ಪ್ರಕೃತಿ ಸಂರಕ್ಷಣೆಗೆ ತಳಮಟ್ಟದ ಯೋಜನೆ

Update: 2019-09-08 18:59 GMT

ನಾವು, ದೇಶದ ಸಾರ್ವಭೌಮ ಜನತೆ, ದೇಶದ ನಿಜವಾದ ಆಡಳಿತಗಾರರು ಮತ್ತು ಇಂತಹ ನಾವು ದೇಶವನ್ನು ಜನಸ್ನೇಹಿ ಹಾಗೂ ಪರಿಸರ ಸ್ನೇಹಿ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಬೇಕಾಗಿದೆ. 2018ರಲ್ಲಿ ಕೇರಳದಲ್ಲಿ ಭಾರೀ ಆಸ್ತಿಪಾಸ್ತಿ ಹಾಗೂ ಜೀವಹಾನಿ ಉಂಟು ಮಾಡಿದ ನೆರೆಗಳು ಹಾಗೂ ಭೂಕುಸಿತಗಳು ಶತಮಾನದಲ್ಲೊಮ್ಮೆ ಸಂಭವಿಸುವ ಅನಾಹುತವೆಂದು ಹಲವರು ತಿಳಿದಿದ್ದರು. ಅಲ್ಲದೆ, ಒಂದರ ಹಿಂದೆ ಒಂದರಂತೆ ಅಂತಹ ಅನಾಹುತಗಳು ಸಂಭವಿಸುವ ಸಾಧ್ಯತೆ 10,000ದಲ್ಲಿ ಕೇವಲ ಒಂದು ಎಂದೂ ಭಾವಿಸಿದ್ದರು. ಆದ್ದರಿಂದ ಅಂತಹದೇ ಪ್ರವಾಹಗಳು, ಭೂಕುಸಿತಗಳು, ಆರ್ಥಿಕ ನಷ್ಟಗಳು, ಮಾನವ ದುರಂತಗಳು 2019ರಲ್ಲಿ ಪುನಃ ಸಂಭವಿಸಿದಾಗ ಹಾಗೆ ತಿಳಿದಿದ್ದ ಜನ ಕಂಗಾಲಾದರು. ಮುಂದಿನ ಆಯ್ಕೆಗಳ ಬಗ್ಗೆ, ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ತಾವು ಹೊಸದಾಗಿ ಯೋಚಿಸಲೇಬೇಕಾದ ಅನಿವಾರ್ಯತೆಯನ್ನು ಮನಗಂಡರು. ಹಾಗಾದರೆ ನಮ್ಮ ಮುಂದಿರುವ ಈ ಆಯ್ಕೆಗಳು, ಬದಲಿ ಮಾರ್ಗಗಳು ಯಾವುವು? ಇವುಗಳ ಸಾಧ್ಯತೆಗಳ ಒಂದು ಹಾದಿಯನ್ನು ನಾನು ಅಧ್ಯಕ್ಷನಾಗಿದ್ದ ಪಶ್ಚಿಮಘಟ್ಟಗಳ ಪರಿಸರ ತಜ್ಞ ಸಮಿತಿ (ವೆಸ್ಟರ್ನ್ಘಾಟ್ಸ್ ಇಕಾಲಜಿಎಕ್ಸ್ಪರ್ಟ್ ಪ್ಯಾನಲ್) (ಡಬ್ಲುಜಿ ಇಇಪಿ)ಯ ಶಿಫಾರಸುಗಳಲ್ಲಿದೆ. ಆ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನ ಗೊಳಿಸಿದರೆ 2018 ಮತ್ತು2019ರ ದುರಂತಗಳನ್ನು ತಡೆಯಬಹುದಿತ್ತೇ? ಖಂಡಿತವಾಗಿಯು ಅವುಗಳ ಅನಿಷ್ಠಾನದಿಂದ ಭಾರೀ ಮಳೆಯನ್ನು ತಡೆಯಲು ಸಾಧ್ಯವಾಗುತ್ತಿರಲಿಲ್ಲ; ಆದರೆ ನಿಸ್ಸಂದೇಹವಾಗಿಯೂ ಪ್ರಮಾಣವನ್ನು ಕಡಿಮೆ ಮಾಡಬಹುದಿತ್ತು. ನಮ್ಮ ಎಲ್ಲ ಶಿಫಾರಸುಗಳು ವಾಸ್ತವಿಕ ಸ್ಥಿತಿಗಳ ಕೂಲಂಕಷ ಪರೀಕ್ಷೆಯನ್ನಾಧರಿಸಿ, ನಮ್ಮ ಸಾಂವಿಧಾನಿಕ ಕರ್ತವ್ಯಗಳ ಹಾಗೂ ಕಾನೂನುಗಳ ಚೌಕಟ್ಟಿನ ಒಳಗಡೆಯೇ ಮಾಡಿದ್ದ ಶಿಫಾರಸುಗಳಾಗಿದ್ದವು. ನಾವು ಯಾವುದೇ ಹೊಸ ಕಾನೂನು ಮಾಡಬೇಕೆಂದು ಹೇಳಿಲ್ಲ. ಪರಿಸರ ರಕ್ಷಣೆಗೆ ಸಂಬಂಧಿಸಿದಂತೆ ಈಗ ಇರುವ ಕಾನೂನುಗಳನ್ನೇ ಮೇಲಿನಿಂದ ಕೆಳಕ್ಕೆ, ಗ್ರಾಮ ಪಂಚಾಯತ್ನವರೆಗೂ ಅನುಸರಿಸಿ, ಅನುಷ್ಠಾನಿಸಿ ಎಂದಷ್ಟೆ ನಾವು ಹೇಳಿದ್ದೆವು. ಪ್ರಜಾಸತ್ತಾತ್ಮಕ ಅಧಿಕಾರ ಹಂಚಿಕೆಯಲ್ಲಿ ಕೇರಳ ಮುಂದೆ ಇರುತ್ತದೆ: ಕೋಕಾಕೋಲ ಕಂಪೆನಿಯ ಪರವಾನಿಗೆಯನ್ನು ರದ್ದು ಮಾಡಿದ್ದ ಮ್ಲಾಜಿಮಾಡ ಪಂಚಾಯತ್ನ ಆಜ್ಞೆಯನ್ನು ಕೇರಳ ಹೈಕೋರ್ಟ್ ಎತ್ತಿಹಿಡಿದಿತ್ತು. ಕಂಪೆನಿಯು ಜಲಮಾಲಿನ್ಯ ಉಂಟುಮಾಡಿತ್ತು ಹಾಗೂ ಅಂತರ್ಜಲವನ್ನು ಬತ್ತಿಸಿತ್ತು, ಇದರಿಂದಾಗಿ ಬಾವಿಗಳು ಒಣಗಿಹೋದವು. ಕೃಷಿ ಹಾಗೂ ಜಾನುವಾರಗಳ ಮೇಲೆ ನೇತ್ಯಾತ್ಮಕ ಪರಿಣಾಮವಾಯಿತು ಎಂಬ ಕಾರಣಕ್ಕಾಗಿ ಪಂಚಾಯತ್ ಆ ನಿರ್ಧಾರ ತೆಗೆದುಕೊಂಡಿತ್ತು. ಹೀಗೆ ಮಾಡುವಾಗ ಅದು ತನ್ನ ಸಾಂವಿಧಾನಿಕ ಹಕ್ಕನ್ನು ಬಳಸಿತ್ತು. ತನ್ನ ನಾಗರಿಕರ ಆರೋಗ್ಯ ರಕ್ಷಿಸುವ ಕರ್ತವ್ಯ ತನ್ನದು, ಆದ್ದರಿಂದ ಅವರ ಬದುಕಿನ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಯಾವುದೇ ವ್ಯಾಪಾರ ಉದ್ಯಮಕ್ಕೆ ಅನುಮತಿ ನೀಡುವ ಅಥವಾ ನೀಡದಿರುವ ಸಂವಿಧಾನದತ್ತವಾದ ಹಕ್ಕು ತನಗಿದೆ ಎಂದು ಅದು ನ್ಯಾಯಾಲಯದಲ್ಲಿ ವಾದಿಸಿತ್ತು. ತನಗೆ ಅನುಮತಿ ನಿಡಿದ್ದು ರಾಜ್ಯ ಸರಕಾರ ಆದ್ದರಿಂದ ಸರಕಾರ ನೀಡಿದ್ದ ಅನುಮತಿಯನ್ನು ಅದರ ಕೈ ಕೆಳಗಿರುವ ಒಂದು ಪಂಚಾಯತ್ಗೆ ರದ್ದು ಪಡಿಸುವ ಅಧಿಕಾರವಿಲ್ಲ ಎಂದು ಕಂಪೆನಿ ನ್ಯಾಯಾಲಯದಲ್ಲಿ ವಾದಿಸಿತ್ತು. ಆದರೆ ಹೈಕೋರ್ಟ್ ಈ ವಾದವನ್ನು ತಳ್ಳಿಹಾಕಿ ತಳಮಟ್ಟದ ಸಂಸ್ಥೆಗಳಿಗೆ ತಮ್ಮದೇ ಆದ ಪರಿಸರದಲ್ಲಿ ನಡೆಯುವ ಅಭಿವೃದ್ಧಿ/ಉದ್ಯಮದ ಬಗ್ಗೆ ತೀರ್ಮಾನ ತೆಗೆದು ಕೊಳ್ಳುವ ಸಾಂವಿಧಾನದತ್ತವಾದ ಹಕ್ಕುಗಳಿವೆ ಎಂದು ಹೇಳಿತ್ತು. ಡಬ್ಲುಜಿಇಇಪಿ ಪರಸ್ಪರ ಒಂದಕ್ಕೊಂದು ಪೂರಕವಾಗುವ ಪರಿಸರ ಸಂರಕ್ಷಣೆ ಹಾಗೂ ಅಭಿವೃದ್ಧಿ ಯೋಜನೆಗಳು ಕಾರ್ಯಗತವಾಗಬೇಕೆಂದು ಹೇಳಿದೆ. ಹಾಗಾದರೆ ನಮ್ಮ ಶಿಫಾರಸುಗಳನ್ನು ಯಾಕೆ ಅನುಷ್ಠಾನಗೊಳಿಸಲಿಲ್ಲ? ಅವುಗಳು ‘‘ಅಪ್ರಾಯೋಗಿಕ’’ ಎಂದು ಹೇಳಲಾಯಿತು. ಹಾಗಾದರೆ ಪ್ರಾಯೋಗಿಕ ಯಾವುದು? ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಸಾಂವಿಧಾನಿಕ ನಿಯಮಗಳನ್ನು ಉಲ್ಲಂಘಿಸುವುದು ಮತ್ತು ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳನ್ನು ಬುಡಮೇಲು ಮಾಡುವುದು ಪ್ರಾಯೋಗಿಕವೇ? ಇರಬಹುದು. ಆದರೆ ಇದು ಖಂಡಿತವಾಗಿಯೂ ಅಪೇಕ್ಷಣೀಯವಲ್ಲ. ಪರಿಸರ( ಸಂರಕ್ಷಣೆ) ಕಾಯ್ದೆ 1986ರ ಪ್ರಕಾರ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಪರಿಸರದ ದೃಷ್ಟಿಯಿಂದ ತುಂಬ ಸೂಕ್ಷ್ಮವಾದ ಪ್ರದೇಶಗಳನ್ನು ಗುರುತಿಸಿ ಅವುಗಳನ್ನು ಪರಿಸರಸೂಕ್ಷ್ಮ ಪ್ರದೇಶಗಳೆಂದು ಅಧಿ ನಿಯಮ ಹೊರಡಿಸಬೇಕೆಂದು ನಾವು (ಡಬ್ಲುಜಿಇಇಪಿ)ಗೆ ಶಿಫಾರಸು ಮಾಡಿದ್ದೆವು. ರಾಷ್ಟ್ರೀಯ ಅರಣ್ಯ ನೀತಿಗೆ ಅನುಗುಣವಾಗಿ, ಕೇರಳದಲ್ಲಿ ಒಟ್ಟು ಪಶ್ಚಿಮಘಟ್ಟಗಳ ಪ್ರದೆಶದ 60 ಶೇ. ಪ್ರದೇಶವನ್ನು ಅತ್ಯಂತ ತೀವ್ರವಾಗಿ, ಗರಿಷ್ಠ ಸೂಕ್ಷ್ಮವಾಗಿರುವ ಒಂದು ವಲಯವೆಂದು(ಇಝಡ್ಎಸ್ಐ) ಘೋಷಿಸಲು ನಾವು ತೀರ್ಮಾನಿಸಿದೆವು. ಈ ವಲಯದಲ್ಲಿ ಅರಣ್ಯಧಾಮಗಳಿರುವ ಹಾಗೂ ರಾಷ್ಟ್ರೀಯ ಉದ್ಯಾನಗಳಿರುವ ಪ್ರದೇಶ ಕೂಡ ಸೇರಿದೆ. ಪರಿಸರ ಸೂಕ್ಷ್ಮತೆಯ ಎರಡು ಮಾಪನಗಳಾಗಿ ನಾವು ‘‘ಎತ್ತರ’’(ಎಲಿವೇಶನ್)‘‘ಇಳಿಜಾರು ಪ್ರದೇಶ’’(ಸ್ಲೋಪ್) ಎಂದು ಎರಡು ರೀತಿಯ ವರ್ಗೀಕರಣವನ್ನು ಹೆಚ್ಚು ಸೂಚಿಸಿದೆವು. ಕೇರಳದಲ್ಲಿ ಎತ್ತರಕ್ಕೆ ಅನುಗುಣವಾಗಿ ಮಳೆ ಬರುತ್ತದೆ. ಆಗ ಕಡಿದಾದ ಇಳಿಜಾರು ಪ್ರದೇಶಗಳು ಭೂಕುಸಿತಕ್ಕೆ ಗುರಿಯಾಗುತ್ತವೆ. ಆದ್ದರಿಂದ ಭೂಕುಸಿತ ಸಂಭವಿಸಬಹುದಾದ ಭೂಭಾಗಗಳು ಇಝಡ್ಎಸ್ಐ ವ್ಯಾಪ್ತಿಯಲ್ಲಿ ಸೇರುತ್ತವೆ. ಹಸಿರು ಹೊದಿಕೆಯ ಗುಣಮಟ್ಟ ಮತ್ತು ವಿಸ್ತಾರವು ಒಂದು ಪ್ರದೇಶವನ್ನು ಇಝಡ್ಎಸ್ಐ ವ್ಯಾಪ್ತಿಗೆ ಸೇರಿಸಲು ನಾವು ಬಳಸಿದ ಮೂರನೆಯ ಮಾಪಕ. ಮರಗಳು ಇರುವ ಪ್ರದೇಶಗಳಲ್ಲಿ ಮರದ ಬೇರುಗಳು ಮಣ್ಣನ್ನು ಹಿಡಿದಿಟ್ಟುಕೊಳ್ಳುವುದರಿಂದ, ಭೂಕುಸಿತ ನಿಯಂತ್ರಣದಲ್ಲಿರುತ್ತದೆ. ಇಂತಹ ಪ್ರದೇಗಳಲ್ಲಿರುವ ಮರಗಳನ್ನು ಕಡಿದಾಗ ಆ ಪ್ರದೇಶಗಳು ಭೂಕುಸಿತಕ್ಕೆ ಗುರಿಯಾಗುತ್ತವೆ. ನಮ್ಮ ಶಿಫಾರಸುಗಳನ್ನು ಸಂಬಂಧಪಟ್ಟ ಆಡಳಿತ ಗಂಭೀರವಾಗಿ ತೆಗೆದುಕೊಂಡಿದ್ದರೆ ಈಗ ಆಗಿರುವ ಭೂಕುಸಿತದ ಹಾಗೂ ಅದರಿಂದಾಗಿ ಆಗಿರುವ ಆಸ್ತಿಪಾಸ್ತಿ, ಪ್ರಾಣನಷ್ಟದ ಪ್ರಮಾಣ ತುಂಬ ಕಡಿಮೆಯಾಗುತ್ತಿತ್ತು. ಆದ್ದರಿಂದ ನಮ್ಮ ಸಮಿತಿ ಮಾಡಿರುವ ಶಿಫಾರಸುಗಳನ್ನು ಅನುಷ್ಠಾನಗೊಳಿಸುವುದು ವಿವೇಕದ ಕ್ರಮವಾಗಿದೆ. ತಮ್ಮತಮ್ಮ ಪ್ರದೇಶಗಳಲ್ಲಿ ಅಭಿವೃದ್ಧಿಯ ಮಾರ್ಗವನ್ನು, ಕ್ರಮವನ್ನು ನಿರ್ಧರಿಸುವ ಹಕ್ಕು ಸ್ಥಳೀಯಾಡಳಿತ ಸಂಸ್ಥೆಗಳಿಗೆ, ಪಂಚಾಯತ್ಗಳಿಗೆ ಇದೆ ಎಂಬ ಕೇರಳ ಹೈಕೋರ್ಟ್ನ ಆದೇಶ ದೇಶದಾದ್ಯಂತ ಕಾರ್ಯಗತವಾಗುವಂತೆ ನಾವು ಒತ್ತಾಯಿಸ ಬೇಕಾಗಿದೆ. thehindu.com

Writer - ಮಾಧವ್ ಗಾಡ್ಗೀಳ್

contributor

Editor - ಮಾಧವ್ ಗಾಡ್ಗೀಳ್

contributor

Similar News

ಜಗದಗಲ
ಜಗ ದಗಲ