‘ಭಾರತೀಯ ಮಾಧ್ಯಮ ಬಿಕ್ಕಟ್ಟಿನ ಸ್ಥಿತಿಯಲ್ಲಿದೆ’: ‘ಮ್ಯಾಗ್ಸೆಸೆ ಪ್ರಶಸ್ತಿ’ ಸ್ವೀಕರಿಸಿ ರವೀಶ್ ಕುಮಾರ್

Update: 2019-09-09 16:52 GMT

ಮನಿಲಾ,ಸೆ.10: ಭಾರತೀಯ ಪತ್ರಿಕೋದ್ಯಮವು ರಚನಾತ್ಮಕ ಬಿಕ್ಕಟ್ಟಿನ ಸ್ಥಿತಿಯನ್ನು ಎದುರಿಸುತ್ತಿದೆಯೆಂದು ಎನ್‌ಡಿಟಿವಿ ಪತ್ರಕರ್ತ ರವೀಶ್ ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ. ಮನಿಲಾದಲ್ಲಿ ಸೋಮವಾರ ರಮೋನ್ ಮ್ಯಾಗ್ಸೆಸೆ ಪುರಸ್ಕಾರವನ್ನು ಸ್ವೀಕರಿಸಿ, ಮಾತನಾಡಿದ ಅವರು, ಪ್ರಾಮಾಣಿಕ ಪತ್ರಿಕೋದ್ಯಮವನ್ನು ನಡೆಸಲು ತಮ್ಮ ಬದುಕು ಗಳನ್ನು ಹಾಗೂ ವೃತ್ತಿಭವಿಷ್ಯವನ್ನು ಅಪಾಯಕ್ಕೊಡ್ಡಿರುವ ಪತ್ರಕರ್ತರನ್ನು ಶ್ಲಾಘಿಸಿದರು.

        ‘‘ಅಸಮಾನತೆಯನ್ನು ಆರೋಗ್ಯ ಹಾಗೂ ಆರ್ಥಿಕತೆಯ ಆಧಾರದಲ್ಲಿ ಅಳೆಯಲಾಗುತ್ತದೆ. ಆದರೆ ಜ್ಞಾನದ ಅಸಮಾ ನತೆಯನ್ನು ಅಳೆಯುವ ಕಾಲವೂ ಈಗ ಬಂದಿದೆ’’ ಎಂದವರು ಅಭಿಪ್ರಾಯಿಸಿದರು. ಇಂದು ಗುಣಮಟ್ಟದ ಜ್ಞಾನ ಸಂಪನ್ಮೂಲಗಳ ಲಭ್ಯತೆಯು ಕೆಲವು ಆಯ್ದ ನಗರಗಳಿಗಷ್ಟೇ ಸೀಮಿತವಾಗಿವೆ. ಸಣ್ಣ ಪಟ್ಟಣಗಳು ಹಾಗೂ ಹಳ್ಳಿಗಳಲ್ಲಿ ಈ ಜ್ಞಾನದ ಅಸಮಾನತೆಯಿಂದ ಯಾವ ಪರಿಣಾಮಗಳು ಉಂಟಾಗಬಹುದೆಂಬುದನ್ನು ನಮಗೆ ಊಹಿಸಲೂ ಸಾಧ್ಯವಿಲ್ಲ. ‘ವಾಟ್ಸ್‌ಆ್ಯಪ್ ವಿಶ್ವವಿದ್ಯಾನಿಲಯ’ದ ಅಪಪ್ರಚಾರ ಯಂತ್ರವೇ ಅವರಿಗೆ ಇರುವ ಜ್ಞಾನದ ಮೂಲವೆಂಬುದು ವಾಸ್ತವ ಸಂಗತಿಯಾಗಿದೆ ಎಂದವರು ಆತಂಕ ವ್ಯಕ್ತಪಡಿಸಿದರು.

ಇದಕ್ಕಾಗಿ ಇಂದಿನ ಯುವಜನರನ್ನು ದೂರಲು ಸಾಧ್ಯವಿಲ್ಲ. ಯಾಕೆಂದರೆ ಅವರಿಗೆ ಉತ್ತಮ ಶಿಕ್ಷಣವನ್ನು ನಿರಾಕರಿ ಸಲಾಗಿದೆ. ಮಾಧ್ಯಮವು ತನ್ನನ್ನು ತಾನೇ ವಾಟ್ಸ್ಯಪ್ ವಿವಿ ಎಂದು ಬಣ್ಣಿಸಿಕೊಂಡಲ್ಲಿ, ಸಮಾಜ ಹಾಗೂ ವೀಕ್ಷಕರ ಮೇಲೆ ಅದು ಬೀರುವ ಪ್ರಭಾವ ಹೇಗಿರಬಹುದು?. ಆದರೆ ಭಾರತೀಯರು ಈಗೀಗ ಅದನ್ನು ತಿಳಿದುಕೊಳ್ಳಲು ಆರಂಭಿ ಸಿರುವುದು ನಿಜಕ್ಕೂ ಉತ್ತಮ ಲಕ್ಷಣವಾಗಿದೆ. ಮ್ಯಾಗ್ನೆಸೆ ಪುರಸ್ಕಾರಕ್ಕೆ ಪಾತ್ರನಾಗಿದ್ದಕ್ಕಾಗಿ ನನಗೆ ಬಂದಿರುವ ಅಭಿನಂದನಾ ಸಂದೇಶಗಳಲ್ಲಿ, ಮಾಧ್ಯಮರಂಗವು ಹೇಗೆ ಪುಂಡನಾಗಿ ಪರಿವರ್ತನೆಗೊಂಡಿದೆಯೆಂಬ ಬಗ್ಗೆ ಆತಂಕಗಳು ಕೂಡಾ ವ್ಯಕ್ತವಾಗಿವೆ. ಪ್ರಶಸ್ತಿ ದೊರೆತಿದ್ದಕ್ಕಾಗಿ ನನಗೆ ಸಂತಸವಾಗಿದೆ. ಆದರೆ ಅದೇ ವೇಳೆ, ನನ್ನ ವೃತ್ತಿಕ್ಷೇತ್ರದ ಪರಿಸ್ಥಿತಿಯನ್ನು ಕಂಡಾಗ ನನಗೆ ದುಃಖ ತುಂಬಿ ಬರುತ್ತದೆ. ಎಂದು ರವೀಶ್ ಕಳವಳ ವ್ಯಕ್ತಪಡಿಸಿದ್ದಾರೆ.

  ಭಾರತೀಯ ಮಾಧ್ಯಮವು ಬಿಕ್ಕಟ್ಟನ್ನು ಎದುರಿಸಬೇಕಾಗಿ ಬಂದಿರುವುದು ಆಕಸ್ಮಿಕವಾಗಲಿ ಅಥವಾ ಅಪರೂಪಕ್ಕಾಗಲಿ ಅಲ್ಲ. ಆದರೆ ಅದು ಸಂರಚನಾತ್ಮಕವಾದುದಾಗಿದೆ. ತಮ್ಮ ಆದರ್ಶಗಳೊಂದಿಗೆ ರಾಜಿ ಮಾಡಿಕೊಳ್ಳದ ಪತ್ರಕರ್ತರನ್ನು ಸುದ್ದಿಸಂಸ್ಥೆಗಳು ಬಲವಂತವಾಗಿ ಹೊರಹೋಗುವಂತೆ ಮಾಡುತ್ತಿವೆ. ತಮ್ಮ ಬದುಕನ್ನು ಹಾಗೂ ವೃತ್ತಿಯನ್ನು ಅಪಾಯಕ್ಕೊಡ್ಡಿ ಪ್ರಾಮಾಣಿಕವಾಗಿ ಪತ್ರಿಕೋದ್ಯಮವನ್ನು ನಡೆಸುವ ವ್ಯಕ್ತಿಗಳಿಂದಾಗಿ ನಾವಿನ್ನೂ ಬದುಕುಳಿದಿದ್ದೇವೆ.  ಹಲವಾರು ಮಹಿಳಾ ಪತ್ರಕರ್ತರು ದಿಟ್ಟತನದಿಂದ ಮಾತನಾಡುತ್ತಾರೆ ಹಾಗೂ ಫ್ರಿಲಾನ್ಸ್ ಪತ್ರಿಕೋದ್ಯಮದಿಂದ ದೊರೆಯುವ ಹಣದಿಂದ ಜೀವನ ಸಾಗಿಸುತ್ತಿದ್ದಾರೆ ಎಂದವರು ನೆನಪಿಸಿದರು.

