ಕ್ಸಿನ್‌ಜಿಯಾಂಗ್ ಕುರಿತ ಅಮೆರಿಕದ ‘ಸುಳ್ಳು’ಗಳನ್ನು ಯಾರೂ ನಂಬುವುದಿಲ್ಲ: ಚೀನಾ

Update: 2019-09-09 17:18 GMT

ಬೀಜಿಂಗ್, ಸೆ. 9: ಕ್ಸಿನ್‌ಜಿಯಾಂಗ್ ವಲಯದಲ್ಲಿನ ಪರಿಸ್ಥಿತಿ ಬಗ್ಗೆ ಅಮೆರಿಕ ಹೇಳುತ್ತಿರುವ ‘ಸುಳ್ಳು’ಗಳನ್ನು ಯಾರೂ ನಂಬುವುದಿಲ್ಲ ಎಂದು ಚೀನಾ ಸೋಮವಾರ ಹೇಳಿದೆ.

ಕ್ಸಿನ್‌ಜಿಯಾಂಗ್‌ನಲ್ಲಿನ ಅಲ್ಪಸಂಖ್ಯಾತ ಉಯಿಘರ್ ಮುಸ್ಲಿಮರನ್ನು ಚೀನಾ ಹೇಗೆ ನಡೆಸಿಕೊಳ್ಳುತ್ತಿದೆ ಎಂಬ ಬಗ್ಗೆ ಮುಂದಿನ ವಾರ ನಡೆಯುವ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಹೇಳಿಕೆ ನೀಡುವುದಾಗಿ ಅಮೆರಿಕದ ವಿದೇಶ ಕಾರ್ಯದರ್ಶಿ ಕಳೆದ ವಾರ ನೀಡಿರುವ ಹೇಳಿಕೆಗೆ ಪ್ರತಿಯಾಗಿ ಚೀನ ಈ ಹೇಳಿಕೆ ನೀಡಿದೆ.

ಚೀನಾದ ವಾಯುವ್ಯ ಭಾಗದಲ್ಲಿರುವ ಕ್ಸಿನ್‌ಜಿಯಾಂಗ್ ಉಯಿಘರ್ ಸ್ವಾಯತ್ತ ವಲಯದಾದ್ಯಂತ ಇರುವ ಶಿಬಿರಗಳಲ್ಲಿ ಕನಿಷ್ಠ 10 ಲಕ್ಷ ಮುಸ್ಲಿಮರನ್ನು ಚೀನಾ ಕೂಡಿ ಹಾಕಿದೆ ಹಾಗೂ ಈ ಪೈಕಿ ಹೆಚ್ಚಿನವರು ಉಯಿಘರ್ ಜನಾಂಗೀಯ ಮುಸ್ಲಿಮರು ಎಂದು ವಿಶ್ವಸಂಸ್ಥೆ ಹೇಳಿದೆ.

ಈ ಶಿಬಿರಗಳು ಉದ್ಯೋಗ ತರಬೇತಿ ಕೇಂದ್ರಗಳಾಗಿದ್ದು, ಅಲ್ಲಿ ಶಿಬಿರಾರ್ಥಿಗಳಿಗೆ ವೃತ್ತಿ ನೈಪುಣ್ಯತೆಯನ್ನು ಕಲಿಸಿಕೊಡಲಾಗುತ್ತದೆ ಹಾಗೂ ಅವರ ತೀವ್ರವಾದಿ ಚಿಂತನೆಗಳನ್ನು ಬಿಡಿಸಲಾಗುತ್ತದೆ ಎಂದು ಚೀನಾ ಹೇಳುತ್ತಾ ಬಂದಿದೆ.

‘‘ಅಮೆರಿಕದ ವಿದೇಶ ಕಾರ್ಯದರ್ಶಿಯ ಹೇಳಿಕೆಯನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ. ಅವರು ಚೀನಾದ ಕ್ಸಿನ್‌ಜಿಯಾಂಗ್ ನೀತಿಯ ಕುರಿತ ವಾಸ್ತವ ಸಂಗತಿಗಳನ್ನು ಮರೆಮಾಚಿ ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡುತ್ತಿದ್ದಾರೆ’’ ಎಂದು ಚೀನಾದ ವಿದೇಶ ಸಚಿವಾಲಯದ ವಕ್ತಾರೆ ಹುವಾ ಚುನ್‌ಯಿಂಗ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News