×
Ad

ಐಎಂಎ ಹಗರಣ: ಮನ್ಸೂರ್ ಖಾನ್ ವಿರುದ್ಧ ಸಿಬಿಐ ಚಾರ್ಜ್ ಶೀಟ್

Update: 2019-09-09 22:42 IST

ಹೊಸದಿಲ್ಲಿ, ಸೆ.9: ಐಎಂಎ ಜ್ಯುವೆಲ್ಲರಿ ಬಹುಕೋಟಿ ವಂಚನೆ ಹಗರಣಕ್ಕೆ ಸಂಬಂಧಿಸಿ ಐಎಂಎ ಸಮೂಹದ ಮಾಲಕ ಮನ್ಸೂರ್ ಖಾನ್ ಹಾಗೂ ಇತರರ ವಿರುದ್ಧ ಸಿಬಿಐ ಆರೋಪ ಪಟ್ಟಿ ದಾಖಲಿಸಿರುವುದಾಗಿ ಮೂಲಗಳು ತಿಳಿಸಿವೆ.

ಐಎಂಎ ಸಂಸ್ಥೆ ಆಕರ್ಷಕ ಸ್ಕೀಂನ ಆಮಿಷವೊಡ್ಡಿ 30 ಸಾವಿರಕ್ಕೂ ಹೆಚ್ಚು ಮಂದಿಯಿಂದ 5000 ಕೋಟಿ ರೂ. ಸಂಗ್ರಹಿಸಿ ವಂಚಿಸಿರುವ ಪ್ರಕರಣದ ತನಿಖೆಯನ್ನು ಸೆಪ್ಟೆಂಬರ್ 2ರಂದು ಕೈಗೆತ್ತಿಕೊಂಡಿರುವ ಸಿಬಿಐ, ಸೆ.7ರಂದು ಎಫ್‌ಐಆರ್ ದಾಖಲಿಸಿದೆ. ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ಮನ್ಸೂರ್ ಖಾನ್ ಹಾಗೂ ಐಎಂಎಯ ನಾಲ್ಕು ಸಹ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಆರಂಭದಲ್ಲಿ ಈ ಪ್ರಕರಣದ ತನಿಖೆಗೆ ಕರ್ನಾಟಕ ಸರಕಾರ ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಕಳೆದ ತಿಂಗಳು ಕರ್ನಾಟಕ ಸರಕಾರ ತನಿಖೆಯನ್ನು ಸಿಬಿಐಗೆ ವಹಿಸಲು ನಿರ್ಧರಿಸಿ ಕೋರಿಕೆ ಸಲ್ಲಿಸಿತ್ತು. ತಿಂಗಳಿಗೆ ಶೇ.3ಕ್ಕೂ ಹೆಚ್ಚು ಬಡ್ಡಿ ನೀಡುವ ಆಮಿಷವೊಡ್ಡಿ ಜನರಿಂದ ಠೇವಣಿ ಸಂಗ್ರಹಿಸಿದ್ದ ಐಎಂಎ ಸಂಸ್ಥೆ ಹಣ ಮರಳಿಸದೆ ವಂಚಿಸಿದೆ ಎಂದು ಆರೋಪಿಸಲಾಗಿದೆ. ಜುಲೈಯಲ್ಲಿ ದುಬೈಯಲ್ಲಿ ಬಂಧಿತನಾಗಿದ್ದ ಮನ್ಸೂರ್ ಖಾನ್‌ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News