ಧೂಳಿನ ಅಲರ್ಜಿ ಸಮಸ್ಯೆಯೇ? ಇಲ್ಲಿವೆ ಸುಲಭ ಮತ್ತು ಪರಿಣಾಮಕಾರಿ ಪರಿಹಾರಗಳು

Update: 2019-09-08 19:02 GMT

ಹಲವಾರು ಜನರು ಮಾಲಿನ್ಯ ಮತ್ತು ಧೂಳಿನ ವಾತಾವರಣದಲ್ಲಿದ್ದಾಗ ಅನಿಯಂತ್ರಿತವಾಗಿ ಸೀನುತ್ತಿರುತ್ತಾರೆ. ಅವರು ಧೂಳಿಗೆ ಅಲರ್ಜಿಯನ್ನು ಹೊಂದಿರುವುದು ಇದಕ್ಕೆ ಕಾರಣ ಮತ್ತು ಸೀನುವಿಕೆಯು ಧೂಳಿನ ಅಲರ್ಜಿಯ ಮೊದಲ ಮತ್ತು ಅತ್ಯಂತ ಪ್ರಮುಖ ಸೂಚನೆಗಳಲ್ಲೊಂದಾಗಿದೆ. ಮುಖ್ಯವಾಗಿ ಧೂಳಿನಲ್ಲಿರುವ ಸೂಕ್ಷ್ಮಜೀವಿಗಳು ಅಲರ್ಜಿ ಯನ್ನುಂಟು ಮಾಡುತ್ತವೆ. ಯೀಸ್ಟ್,ಹೂವುಗಳ ಪರಾಗ,ಜಿರಳೆ ಇತ್ಯಾದಿಗಳೂ ಈ ಅಲರ್ಜಿಗೆ ಕಾರಣವಾಗುತ್ತವೆ.

ಇವುಗಳಿಗೆ ಅಲರ್ಜಿಯನ್ನು ಹೊಂದಿರುವ ವ್ಯಕ್ತಿ ಈ ಪೈಕಿ ಯಾವುದೇ ಒಂದರ ಸಂಪರ್ಕಕ್ಕೆ ಬಂದರೂ ನಿರಂತರ ಸೀನು,ಸುರಿಯುವ ಮೂಗು,ಕೆಮ್ಮು,ಉಬ್ಬಸ,ತುರಿಕೆ,ಎದೆಯಲ್ಲಿ ಬಿಗಿತ ಮತ್ತು ಉಸಿರಾಟದ ತೊಂದರೆಯಂತಹ ಲಕ್ಷಣಗಳು ಆತನಲ್ಲಿ ಕಂಡು ಬರುತ್ತವೆ. ತೊಂದರೆಯನ್ನುಂಟು ಮಾಡುವ ಅಲರ್ಜಿಕಾರಕಗಳಿಂದ ಪಾರಾಗುವುದು ಕಷ್ಟವಾಗಿದ್ದರೂ ಕೆಲವು ಮನೆಮದ್ದುಗಳ ನೆರವಿನಿಂದ ಆಗಾಗ್ಗೆ ಅಲರ್ಜಿಯುಂಟಾಗುವುದನ್ನು ತಡೆಯಬಹುದು. ಅಂತಹ ಕೆಲವು ಸುಲಭ ಮತ್ತು ಪರಿಣಾಮಕಾರಿ ಮನೆಮದ್ದುಗಳ ಮಾಹಿತಿಯಲ್ಲಿದೆ.....

► ಗೃಹ ಸಸ್ಯಗಳನ್ನು ಬೆಳೆಸಿ:

ಡ್ರಸೀನಾ ಅಥವಾ ಡ್ರಾಗನ್ ಪ್ಲಾಂಟ್‌ನಂತಹ ಅಲರ್ಜಿಸ್ನೇಹಿ ಗಿಡಗಳು ತಮ್ಮ ಎಲೆಗಳಲ್ಲಿ ಅಲರ್ಜಿಕಾರಕಗಳನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಅವುಗಳಿಂದ ನೀವು ದೂರವಿರಲು ನೆರವಾಗುತ್ತವೆ. ಧೂಳಿನಲ್ಲಿಯ ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡಲು ಈ ಗಿಡಗಳನ್ನು ನೀವು ಮನೆಯೊಳಗೆ ಇರಿಸಬಹುದು. ಲೇಡಿ ಪಾಮ್,ಬಾಂಬೂನಂತಹ ವಾಯು ಶುದ್ಧೀಕರಣ ಸಸ್ಯಗಳೂ ವಾಯುವನ್ನು ಸೋಸಿ ಕ್ರಿಮಿಕೀಟಗಳನ್ನು ದೂರವಿಡಲು ನೆರವಾಗುತ್ತವೆ.

► ಎಸೆನ್ಶಿಯಲ್ ಆಯಿಲ್ ಡಿಫ್ಯೂಸರ್ ಬಳಸಿ:

ನೀಲಗಿರಿ ಮತ್ತು ಲ್ಯಾವೆಂಡರ್ ಎಸೆನ್ಶಿಯಲ್ ಆಯಿಲ್‌ನಂತಹ ಸಾರಭೂತ ತೈಲಗಳು ಧೂಳಿನ ಅಲರ್ಜಿ ಮತ್ತು ಇಂತಹುದೇ ಇತರ ಉಸಿರಾಟದ ತೊಂದರೆಗಳ ಚಿಕಿತ್ಸೆಗೆ ನೆರವಾಗುತ್ತವೆ. ಇವು ಚಿಕಿತ್ಸಾ ಗುಣವುಳ್ಳ ತೈಲಗಳಾಗಿದ್ದು, ಅಲರ್ಜಿಯಿಂದ ತಕ್ಷಣ ನೆಮ್ಮದಿಯನ್ನು ನೀಡುತ್ತವೆ. ಕೆಲವು ಹನಿ ತೈಲವನ್ನು ಡಿಫ್ಯೂಸರ್‌ನಲ್ಲಿ ಹಾಕಿ ಅದನ್ನು ಉಸಿರಾಡಿದರೆ ತೊಂದರೆ ಕಡಿಮೆಯಾಗುತ್ತದೆ.

