ ಮತ್ತೊಬ್ಬ ಭ್ರಷ್ಟ ರಾಜಕಾರಣಿಯ ದರ್ಶನವಾಗುತ್ತದೆ. ಕಾಶ್ಮೀರದಲ್ಲಿ ಉಸಿರುಗಟ್ಟಿ ವಾಸಿಸುತ್ತಿರುವವರು ನಮ್ಮ ಕಣ್ಣಿಗೆ ಗೋಚರಿಸುವುದೇ ಇಲ್ಲ. ನೆರೆ ಹಾವಳಿ, ಪ್ರವಾಹ, ಭೂ ಕುಸಿತ, ಮುಳುಗುತ್ತಿರುವ ನರ್ಮದಾ ಕಣಿವೆಯ ಜನತೆ ನಮ್ಮ ಗಮನಕ್ಕೇ ಬರುವುದಿಲ್ಲ. ಬಿಡಿ, ನಮಗೆ ಇರುವುದು ಎರಡೇ ಕಣ್ಣುಗಳು. ನೂರಾರು ಕ್ಯಾಮೆರಾ ಕಣ್ಣುಗಳನ್ನು ಹೊತ್ತು ತಿರುಗುವ ಮಾಧ್ಯಮಗಳಿಗೆ ಏನು ಹೇಳುವುದು? ಯೋಚಿಸೋಣವೇ?

Writer - ನಾ ದಿವಾಕರ

contributor

Editor - ನಾ ದಿವಾಕರ

contributor

Similar News

ಜಗದಗಲ
ಜಗ ದಗಲ