×
Ad

​13 ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿಗೆ ಕೇಂದ್ರ ಸರ್ಕಾರ ತಡೆ

Update: 2019-09-09 09:38 IST

ಹೊಸದಿಲ್ಲಿ: ಅಲಹಾಬಾದ್ ಹೈಕೋರ್ಟ್‌ಗೆ 13 ಮಂದಿ ವಕೀಲರನ್ನು ನ್ಯಾಯಮೂರ್ತಿಗಳಾಗಿ ನೇಮಕ ಮಾಡುವ ಸಂಬಂಧ ಸುಪ್ರೀಂಕೋರ್ಟ್ ಕೊಲಾಜಿಯಂ ಮಾಡಿದ್ದ ಶಿಫಾರಸ್ಸನ್ನು ಕೇಂದ್ರ ಸರ್ಕಾರ ತಡೆಹಿಡಿದಿದೆ.

ಈ ಪೈಕಿ 10 ವಕೀಲರು, ಉನ್ನತ ನ್ಯಾಯಾಂಗದಲ್ಲಿ ನೇಮಕಗೊಳ್ಳಲು ನಿಗದಿಪಡಿಸಿದ ಕನಿಷ್ಠ ಆದಾಯ ಅರ್ಹತೆಯನ್ನು ಹೊಂದಿಲ್ಲ. ಬಾಕಿ ಇರುವ ಎಲ್ಲ ಶಿಫಾರಸ್ಸುಗಳನ್ನು ತಕ್ಷಣ ಅನುಮೋದಿಸುವಂತೆ ಭಾರತದ ಮುಖ್ಯ ನ್ಯಾಯಮೂರ್ತಿಗಳು ಇತ್ತೀಚೆಗೆ ಕೇಂದ್ರಕ್ಕೆ ನೆನಪಿಸಿದ್ದರು. ಆದರೆ ಅರ್ಹತೆ ಮಾನದಂಡಗಳನ್ನು ಪೂರೈಸಿಲ್ಲ ಎಂಬ ಕಾರಣಕ್ಕೆ ಸರ್ಕಾರ ಅದನ್ನು ತಡೆಹಿಡಿದಿದೆ. ಎಲ್ಲ ಮಾನದಂಡಗಳನ್ನು ಪೂರೈಸುವ ಮೂವರು ವಕೀಲರ ನೇಮಕಾತಿಯನ್ನೂ ಸರ್ಕಾರ ತಡೆದಿದೆ.

ಉನ್ನತ ನ್ಯಾಯಾಂಗಕ್ಕೆ ನೇಮಕಗೊಳ್ಳಬೇಕಾದರೆ ಹಿಂದಿನ ಐದು ವರ್ಷಗಳಲ್ಲಿ ಅಂಥ ವಕೀಲರು ಕನಿಷ್ಠ ಏಳು ಲಕ್ಷ ರೂಪಾಯಿ ವಾರ್ಷಿಕ ವೃತ್ತಿ ಆದಾಯವನ್ನು ಹೊಂದಿರಬೇಕು. ಆದರೆ 4 ಅಥವಾ 4.5 ಲಕ್ಷ ರೂ. ಆದಾಯ ಇರುವವರ ಹೆಸರನ್ನು ಕೊಲಾಜಿಯಂ ಶಿಫಾರಸ್ಸು ಮಾಡಿದೆ. ಇದರಿಂದಾಗಿ ಈ ವಕೀಲರಿಗೆ ಅರ್ಹತೆ ಇಲ್ಲ ಎಂದು ಮೂಲಗಳು ಹೇಳಿವೆ.

ಕೊಲಾಜಿಯಂ ಶಿಫಾರಸ್ಸು ಮಾಡಿದ ಪಟ್ಟಿಯಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯೊಬ್ಬರ ಭಾವ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯೊಬ್ಬರ ಪುತ್ರನ ಹೆಸರು ಕೂಡಾ ಸೇರಿದೆ. ಆದರೆ ಆದಾಯ ಮಾನದಂಡಕ್ಕೆ ಪ್ರಾಮುಖ್ಯತೆ ನೀಡದೇ 13 ಮಂದಿಯನ್ನು ನೇಮಕ ಮಾಡಿಕೊಳ್ಳುವಂತೆ ಕೊಲಾಜಿಯಂ ಫೆಬ್ರವರಿ 12ರಂದು ಶಿಫಾರಸ್ಸು ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News