► ಆ್ಯಪಲ್ ಸಿಡರ್ ವಿನೆಗರ್:

 ಇದು ಕಫಹಾರಿ ಗುಣವನ್ನು ಹೊಂದಿದ್ದು,ಧೂಳಿನ ಅಲರ್ಜಿಗಳಿಗೆ ಚಿಕಿತ್ಸೆ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಅದರ ಸೂಕ್ಷ್ಮಜೀವಿ ನಿರೋಧಕ ಗುಣಗಳು ಈ ಅಲರ್ಜಿಯು ಉಲ್ಬಣಗೊಳ್ಳುವುದನ್ನು ತಡೆಯುತ್ತವೆ. ಇದನ್ನು ಅಲರ್ಜಿ ಔಷಧಿಯಾಗಿರುವ ಆ್ಯಂಟಿಹಿಸ್ಟಮೈನ್‌ಗೆ ಅತ್ಯುತ್ತಮ ನೈಸರ್ಗಿಕ ಪರಿಹಾರವೆಂದು ಪರಿಗಣಿಸಲಾಗಿದೆ. ಒಂದು ಗ್ಲಾಸ್ ಬೆಚ್ಚಗಿನ ನೀರಿಗೆ ಎರಡು ಚಮಚ ಆ್ಯಪಲ್ ಸಿಡರ್ ವಿನೆಗರ್‌ನ್ನು ಸೇರಿಸಿಕೊಂಡು ಕುಡಿದರೆ ಅಲರ್ಜಿಯ ಬಾಧೆ ಕಡಿಮೆಯಾಗುತ್ತದೆ.

► ಪುದೀನಾ ಕಷಾಯ

ಪುದೀನಾ ಎಲೆಗಳು ಅಲರ್ಜಿಯ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತವೆ. ಕೆಲವು ಒಣ ಪುದೀನಾ ಎಲೆಗಳನ್ನು ನೀರಿನಲ್ಲಿ ಹಾಕಿ ಸುಮಾರು 10 ನಿಮಿಷಗಳ ಕುದಿಸಿದರೆ ಕಷಾಯ ತಯಾರಾಗುತ್ತದೆ. ಎಲೆಗಳನ್ನು ಸೋಸಿ ನೀರನ್ನು ಸೇವಿಸಬೇಕು. ಸ್ವಾದವನ್ನು ಹೆಚ್ಚಿಸಲು ಜೇನನ್ನು ಈ ಕಷಾಯಕ್ಕೆ ಸೇರಿಸಿಕೊಳ್ಳಬಹುದು. ಪುದೀನಾದಲ್ಲಿರುವ ಮೆಂಥಾಲ್ ಕಟ್ಟಿಕೊಂಡಿರುವ ಮೂಗಿನಿಂದ ವಿಮೋಚನೆ ನೀಡುತ್ತದೆ.

► ತುಪ್ಪ

ತುಪ್ಪದ ಸೇವನೆಯು ನಿರಂತರ ಸೀನುವಿಕೆಗೆ ಅಂತ್ಯ ಹಾಡುತ್ತದೆ ಎಂದರೆ ನಿಮಗೆ ಅಚ್ಚರಿಯಾಗಬಹುದು,ಆದರೆ ಇದು ನಿಜ. ಧೂಳಿನ ಅಲರ್ಜಿಗೆ ತುತ್ತಾದಾಗ ಕಾಲು ಟೇಬಲ್‌ಸ್ಪೂನ್‌ನಷ್ಟು ತುಪ್ಪವನ್ನು ಸೇವಿಸಿದರೆ ತಕ್ಷಣ ನೆಮ್ಮದಿ ದೊರೆಯುತ್ತದೆ. ತುಪ್ಪವು ಉರಿಯೂತ ನಿವಾರಕ ಗುಣಗಳನ್ನು ಹೊಂದಿದ್ದು,ನಾಸಿಕ ಮಾರ್ಗವನ್ನು ಬೆಚ್ಚಗಾಗಿಸುವ ಮೂಲಕ ನಿರಂತರ ಸೀನುವಿಕೆಯಿಂದ ಮುಕ್ತಿಯನ್ನು ನೀಡುತ್ತದೆ.

► ಶುದ್ಧ ಜೇನು

 ಎರಡು ಚಮಚಗಳಷ್ಟು ಶುದ್ಧ ಜೇನಿನ ಸೇವನೆಯು ಧೂಳಿನ ಅಲರ್ಜಿಯ ಲಕ್ಷಣಗಳನ್ನು ನಿವಾರಿಸುತ್ತದೆ. ಶುದ್ಧ ಜೇನಿನಲ್ಲಿ ಸ್ವಲ್ಪ ಪ್ರಮಾಣದಲ್ಲಿರುವ ಒಳ್ಳೆಯ ಪರಾಗವು ಧೂಳು ಅಲರ್ಜಿಗೆ ಚಿಕಿತ್ಸೆಯನ್ನು ನೀಡುತ್ತದೆ. ಶುದ್ಧ ಜೇನನ್ನು ನಿಯಮಿತವಾಗಿ ಸೇವಿಸುವುದರಿಂದ ಕ್ರಮೇಣ ವ್ಯಕ್ತಿಯಲ್ಲಿ ಧೂಳಿಗೆ ಸಂವೇದನೆ ಕಡಿಮೆಯಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News