ಸಂಚಾರ ಪೊಲೀಸರಿಂದ ಕಿರುಕುಳ: ಹೃದಯಾಘಾತದಿಂದ ಟೆಕ್ಕಿ ಮೃತ್ಯು

Update: 2019-09-10 10:39 GMT

ನೊಯ್ಡಾ, ಸೆ.10: ಸಂಚಾರ ನಿಯಮ ಉಲ್ಲಂಘನೆ ಆರೋಪದ ನಂತರ ಸಂಚಾರ ಪೊಲೀಸರ ಜತೆ ನಡೆದ ವಾಗ್ವಾದದಿಂದಾಗಿ ತನ್ನ 35 ವರ್ಷದ ಪುತ್ರ ನೊಯ್ಡಾದ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆಂದು 65 ವರ್ಷದ ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ.

ಘಟನೆ ದಿಲ್ಲಿ ಸಮೀಪದ ಗಾಝಿಯಾಬಾದ್ ನಲ್ಲಿ ರವಿವಾರ ಸಂಜೆ ನಡೆದಿತ್ತು. ಮೃತ ವ್ಯಕ್ತಿ ಸಾಫ್ಟ್ ವೇರ್ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ. ಮಧುಮೇಹಿಯಾಗಿದ್ದ ಆತ ತನ್ನ ವೃದ್ಧ ಹೆತ್ತವರೊಂದಿಗೆ ಕಾರಿನಲ್ಲಿದ್ದಾಗ ಗಾಝಿಯಾಬಾದ್ ನ ಸಿಐಎಸ್‍ಎಫ್ ಕಟ್ ಸಮೀಪ ಸಂಚಾರ ಪೊಲೀಸರು ವಾಹನವನ್ನು ತಡೆದು ದುರ್ವರ್ತನೆ ತೋರಿದ್ದರೆಂದು ಆತನ ತಂದೆ ಆರೋಪಿಸಿದ್ದಾರೆ.

ಹೊಸ ಮೋಟಾರು ವಾಹನಗಳ ಕಾಯಿದೆಯನ್ವಯ ಈ ತಪಾಸಣೆಯ ನೆಪದಲ್ಲಿ ಕಿರುಕುಳ ನೀಡಲಾಗಿತ್ತು ಎಂದು ದೂರಲಾಗಿದೆ.  “ಆತನೇನೂ ಅತಿ ವೇಗದಿಂದ ಅಥವಾ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿರಲಿಲ್ಲ. ಪೊಲೀಸರು ವಿನಯದಿಂದ ವರ್ತಿಸಿದ್ದರೆ ನಾನು ನನ್ನ ಪುತ್ರನನ್ನು ಹಾಗೂ ನನ್ನ 5 ವರ್ಷದ ಮೊಮ್ಮಗಳು ತನ್ನ ತಂದೆಯನ್ನು ಕಳೆದುಕೊಳ್ಳುತ್ತಿರಲಿಲ್ಲ” ಎಂದು ಅವರು  ಹೇಳಿದ್ದಾರೆ ಹಾಗೂ ತಮ್ಮ ಮಗನ ಸಾವಿಗೆ ಪ್ರಧಾನಿ ನರೇಂದ್ರ ಮೋದಿ  ಹಾಗೂ ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ನ್ಯಾಯ ಒದಗಿಸಿಕೊಡುತ್ತಾರೆಂದು ಆಶಿಸುವುದಾಗಿ ತಿಳಿಸಿದ್ದಾರೆ.

ಘಟನೆಯ ಬಗ್ಗೆ ನೊಯ್ಡಾ ಪೊಲೀಸರು ಆಂತರಿಕ ತನಿಖೆ ನಡೆಸಿದ್ದು, ಯುವಕ ಮಧುಮೇಹಿಯಾಗಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದಾಗಿ ತಿಳಿದು ಬಂದಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News