ಕಾಶ್ಮೀರದಲ್ಲಿ ಇಂಟರ್‌ನೆಟ್‌ನ ಸ್ಥಗಿತದೊಂದಿಗೆ ಸುದ್ದಿವಾಹಿನಿಗಳು ಸರಕಾರದ ನಿಲುವನ್ನು ಅನುಸರಿಸುತ್ತವೆ. ಈ ನಿರ್ಬಂಧಗಳ ನಡುವೆಯೂ ಅಲ್ಲಿಂದ ವರದಿಯನ್ನು ಮಾಡುವ ದಿಟ್ಟತನವನ್ನು ಪ್ರದರ್ಶಿಸಿದವರನ್ನು ಹಾಗೂ ‘ಟ್ರೋಲ್ ಸೇನೆ’ಯ ಕೆಂಗಣ್ಣಿಗೆ ಗುರಿಯಾದವರನ್ನು ನಾವು ಪರಿಗಣನೆಗೆ ತೆಗೆದುಕೊಳ್ಳಬೇಕಾಗಿದೆ ಎಂದು ರವೀಶ್ ತಿಳಿಸಿದರು. ಸುದ್ದಿಗಳ ವರದಿಗಾರಿಕೆಯ ಕಳೆದುಹೋಗಿರುವ ಪಾವಿತ್ರ್ಯ ವನ್ನು ನಾವು ಪುನಃ ಸ್ಥಾಪಿಸಲು ಸಾಧ್ಯವೇ ಎಂದು ಪ್ರಶ್ನಿಸಿದ ರವೀಶ್, ಸುದ್ದಿಗಳು ಸತ್ಯನಿಷ್ಠವಾಗಿರುವ ಕಾಲದವರೆಗಾ ದರೂ ಪ್ರಜಾಪ್ರಭುತ್ವವು ಜೀವಂತವಿರುವುದು ಎಂದರು.

 ಜ್ಞಾನದ ಅಸಮಾನತೆಯಿರುವ ಪ್ರದೇಶಗಳಲ್ಲಿ ಬದುಕುತ್ತಿರುವ ಆದರೆ ಉತ್ತಮ ಹಾಗೂ ಸತ್ಯನಿಷ್ಠವಾದ ಮಾಹಿತಿಗಾಗಿ ಹಪಹಪಿಸುತ್ತಿರುವ ಎಲ್ಲಾ ಓದುಗರು ಹಾಗೂ ಪ್ರೇಕ್ಷಕರ ಪರವಾಗಿ ಈ ಪ್ರಶಸ್ತಿಯನ್ನು ಸ್ವೀಕರಿಸು ತ್ತಿರುವುದಾಗಿ ರವೀಶ್ ಹೇಳಿದರು.

ಎಲ್ಲಾ ಯುದ್ಧಗಳನ್ನು ಕೇವಲ ವಿಜಯಕ್ಕಾಗಿಯೇ ಮಾಡಲಾಗುವುದಿಲ್ಲ.ಆದರೆ ಕೆಲವು ಯುದ್ಧಗಳನ್ನು ರಣರಂಗದಲ್ಲಿ ಯಾರಾದರೊಬ್ಬರು ಇದ್ದಾರೆ ಎಂಬುದನ್ನು ಜಗತ್ತಿಗೆ ತಿಳಿಸಲು ಮಾಡಲಾಗುತ್ತದೆಯೆಂದು ರವೀಶ್ ಕುಮಾರ್ ಅರ್ಥಗರ್ಭಿತವಾಗಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News